ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು (Mysore) ನಗರದ ತೊಣಚಿಕೊಪ್ಪಲು ಬಡಾವಣೆಯ ಶ್ರೀ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355 ನೇ ಆರಾಧನಾ (Raghavendra Swamy Aradhana) ಮಹೋತ್ಸವದ ಅಂಗವಾಗಿ ಆ. 30ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಯರ ಮೃತ್ತಿಕಾ ವೃಂದಾವನಕ್ಕೆ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಜಲ ಅಭಿಷೇಕ, ಫಲ ಪಂಚಾಮೃತ ಅಭಿಷೇಕ, ನಂತರ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.
Mysore : ದಾಸವಾಣಿ ಕಛೇರಿ
ಸಂಜೆ 6ಕ್ಕೆ ಉದಯೋನ್ಮುಖ ಪ್ರತಿಭೆಗಳಾದ ಎ.ಆರ್. ಕೌಸಲ್ಯಾ ಮತ್ತು ಎ.ಆರ್. ಅಪ್ರಮೇಯ ಅವರಿಂದ ದಾಸವಾಣಿ ಕಛೇರಿ ನೆರವೇರಲಿದೆ. ಪಕ್ಕವಾದ್ಯದಲ್ಲಿ ಪಂಡಿತ್ ಪರಮೇಶ್ವರ ಹೆಗಡೆ ತಬಲಾ, ವಿದ್ವಾನ್ ಗಣೇಶ ಭಟ್ ಕೀ ಬೋರ್ಡ್ ಮತ್ತು ವಿದ್ವಾನ್ ಕಿರಣ್ ಅವರು ಕೀಬೋರ್ಡಿನಲ್ಲಿ ಸಹಕಾರ ನೀಡಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.
ಕಲಾವಿದರ ಪರಿಚಯ
ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಮತ್ತು ರಜನಿ ರಾಮಧ್ಯಾನಿ ಅವರ ಶಿಷ್ಯೆ ಎ.ಆರ್. ಕೌಸಲ್ಯಾ ಅವರು ಸದ್ಯ ಬಿ.ಇ. ಅಧ್ಯಯನ ಮುಗಿಸಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಹಂತದ ಕಲಿಕೆಯಲ್ಲಿ ಇದ್ದಾರೆ. ಈಗಾಗಲೇ ಹಲವು ಮಠ ಮಾನ್ಯಗಳ ವೇದಿಕೆಗಳಲ್ಲಿ ಗಾಯನ ಪ್ರಸ್ತುತ ಪಡಿಸಿದ್ದಾರೆ. ತಿರುಮಲ ತಿರುಪತಿಯ ಟಿಟಿಡಿ- ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಗಾಯಕಿಯಾಗಿ 3 ವರ್ಷಗಳಿಂದ ಈಗಾಗಲೇ ತಿರುಪತಿ ಕ್ಷೇತ್ರದ ಸಹಸ್ರ ದೀಪಾಲಂಕಾರ ಸೇವೆಯಲ್ಲಿ ಹಲವು ಬಾರಿ ಗಾಯನ ಸೇವೆ ಸಮರ್ಪಣೆ ಮಾಡಿದ್ದಾರೆ.
ಎ. ಆರ್. ಅಪ್ರಮೇಯ ಅವರು ಹಾಡುಗಾರಿಕೆಯನ್ನು ಅನನ್ಯ ಭಾವದಿಂದ ಸ್ವೀಕರಿಸಿದ ವಿದ್ಯಾರ್ಥಿ. ಇದೀಗ ಬಿಇ ಪ್ರವೇಶ ಪಡೆದಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಗಾಯನ ಸ್ಪರ್ಧೆಗಳಲ್ಲಿ ಅನೇಕ ಬಹುಮಾನ ಪಡೆದಿದ್ದಾರೆ.
ಕೇಂದ್ರೀಯ ವಿದ್ಯಾಲಯ ಹಮ್ಮಿಕೊಂಡಿದ್ದ ರಾಷ್ಟ್ರೀಯ ‘ಕಲಾ ಉತ್ಸವ್’ ಸ್ಪರ್ಧೆಯಲ್ಲಿ ಎರಡು ಬಾರಿ ದಕ್ಷಿಣ ಭಾರತ ಮಟ್ಟವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಪ್ರತಿನಿಧಿಸಿದ ಹೆಗ್ಗಳಿಕೆ ಇದೆ. ಈಗಾಗಲೇ ಹಲವು ವೇದಿಕೆಗಳಲ್ಲಿ ಗಾಯನ ಪ್ರಸ್ತುತ ಪಡಿಸಿದ್ದಾರೆ. ಇಬ್ಬರೂ ಪತ್ರಕರ್ತ ಎ.ಆರ್. ರಘುರಾಮ ಮತ್ತು ವಾರುಣಿ ಅವರ ಮಕ್ಕಳು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









