ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-11 |
ಒಮ್ಮೆ ಪಂಡಿತರೊಬ್ಬರು ವಿಹಾರಕ್ಕಾಗಿ ನದೀತೀರಕ್ಕೆ ಹೊಗಿದ್ದರು. ಬಿಸಿಲಿನ ಝಳ ಕಡಿಮೆಯಾಗುತ್ತಾ ಇತ್ತು. ನೀರಿನ ಮೇಲೆ ತಂಗಾಳಿ ಬೀಸುತ್ತಿತ್ತು. “ಪಂಡಿತರ ಮುಂದೆ ಒಬ್ಬ ತರುಣ ಒಬ್ಬ ಹುಡುಗಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಬರುತ್ತಿದ್ದ. ಈ ದೃಶ್ಯವನ್ನು ಕಂಡು ಪಂಡಿತರಿಗೆ ಮುಜುಗರವಾಯಿತು. “ಛೆ, ಏನಿದು.. ಜನನಿಬಿಡ ಪ್ರದೇಶದಲ್ಲಿ ಸರಸಾಟದಲ್ಲಿ ತೊಡಗಿದ್ದಾರೆ.” ಎಂದು ಮನದಲ್ಲಿ ಬೈದುಕೊಳ್ಳುತ್ತಿರುವಾಗಲೇ ಆ ತರುಣ, ಬೆನ್ನ ಮೇಲಿಂದ ಹುಡುಗಿಯನ್ನು ಕಳಗಿಳಿಸಿದ. ಸೊಂಟಕ್ಕೊಂದು ಶೀಷೆ ಸಿಕ್ಕಿಸಿಕೊಂಡಿದ್ದ. ಅದನ್ನು ಕೈಗೆ ತೆಗೆದುಕೊಂಡು, ಮುಚ್ಚಳ ತೆರೆದು ಗಟಗಟನೆ ಕುಡಿಯಲು ಶುರು ಮಾಡಿದ. ಇದನ್ನು ನೋಡಿ ಅವಾಕ್ಕಾದ ಪಂಡಿತರು, “ಈ ಯುವಕ ಬಹಿರಂಗವಾಗಿ ಯಾವುದೇ ನಾಚಿಕೆ, ಸಂಕೋಚವಿಲ್ಲದೆ ಮದ್ಯ ಕುಡಿಯುತ್ತಿದ್ದಾನಲ್ಲ! ಹಿರಿಯರು ಹೇಳುತ್ತಿದ್ದದ್ದು ನಿಜ. ಈ ದೇಶಕ್ಕೆ ಕಲಿಗಾಲ ಬಂದುಬಿಟ್ಟಿದೆ “ಎಂದು ಕಳವಳ ಪಟ್ಟರು.
ಇನ್ನೇನು ಮಾಡುತ್ತಾನೋ ಎಂದು ಕಳವಳ ಪಡುತ್ತಾ ಮತ್ತೆ ಆ ತರುಣನ ಕಡೆ ನೋಡಿದರು. ಆ ಹುಡುಗ ಶೀಷೆಯ ಮುಚ್ಚಳ ಗಟ್ಟಿಯಾಗಿ ಮುಚ್ಚಿ ಸೊಂಟಕ್ಕೆ ಸಿಕ್ಕಿಸಿಕೊಂಡ. ಹುಲ್ಲಿನ ಮೇಲೆ ಕುಳಿತಿದ್ದ ಆ ಹುಡುಗಿಯ ಲಂಗವನ್ನು ಮೊಣಕಾಲಿನವರೆಗೆ ಮೇಲೆ ಸರಿಸಿ ಆಕೆಯ ಕಾಲುಗಳನ್ನು ಒತ್ತಿ ಒತ್ತಿ ನೀವತೊಡಗಿದ. ಇದನ್ನು ನೋಡಿದ ಪಂಡಿತರು ಕೋಪದಿಂದ ಕುದ್ದು ಹೋದರು. “ಛೇ, ಎಂತಹ ಅಸಂಸ್ಕೃತ ಜನ? ಸಾಮಾಜಿಕ ಮೌಲ್ಯವನ್ನು ಹಾಳು ಮಾಡುತ್ತಿದ್ದಾರಲ್ಲ ಇವರು” ಎಂದು ಹಿಡಿಶಾಪ ಹಾಕುತ್ತಾ ವಾಯುವಿಹಾರವನ್ನು ಮೊಟಕುಗೊಳಿಸಿ ಊರಿನಡೆಗೆ ದಾಪುಗಾಲು ಹಾಕಿದರು.
ಊರಿನ ಪಟೇಲರು, ಶಾನುಭೋಗರು ಸೇರಿದಂತೆ ಹಿರಿಯರೆಲ್ಲರನ್ನು ನದೀತೀರಕ್ಕೆ ಕರೆ ತಂದರು. “.ಆ ತರುಣ ತರುಣಿ ಬಹಳ ದೂರವೇನೂ ಹೋಗಿರಲಿಲ್ಲ. ಇದೇ ಸಮಯದಲ್ಲಿ ಅಲ್ಲಿ ಮತ್ತೊಂದು ಘಟನೆ ಸಂಭವಿಸಿತು. ಮೂರು ಮಂದಿ ಪುಟ್ಟ ಹುಡುಗರು ತೆಪ್ಪದ ಮೇಲೇರಿ ನದಿಯಲ್ಲಿ ಮೀನು ಹಿಡಿಯಲು ತೆಪ್ಪವೇರಿ ಹೋಗಿದ್ದಾರೆ. ಪ್ರವಾಹ ಸ್ವಲ್ಪ ಜಾಸ್ತಿ ಇತ್ತು. ತೆಪ್ಪ ತಿರುಗಿಕೊಂಡುಬಿಟ್ಟಿತು, ಬಂಡೆಯ ಮೂಲೆಗೆ ಡಿಕ್ಕಿ ಹೊಡೆದು, ಬೋರಲಾಗಿ ಬಿತ್ತು. ಹುಡುಗರೆಲ್ಲ ನೀರು ಪಾಲಾದರು. ಆ ದೃಶ್ಯವನ್ನು ನೋಡಿದ ತರುಣ ಕೊಡಲೇ ತರುಣಿಯನ್ನು ಕೆಳಗಿಳಿಸಿ ಮಕ್ಕಳನ್ನು ಉಳಿಸಲು ನೀರಿಗೆ ಹಾರಿದ. ಮೂರೂ ಮಕ್ಕಳನ್ನು ಸಾವಧಾನವಾಗಿ ದಂಡೆಗೆ ತಂದು ಬಿಟ್ಟ. ಬಹಳ ಬಳಲಿದವನಂತೆ ಕಾಣುತ್ತಿದ್ದ ಆತ ಮತ್ತೆ ಕುಳಿತಿದ್ದ ಆ ಹುಡುಗಿಯ ಕಾಲು ನೀವಲು ಆರಂಭಿಸಿದ. ನಡುನಡುವೆ ಶೀಷೆಯಿಂದ ದ್ರವ ಕುಡಿಯುತ್ತಾ ಇದ್ದ. ಊರಿನ ಹಿರಿಯರೆಲ್ಲ ಈ ದೃಶ್ಯವನ್ನು ಕಂಡು “ಮಕ್ಕಳನ್ನು ಉಳಿಸಿದ್ದೇನೋ ಒಳ್ಳೆಯ ಕೆಲಸ. ಆದರೆ ನಿನ್ನದು ಎಂತಹ ನಡತೆ?” ಎಂದು ಯುವಕನನ್ನು ತರಾಟೆಗೆ ತೆಗೆದುಕೊಂಡರು. ”ನಾವೆಲ್ಲ ಮಾನವಂತರಪ್ಪ. ನಮ್ಮಂತವರೇ ಇಲ್ಲಿರೋದು. ನಿನ್ನ ನಡವಳಿಕೆಯಿಂದ ನಮ್ಮ ಮಕ್ಕಳು ಪ್ರಭಾವಿತರಾಗುವುದಿಲ್ಲವೇ?” ಎಂದೆನ್ನುತ್ತಾ ಕೆಲವರು ಕೋಪದಿಂದ ನಾಲ್ಕೇಟು ಬಾರಿಸಿದರು.
ಆಗ ಆ ಹುಡುಗ ದುಃಖದಿಂದ ಅಳುತ್ತಾ,” ಸ್ವಾಮಿ,ನಾನು ಯಾವ ಅನ್ಯಾಯವನ್ನೂ ಮಾಡಿಲ್ಲ. ಈಕೆ ನನ್ನ ತಂಗಿ. ಮೊನ್ನೆಯಿಂದ ಆಕೆಯ ಎರಡೂ ಕಾಲುಗಳು ಬಿದ್ದು ಹೋಗಿವೆ. ನಮ್ಮ ಊರಲ್ಲಿ ಯಾರೂ ನಮ್ಮನ್ನು ಮುಟ್ಟಿಸಿಕೊಳ್ಳುವುದಿಲ್ಲ. ವೈದ್ಯರಲ್ಲಿಗೆ ಈಕೆಯನ್ನು ಕರೆದೊಯ್ಯಲು ಯಾರೂ ಒಂದು ಎತ್ತಿನಗಾಡಿಯನ್ನೂ ಕೂಡಲಿಲ್ಲ. ಅದಕ್ಕೆ ತಂಗಿಯನ್ನು ಬೆನ್ನ ಮೇಲೆ ಕೂರಿಸಿಕೊಂಡು ವೈದ್ಯರಲ್ಲಿಗೆ ಹೋಗುತ್ತಿದ್ದೇನೆ. ಅಲ್ಲಿ ತಲುಪುವ ಮೊದಲೇ ಇವಳು ಕಾಲು ನೋವಿನಿಂದ ನರಳುತ್ತಿದ್ದಳು. ಅದಕ್ಕೆ ಕಾಲುಗಳಿಗೆ ನೀವಿದ್ರೆ ಇವಳಿಗೆ ಸ್ವಲ್ಪ ಹಾಯೆನಿಸುತ್ತೆ ಅಂತ ತಿಕ್ಕುತ್ತಿದ್ದೇನೆ. ನಾನು ಕುಡಿಯುತ್ತಿರುವುದು ಮನೆಯಿಂದ ತಂದ ನೀರು. ನಿಮ್ಮ ನೀರನ್ನು ಮಟ್ಟಲು ನನಗೆ ನೀವು ಅವಕಾಶ ಕೊಡುವುದಿಲ್ಲ. ಶೀಷೆಯಲ್ಲಿ ಕುಡಿಯುವ ನೀರು ತಂದಿದ್ದೇನೆ. ಅದನ್ನಷ್ಟೆ ಕುಡಿಯುತ್ತಿದ್ದೇನೆ. ವಿದ್ಯೆ, ಜಾತಿ, ಮಾನದಿಂದ ದೊಡ್ಡವರಾದ ನಿಮಗೆ ನಾನು ಮಾಡುತ್ತಿರುವುದು ತಪ್ಪು ಅಂತ ಅನ್ನಿಸಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ” ಅಂತ ಕೇಳಿಕೊಂಡ. ಊರಿನ ಹಿರಿಯರೆಲ್ಲ ತಮ್ಮ ಸಂಕುಚಿತ ಮನಸ್ಸಿನ ಆಲೋಚನೆ ಮತ್ತು ನಡೆವಳಿಕೆಗಾಗಿ ಮಾತಿಲ್ಲದೆ ತಲೆತಗ್ಗಿಸಿ ನಿಂತರು.
ಅಶ್ಲೀಲತೆ ಎನ್ನುವುದು ಮನುಷ್ಯರ ಮನಸ್ಸಿನಲ್ಲಿದೆ, ಅವರ ಕಣ್ಣಿನಲ್ಲಿದೆ. ದೃಷ್ಟಿ ಸ್ವಚ್ಛವಾಗಿದ್ದರೆ ಸೃಷ್ಟಿ ಸುಂದರವಾಗುತ್ತದೆ. ನಮ್ಮ ಮನಸ್ಸಿನಲ್ಲಿ ಕಲುಷ ತುಂಬಿಕೊಂಡಿದ್ದರೆ ಸುತ್ತಮುತ್ತಲಷ್ಟೇ ಅಲ್ಲ, ಸ್ವರ್ಗದಲ್ಲೂ ಕಲುಷತೆಯೆ ಕಂಡೀತು.ಆದ್ದರಿಂದ ಮನಸ್ಸನ್ನು ಸದಾ ಶುದ್ಧವಾಗಿ ಇಟ್ಟುಕೊಳ್ಳೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post