ಕಲ್ಪ ಮೀಡಿಯಾ ಹೌಸ್ | ಮೈಸೂರು |
ಜೀವನವನ್ನು ಸುಖಮಯವಾಗಿ ಇರಿಸಿಕೊಳ್ಳುವ ಮೂಲಕ ಸಮಾಜಕ್ಕೆ ವಿಭಿನ್ನವಾದ ಕೊಡುಗೆಗಳನ್ನು ನೀಡುವತ್ತ ವಿದ್ಯಾರ್ಥಿಗಳು ಉನ್ನತವಾದ ಗುರಿ ಇಟ್ಟುಕೊಳ್ಳಬೇಕು ಎಂದು ಮೈಸೂರು ವಿವಿ ಜಿನಿಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ಪ್ರಾಧ್ಯಾಪಕಿ ಡಾ. ಮಾಲಿನಿ ಹೇಳಿದರು.
ಅವರು ಮೈಸೂರು ವಿಶ್ವವಿದ್ಯಾನಿಲಯದ #MysoreUniversity ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಸಂಯುಕ್ತವಾಗಿ ಕೆ.ಎಸ್. ರಂಗಪ್ಪ ಸಭಾಂಗಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡನೇ ಹಂತದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಆಧುನಿಕ ತಂತ್ರಜ್ಞಾನದ ಕೊಡುಗೆಯಾದ ಮೊಬೈಲ್ ಫೋನ್ #MobilePhone ಅತಿಯಾದ ಬಳಕೆ ನಮ್ಮ ದೈಹಿಕ ಮತ್ತು ಮಾನಸಿಕ ವ್ಯವಸ್ಥೆ ಮೇಲೆ ಮಾರಕ ಪರಿಣಾಮ ಬೀರಲಿದೆ. ನಿರಂತರವಾದ ಬಳಕೆಯಿಂದ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಮಾರಕವಾಗಲಿದೆ ಎಂದರು.
ಪ್ರಕೃತಿಯು ಮಾನವನ ದೇಹವನ್ನು ವಿಭಿನ್ನ ಮತ್ತು ವಿಶಿಷ್ಟವಾಗಿ ರಚನೆ ಮಾಡಿದೆ. ಇದಕ್ಕೆ ಸರಿಸಾಟಿಯೇ ಇಲ್ಲ. ಲಕ್ಷೋಪಲಕ್ಷ ಜೀವಿಗಳಲ್ಲಿ ಮನುಷ್ಯ ಅದ್ಭುತವಾದ ಮಿದುಳನ್ನು #Brain ಹೊಂದಿದ್ದಾನೆ. ಅದನ್ನು ಶೇ. 10 ಭಾಗ ಸದುಪಯೋಗ ಮಾಡಿಕೊಂಡೇ ನೂರೆಂಟು ಆವಿಷ್ಕಾರ ಮಾಡಿದ್ದಾನೆ. ಹಾಗಾಗಿ ಜೀವನವನ್ನು ಸಂಸ್ಕಾರ, ಸನ್ನಡತೆಗೆ ಬಳಸಿಕೊಂಡು ಸಾಧನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ನಿತ್ಯದ ಬದುಕಿನಲ್ಲಿ ಸಹಜತೆಗೆ ಮಾನ್ಯತೆ ನೀಡೋಣ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಮಾಧ್ಯಮಗಳು ಅನೇಕ ಬಾರಿ ಭ್ರಮೆಯನ್ನು ಹುಟ್ಟಿಸುತ್ತವೆ. ಯಾರನ್ನೋ ಮೆಚ್ಚಿಸಲಿಕ್ಕಾಗಿ ನಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ. ನಮಗಾಗಿ ನಾವು ಸಂತೃಪ್ತಿಯಿಂದ ಬದುಕಿದಾಗ ಅರ್ಥಪೂರ್ಣ ಜೀವನ ನಮ್ಮದಾಗುತ್ತದೆ. ಇದಕ್ಕಿಂತ ಖುಷಿ ಬೇರೆ ಯಾವ ಮಾಧ್ಯಮವೂ ತಂದುಕೊಡಲಾರದು ಎಂದರು.
ಜೀವಿತ ಅವಧಿಯಲ್ಲಿ ಆಹಾರದ ಪ್ರಾಮುಖ್ಯತೆ ಬಹಳ ಮುಖ್ಯ. ಆದಷ್ಟೂ ಸಾವಯವ ಆಹಾರ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಮನೆಯಲ್ಲೇ ತಯಾರಿಸಿದ ಶುದ್ಧ, ಸಾತ್ವಿಕ ಆಹಾರ ಬಳಸುವ ಸಂಸ್ಕೃತಿ ನಮ್ಮದಾಗಬೇಕು. ಹೊರಗಿನ ರುಚಿಕರ ತಿಂಡಿಗಳಿಗೆ ಮಾರುಹೋಗಬಾರದು. ಯಾವುದೇ ತರಕಾರಿ ಅಥವಾ ಬೆಳೆಗಳಿಗೆ ಹುಳ ಬಂದಿದೆ ಎಂದರೆ ಅದರಲ್ಲಿ ರಾಸಾಯನಿಕ ಅಂಶ ಇಲ್ಲವೆಂದೇ ಅರ್ಥ. ಈ ಸರಳ ತತ್ವ ಅರ್ಥ ಮಾಡಿಕೊಂಡು ಮಾರುಕಟ್ಟೆಯಲ್ಲಿ ದೊರಕುವ ಅತಿಯಾದ `ಫ್ರೆಷ್’ ಉತ್ಪನ್ನಗಳಿಂದ ಅಂತರ ಕಾಪಾಡಿಕೊಳ್ಳಬೇಕು. ನಮ್ಮ ತಾತ, ಅಜ್ಜಿ ಅಡುಗೆಮನೆಯಲ್ಲಿ ತಯಾರಿಸುವ ಆಹಾರಗಳನ್ನೇ ನಮ್ಮದಾಗಿಸಿಕೊಂಡರೆ ರೋಗಮುಕ್ತರಾಗಿ ಬದುಕಬಹುದು ಎಂದು ಡಾ. ಮಾಲಿನಿ ನುಡಿದರು.
ಪ್ಲಾಸ್ಟಿಕ್ ಬಳಕೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಈ ದಿಸೆಯಲ್ಲಿ ವ್ಯಕ್ತಿಗತ ಜಾಗೃತಿ ಬಹಳ ಮುಖ್ಯ. ನಾವು ಉನ್ನತಾಧ್ಯಯನ ಮಾಡಿ ದೊಡ್ಡ ಹುದ್ದೆ ಗಳಿಸಬೇಕು ಎಂಬುದೇನೋ ಇಂದಿನ ದಿನಮಾನದಲ್ಲಿ ಖುಷಿ ನೀಡುತ್ತದೆ. ಆದರೆ ಸೂಕ್ತ ವಯಸ್ಸಿಗೆ ಮದುವೆ ಮತ್ತು ಮಕ್ಕಳನ್ನು ಪಡೆಯುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಮಾನವ ಸಂಘಜೀವಿ. ಸಮಾಜ ಜೀವಿ. ಇದನ್ನು ಅರಿತೇ ಜೀವನ ನಿರ್ವಹಣೆ ಮಾಡಬೇಕು. ನಾವು ಏಕಾಗಿ ಹುಟ್ಟಿತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿ ದಿಸೆಯಲ್ಲಿ ಈ ಚಿಂತನೆಗಳು ಬೇರೂರಿದರೆ ಮುಂದಿನ ಹಂತಗಳು ಅರ್ಥಪೂರ್ಣವಾಗುತ್ತವೆ ಎಂದು ಮಾಲಿನಿ ಕಿವಿಮಾತು ಹೇಳಿದರು.
ತಾಂತ್ರಿಕ ಶಾಲೆ ನಿರ್ದೇಶಕ ಪ್ರೊ. ಟಿ. ಅನಂತ ಪದ್ಮನಾಭ, ವಿವಿಧ ವಿಭಾಗ ಮುಖಸ್ಥರಾದ ಸಂತೋಷ್, ಸುಮಾ, ಸಚಿನ್, ನಿತಿನ್, ರಾಕೇಶ್ ಇತರರು ಇದ್ದರು.
ಮೌಲ್ಯಗಳನ್ನೂ ರೂಢಿಸಿಕೊಳ್ಳಿ
ಜೈವಿಕ ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ. ಇದರೊಂದಿಗೆ ಮಾನವೀಯ ಮೌಲ್ಯಗಳೂ ನಮ್ಮಲ್ಲಿ ರೂಢಿಗತವಾಗಬೇಕು. ನಾವು ಯಾವುದೇ ರೀತಿಯ ದೌಹಿಕ ಮತ್ತು ಮಾನಸಿಕ ರೋಗಗಳ ಗೂಡಾಗಬಾರದು. ವಿಶ್ವಸಂಸ್ಥೆ ರೂಪಿಸಿದ ಮಾನದಂಡಗಳ ಪ್ರಕಾರ ದೇಹ, ಮನಸ್ಸು, ಸಂಸ್ಕೃತಿ, ಅಧ್ಯಾತ್ಮ ಮತ್ತು ಸಮಾಜಮುಖಿ ಚಟುವಟಿಕೆಗಳು ನಮ್ಮ ವ್ಯಕ್ತಿತ್ವ ರೂಪಿಸುತ್ತವೆ. ಸ್ವಾಸ್ಥ್ಯ ತಂದುಕೊಡುತ್ತವೆ. ಈ ನಿಟ್ಟಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡರೆ ಭವಿಷ್ಯ ಸುಂದರವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಡಾ. ಮಾಲಿನಿ ಸಲಹೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post