ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಸಹಾಯಕಿ ಕರ್ಮಚಾರಿಗಳ ಸಂಘದ ವತಿಯಿಂದ ಶಿವಮೊಗ್ಗದ ಜಿಲ್ಲಾ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಕಳೆದ 20-25 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ರಾಜ್ಯ ಸರ್ಕಾರದ ಪರಿಷ್ಕೃತ ವೇತನವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಮೆಗ್ಗಾನ್ ಅಸ್ಪತ್ರೆ ಸಫಾಯಿ ಕರ್ಮಚಾರಿಗಳ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ದಿನಾಂಕ 22-05-2026 ರಂದು ಗುತ್ತಿಗೆ ಕಾರ್ಮಿಕರಿಗೆ ಅನ್ವಯವಾಗುವಂತೆ ಪರಿಷ್ಕೃತ ವೇತನದ ಅಧಿಸೂಚನೆ ಹೊರಡಿಸಿದೆ. ಆದರೆ SIಒS ಶಿವಮೊಗ್ಗದ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅದನ್ನು ಜಾರಿಗೊಳಿಸುವಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯ ಸ್ವಚ್ಛತೆ, ನೈರ್ಮಲ್ಯ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡುವ ಅತ್ಯಂತ ಮಹತ್ವದ ಕೆಲಸವನ್ನು ಈ ಕಾರ್ಮಿಕರು ಕೋವಿಡ್ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳಲ್ಲೂ ನಿರ್ವಹಿಸಿದ್ದಾರೆ. 20-25 ವರ್ಷಗಳಿಂದ ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಅವರಿಗೆ ಪರಿಷ್ಕೃತ ವೇತನ ಸಮಯಕ್ಕೆ ಸರಿಯಾಗಿ ಸಿಗದಿರುವುದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಯಲ್ಲಿ ಬಾಕಿ ಇರುವ ವೇತನದ ವ್ಯತ್ಯಾಸದ ಮೊತ್ತವನ್ನು ಲೆಕ್ಕ ಹಾಕಿ ಪಾವತಿಸಲು, ಸೇವಾ ಭದ್ರತೆ ಹಾಗೂ ಇತರ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಅಥವಾ ಆರೋಗ್ಯ ಸಚಿವರು ನೇರವಾಗಿ ಮಧ್ಯಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
Also read>> ಸಚಿವ ನಾಗೇಂದ್ರನ ಕೈ ಬಿಡಿ: ಶಾಸಕ ಚನ್ನಬಸಪ್ಪ ಪುನರುಚ್ಚಾರ
ಇದರೊಂದಿಗೆ 13-08-2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಕನಿಷ್ಠ ವೇತನ ಜಾರಿಗೊಳಿಸುವ ಸಮಾವೇಶಕ್ಕೆ ಬೆಂಬಲ ವ್ಯಕ್ತಪಡಿಸಿ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ
ಪ್ರತಿಭಟನೆಯಲ್ಲಿ ಸಂಘದ ಗೌರವ ಅದ್ಯಕ್ಷ ಭಾನುಪ್ರಸಾದ್ ಪದಾಧಿಕಾರಿಗಳಾದ ಭಾರತಿ ಗಾಯತ್ರಿ, ಕೃಷ್ಣಮೂರ್ತಿ, ಅನುಸೂಯ ಉಮಾ ಗೌರಮ್ಮ, ಜ್ಞಾನ ಮೇರಿ, ಮಮತ, ದೇವಿ ಬಾಯಿ, ಸೂರ್ಯ ,ಕಾರ್ತಿಕ್, ಮಂಜುಳಾ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










