ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೇವಿನಹಳ್ಳಿ: ಕಿರ್ಲೋಸ್ಕರ್ ಕಾರ್ಖಾನೆಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಅಂಗವಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಸುಮಾರು 25 ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದು, ಇದನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ರಚಿಸಿದೆ.
ಈ ಟ್ರಸ್ಟ್ ಮೂಲಕ ಬೇವಿನಹಳ್ಳಿ ಹಾಗೂ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಸಮುದಾಯದ ಅಭಿವೃದ್ಧಿ ಇವುಗಳಿಗೆ ಒತ್ತುಕೊಟ್ಟು, ಯೋಜನೆಗಳನ್ನು ರೂಪಿಸಿ, ಅದರಂತೆ ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಿದೆ.
ಬೇವಿನಹಳ್ಳಿ ಗ್ರಾಮಸ್ತರ ಬಹು ದಿನದ ಬೇಡಿಕೆಯಂತೆ, ಬೇವಿನಹಳ್ಳಿ ಗ್ರಾಮದಲ್ಲಿ ಶ್ರೀಈಶ್ವರ(ಶ್ರೀಬಸವೇಶ್ವರ) ದೇವಸ್ಥಾನವನ್ನು ನಿರ್ಮಾಣ ಮಾಡಬೇಕೆಂಬ ಮನವಿಯ ಹಿನ್ನಲೆಯಲ್ಲಿ ಟ್ರಸ್ಟ್ ವತಿಯಿಂದ 30 ಲಕ್ಷ ರೂ.ವೆಚ್ಚದಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆ.
ಶ್ರೀ ಈಶ್ವರ (ಶ್ರೀ ಬಸವೇಶ್ವರ) ಹಾಗೂ ನಂದಿ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಪ್ರಾಣಪ್ರತಿಷ್ಠೆ ನಡೆದಿದ್ದು, ಕಿರ್ಲೋಸ್ಕರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾದ ಆರ್.ವಿ. ಗುಮಾಸ್ತೆಯವರು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷರಾದ ಪಿ.ನಾರಾಯಣ, ಹಣಕಾಸು ವಿಭಾಗದ ಮುಖ್ಯಸ್ಥರಾದ ಆರ್.ಎಸ್. ಶ್ರೀವತ್ಸನ್, ಅಧಿಕಾರಿಗಳಾದ ಬಿ. ಚಂದ್ರಶೇಖರ್, ಕಿರಣ್ ಶೇಜೇಕರ್, ಮಾರುತೇಶ್ವರ ಸೇವಾ ಸಮಿತಿಯ ಮುಖ್ಯಸ್ಥರು, ಗ್ರಾಮ ಪಂಚಾಯ್ತಿಯ ಸದಸ್ಯರು ಮತ್ತು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಯವರು ಆಶೀರ್ವದಿಸಿ, ಕಿರ್ಲೋಸ್ಕರ್ ಕಾರ್ಖಾನೆಯ ಸಾಮಾಜಿಕ, ಸಮುದಾಯದ ಅಭಿವೃದ್ಧಿಗೆ ಮಾಡುತ್ತಿರುವ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ: ಮುರಳೀಧರ್ ನಾಡಿಗೇರ್, ಕೊಪ್ಪಳ
Get in Touch With Us info@kalpa.news Whatsapp: 9481252093
Discussion about this post