ಕಲ್ಪ ಮೀಡಿಯಾ ಹೌಸ್ | ಕೌಸಲ್ಯಾರಾಮ, ಮೈಸೂರು |
ಕನ್ನಡ ರಾಜ್ಯೋತ್ಸವ #KannadaRajyotsava ಸಂದರ್ಭದಲ್ಲಿ ಜಿಲ್ಲಾಡಳಿತದಿಂದ ವಿವಿಧ ಕ್ಷೇತ್ರದ ಗಣ್ಯರಿಗೆ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪುರಸ್ಕಾರಕ್ಕೆ ನಾಡಿನ ಹಿರಿಯ ಉದ್ಯಮಿ ಎಚ್.ಆರ್. ನಾಗೇಂದ್ರರಾವ್ ಆಯ್ಕೆಗೊಂಡಿದ್ದಾರೆ.
ಕರುನಾಡಿನ ಸಾಂಸ್ಕೃತಿಕ ರಾಜಧಾನಿ, ಒಡೆಯರ ಆಡಳಿತದ ಇತಿಹಾಸ ಮತ್ತು ಪರಂಪರೆಯ ನಾಡು ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹಂಗೂಡು ಗ್ರಾಮದ ಎಚ್.ಆರ್. ನಾಗೇಂದ್ರರಾವ್ #HRNagendraRao ರಾಜ್ಯದ ಹೆಮ್ಮೆಯ ಉದ್ಯಮಿ. ಸಂಘಟಕ. ದೂರದರ್ಶಿ ಚಿಂತಕ ಮತ್ತು ಸಾಮಾಜಿಕ ಚಟುವಟಿಕೆಗಳ ನಾಯಕರೂ ಆಗಿದ್ದಾರೆ. ಅವರ ಜೀವನ- ಸಾಧನೆ ಮತ್ತು ದೇಶಕ್ಕಾಗಿ ಉದ್ಯಮದ ಮೂಲಕ ಸಲ್ಲಿಸಿದ ಸೇವೆ ಪರಿಗಣಿಸಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್ ತಿಳಿಸಿದ್ದಾರೆ.
ನವೆಂಬರ್ 1ರಂದು ಬೆಳಗ್ಗೆ 10ಕ್ಕೆ ಮೈಸೂರಿನಲ್ಲಿ #Mysore ಜಿಲ್ಲಾಡಳಿತ ಆಯೋಜಿಸಿರುವ ರಾಜ್ಯೋತ್ಸವ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಮಹದೇವಪ್ಪ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಮತ್ತಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಾಧನೆಗಳ ಪಕ್ಷಿನೋಟ
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮೈಸೂರು ಜಿಲ್ಲೆ ಹಂಗೂಡು ಗ್ರಾಮದ ನಾಗೇಂದ್ರ ರಾವ್, ಬಾಲ್ಯದಿಂದಲೂ ಶ್ರದ್ಧೆ, ಶಿಸ್ತು, ಸಂಯಮ ಮತ್ತು ಸಂಸ್ಕೃತಿ ಮೈವೆತ್ತ ಕುಟುಂಬದಲ್ಲಿ ಬೆಳೆದವರು. ಶ್ರಮದ ದುಡಿಮೆ ಮತ್ತು ಪ್ರಾಮಾಣಿಕತೆಯಿಂದ ಉನ್ನತ ಹುದ್ದೆ ಮತ್ತು ಸಿರಿವಂತಿಕೆಯನ್ನು ಗಳಿಸಿದವರು.
ಸದ್ಯ ಇವರು ಮೈಸೂರಿನ ಕೂರಗಲ್ಲಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಡಿಎಂಎಸ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು.
ಪರಿಚಯ
21-07-1965ರಂದು ಜನಿಸಿದ ನಾಗೇಂದ್ರ ರಾವ್ (ತಂದೆ: ಎಚ್.ಆರ್. ರಾಮಚಂದ್ರರಾವ್, ತಾಯಿ : ಶಾಂತಾ) ಅವರ ಹೆಮ್ಮೆಯ ಪುತ್ರ. ಪತ್ನಿ: ಮಮತಾ ನಾಗೇಂದ್ರ ಅವರು ಸಾಗರ ತಾಲೂಕು ಹಂಸಾಗರದವರಾಗಿದ್ದು, ಪತಿಯ ಪ್ರತಿಯೊಂದು ಸಾಧನೆ, ಧರ್ಮ ಕಾರ್ಯ ಮತ್ತು ಸೇವಾ ಚಟುವಟಿಕೆಗಳಿಗೆ ಪ್ರೇರಕರಾಗಿದ್ದಾರೆ.
ಎಚ್.ಆರ್. ನಾಗೇಂದ್ರರಾವ್ 2014 ರ ವೃತ್ತಿಪರ ತರಬೇತಿಯ ರಾಷ್ಟ್ರೀಯ ಬ್ರಾೃಂಡ್ ಅಂಬಾಸಿಡರ್ ಪ್ರಶಸ್ತಿ ಪುರಸ್ಕೃತರು. (ಕಾರ್ಮಿಕ ಮತ್ತು ಕಲ್ಯಾಣ ಇಲಾಖೆಯಿಂದ ಗೌರವ ಪ್ರದಾನ) ವಾಣಿಜ್ಯೋದ್ಯಮಿ ವಿಭಾಗದಲ್ಲಿ, ಇಡೀ ಭಾರತ 13 ಶ್ರೇಷ್ಠ ಸಾಧಕರಲ್ಲಿ ಅಗ್ರಗಣ್ಯರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕದಿಂದ ಗೌರವ ಪುರಸ್ಕಾರ ಹೊಂದಿದ ಏಕೈಕ ಕನ್ನಡಿಗ) ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಆಯೋಜನೆಗೊಂಡಿದ್ದ (17/11/ 2014.) ಅಂತಾರಾಷ್ಟ್ರೀಯ ಸಾಧಕರ ಸಮ್ಮೇಳನದಲ್ಲಿ ಇವರು ಸ್ಥಾಪಿಸಿದ ಉದ್ಯಮ- ಡಿಎಂಎಸ್ ಟೆಕ್ನಾಲಜೀಸ್ ವೇಗ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಪರಿಗಣಿಸಿ ‘ಭಾರತೀಯ ಕಂಪನಿ ಶ್ರೇಷ್ಠ ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ ಹೆಮ್ಮೆ.
ನಡೆದುಬಂದ ಹಾದಿ
ಪ್ರೌಢ ಶಿಕ್ಷಣದ ನಂತರ ಐಟಿಐಗೆ ಸೇರ್ಪಡೆ. ಪ್ರಥಮ ದರ್ಜೆ ಮೆಕ್ಯಾನಿಕಲ್ ಡ್ರಾಟ್ಸ್‌ಮನ್‌ನಲ್ಲಿ ತೇರ್ಗಡೆಯಾದರು. * ದೇಶದ ಪ್ರತಿಷ್ಠಿತ ಕಂಪನಿ ಕಿರ್ಲೋಸ್ಕರ್‌ಗೆ ಟ್ರೈನಿಯಾಗಿ ಸೇರ್ಪಡೆ. 3 ತಿಂಗಳೊಳಗೆ ಔನ್ನತ್ಯ ಸಾಧನೆ.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಗಳಿಸಿದವರ ತಂಡದ ಜತೆ (ಆರ್ ಆ್ಯಂಡ್ ಡಿ) ಕಾರ್ಯ ನಿರ್ವಹಿಸಿ ಶಹಬ್ಬಾಸ್ ಪಡೆದ ಸಂಭ್ರಮ. ಪಿಸಿಬಿ ಲೇಔಟ್, ಆರ್ಟ್ ವಕ್, ಕಂಟ್ರೋಲ್ ಪ್ಯಾನಲ್‌ಗಳಿಗಾಗಿ ಮೆಕ್ಯಾನಿಕಲ್ ಡಿಸೈನ್ ವಿಷಯದಲ್ಲಿ ಪರಿಣತಿ ಪಡೆದರು.
1985 – ಬೆಲ್ಸ್ ಕಂಟ್ರೋಲ್ಸ್ ಕಂಪನಿಗೆ ಪದಾರ್ಪಣೆ. ಒಂದು ವರ್ಷದೊಳಗೆ ‘ಅತ್ಯುತ್ತಮ ಉದ್ಯೋಗಿ ಪ್ರಶಸ್ತಿ’ ಗೆ ಭಾಜನ. ಇಂಜಿನಿಯರ್‌ಗಳ ಎಂಟೆಕ್ ಪದವೀಧರ ಮತ್ತು ಪರಿಣತರ ತಂಡದೊಂದಿಗೆ ಕಾರ್ಯ ನಿರ್ವಹಣೆ ಅರ್ಹತೆ ಪಡೆದ ಭಾಗ್ಯ. ಎಲ್ಲವೂ ಸತತ ಶ್ರಮ ಮತ್ತು ವಿಶೇಷ ಆಸಕ್ತಿಯಿಂದಲೇ ಪಡೆದ ಫಲಗಳು.
1987- ರಲ್ಲಿ ಮತ್ತೊಂದು ಪ್ರಖ್ಯಾತ ಸಂಸ್ಥೆ ವಿಪ್ರೋ ಇನ್ಫೋಟೆಕ್‌ಗೆ ಸೇರ್ಪಡೆ. ಪಿಸಿಬಿ ಆರ್ಟಿಸ್ಟ್ ಸೇವೆ. ಕಂಪ್ಯೂಟರ್, ಪ್ರಿಂಟರ್ಸ್ ಮತ್ತು ಮಾನಿಟರ್ ಬೋರ್ಡ್‌ಗಳ ರೂಪದಲ್ಲಿ ಸಾಕಷ್ಟು ಆರ್ಟ್ ವರ್ಕ್ ಮಾಡಿದ ಸಂಭ್ರಮ. ಹಿರಿಯರ ತಂಡದಿಂದ ಸೈ ಎನಿಸಿಕೊಂಡ ಹಿರಿಮೆ. ಸಾಮಾನ್ಯ ವ್ಯವಸ್ಥಾಪಕರು ಸೇರಿದಂತೆ ಎಲ್ಲಾ ಇಂಜಿನಿಯರ್‌ಗಳ ತಂಡದಿಂದ ಪ್ರಶಂಸೆ. ಇದರಿಂದ ವೃತ್ತಿರಂಗದಲ್ಲಿ ಮೂಡಿದ ಹೊಸತನ. ದುಡಿಮೆಯ ಛಲ. ಸಾಧಿಸಲು ಪಡೆದ ಬಲ ಬಹು ದೊಡ್ಡದು.
1989- ಇಂಡಾಲ್ ಎಲೆಕ್ಟ್ರಾನಿಕ್ಸ್ ಕಂಪನಿಗೆ ಮಾರಾಟದ ಸಹ-ಸಂಯೋಜಕರಾಗಿ ಸೇರ್ಪಡೆ. 3 ವರ್ಷಗಳ ಕಾಲ ಇಡೀ ಭಾರತೀಯ ಮಾರುಕಟ್ಟೆಯನ್ನು ಏಕಾಂಗಿಯಾಗಿ ನಿರ್ವಹಿಸಿದ ಅನುಭವ. ಇದು ಕಲಿಸಿದ ಸಾಮರ್ಥ್ಯದ ಪರಿ ಅನನ್ಯ. ವೃತ್ತಿ ನೀಡಿದ ಅನುಭವ ಬಹು ವಿಸ್ತಾರ. ಕಲಿಸಿದ ಪಾಠ ಬಹು ದೊಡ್ಡದು. ಮುಂದಿನ ಬದುಕಿನ ಎಲ್ಲ ಮಹೋನ್ನತ ಸಾಧನೆಗಳಿಗೂ ಇದೇ ಅಡಿಪಾಯ ಆಗಿದ್ದು ಜೀವನದ ಸುಕೃತ. ಡಿಎಂಎಸ್ ಟೆಕ್ನಾಲಜೀಸ್ ಅವರ ಕಲ್ಪನೆಯ ಕೂಸು. ಮೈಸೂರಿನ ಮೂಲದ ಈ ಸಂಸ್ಥೆ ಬಹುಬೇಗ ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಪಡೆದು, ನಿಸರ್ಗ ಸಂರಕ್ಷಣೆ, ಪರ‌್ಯಾವರಣ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಹತ್ತದ ಪಾತ್ರ ವಹಿಸಿದ್ದು ಮಹೋನ್ನತ ಮೈಲಿಗಲ್ಲೇ ಆಗಿದೆ.
ನಾಗೇಂದ್ರ ಅವರ ಸೇವಾ ಚಟುವಟಿಕೆ
ಮೈಸೂರಿನ ಹಿರಿಯ ಉದ್ಯಮಿ, ಸೇವಾ ಧುರೀಣ, ಕೊಡುಗೈ ದಾನಿ ಮತ್ತು ಸಮಾಜಮುಖಿ ಕಾರ್ಯಕರ್ತ ಎಚ್.ಆರ್.ನಾಗೇಂದ್ರ ರಾವ್ ಅವರು ನಾಡಿಗೆ ನೀಡಿರುವ ಬಹುಮುಖೀ ಸೇವೆ ಅನನ್ಯವಾಗಿವೆ. ರಾಜ್ಯದ ವಿವಿಧ ಭಾಗದ ಮಠ, ಪೀಠ, ಶಿಕ್ಷಣ ಸಂಸ್ಥೆ, ಆರೋಗ್ಯ ಕ್ಷೇತ್ರ, ಬಡವರ ಬಗ್ಗೆ ಕಳಕಳಿ, ಕೋವಿಡ್ ಸಂದರ್ಭದಲ್ಲಿ ಮಾನವೀಯ ಸೇವೆ- ಹೀಗೆ ದಾನ- ಧರ್ಮ- ದತ್ತಿಗಳಿಗೆ ಅವರು ಭೂಷಣಪ್ರಾಯರಾಗಿದ್ದಾರೆ. ಗಳಿಸಿದ ಅಪಾರ ಸಂಪತ್ತಿನಲ್ಲಿ ಸ್ವಂತಕ್ಕೆ ಸಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಮನೋಭಾವ ನಾಗೇಂದ್ರ ರಾವ್ ಅವರದ್ದು. ಈ ನಿಟ್ಟಿನಲ್ಲಿ ಅವರು ಸಮಾಜಕ್ಕೆ ಸಲ್ಲಿಸಿರುವ ಸೇವಾ, ದಾನ ಮತ್ತು ಆರ್ಥಿಕ ನೆರವುಗಳ ಪಕ್ಷಿನೋಟ ಈ ಕೆಳಗಿನಂತಿದೆ
1. ಕೋವಿಡ್ ಸಮದರ್ಭದಲ್ಲಿ ಜೀವ ರಕ್ಷಣೆ
ಕೋವಿಡ್ ಸಮಯದಲ್ಲಿ ಸುಮಾರು 100 ಜನರಿಗೆ ಆಹಾರ, ವೈದ್ಯಕೀಯ, ವಸತಿ ಮತ್ತು ಸಾಮಾನ್ಯ ಜೀವ ರಕ್ಷಣಾ ದಿಸೆಯಲ್ಲಿ ಆಸ್ಪತ್ರೆ ವೆಚ್ಚಗಳಿಗಾಗಿ ರೂ. 10 ಸಾವಿರದಿಂದ 10 ಲಕ್ಷ ರೂ. ವರೆಗೆ (ಒಟ್ಟು ರೂ 50 ಲಕ್ಷ ) ದೇಣಿಗೆಯಾಗಿ ನೀಡಲಾಗಿದೆ. ಯಾವುದೇ ಜಾತಿ, ಮತ, ಸಮುದಾಯಗಳನ್ನೂ ಮೀರಿ ಕೇವಲ ಮಾನವೀಯ ಸೇವೆ ಮತ್ತು ಜೀವ ರಕ್ಷಣೆಗೆ ನೆಲೆಗಟ್ಟಿನಲ್ಲಿ ಅಗತ್ಯ ಇರುವ ಎಲ್ಲರಿಗೂ ಈ ಸೇವೆಯನ್ನು ನಾಗೇಂದ್ರ ಅವರು ನೀಡಿ ಮಾನವೀಯತೆ ಮೆರೆದಿದ್ದಾರೆ.
2. ಉತ್ತರಾದಿ ಮಠಕ್ಕೆ ದೇಣಿಗೆ
ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉತ್ತರಾದಿ ಮಠ, ಪೀಠದ ಉಚಿತ ಗುರುಕುಲದ ಮಕ್ಕಳ ವೇದ ಶಿಕ್ಷಣ, ಮಹಾಸಂಸ್ಥಾನದ ದೇವಾಲಯ, ಯತಿ ವರೇಣ್ಯರ ವೃಂದಾವನ ಜೀರ್ಣೋದ್ಧಾರ, ಮರು ನಿರ್ಮಾಣ ಇತ್ಯಾದಿ ಸೇವೆಗೆ 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸತ್ಯಾತ್ಮತೀರ್ಥ ಮಹಾಸ್ವಾಮಿಗಳ ಕೃಪೆಗೆ ಪಾತ್ರರಾಗಿ ಅನುಗ್ರಹ ಮಂತ್ರಾಕ್ಷತೆ, ಗೌರವಾದರಗಳಿಗೆ ಪಾತ್ರರಾಗಿದ್ದಾರೆ.
3. ಹನುಮನ ಸನ್ನಿಧಿ ನವೀಕರಣ
ಹನಗೂಡು ಶ್ರೀ ಹನುಮಾನ್ ದೇವಸ್ಥಾನವನ್ನು ನವೀಕರಣ ಮಾಡಿದ ಸಂದರ್ಭ 14 ಲಕ್ಷ ರೂ. ಗಳನ್ನು ಸೇವಾರ್ಥ ರೂಪವಾಗಿ ದಾನ ನೀಡಿದ್ದಾರೆ. ವಿವಿಧ ಸಮುದಾಯದವರ ಭಕ್ತಿ, ಭಾವ ಸಮರ್ಪಣಾ ಸನ್ನಿಧಿಯನ್ನು ನಾಗೇಂದ್ರ ಅವರು ಸಮರ್ಥವಾಗಿ ಮರು ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಗಮನೀಯ.
4. ಶ್ರೀರಾಮ ದೇಗುಲ ಪುನರುತ್ಥಾನ
ಶ್ರೀ ರಾಮಚಂದ್ರ- ಅಖಂಡ ಭಾರತದ ಮರ್ಯಾದಾ ಪುರುಷೋತ್ತಮ. ರಾಮನಿರುವ ಊರುಗಳಿಲ್ಲ. ಹುನುಮಂತನಿರುವ ಗ್ರಾಮಗಳು ಇಲ್ಲ ಎಂಬುದು ಸತ್ಯಸ್ಯ ಸತ್ಯ. ಅದೇ ರೀತಿ ಮೈಸೂರು ಜಿಲ್ಲೆ ಹುಣಸೂರು ಶ್ರೀ ರಾಮ ದೇವಾಲಯವನ್ನು ಪುನರುತ್ಥಾನ ಮಾಡುವ, ನವೀಕರಣಗೊಳಿಸುವ ನಿಟ್ಟಿನಲ್ಲಿ ಎಚ್.ಆರ್. ನಾಗೇಂದ್ರ ರಾವ್ ಅವರು 5 ಲಕ್ಷ ರೂ ದೇಣಿಗೆ ಸಮರ್ಪಣೆ ಮಾಡಿ, ಭಕ್ತಿ ಭಾವ ಸಮರ್ಪಣೆ ಮಾಡಿದ್ದಾರೆ.
Also read: Officials will be held accountable for missing commercial tax targets: CM Siddaramaiah
5. ವ್ಯಾಸರಾಜರ ಮಹಾ ಸಂಸ್ಥಾನಕ್ಕೆ ದಾನ
ಸಮಸ್ತ ಕನ್ನಡಿಗರ ಹೆಮ್ಮೆ ಮತ್ತು ಪ್ರತಿಷ್ಠೆಯ ಪ್ರತೀಕವಾದ ವಿಜಯನಗರ ವೀರ ಸಾಮ್ರಾಜ್ಯವನ್ನು ಆಳಿದ ಹಿರಿಯ ಯತಿವರೇಣ್ಯರಾದ ಶ್ರೀ ವ್ಯಾಸರಾಜ ಮಹಾಸ್ವಾಮಿಗಳ ಮಠದ ಹಿರಿಯ ಯತಿಗಳ ನವ ವೃಂದಾವನ (ಮೈಸೂರು ಜಿಲ್ಲೆ ತಿ. ನರಸೀಪುರ ಸಮೀಪದ ಸೋಸಲೆ ನವ ವೃಂದಾವನ ಸನ್ನಿಧಿ) ಅತ್ಯಂದ ದಮನೀಯ ಸ್ಥಿತಿಯಲ್ಲಿ ಇತ್ತು. ಕಳೆದ 5 ವರ್ಷದ ಹಿಂದೆ ಈ ಪವಿತ್ರ ಕ್ಷೇತ್ರದ ಅಮೂಲಾಗ್ರ ನವೀಕರಣ ಕಾರ್ಯಕ್ಕೆ ರೂ 10 ಲಕ್ಷ ರೂ. ದೇಣಿಗೆಯನ್ನು ನಾಗೇಂದ್ರ ರಾವ್ ಸಲ್ಲಿಸಿದ್ದಾರೆ. ಶ್ರೀಮಠ ಮೈಸೂರಿನಲ್ಲಿ ನಡೆಸುತ್ತಿರುವ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ 40 ವಿದ್ಯಾರ್ಥಿಗಳು ವೇದ ಶಿಕ್ಷಣ ಪಡೆಯುತ್ತಿದ್ದಾರೆ. ಈ ಗುರುಕುಲದ ಅಭ್ಯುದಯಕ್ಕೆ 5 ಲಕ್ಷ ರೂ. ದೇಣಿಗೆ ನೀಡಿರುವುದು ನಾಗೇಂದ್ರ ರಾವ್ ಅವರ ನಿಸ್ವಾರ್ಥ ಸೇವಾ ಮನೋಭಾವಕ್ಕೆ ಸಾಕ್ಷಿ ಆಗಿದೆ.
6. ಸುಬ್ಬರಾಯ ದಾಸರಗುಡಿ ಅಭಿವೃದ್ಧಿ
ಇತಿಹಾಸ ಪ್ರಸಿದ್ಧ ಮೈಸೂರಿನ ಕೃಷ್ಣ ವಿಲಾಸ ರಸ್ತೆಯಲ್ಲಿರುವ ಶ್ರೀ ಸುಬ್ಬರಾಯ ದಾಸರಗುಡಿ, ವೆಂಕಟೇಶ್ವರ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನ ಸನ್ನಿಧಿ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಿ, ವೀಕರಿಸುವ ಸೇವೆಯಲ್ಲಿ 10 ಲಕ್ಷ ರೂ. ಗಳನ್ನು ನಾಗೇಂದ್ರ ರಾವ್ ಅವರು ಸಪತ್ನೀಕರಾಗಿ ಸಮರ್ಪಣೆ ಮಾಡಿದ್ದಾರೆ.
7. ಭಂಡಾರಕೇರಿ ಮಠಕ್ಕೆ ‘ಭಂಡಾರ’ ಸಮರ್ಪಣೆ
ಉಡುಪಿ ಶ್ರೀ ಅಚ್ಚುೃತ ಪ್ರೇಕ್ಷರ ಸಂಸ್ಥಾನ, ಭಂಡಾರಕೇರಿ ಮಹಾ ಸಂಸ್ಥಾನದ ಮೈಸೂರು ಶಾಖೆಯಾಗಿರುವ (ಚಾಮರಾಜ ಜೋಡಿ ರಸ್ತೆಯ) ಶ್ರೀ ವೆಂಕಟಾಚಲಧಾಮ- ಭಾಗವತಾಶ್ರಮಕ್ಕೆ 15 ಲಕ್ಷ ರೂ. ಸಮರ್ಪಣೆ ಮಾಡಿರುವ ನಾಗೇಂದ್ರ ರಾವ್ ಅವರು, ಪೀಠಾಧಿಪತಿ- ಪರಮಪೂಜ್ಯ ಶ್ರೀ ವಿದ್ಯೇಶತೀರ್ಥರ ವಿವಿಧ ಸಾಮಾಜಿಕ ಯೋಜನೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಮಠಕ್ಕೆ ಆರ್ಥಿಕವಾಗಿ ಭಂಡಾರವನ್ನೇ ಒದಗಿಸಿಕೊಡುವ ನಿಟ್ಟಿನಲ್ಲಿ ಮಹಾನ್ ಸೇವೆ ಸಲ್ಲಿಸಿ ಮಠದ ಪೀಠಾಧಿಪತಿ ಶ್ರೀ ಶ್ರೀ ವಿದ್ಯೇಶತೀರ್ಥರ ಮಹಾ ಕೃಪೆಗೆ ಪಾತ್ರರಾಗಿದ್ದಾರೆ.
8. ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕಕ್ಕೆ ನೆರವು
ಕಳೆದ 2 ದಶಕದಿಂದ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಶಾಲಾ ಮತ್ತು ಕಾಲೇಜು ಶುಲ್ಕವನ್ನು ಭರಿಸಿ ವಿದ್ಯಾದಾನಕ್ಕೆ ಆರ್ಥಿಕ ನೆರವು ನೀಡುವ ಸೇವಾ ಕಾರ್ಯದಲ್ಲಿ ನಾಗೇಂದ್ರರಾವ್ ಮುಂಚೂಣಿಯಲ್ಲಿ ಇದ್ದಾರೆ. ವರ್ಷಕ್ಕೆ ಸುಮಾರು 2 ಲಕ್ಷ ರೂ.ಗಳನ್ನು ಈ ಸೇವಾ ಕಾರ್ಯಕ್ಕೆ ಸದ್ವಿನಿಯೋಗ ಮಾಡುತ್ತಿದ್ದಾರೆ.
ನನ್ನಿಂದ ಯಾವೆಲ್ಲಾ ಚಟುವಟಿಕೆಗಳು ನಡೆದಿವೆಯೋ ಅವೆಲ್ಲವೂ ನನ್ನ ತಾಯಿಯ ಪಾದಕಮಲಗಳಿಗೆ ಸಮರ್ಪಣೆ. ರಾಯರ, ಗುರುಗಳ ಕಾರುಣ್ಯದಿಂದ ಆಕೆ ನನಗೆ ಜನ್ಮ ನೀಡಿದ್ದರ ಫಲವಾಗಿ ಒಂದಿಷ್ಟು ಕೆಲಸಗಳು ನಡೆದಿವೆ ಅಷ್ಟೇ. ಸಾಧಿಸುವುದು ಇನ್ನೂ ಅನಂತವಾಗಿದೆ. ಸಮಾಜದ ಒಂದು ಭಾಗವಾಗಿ ನಾನು ಸೇವೆ ಮಾಡುತ್ತಿರುವುದು ದೇವರ ಕೃಪೆ.
-ಎಚ್.ಆರ್. ನಾಗೇಂದ್ರ ರಾವ್, ಹಿರಿಯ ಉದ್ಯಮಿ, ಮೈಸೂರು
9. ಬಾಲಕಿಯರ ಶಿಕ್ಷಣಕ್ಕೆ ಸ್ಪಂದನೆ
ಅಭೃಂಣಿ ಗುರುಕುಲ- ಬಾಲಕಿಯರ ನೈತಿಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ಶಿಕ್ಷಣಕ್ಕಾಗಿ ಅಹರ್ನಿಷಿ ಸೇವೆ ಮಾಡುತ್ತಿರುವ ಅಭೃಂಣಿ ಗುರುಕುಲದ ಹೆಣ್ಣುಮಕ್ಕಳ ಊಟೋಪಚಾರ ಮತ್ತು ವಸತಿ ವ್ಯವಸ್ಥೆಗೆ ಸ್ಪಂದಿಸುವ ನಿಟ್ಟಿನಲ್ಲಿ 5 ಲಕ್ಷ ರೂ. ದೇಣಿಗೆಯನ್ನು ಅರ್ಪಣೆ ಮಾಡಿದ್ದಾರೆ.
10. ಶ್ರೀನಿವಾಸ ದೇವಸ್ಥಾನಕ್ಕೆ ದಾನ
ಹಳೇ ಭಂಡಿಕೇರಿ ಶ್ರೀನಿವಾಸ ದೇವಸ್ಥಾನ ಸಮಗ್ರ ಜೀರ್ಣೋದ್ಧಾರ ಚಟುವಟಿಕೆಗಳಿಗೆ ನಾಗೇಂದ್ರ ರಾವ್ ಅವರು 10 ಲಕ್ಷ ರೂ. ದಾನವನ್ನಾಗಿ ಸಮರ್ಪಣೆ ಮಾಡಿರುವುದು ನಾಗೇಂದ್ರ ರಾವ್ ಅವರ ಹೆಗ್ಗಳಿಕೆಯಾಗಿದೆ.
ಒಟ್ಟಾರೆ ಎಚ್. ಆರ್. ನಾಗೇಂದ್ರರಾವ್ ಅವರು ಮಾಡಿರುವ ಧಾರ್ಮಿಕ ಸೇವಾ ಚಟುವಟಿಕೆಗಳಲ್ಲಿ ಗಣನೆಗೆ ಸಿಕ್ಕವು ಇಷ್ಟು ಮಾತ್ರ. ಇದನ್ನೂ ಮೀರಿ, ಆಯಾ ಸಮಯ, ಸಂದರ್ಭಕ್ಕೆ ತಕ್ಕಂತೆ ಶೀಘ್ರವಾಗಿ ಸ್ಪಂದಿಸುವ , ಕಷ್ಟಕ್ಕೆ ಮಿಡಿಯುವ ಮಾತೃ ಹೃದಯ ಹೊಂದಿರುವ ಅವರು ದಾನ ನೀಡಿದ್ದು ಬಹಳ. ಒಬ್ಬರಿಗೆ ದಾನ ಕೊಟ್ಟದ್ದು ಯಾರಿಗೂ ತಿಳಿಸುವ ಅಗತ್ಯವಿಲ್ಲ. ಅದು ದೇವರ ಪ್ರೀತಿಗೆ ಸಮರ್ಪಣೆ ಆಗಬೇಕು ಎಂಬ ದಿಸೆಯಲ್ಲಿ ಹತ್ತಾರು ಮಠ- ಪೀಠಗಳಿಗೆ, ಕಡು ಬಡವರಿಗೆ ಲಕ್ಷಾಂತರ ರೂ. ದಾನ ನೀಡಿ ‘ಕೃಷ್ಣಾರ್ಪಣ’ ಎಂದು ಹೇಳುವ ಉದಾರತೆ ಹೊಂದಿರುವುದು ಜನತೆಯ ಅಹೋ ಭಾಗ್ಯ.
ಹಣ ಸಂಪಾದನೆಯನ್ನು ಹಲವರು ಮಾಡುತ್ತಾರೆ. ಕಲಿಯುಗದ ಕುಬೇರರೂ ಆಗುತ್ತಾರೆ. ಆದರೆ ಅದನ್ನು ಮತ್ತೆ ಸಮಾಜದ ಅಭ್ಯದಯಕ್ಕೆ ದಾನವಾಗಿ ನೀಡಬೇಕು, ಸಾರ್ಥಕತೆ ಕಂಡುಕೊಳ್ಳಬೇಕು ಎಂಬವರು ಕೆಲವೇ ಮಂದಿ. ಈ ನಿಟ್ಟಿನಲ್ಲಿ ನಾಗೇಂದ್ರರಾವ್ ಅಗ್ರಪಂಕ್ತಿಯಲ್ಲಿ ನಿಲ್ಲುವವರಾರಿದ್ದಾರೆ. ಯಾವುದೇ ದಾನ, ಧರ್ಮ ಕಾರ್ಯಗಳನ್ನು ಮಾಡುವಾಗ ಕುಟುಂಬ ಸಮೇತ, ಧಮಪತ್ನಿ ಸಹಿತವಾಗಿ ಅವರು ಒಗ್ಗಟ್ಟಿನಲ್ಲಿದ್ದು ಇತರರಿಗೆ ಮಾದರಿ ಎನಿಸಿದ್ದಾರೆ.
ನಾಗೇಂದ್ರ ರಾವ್ ಅವರಂಥ ಗಣ್ಯರು, ದಾನಿಗಳು, ಉದ್ಯಮಿಗಳು, ದೂರಗಾಮಿ ಚಿಂತಕರು ಮತ್ತು ಹತ್ತು ಹಲವು ಸೇವಾ ಕಾರ್ಯದಲ್ಲಿ ಮೊದಲಿಗರಾಗಿ ಮುನ್ನುಗ್ಗುವವರು ನಮ್ಮ ಸಮಾಜಕ್ಕೆ ದೊಡ್ಡ ಆಸ್ತಿಯೇ ಆಗಿದ್ದಾರೆ. ಇವರನ್ನು ಗೌರವಿಸಿದರೆ ಸಮಾಜವನ್ನೇ ಗೌರವಿಸಿದಂತೆ. ಇಂಥವರು ಹಲವು ಹತ್ತು ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹರು. ಇಂಥವರಿಂದ ಪ್ರಶಸ್ತಿಗಳ ‘ ಮೌಲ್ಯ’ ವರ್ಧನೆ ಆಗುತ್ತದೆ.
ಅಭಿನಂದನೆಗಳ ಮಹಾಪೂರ
ಪ್ರಶಸ್ತಿಗೆ ಭಾಜನರಾದ ನಾಗೇಂದ್ರರಾವ್ ಅವರಿಗೆ ಸೋಸಲೆ ಶ್ರೀ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಹಾ ಸಂಸ್ಥಾನ ಪೀಠಾಧೀಶರಾದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ, ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ, ಉತ್ತರಾದಿ ಮಠದ ಶಾಖಾ ವ್ಯವಸ್ಥಾಪಕ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಸೇರಿದಂತೆ ನಾಡಿನ ಬಹುತೇಕ ಮಠ-ಮಾನ್ಯ- ವಿದ್ಯಾಪೀಠಗಳ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ. ಇವರಿಂದ ಇನ್ನಷ್ಟು ಸೇವಾ ಕಾರ್ಯ ನಡೆಯಲಿ ಎಂದು ದೀಪಾವಳಿ- ರಾಜ್ಯೋತ್ಸವ ಸಂದರ್ಭ ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post