ಬೆಂಗಳೂರು: ಲೋಕಾಯುಕ್ತ ಎಂಬ ಸಂಸ್ಥೆ ಎಂತಹ ಪ್ರಬಲ ಎಂದು ಇಡಿಯ ಜಗತ್ತಿಗೆ ತೋರಿಸಿಕೊಟ್ಟ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ(90) ಅವರು ಇಹಲೋಕ ತ್ಯಜಿಸಿದ್ದು, ಇಡಿಯ ರಾಜ್ಯಕ್ಕೆ ಭಾರೀ ನಷ್ಟ ಉಂಟು ಮಾಡಿದೆ.
ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರು, ಇಂದು ಮುಂಜಾನೆ ಕೊನೆಯ ಉಸಿರೆಳೆದಿದ್ದಾರೆ.
ನಂಜೇಗೌಡ ವೆಂಕಟಾಚಲ ಅವರ ಪೂರ್ಣ ಹೆಸರಿನ ಶ್ರೀಯುತರು, 1930 ಜುಲೈ 3ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಮಿತ್ತೂರು ಗ್ರಾಮದಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದ ಇವರು ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು.
ಕರ್ನಾಟಕದ ಮೊದಲ ಲೋಕಾಯುಕ್ತರಾಗಿದ್ದ ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆಗೆ ಹೊಸ ರೂಪರೇಷೆ ನೀಡುವ ಮೂಲಕ ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದರು. ಅಲ್ಲಿಂದ ಲೋಕಾಯುಕ್ತ ಎಂದರೆ ಭ್ರಷ್ಟರು ಅಕ್ಷರಶಃ ಹೆದರುವಂತಾಗಿತ್ತು.
ಗಣ್ಯಾತಿಗಣ್ಯರ ಸಂತಾಪ:
ಲೋಕಾಯುಕ್ತ ಸಂಸ್ಥೆಗೆ ಘನತೆ ತಂದುಕೊಟ್ಟ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನ ತುಂಬಲಾಗದ ನಷ್ಟ. ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಲು ಹಾಗೂ ಭ್ರಷ್ಟಾಚಾರ ರಹಿತ ಸಮಾಜಕ್ಕಾಗಿ ಅವರು ಶ್ರಮಿಸಿದರು. ಅವರ ಕುಟುಂಬ ವರ್ಗ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ.
-ಬಿ.ಎಸ್. ಯಡಿಯೂರಪ್ಪ,
ಮುಖ್ಯಮಂತ್ರಿ
ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಹೊಸ ರೂಪ ನೀಡುವ ಮೂಲಕ ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ನಿವೃತ್ತ ನ್ಯಾಯಮೂರ್ತಿ ಶ್ರೀ ಎನ್. ವೆಂಕಟಾಚಲ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆ ನಮ್ಮ ನಾಡಿಗೆ ತುಬಲಾರದ ನಷ್ಟವಾಗಿದೆ. ಅವರನ್ನು ಕಳೆದುಕೊಂಡ ಅವರ ಕುಟುಂಬಕ್ಕೆ ಈ ದುಃಖವನ್ನ ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.
-ಕೆ.ಎಸ್. ಈಶ್ವರಪ್ಪ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು
ಲೋಕಾಯುಕ್ತಕ್ಕೆ ಅನ್ವರ್ಥನಾಮ ಎಂಬಂತಿದ್ದ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲ ಅವರ ನಿಧನ ಅತೀವ ನೋವುಂಟು ಮಾಡಿದೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಅವರು ಲೋಕಾಯುಕ್ತಕ್ಕೆ ಕಾಯಕಲ್ಪ ನೀಡಿದವರು. ಅವರ ಅಗಲಿಕೆ ಸಮಾಜದ ಬಹುದೊಡ್ಡ ನಷ್ಟ.
-ಎಚ್.ಡಿ. ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ
ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು.
-ಸಿದ್ಧರಾಮಯ್ಯ
ವಿಧಾನಸಭಾ ಪ್ರತಿಪಕ್ಷ ನಾಯಕರು
Get In Touch With Us info@kalpa.news Whatsapp: 9481252093, 94487 22200
Discussion about this post