ಬೆಂಗಳೂರು: ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ದವಾಗಿ, ಎಪ್ರಿಲ್ 12ರಂದು ಬಿಡುಗಡೆಗೆ ಅಣಿಯಾಗುತ್ತಿರುವ ಕವಲುದಾರಿ ಚಿತ್ರ ‘ಇದೇ ದಿನ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಭಾರೀ ಸೆನ್ಸೇಷನ್ ಸೃಷ್ಠಿಸಿದೆ.
ಹಾಡನ್ನು ಯೂಟ್ಯೂಬ್’ನಲ್ಲಿ ಬಿಡುಗಡೆ ಮಾಡಲಾಗಿದ್ದು, ಇದು ಕವಲುದಾರಿ ಚಿತ್ರದ ಎರಡನೆಯ ಗೀತೆಯಾಗಿದೆ.
ಒಂದು ವಾರದ ಹಿಂದೆ ನಿಗೂಢ ನಿಗೂಢ ಎಂಬ ಗೀತೆಯನ್ನು ಬಿಡುಗೆ ಮಾಡಿದ್ದ ತಂಡ ಈಗ ಇದೇ ದಿನ ಹಾಡನ್ನು ಚಿತ್ರರಸಿಕರ ಮಡಿಲಿಗೆ ಹಾಕಿದೆ.
ಧನುಂಜಯ ರಂಜನ್ ರಚಿಸಿರುವ ಈ ಗೀತೆಗೆ ಸಿದ್ದಾಂತ್ ಅವರು ಧ್ವನಿಯಾಗಿದ್ದು, ಎಂ.ಆರ್. ಚರಣ್’ರಾಜ್ ಅವರ ಮಧುರ ಸಂಗೀತ ಕಿವಿಗೆ ಇಂಪನ್ನು ಎರೆಯುತ್ತದೆ.
ಹಿರಿಯ ನಟ ಅನಂತನಾಗ್ ನಟಿಸಿರುವ ಚಿತ್ರದ ಈ ಗೀತೆ ಅತ್ಯಂತ ಭಾವನಾತ್ಮಕವಾಗಿದ್ದು, ಮನಮುಟ್ಟುವಂತಿದೆ.
ಕವಲುದಾರಿ ಸಸ್ಪೆನ್ಸ್ ಥ್ರಿಲ್ಲರ್(ಪತ್ತೆದಾರಿ) ಚಿತ್ರವಾಗಿದ್ದು, ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಖ್ಯಾತಿ ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಪಿಆರ್’ಕೆ ಪ್ರೊಡಕ್ಷನ್ ಅಡಿಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಆಪರೇಶನ್ ಅಲಮೇಲಮ್ಮ ಚಿತ್ರ ಖ್ಯಾತಿಯ ರಿಷಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಹಿರಿಯ ನಟ ಅನಂತನಾಗ್, ಅಚ್ಯುತ ಕುಮಾರ್, ಸುಮನ್ ರಂಗನಾಥ್ ಹಾಗೂ ರೋಶ್ನಿ ಪ್ರಕಾಶ್ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.
Discussion about this post