ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠದ ಶ್ರೀ ಧನ್ವಂತರಿ ದೇವರ ಸನ್ನಿಧಾನದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ವಿಶೇಷ ದೀಪೋತ್ಸವ ಸಂಪನ್ನಗೊಂಡಿತು.
ಮಹಾ ಮಹಿಮರಾದ ಶ್ರೀಸತ್ಯ ಸಂಕಲ್ಪರು ಮತ್ತು ಶ್ರೀಸತ್ಯ ಸಂತುಷ್ಟ ತೀರ್ಥರ ವೃಂದಾವನ ಸನ್ನಿಧಾನದಲ್ಲಿರುವ ಶ್ರೀ ಧನ್ವಂತರಿ ದೇವರಿಗೆ ಭಕ್ತರೇ ತಮ್ಮ ತಮ್ಮ ಮನೆಗಳಲ್ಲಿ ಪರಿಶುದ್ಧವಾಗಿ ತಯಾರಿಸಿಕೊಂಡು ಬಂದು ಸಮರ್ಪಿಸಿದ 108 ರೀತಿಯ ಖಾದ್ಯಗಳನ್ನು ದೇವರಿಗೆ ನೈವೇದ್ಯ ಮಾಡಿದ್ದು ವಿಶೇಷವಾಗಿತ್ತು.
ದೇವಾಲಯದ ತುಂಬಾ 1008 ದೀಪಗಳನ್ನು ಭಕ್ತರೇ ಬೆಳಗಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇದೇ ಸಂದರ್ಭ ದೇವರಿಗೆ ಪಲ್ಲಕ್ಕಿ ಉತ್ಸವ, ಸ್ವಸ್ತಿ ವಾಚನ, ತೊಟ್ಟಿಲು ಸೇವೆ, ವಿವಿಧ ಬಗೆಯ ಮಂಗಳಾರತಿ ಮಾಡಿದ್ದನ್ನು ಭಕ್ತರು ಕಣ್ ತುಂಬಿಕೊಂಡು ಧನ್ಯತೆ ಮೆರೆದರು.
ಮಠದ ವ್ಯವಸ್ಥಾಪಕ ವಿದ್ವಾನ್ ಅನಿರುದ್ಧಾಚಾರ್ಯ ಪಾಂಡುರಂಗಿ ಈ ಸಂದರ್ಭ ಮಾತನಾಡಿ, ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳು ನಮ್ಮೆಲ್ಲರ ಅಂತರಂಗದಲ್ಲಿ ಬೆಳಗಲಿ ಎಂಬುದರ ಸಂಕೇತವಾಗಿ 1008 ದೀಪಗಳನ್ನು ಬೆಳಗಲಾಗಿದೆ ಎಂದರು.
ಉತ್ತರಾದಿ ಮಠಾಧೀಶರಾದ ಶ್ರೀಸತ್ಯಾತ್ಮ ತೀರ್ಥ ಸ್ವಾಮೀಜಿ ಪ್ರತಿಷ್ಠಾಪಿಸಿರುವ ಶ್ರೀ ಧನ್ವಂತರಿ ದೇವರ ಸನ್ನಿಧಾನ ಆರೋಗ್ಯಭಾಗ್ಯ ಕಲ್ಪಿಸುವ ಕ್ಷೇತ್ರವಾಗಿದೆ. ಕಾರ್ತಿಕ ಮಾಸದ ದೀಪದಂತೆ ನಮ್ಮೆಲ್ಲರ ಜೀವನ ಬೆಳಗಲಿ ಎಂದರು. ಪಂಡಿತರು, ವಿದ್ವಾಂಸರು ಸೇರಿದಂತೆ ನೂರಾರು ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post