ಶಿವಮೊಗ್ಗ: 21 ವರ್ಷಗಳ ಕಾಲ ಭಾರತದ ಸೇನೆಯಲ್ಲಿ ಕೆಲಸ ಮಾಡಿದ ಹೆಮ್ಮೆ ನನ್ನದು ಎಂದು ಬಿ.ಎಸ್‍ಎಫ್ ಮಾಜಿ ಯೋಧ ಮಾಲತೇಶ್ ಹೇಳಿದರು.
ಅವರು ಇಂದು ಬೆಳಿಗ್ಗೆ ಚಂದನವನದಲ್ಲಿ ಪರಿಸರ ಪ್ರೇಮಿಗಳು ಆಯೋಜಿಸಿದ್ದ ಹುಟ್ಟುಹಬ್ಬ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.
1997ರಲ್ಲಿ ಸೇನೆ ಸೇರಿದೆ. ಮೊದಲ ಕೆಲಸವೇ ಕಾಶ್ಮೀರದ ಉರಿಯಲ್ಲಿ ಆಗಿತ್ತು. ಸುಮಾರು 3 ವರ್ಷಗಳ ತನಕ ಅಲ್ಲಿ ಕೆಲಸ ಮಾಡಿದೆ. ಬಾಂಗ್ಲಾ ಗಡಿ, ಮೇಘಾಲಯ ಹೀಗೆ ಹಲವು ಕಡೆಗಳಲ್ಲಿ ಕೆಲಸ ಮಾಡಿದ ನಂತರ ಮತ್ತೆ ಕಾಶ್ಮೀರಕ್ಕೆ ಬಂದೆ. ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ ಹೆಮ್ಮೆ ನನಗಿದೆ. ಭಾರತದ ಸೇನೆಯಲ್ಲಿ ಕೆಲಸ ಮಾಡುವುದು ಎಂದರೆ ಅದೇನೋ ತೃಪ್ತಿ. ದೇಶಕ್ಕಾಗಿ ನಮ್ಮ ಪ್ರಾಣವನ್ನೇ ಮುಡಿಪಾಗಿಡುವ ಭಕ್ತಿ ಮತ್ತು ಹೋರಾಟದ ಶಕ್ತಿ ಇವೆಲ್ಲವೂ ಆತ್ಮತೃಪ್ತಿ ಎಂದರು.
ಚಂದನವನದ ಗೆಳೆಯರು ಸನ್ಮಾನ ಮಾಡಿರುವುದು ನನಗೆ ಸಂತಸ ತಂದಿದೆ. ಇದು ಎಲ್ಲ ಸೈನಿಕರಿಗೆ ನೀಡಿದ ಗೌರವವಾಗಿದೆ. ನಮ್ಮ ಸೇನೆಯ ಬಗ್ಗೆ ತಮಗೆ ಹೆಮ್ಮೆ ಇರಬೇಕು ಎಂದ ಅವರು, ಚಂದನವನ ಯಾವಾಗಲೂ ಹಸಿರಿನಿಂದ ಕಂಗೊಳಿಸಲಿ ಎಂದರು.
ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್ ಮಾತನಾಡಿ, ಇಂತಹ ದೇಶಭಕ್ತರನ್ನು ಗೌರಿವಿಸುವುದು ನಮಗೊಂದು ಹೆಮ್ಮೆ. ಮಾಲತೇಶ್ ಅವರು 21 ವರ್ಷಗಳ ಸೈನ್ಯದಲ್ಲಿದ್ದುದು ಕಾರ್ಗಿಲ್ ಯುದ್ದದಲ್ಲಿ ಹೋರಾಡಿದ್ದು ಇವೆಲ್ಲವೂ ರೋಮಾಂಚನಕಾರಿಯಾಗಿದೆ. ಅವರ ಆದರ್ಶ, ರಾಷ್ಟ್ರಭಕ್ತಿ ಮೆಚ್ಚುವಂತದ್ದು ಎಂದರು.
ಗಿಡ ನೆಡುವ ಮೂಲಕ ಹುಟ್ಟುಹಬ್ಬ:
ಇದೇ ಸಂದರ್ಭದಲ್ಲಿ ಇಂಜಿನಿಯರ್ ಮಂಜುನಾಥ್ ಮತ್ತು ಭಾಗ್ಯಲಕ್ಷ್ಮಿ ದಂಪತಿಗಳ ಮಗು ರಚಿತಳ 11ನೇ ವರ್ಷದ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಲಾಯಿತು. ಚಂದನವನದಲ್ಲಿ ಪರಿಸರ ಪ್ರೇಮಿಗಳು ಹಸಿರನ್ನು ಉಳಿಸುವ ಬೆಳೆಸುವ ಜಾಗೃತಿ ಮೂಡಿಸುತ್ತಿದ್ದು, ತಮ್ಮ ಮಕ್ಕಳ ಹುಟ್ಟುಹಬ್ಬಗಳನ್ನು ಸಸಿ ನೆಡುವ ಮೂಲಕ ಆಚರಿಸುತ್ತಿರುವುದು ಒಂದು ಉತ್ತಮ ಕೆಲಸವಾಗಿದೆ ಎಂದು ಶಿವಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ರವಿಕುಮಾರ್, ಜಯಣ್ಣ, ಅಶೋಕ್, ಮಾಲತೇಶ್, ಮಂಜುನಾಥ್, ಡಿ.ಎನ್.ಶ್ರೀನಿವಾಸ್, ಎ.ಹಾಲೇಶಪ್ಪ, ಜಿ.ನಾಗಪ್ಪ, ಜಿ.ಕೆಂಚಪ್ಪ ಸೇರಿದಂತೆ ಹಲವರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post