ಶಿವಮೊಗ್ಗ: ಮಲೆನಾಡಿನ ಸಾಮಾನ್ಯ ಜನರೂ ಸಹ ವಿಮಾನಯಾನ ಮಾಡಬೇಕು ಎಂಬ ಆಶಯದ ಹಿನ್ನೆಲೆಯಲ್ಲಿ ಉಡಾನ್ ಯೋಜನೆಯ ಅಡಿಯಲ್ಲಿ ಕಾರ್ಯಗತಕ್ಕೆ ಸರ್ಕಾರ ಮುಂದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಧ್ಯಮ ವರ್ಗ ಹಾಗೂ ಜನಸಾಮಾನ್ಯರೂ ಸಹ ವಿಮಾನಯಾನ ಮಾಡುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಇನ್ನು, ರೈಲ್ವೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸದ್ಯ ನಮ್ಮಲ್ಲಿ ರೈಲ್ವೆ ಟರ್ಮಿನಲ್ ಇಲ್ಲ. ಹೀಗಾಗಿ, ಇದರ ಜಾರಿಗೆ ಚಿಂತನೆ ನಡೆದಿದ್ದು, ಇದರೊಂದಿಗೆ ಕೋಟೆ ಗಂಗೂರಿನಲ್ಲಿ ನೂತನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕಾಗಿ 60 ಕೋಟಿ ರೂ. ಅನುದಾನಕ್ಕೆ ಒಪ್ಪಿಗೆ ದೊರೆತಿದೆ. ಇದು ಆರಂಭವಾದರೆ ರಾಜ್ಯ ಹಲವು ರೈಲ್ವೆ ಸಿಗ್ನಲ್ ಇಲ್ಲಿಗೆ ಬರಲಿದೆ. ಇದರೊಂದಿಗೆ ಸುಮಾರು 1200 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗ ಹಾಗೂ ರಾಣೆಬೆನ್ನೂರು ನಡುವಿನ ರೈಲ್ವೆ ಮಾರ್ಗಕ್ಕೆ ಚಿಂತನೆ ನಡೆದಿದ್ದು, ಇದು ಕಾರ್ಯಗತವಾದರೆ ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಇನ್ನು, ತುಮಕೂರು ಹಾಗೂ ಶಿವಮೊಗ್ಗ ನಡುವಿನ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದ್ದು, ಕೆಲಸವೂ ಸಹ ಆರಂಭವಾಗಿದೆ. ಇದಕ್ಕಾಗಿ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವೆಚ್ಚ ಮಾಡಲಿದೆ ಎಂದರು.
(ವರದಿ: ನಿರಂಜನ ಮೂರ್ತಿ)
















