ಶಿವಮೊಗ್ಗ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನೂತನ ಯೋಜನೆಗಳು ರೂಪುರೇಷೆ ಸಿದ್ದವಾಗುತ್ತಿದ್ದು, ಇದರಲ್ಲಿ ಜೋಗ ಜಲಪಾತದ ಸಮಗ್ರ ಅಭಿವೃದ್ಧಿ ಪ್ರಮುಖವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕಮಲಾ ನೆಹರು ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರ ಮಾತನಾಡಿದರು.
ಜೋಗ ಜಲಪಾತ ನಯಾಗರಾ ಫಾಲ್ಸ್ ಸೇರಿದಂತೆ ವಿಶ್ವದ ಯಾವುದೇ ಜಲಪಾತಕ್ಕೆ ಕಡಿಮೆಯಿಲ್ಲ. ಹೀಗಾಗಿ ಈ ಸಂಬಂಧಿಸಿದಂತೆ ಕೆಳಕ್ಕೆ ಇಳಿಯುವ ಮಟ್ಟಿಲುಗಳು ದುರಸ್ತಿಗೆ ಬಂದಿದ್ದು, ಇದನ್ನು ಉತ್ತಮಗೊಳಿಸುವ ಬಗ್ಗೆ, ರೋಪ್ ವೇ ಮಾಡುವುದು ಹಾಗೂ ಮ್ಯೂಸಿಕಲ್ ಫೌಂಟನ್ ಸೇರಿದಂತೆ ಹಲವು ರೀತಿಯಲ್ಲಿ ಅಭಿವೃದ್ಧಿಪಡಿಸಿ ಆಕರ್ಷಣೀಯ ಕೇಂದ್ರವನ್ನಾಗಿಸಲು ಚಿಂತನೆ ನಡೆದಿದೆ ಎಂದರು.
ಚಿತ್ರದುರ್ಗ, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಂತೆ ಒಂದು ಟೂರಿಸಂ ಸರ್ಕ್ಯೂಟ್ ಮಾಡಿ, ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸುಮಾರು 60 ಕೋಟಿ ರೂ. ಮೊತ್ತ ಪ್ರಸ್ತಾವನೆಯನ್ನು ಸಲ್ಲಿಸುವ ಸಿದ್ದತೆ ನಡೆಸಲಾಗಿದ್ದು, ಇದಕ್ಕೆ ಒಪ್ಪಿಗೆ ದೊರೆತ ನಂತರ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ ಎಂದರು.
ದೇಶದಾದ್ಯಂತ ಸುಮಾರು 22 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿರುವ ಕೇಂದ್ರದ ಬಿಜೆಪಿ ಸರ್ಕಾರ ಈ ಮೂಲಕ ಪ್ರವಾಸೋದ್ಯಮ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಇದರಲ್ಲಿ ರಾಜ್ಯದ ಹಂಪಿ ಹಾಗೂ ಹಳೇಬೀಡು ಆಯ್ಕೆಯಾಗಿದ್ದು, ಈ ಸ್ಥಳಗಳಲ್ಲಿ ವಿಮಾನ ಯಾನ, ರೈಲು ಸಂಪರ್ಕ, ಉತ್ತಮ ಗುಣಮಟ್ಟದ ರಸ್ತೆ ಅಭಿವೃದ್ಧಿ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಾಗಿದೆ ಎಂದರು.
ವಿಶ್ವದ ಹಲವು ರಾಷ್ಟ್ರಗಳಿಗೆ ಪ್ರವಾಸೋದ್ಯಮದಿಂದ ಅಧಿಕ ಆದಾಯ ಬರುತ್ತಿದೆ. ಸಿಂಗಾಪೂರ್, ಮಲೇಷ್ಯಾದಂತಹ ವಿದೇಶಗಳು, ತಿರುಪತಿ, ಶಬರಿಮಲೆಯಂತದ ದೇಶೀಯ ತೀರ್ಥಕ್ಷೇತ್ರಗಳ ಮೂಲಕ ಬಹಳಷ್ಟು ಆದಾಯವನ್ನು ಸರ್ಕಾರಗಳು ಪಡೆಯುತ್ತಿವೆ. ನಮ್ಮಲ್ಲೂ ಸಹ ಇದೇ ರೀತಿ ಆಗಬೇಕು ಎಂದರು.
ದೇಶ ಸುತ್ತು ಕೋಶ ಓದು ಎನ್ನುತ್ತಾರೆ. ಅದೇ ರೀತಿ ಕೋಶ ಅಂದರೆ ಶಿಕ್ಷಣದ ಜೊತೆಯಲ್ಲಿ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಮಹತ್ವ ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಕೆಎನ್.ಎಂ ಕಾಲೇಜು ಪ್ರಾಂಶುಪಾಲೆ ಡಾ. ಕೆ.ಟಿ. ಪಾರ್ವತಮ್ಮ, ನಿವೃತ್ತ ಪ್ರಾಂಶುಪಾಲ ಡಿ.ಎಸ್. ಮಂಜುನಾಥ್, ನಿವೃತ್ತ ತಹಶೀಲ್ದಾರ್ ಮಂಜುನಾಥ ಶರ್ಮಾ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜು ಇತಿಹಾಸ ವಿಭಾಗ ಮತ್ತು ಎನ್’ಎಸ್’ಎಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ವಿಚಾರ ಸಂಕಿರಣ ಆಯೋಜನೆಯಾಗಿತ್ತು.
(ವರದಿ: ನಿರಂಜನ ಮೂರ್ತಿ)
Discussion about this post