ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಂಸ್ಕೃತ ಕಲಿಕೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಸಂಸ್ಕೃತ ಕಲಿಕೆಗೆ ಯಾವುದೇ ವಯೋಮಾನದ ಮಿತಿ ಇಲ್ಲ ಎಂದು ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಕೃಷ್ಣಮೂರ್ತಿಪುರಂ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶ್ರೀಮಠದ ವಿನೂತನ ಯೋಜನೆಯಾದ `ಬಾಲಬೋಧ’ ಎಳೆಯರ ಸನಾತನ ಸಂಸ್ಕಾರ ತರಗತಿ ಮತ್ತು ಆನ್‌ಲೈನ್ ಸಂಸ್ಕೃತ ಕಲಿಕಾ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಸರಳ ವಿಧಾನದಲ್ಲಿ ಸಂಸ್ಕೃತ ಕಲಿಯುವುದಕ್ಕಾಗಿ ಹಿರಿಯರು ಪ್ರೇರೇಪಿಸಬೇಕು. ಈ ಮೂಲಕ ಉಳಿದ ಭಾಷೆಗಳ ಕಲಿಕೆಯೂ ಸರಾಗವಾಗುತ್ತದೆ. ಆನ್‌ಲೈನ್ ಸಂಸ್ಕೃತ ಕಲಿಕೆಗೆ ಯಾವುದೇ ಸಮುದಾಯ, ವಯಸಿನ ಮಿತಿ ಇಲ್ಲ. ಎಲ್ಲರಿಗೂ ಇದು ಮುಕ್ತವಾಗಿದೆ ಎಂದವರು ನುಡಿದರು.
ಶಾಲೆಯೊಳಗೆ ಕಲಿಯುವುದಕ್ಕಿಂತಾ ಅದರಿಂದ ಆಚೆ ತಿಳಿಯುವುದು ಸಾಕಷ್ಟು ಇರುತ್ತದೆ. ಆಧುನಿಕ ಶಿಕ್ಷಣದೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಕೃತ ಕಲಿಸುವುದು ಯೋಜನೆಯ ಉದ್ದೇಶವಾಗಿದೆ ಎಂದವರು ಹೇಳಿದರು.
ವಿದ್ಯಾಪೀಠದ ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಪೀಠದ ಆವರಣದಲ್ಲೇ ನಿತ್ಯ ಸಂಜೆ 5.30ರಿಂದ 6.30ರವರೆಗೆ ಮಕ್ಕಳಿಗಾಗಿ ತರಗತಿಗಳು ಆಯೋಜನೆಗೊಂಡಿವೆ. ಇಲ್ಲಿ ಎಳೆಯರಿಗೆ ರಾಮಾಯಣ, ಮಹಾಭಾರತದ ನೀತಿಕತೆ ಬೋಧನೆ, ಸಂಸ್ಕೃತ ಕಲಿಕೆ, ಪಾರಂಪರಿಕ ಆಟ ಹೇಳಿಕೊಡುವುದರೊಂದಿಗೆ ಮತ್ತು ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಕಲ್ಪಿಸಲಾಗುವುದು ಎಂದರು.
ಆನ್‌ಲೈನ್ ಸಂಸ್ಕೃತ ಕಲಿಕಾ ಶಿಬಿರದ ಮೂಲಕ ಎಲ್ಲರಿಗೂ ಉತ್ತಮ ಸಂಸ್ಕಾರ ಲಭ್ಯವಾಗಲಿ. ಮಕ್ಕಳು ವಿವಿಧ ರೀತಿಯ ವ್ಯಸನಗಳಿಂದ ಮುಕ್ತರಾಗಿ ಸಂಸ್ಕೃತ ಭಾಷಾ ಪ್ರಸರಣದಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸಿದರು. ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಮಧುಸೂದನಾಚಾರ್ಯ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post