ಹಲವು ದಶಕಗಳ ಕಾಲ ಈ ರಾಷ್ಟ್ರದ ಜನರಿಗೆ ಬಹುದೊಡ್ಡ ರಾಜಕೀಯ, ಐತಿಹಾಸಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚರ್ಚೆಯ ವಿಷಯವಾಗಿಯೇ ಬೆಳೆದು ನಿಂತಿದ್ದ ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಇಂದು ಬಹುತೇಕ ತೆರೆ ಬಿದ್ದಿದೆ. ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಭಾರತದ ಸಾರ್ವಭೌಮತೆಗೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು. ಈ ತೀರ್ಪು ಸರ್ವರನ್ನೂ ಸಮಧಾನ ಪಡಿಸಿದಂತಹ ತೀರ್ಪು. ಸರ್ವೋಚ್ಛ ನ್ಯಾಯಾಲಯದ ಈ ನಿರ್ಧಾರವನ್ನು ಎಲ್ಲಾ ಭಾರತೀಯರು ಗೌರವಿಸುತ್ತಾರೆ.
ಏನಿದು ವಿವಾದ?
ಭಾರತದ ಕೋಟ್ಯಾನುಕೋಟಿ ಹಿಂದುಗಳ ಅಸ್ಮಿತೆ ಶ್ರೀರಾಮ ಮತ್ತು ರಾಮಜನ್ಮಭೂಮಿ ಅಯೋಧ್ಯೆ. ಸಪ್ತ ಮೋಕ್ಷ ಭೂಮಿಗಳಲ್ಲಿ ಅಯೋಧ್ಯೆಯೂ ಒಂದು ಎಂದು ಹಿಂದುಗಳ ಗಾಢವಾದ ನಂಬಿಕೆ. ಹಾಗೆಯೇ ಆ ಸ್ಥಳದಲ್ಲೇ ಶತಮಾನಗಳಿಂದ ರಾಮನ ಪೂಜೆ ಮಾಡಿಕೊಂಡು ಬಂದಿದ್ದರಿಂದ ಮತ್ತು ಅಲ್ಲಿ ಹಿಂದೆಯೂ ಒಂದು ದೇವಾಲಯವೂ ಇತ್ತು, ಅದನ್ನು ಧ್ವಂಸಗೊಳಿಸಿ ಬಾಬರ ಮಸೀದಿಯನ್ನು ನಿರ್ಮಿಸಿದ್ದಾನೆ ಎನ್ನುವ ವಾದವನ್ನು ಹಿಂದೂ ಮಹಾಸಭಾ, ಹಿಂದೂಗಳ ಪರವಾಗಿ ವಾದವನ್ನು ಮುಂದಿಟ್ಟಿದೆ. ಆದ್ದರಿಂದ ಈ ಸ್ಥಳ ರಾಮನಿಗೆ ಸಲ್ಲಬೇಕು ಎನ್ನುವ ವಾದ ಅವರದ್ದು.
ಆದರೆ ಸುನ್ನಿ ವಕ್ಫ್ ಬೋರ್ಡ್ ಮುಂದಾಳತ್ವದ ಮುಸಲ್ಮಾನ ಬಂಧುಗಳ ವಾದ ಏನೆಂದರೆ, ಬಾಬರನು ಕಟ್ಟಿಸಿದ ಈ ಮಸೀದಿ ನಮಗೆ ಪವಿತ್ರವಾದದ್ದು, ಇಲ್ಲಿ ರಾಮನ ದೇವಸ್ಥಾನ ಇರಲಿಲ್ಲ. 1949ರಲ್ಲಿ ರಾಮನ ವಿಗ್ರಹವನ್ನು ಮಸೀದಿಯ ಒಳಗಡೆ ಇರಿಸಲಾಗಿದೆ. ಆದ್ದರಿಂದ ಈ ಸ್ಥಳ ನಮಗೇ ಸೇರಬೇಕಾದದ್ದು ಎನ್ನುವುದಾಗಿತ್ತು.
ಇನ್ನು ಮೂರನೆಯದಾಗಿ ನಿರ್ಮೋಹಿ ಅಖಾರದವರ ವಾದವೇನೆಂದರೆ 1934 ರ ನಂತರ ಮಸೀದಿಯಲ್ಲಿ ನಮಾಜ್ ನಡೆದಿಲ್ಲ. ಆದ್ದರಿಂದ ನಿರಂತರವಾಗಿ ಪೂಜಿಸುತ್ತಿರುವ ನಮಗೆ ಈ ಭೂಮಿ ಸೇರಬೇಕು ಎನ್ನುವುದಾಗಿತ್ತು.
ಡಿ.6, 1992,ರಲ್ಲಿ ಕರಸೇವಕರಿಂದ ಬಾಬರಿ ಮಸೀದಿ ಧ್ವಂಸಗೊಂಡ ನಂತರ ಈ ವಾದಗಳೆಲ್ಲವೂ ತಾರಕಕ್ಕೇರಿತು. ಅದರ ಅನ್ವಯ 2010ರಲ್ಲಿ ಅಲಹಬಾದ್ ಉಚ್ಛ ನ್ಯಾಯಾಲಯವು 2.77ಎಕರೆ ವಿವಾದಿತ ಭೂಮಿಯನ್ನು ಮೂರೂ ಗುಂಪಿನವರಿಗೂ ಸಮಾನ ಪಾಲು ಮಾಡಿ ಹಂಚಿತು. ಈ ತೀರ್ಪಿನಿಂದಾಗಿ ಮೂರೂ ತಂಡಗಳು ಅತೃಪ್ತರಾದ ಕಾರಣ, ವಿವಾದ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು.
ಆ ಪ್ರಕರಣದ ಅಂತಿಮ ತೀರ್ಪನ್ನು ಇಂದು ಸರ್ವೋಚ್ಛ ನ್ಯಾಯಾಲಯ ನೀಡಿದೆ. ತೀರ್ಪನ್ನು ನೀಡುವ ಮುನ್ನ ಎಲ್ಲರ ವಾದ ವಿವಾದಗಳನ್ನು ಗಣನೆಗೆ ತೆಗೆದುಕೊಂಡು, ಮುಖ್ಯವಾಗಿ ಭಾರತೀಯ ಪುರಾತತ್ವ ಇಲಾಖೆಯು(ಎ.ಎಸ್.ಐ) ನೀಡಿದ ಮಾಹಿತಿಯನ್ನು ಪಡೆದು ಈ ನಿರ್ಧಾರವನ್ನು ನೀಡಿದೆ.
ಹಾಗಿದ್ದರೆ ಭಾರತೀಯ ಪುರಾತತ್ವ ಇಲಾಖೆ ನೀಡಿದ ಮಾಹಿತಿ ಏನು?
ಮಸೀದಿಯ ಅಡಿಯಲ್ಲಿ ಹಿಂದೂ ಸಂಪ್ರದಾಯದ ಕಟ್ಟಡದ ಪಳೆಯುಳಿಕೆ ಇರುವುದು ಸತ್ಯ. ಆದರೆ ಅದನ್ನು ಧ್ವಂಸಗೊಳಿಸಿ ಬಾಬರಿ ಮಸೀದಿಯನ್ನು ನಿರ್ಮಿಸಿದ್ದು ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.
ಇವೆಲ್ಲಾವನ್ನೂ ಗಮನದಲ್ಲಿರಿಸಿ, ವಿವಾದಿತ ಭೂ ಭಾಗ ರಾಮ ಜನ್ಮಭೂಮಿ, ಅಲ್ಲಿ ರಾಮನ ಮಂದಿರವನ್ನು ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ ಕಟ್ಟಬೇಕು. ಸುನ್ನಿ ವಕ್ಫ್ ಬೋರ್ಡ್ ಅವರಿಗೆ ರಾಜ್ಯ ಸರ್ಕಾರ ಅಯೋಧ್ಯೆಯಲ್ಲಿಯೇ ಅಥವಾ ಕೇಂದ್ರ ಸರ್ಕಾರ ಅಯೋಧ್ಯೆ ಆ್ಯಕ್ಟ್ – 1993ರ ಪ್ರಕಾರ ಐದು ಎಕರೆ ಜಾಗವನ್ನು ನೀಡಬೇಕು ಎಂದು ತೀರ್ಪನ್ನು ನೀಡಿದೆ. ಹಾಗೆಯೇ ಶಿಯಾ ಹಾಗೂ ನಿರ್ಮೋಹಿ ಅಖಾರ ಅವರ ವಾದವನ್ನು ತಿರಸ್ಕರಿಸಿದೆ.
ಒಟ್ಟಿನಲ್ಲಿ ಈ ತೀರ್ಪನ್ನು ಐದೂ ಜನ ಮುಖ್ಯ ನ್ಯಾಯಮೂರ್ತಿಗಳು ಸರ್ವ ಸಮ್ಮತದಿಂದ ನೀಡಿದ್ದರಿಂದ ಮತ್ತು ಮುಖ್ಯವಾಗಿ ಬಹುತೇಕ ಮುಸಲ್ಮಾನ ಬಂಧುಗಳೊಂದಿಗೆ ಕೋಟ್ಯಾಂತರ ಹಿಂದೂಗಳೂ ಮುಕ್ತ ಮನಸ್ಸಿನಿಂದ ತೀರ್ಪನ್ನು ಸ್ವಾಗತಿಸುವುದರಿಂದ ದಶಕಗಳ ವಿವಾದಕ್ಕೆ ಬಹುತೇಕ ತೆರೆಬಿದ್ದಂತಿದೆ. ಈ ಐತಿಹಾಸಿಕ ನಿರ್ಣಯದಿಂದಾಗಿ ಭಾರತ ಇನ್ನು ಮುಂದೆ ವಿಕಾಸದ ಹಾದಿಯತ್ತ ಹೆಚ್ಚು ಗಮನವಹಿಸಲೂ ಸಾಧ್ಯವಾಗುವಂತಾಗಿದೆ.
Get In Touch With Us info@kalpa.news Whatsapp: 9481252093, 94487 22200
Discussion about this post