ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊರೋನಾ ಮಹಾಮಾರಿಯಿಂದ ಜನತೆಯನ್ನು, ವ್ಯಕ್ತಿಗಳನ್ನು ಬದುಕಿಸಬೇಕಾದರೆ ಎರಡು ಡೋಸ್ ಲಸಿಕೆಯೇ ಬ್ರಹ್ಮಾಸ್ತ್ರ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಡೀ ದೇಶಕ್ಕೆ ಉಚಿತವಾಗಿ ಲಸಿಕೆಯನ್ನು ನೀಡುವ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ಲಸಿಕೆ ಅಭಿಯಾನದ ತಂಡ ರಚನೆಯಾಗಿದ್ದು, ಈ ತಂಡ ಈಗಾಗಲೇ ಸಕ್ರಿಯವಾಗಿ ತಮ್ಮ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಲಸಿಕಾ ಅಭಿಯಾನ ಪ್ರಮುಖರಾದ ಎಸ್. ದತ್ತಾತ್ರಿ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಕೊರೋನಾ ಲಸಿಕಾ ಅಭಿಯಾನದ ಪ್ರಯುಕ್ತ ದತ್ತಾತ್ರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಎಲ್ಲಾ ಲಸಿಕಾ ಕೇಂದ್ರ, PHC, ಸಮುದಾಯ ಆಸ್ಪತ್ರೆಗಳಿಗೆ ಒಬ್ಬೊಬ್ಬ ಲಸಿಕಾ ಕೇಂದ್ರದ ಪ್ರಮುಖರನ್ನು ನಿಶ್ಚಯಮಾಡಿ ಅವರು ಸಕ್ರಿಯವಾಗಿ ಅಭಿಯಾನದಲ್ಲಿ ತೊಡಗಿಕೊಂಡಿರುವ ಕಾರಣ ಜಿಲ್ಲೆಯಲ್ಲಿ ಈಗಾಗಲೇ ಶೇ.85ರಷ್ಟು ಪ್ರಥಮ ಡೋಸ್ ನೀಡಲಾಗಿದೆ. ಇನ್ನೂ ಶೇ.15ರಷ್ಟು ಉಳಿದಿರುವುದರಿಂದ ಅವರನ್ನು ಮನೆ ಮನೆಗೆ ಭೇಟಿ ಮಾಡಿ ಸಂಪರ್ಕಿಸಿ ತಕ್ಷಣ ಕರೆತಂದು ನವಂಬರ್ 30 ರೊಳಗೆ ಮೊದಲನೇ ಡೋಸ್ ಅನ್ನು ಶೇ.100 ರಷ್ಟು ತಲುಪಿಸುವಂತೆ ಸಭೆಯಲ್ಲಿ ನಿಶ್ಚಯಿಸಲಾಯಿತು.
ಬಾಕಿ ಇರುವ ಎರಡನೇ ಡೋಸ್ ಹಾಗೂ ಇನ್ನುಳಿದವರನ್ನು ಪ್ರೆರೇಪಿಸಿ ಕರೆತರಲು ಮತ್ತು ಅಂಗವಿಕಲರು, ವಯೋವೃದ್ಧರು ಹಾಗೂ ನಿಶಕ್ತರಿದ್ದರೆ ಲಸಿಕಾ ಕೇಂದ್ರದ ಸಿಬ್ಬಂದಿಗಳ ಜೊತೆಗೂಡಿ ಅವರ ಮನೆಗೆ ಹೋಗಿ ಲಸಿಕೆ ಹಾಕಿಸುವಂತೆ ಈ ಸಭೆಯಲ್ಲಿ ಚರ್ಚಿಸಲಾಯಿತು.
ಇನ್ನು 7 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆಯನ್ನು ನೀಡಲು ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಈ ಕುರಿತು ಕೂಡಾ ಮಕ್ಕಳ ಬಗ್ಗೆ ಮಾಹಿತಿಯನ್ನು ಪಡೆದು ಸಮೀಕ್ಷಾ ಪಟ್ಟಿ ತಯಾರಿಸಬೇಕಾಗಿ ಮಂಡಲದ ಅಭಿಯಾನ ಪ್ರಮುಖರಿಗೆ ಎಸ್. ದತ್ತಾತ್ರಿ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ಡಾ. ತಾನಾಜಿ ಹಾಗೂ ಎಲ್ಲಾ ತಾಲೂಕಿನ ಲಸಿಕಾ ಅಭಿಯಾನದ ಪ್ರಮುಖರು, ಲಸಿಕಾ ಕೇಂದ್ರ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post