ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಲ್ಲರೂ ನೋಡನೋಡುತ್ತಿದ್ದಂತೆ ಜಗತ್ತಿಗೆ ಕೊರೋನಾ ಮಹಾಮಾರಿ ಅಪ್ಪಳಿಸಿತು. ಜಗತ್ತಿನಾದ್ಯಂತ ಒಮ್ಮೆಗೆ ಲಾಕ್’ಡೌನ್ ಆದಾಗ ಅದನ್ನು ಹೇಗೆ ಎದುರಿಸುವುದು ಎಂಬ ನಿರ್ದಿಷ್ಟ ಚಿಂತನೆ ಯಾರಲ್ಲೂ ಇರಲಿಲ್ಲ. ಅಷ್ಟಕ್ಕೂ ಕೊರೋನಾ ಒಂದು ರೋಗವಾಗಿ ಮಾತ್ರ ನಮ್ಮನ್ನು ಕಾಡಿದ್ದಲ್ಲ. ಆರೋಗ್ಯದ ಜೊತೆಗೆ ಉದ್ಯೋಗ, ಕಿಸೆಯಲಿದ್ದ ದುಡ್ಡು, ನಡೆಯುತ್ತಿದ್ದ ಜೀವನಚಕ್ರ ನಿಂತು ಹೋಯಿತು.
ಇದು ಮನುಷ್ಯನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಮನೆಯಿಂದ ಹೊರಬರಲಾರದೆ ಜನ ಮಾನಸಿಕ ಖಿನ್ನತೆಗೆ ಒಳಗಾದರು. ವಿವಿಧ ಬಗೆಯ ಒತ್ತಡ ಕಾಡಲಾರಂಭಿಸಿತು. ಮಾನಸಿಕವಾಗಿ ಜನ ನಿಶ್ಯಕ್ತರಾಗತೊಡಗಿದರು.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಸ್ವಯಂಸೇವಾ ಸಂಸ್ಥೆ ಸಾಧನಾ ಮಂಗಳೂರು ಈ ಕುರಿತು ಏನಾದರೂ ಸಮಾಜಮುಖಿಯಾಗಿ ಮಾಡಬೇಕೆಂದು ಯೋಚಿಸಿತು. ಆದರೆ ಯೋಚನೆಗಿಂತ ಸವಾಲು ದೊಡ್ಡದಾಗಿತ್ತು. ಜನರ ಮನಸ್ಸನ್ನು ಅರ್ಥಮಾಡಿಕೊಂಡು ಅವರಿಗೆ ಸಮಾಧಾನ ಹೇಳುವುದು ಸವಾಲಿನ ಕೆಲಸ. ಏಕೆಂದರೆ ಇಂತಹ ಸಂದರ್ಭದಲ್ಲಿ ಮನುಷ್ಯ ಅಂತರ್ಮುಖಿಯಾಗಿ ಬಿಡುತ್ತಾನೆ.
ಸಾಮಾಜಿಕ ಅಂತರ ಕಾಯ್ದುಕೊಂಡೇ ಇದನ್ನು ಮಾಡಬೇಕಾಗಿದ್ದರಿಂದ ಫೋನ್ ಒಂದೇ ಸಂಪರ್ಕ ಸೇತು. ಹಾಗೆಂದು ಇದರ ಬಗ್ಗೆ ಜನರಿಗೆ ಹೇಳಲು ಕೂಡ ಸಾಮಾಜಿಕ ಜಾಲತಾಣ ಒಂದೇ ಮಾಧ್ಯಮ. ಅದಕ್ಕಿಂತ ಹೆಚ್ಚಾಗಿ ಆಪ್ತಸಮಾಲೋಚನೆ ಮಾಡಬೇಕು ಅಂದಾಗ:
1. ಜನರಿಗೆ ತಾನು ಮಾತಾಡುತ್ತಿರುವ ವ್ಯಕ್ತಿಯ ಮೇಲೆ ನಂಬಿಕೆ ಇರಬೇಕು.
2. ಮಾತುಕತೆ ಗೌಪ್ಯವಾಗಿರಬೇಕು.
ಈ ಎರಡು ಸವಾಲುಗಳು ಕಠಿಣವಾಗಿ ಕಾಡಿದವು ಮತ್ತು ಇವುಗಳನ್ನು ನಾವು ಈಗಲೂ ಎದುರಿಸುತ್ತಿದ್ದೇವೆ. ಹಾಗೇ ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ ನಮ್ಮ ಸಮಾಜದಲ್ಲಿ ಇಂತಹ ಸೇವೆಗಳನ್ನು ಪಡೆಯಲು ಇರುವ ಹಿಂಜರಿಕೆ. ಕೌನ್ಸೆಲಿಂಗ್’ನಂತಹ ವಿಷಯ ನಮ್ಮ ಸಮಾಜದಲ್ಲಿ ಚಿರಪರಿಚಿತ ಅಲ್ಲ.
ಈ ಸವಾಲುಗಳಿಗೆ ನಾವು ಉಪಾಯ ಕಂಡುಕೊಳ್ಳುವುದೇ ನಮ್ಮ ಕಾರ್ಯಕ್ರಮದ ಅಡಿಪಾಯ. ಕೇವಲ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಾವು ನಮ್ಮ ಸೇವೆಯ ವಿಷಯ ಮತ್ತು ಇದಕ್ಕೆ ಪೂರಕವಾದ ಮಾಹಿತಿಗಳನ್ನು ಹಂಚಿಕೊಂಡೆವು. ಲಾಕ್’ಡೌನ್ ಸಂದರ್ಭದಲ್ಲಿ ಲಭ್ಯವಿರುವ ನಮ್ಮ ಮೊಬೈಲ್ ಫೋನ್’ಗಳನ್ನಷ್ಟೇ ಬಳಸಿಕೊಂಡು ಈ ಕಾರ್ಯಕ್ರಮ ಆರಂಭಿಸಿದೆವು.
ನಿರಂತರವಾಗಿ 8 ವಾರಗಳಿಂದ ಪ್ರತೀ ಭಾನುವಾರ ಸಾಧನಾ ಮಂಗಳೂರು ಸಂಸ್ಥೆ 2 ಗಂಟೆಗಳ ಉಚಿತ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಮುಖ್ಯವಾಗಿ ಇಂದಿನ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಇಡೀ ರಾಜ್ಯದ ವ್ಯಾಪ್ತಿಯಲ್ಲಿ ಈ ಸೇವೆ ಮಾಡುತ್ತಿದ್ದೇವೆ. ಆದರೆ ಇದರಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳೂ ಸೇರಿವೆ.
ಎಸ್’ಎಸ್’ಎಲ್’ಸಿ ಮಕ್ಕಳಿಗಾಗಿ ಒಂದು ಸರಣಿ, ಉದ್ಯೋಗಸ್ಥರಿಗಾಗಿ ಒಂದು ಸರಣಿ ಹೀಗೆ. ಮೊದಲ 2 ಕಾರ್ಯಕ್ರಮಗಳಲ್ಲಿ ನಮಗೆ ವಲಸೆ ಕಾರ್ಮಿಕರ ಮತ್ತು ಬೇರೆ ಊರುಗಳಲ್ಲಿ ಸಿಲುಕಿಕೊಂಡರವರ ಕರೆಗಳು ಕೂಡಬಂದಿದ್ದವು. ಅವುಗಳನ್ನು ಸೂಕ್ತ ಇಲಾಖೆ/ವ್ಯಕ್ತಿಗಳ ಗಮನಕ್ಕೆ ತಂದ ತೃಪ್ತಿಯೂ ಇದೆ.
ಇನ್ನು ಫೋನ್ ಇನ್ ಕಾರ್ಯಕ್ರಮಗಳಲ್ಲಿ ನಿದ್ರಾಹೀನತೆ, ಬೇರೆಬೇರೆ ರೀತಿಯ ಒತ್ತಡಗಳು, ಅಪಸ್ಮಾರ, Anxiety, OCD ಈ ಮುಂತಾದ ಸಮಸ್ಯೆಗಳಿಗೆ ಸಮಾಧಾನ ಹೇಳುವ ಅಥವಾ ಪರಿಹಾರ ಸೂಚಿಸುವ ಪ್ರಯತ್ನ ಮಾಡಿದ್ದೇವೆ. ಎಸ್’ಎಸ್’ಎಲ್’ಸಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ವಿವಿಧ ರೀತಿಯ ಗೊಂದಲಗಳು, ಹೈಪೆರಾಕ್ಟಿವ್, ವ್ಯಾಕುಲತೆ ಮುಂತಾದ ವಿಷಯಗಳಲ್ಲಿ ಮಾರ್ಗದರ್ಶನ ಮಾಡಿದ್ದೇವೆ. ಹಲವಾರು ಸಂದರ್ಭಗಳಲ್ಲಿ ಒಂದು ಬಾರಿಯ ಸಲಹೆ ನಂತರ ಅದರ ಮುಂದುವರಿದ ವಿಷಯಗಳ ಮಾಹಿತಿಗಾಗಿ ಕರೆಗಳು ಬರುತ್ತಿವೆ ಮತ್ತು ಇತ್ತೀಚೆಗೆ(ಲಾಕ್’ಡೌನ್ ಮುಗಿದ ನಂತರ) ಅವರ ಬಳಿಗೆ ಹೋಗಿ ಆಪ್ತ ಸಮಾಲೋಚನೆ ನಡೆಸುವ ಕೆಲಸಗಳೂ ನಡೆಯುತ್ತಿವೆ.
ಈ ಎಲ್ಲ ಸೇವೆಗಳನ್ನು ನಮ್ಮ ಸಾಧನಾ ತಂಡ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ ಹಾಗೂ ಈ ಫೋನ್ ಇನ್ ಕಾರ್ಯಕ್ರಮ ಇನ್ನೂ ಮುಂದುವರೆದಿದೆ. ನಮ್ಮ ತಂಡದ ಸದಸ್ಯರು ಬೇರೆ ಊರುಗಳಲ್ಲಿ ಕುರಿತು ಇದರ ಕೆಲಸ ಮಾಡುತ್ತಿದ್ದಾರೆ.
ಈ ಎಲ್ಲ ಸೇವೆಗಳನ್ನು ನಮ್ಮ ಸಾಧನಾ ತಂಡ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ ಹಾಗೂ ಈ ಫೋನ್ ಇನ್ ಕಾರ್ಯಕ್ರಮ ಇನ್ನೂ ಮುಂದುವರೆದಿದೆ. ನಮ್ಮ ತಂಡದ ಸದಸ್ಯರು ಬೇರೆ ಊರುಗಳಲ್ಲಿ ಕುಳಿತು ಅಲ್ಲಿಂದಲೇ ಇದರ ಕೆಲಸ ಮಾಡುತ್ತಿದ್ದಾರೆ.
ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಮತ್ತೊಂದು ವಿಭಿನ್ನ ಸರಣಿ ಕಾರ್ಯಕ್ರಮ ನಡೆಸುವ ತಯಾರಿ ಸಾಧನಾ ತಂಡದ ಸದಸ್ಯರಿಂದ ನಡೆಯುತ್ತಿದೆ. ಈ ಕಾರ್ಯಕ್ರಮದಿಂದ ಅರ್ಥಿಕವಾಗಿ ಹಿಂದುಳಿದವರಿಗೆ ಆಪ್ತ ಸಮಾಲೋಚನೆಯ ಸೇವೆ ಸಿಗಲಿ ಎಂಬುದೇ ನಮ್ಮ ಆಶಯ ಮತ್ತು ಪ್ರಯತ್ನ.
-ಸಾಧನಾ ಮಂಗಳೂರು
sadhanamangaluru@gmail.com
-ಅಕ್ಷತಾ ಬಜಪೆ
9844985785
Get In Touch With Us info@kalpa.news Whatsapp: 9481252093
Discussion about this post