ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರೊ.ಬಿ.ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರಲು ಬಿಡಬೇಡಿ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಹೇಳಿದರು.
ಅವರು ಇಂದು ದಲಿತ ಸಂಘರ್ಷ ರಾಜ್ಯ ಸಮಿತಿ (ಬಿ.ಕೃಷ್ಣಪ್ಪ ವಾದ) ಮತ್ತು ದಲಿತ ನೌಕರರ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 87ನೇ ಜನ್ಮದಿನ ಮತ್ತು ರಾಜ್ಯಮಟ್ಟದ ದ.ಸಂ.ಸ. ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಪ್ರೊ.ಕೃಷ್ಣಪ್ಪ ಅವರು ಅಂಬೇಡ್ಕರ್ ಆಲೋಚನೆಗಳನ್ನೇ ಮುಂದಿಟ್ಟುಕೊಂಡು ಶಿಕ್ಷಣ ಸಂಘಟನೆ ಹೋರಾಟದ ದಸಂಸ ಅನ್ನು ಕಟ್ಟಿದರು. ಆ ಮೂಲಕ ಸಮ ಸಮಾಜದ ಹೋರಾಟಗಳನ್ನು ನಡೆಸುತ್ತಾ ಬಂದರು. ಅವರು ನಾನು ಹೋರಾಟದ ಹಣತೆಯನ್ನು ಹಚ್ಚಿದ್ದೇನೆ. ಅದು ಆರದಂತೆ ನೋಡಿಕೊಳ್ಳಿ ಎಂದಿದ್ದರು. ಹಾಗಾಗಿ ದಲಿತ ಸಂಘರ್ಷ ಸಮಿತಿಗಳು ತಮ್ಮ ಹೋರಾಟಗಳನ್ನು ಮುಂದುವರಿಸಬೇಕು ಮತ್ತು ಗಟ್ಟಿ ನಿಲುವುಗಳನ್ನು ತೆಗೆದುಕೊಳ್ಳಬೇಕು. ಅವರು ಹಚ್ಚಿದ ಹಣತೆ ಆರದಂತೆ ಕಾಪಾಡಿಕೊಳ್ಳುವುದು ದಲಿತ ಸಂಘರ್ಷ ಸಮಿತಿಗಿರುವ ಮುಖ್ಯ ಗುರಿಯಾಗಿದೆ ಎಂದರು.
ಡಾ. ಅಂಬೇಡ್ಕರ್‍ರವರು ಈ ದೇಶದ ದಲಿತರ ಬೆಳಕಾಗಿದ್ದಾರೆ. ಅವರು ಕೊಟ್ಟ ಸಂವಿಧಾನ ಇಂದು ಎಲ್ಲಾ ಧರ್ಮಗಳಿಗೂ ಪವಿತ್ರ ಗ್ರಂಥವೇ ಆಗಿದೆ. ಅಂಬೇಡ್ಕರ್ ಓದು ಅನಿವಾರ್ಯವಾಗಿದೆ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರು ಅಂಬೇಡ್ಕರ್‍ರವರ ಚಿಂತನೆ ಮತ್ತು ವಿಚಾರಗಳನ್ನು ಇಟ್ಟುಕೊಂಡು ಸಂಘಟನೆ ಮತ್ತು ಶಿಕ್ಷಣದ ಮೂಲಕ ತಮ್ಮ ಹೋರಾಟಗಳನ್ನು ವಿಸ್ತರಿಸಬೇಕು ಮತ್ತು ದಲಿತ ಪ್ರಜ್ಞೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಮತ್ತು ಪ್ರೊ.ಬಿ. ಕೃಷ್ಣಪ್ಪ ಅವರು ತಮಗೆ ಗುರುಗಳಾಗಿದ್ದರು ಎಂದು ಹೆಮ್ಮೆಯಿಂದ ತಮ್ಮ ಕಾಲೇಜಿನ ನೆನಪುಗಳನ್ನು ಬಿಚ್ಚಿಟ್ಟರು.
ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕ ದಲಿತ ನೌಕರರ ಒಕ್ಕೂಟದ ಅಧ್ಯಕ್ಷ ಬಿ.ಎಲ್. ರಾಜು ದಲಿತರು ಸ್ವಾತಂತ್ರ್ಯ ಪೂರ್ವದಿಂದಲೂ ಸ್ವಾತಂತ್ರ್ಯ ನಂತರವೂ ಭೂಮಿಗಾಗಿಯೇ ಹೋರಾಟ ನಡೆಸುತ್ತಾ ಬಂದಿದ್ದಾರೆ. ಪ್ರೊ.ಬಿ. ಕೃಷ್ಣಪ್ಪ ಅವರು ಕೂಡ ದಲಿತರಿಗೆ ಭೂಮಿ ಬೇಕು ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದರು. ಆದರೆ ಇಂದೂ ಕೂಡ ದಲಿತರು ಅದೇ ಪ್ರಶ್ನೆಯನ್ನು ಇಟ್ಟುಕೊಂಡು ಹೋರಾಟ ಮಾಡಬೇಕಾದ ಅನಿವಾರ್ಯತೆ ಇರುವುದು ಅತ್ಯಂತ ದುರದೃಷ್ಟಕರ ಎಂದರು.
ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ನಂತರವೂ ದಲಿತರಿಗೆ ಭೂಮಿ ಬಂದಿದೆಯಾ ಎಂದು ಪ್ರಶ್ನೆ ಮಾಡಿದರೆ, ಇಲ್ಲ ಎಂಬ ಉತ್ತರ ತಕ್ಷಣವೇ ಸಿಗುತ್ತದೆ. ದಲಿತರು ಭೂಮಿ, ಅಧಿಕಾರ ಎಲ್ಲವನ್ನು ಕಳೆದುಕೊಂಡಿದ್ದಾರೆ. 1970ರಲ್ಲಿಯೇ ದಲಿತರಿಗೆ ಭೂಮಿ, ಅಧಿಕಾರ ಬೇಕು ಎಂದು ಹೋರಾಟ ಆರಂಭವಾದರೂ ಕೂಡ ಇಂದಿಗೂ ಭೂಮಿ ಸಿಕ್ಕಿಲ್ಲ. ಕೊನೇಪಕ್ಷದ ಬಗರ್ ಹುಕುಂ ಭೂಮಿಯೂ ಕೂಡ ಅವರಿಗೆ ದಕ್ಕಿಲ್ಲ. ಉಳುಮೆಗೂ ಭೂಮಿ ಇಲ್ಲ. ಊಳುವುದಕ್ಕೂ ಸ್ಮಶಾನವಿಲ್ಲ ಎಂದಾಗಿದೆ. ಹಾಗಾಗಿ ನಮ್ಮ ಪ್ರಮುಖ ಹೋರಾಟ ಭೂಮಿಯನ್ನು ಪಡೆಯುವುದೇ ಆಗಿದೆ. ಸರ್ಕಾರ ಭೂಮಿಯನ್ನು ಕೊಡುವುದೇ ಆದರೆ ಆದ್ಯತೆಯ ಮೇರೆಗೆ ಕೊಡಲಿ ಎಂದರು.
ಇದು ತಲ್ಲಣದ ಸಮಯವಾಗಿದೆ ಐಪಿಎಲ್ ಕಾಲ. ಹೋರಾಟ ಯಾರಿಗೂ ಬೇಕಾಗಿಲ್ಲ. ಹಿಂದೊಂದು ಕಾಲವಿತ್ತು ಆಗ ದಲಿತರೆಲ್ಲರೂ
ಲಕ್ಷಾಂತರ ಸಂಖ್ಯೆಯಲ್ಲಿ ಸೇರುತ್ತಿದ್ದರು. ಈಗ ಯುವ ಜನತೆ ದಿಕ್ಕುತಪ್ಪಿದೆ. ಹೋರಾಟಗಳು ದಿಕ್ಕು ತಪ್ಪುತ್ತಿವೆ. ದಲಿತ ನಾಯಕರೇ ಇಲ್ಲವಾಗಿದ್ದಾರೆ. ದಲಿತ ರಾಜಕಾರಣಿಗಳಿದ್ದಾರೆ. ಹೋರಾಟಗಾರರಿಲ್ಲ ಇಂತಹ ಸಂದರ್ಭದಲ್ಲಿ ಗುರುಮೂರ್ತಿಯಂತಹವರು ಸಮ ಸಮಾಜದ ನಿರ್ಮಾಣಕ್ಕಾಗಿ ಶೋಷಿತರ ಪರವಾಗಿ ಹಣತೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಸಂಸನ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ಅವರು ನಾಡಿನ ಉದ್ದಗಲಕ್ಕೂ ದಲಿತರಿಗೆ ಸಿಗಬೇಕಾದ ಭೂಮಿ, ವಸತಿ, ನಿವೇಶನ, ಸವಲತ್ತು, ಸಮಾನತೆ ಮತ್ತು ಸಾಮಾಜಿಕ ರಕ್ಷಣೆಗಾಗಿ ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದವರು. ದಲಿತರ ಮೇಲಿನ ದೌರ್ಜನ್ಯಗಳನ್ನು ಖಂಡಿಸಿದವರು. ಅವರ ತತ್ವಗಳನ್ನೇ ಇಟ್ಟುಕೊಂಡು ಅಂಬೇಡ್ಕರ್‍ರವರ ಮಾರ್ಗದರ್ಶನದ ವಿಚಾರಗಳೊಂದಿಗೆ ದಲಿತ ಸಂಘರ್ಷ ಸಮಿತಿ ಒಂದು ಪರಿವರ್ತನಾ ಚಳುವಳಿಯನ್ನಾಗಿ ರೂಪಿಸುತ್ತಾ ಬಂದಿದೆ ಎಂದರು.
ಶತಮಾನಗಳಿಂದಲೂ ಉಳ್ಳವರೇ ಬಡವರ ರಕ್ತವನ್ನು ಹೀರಿ ಭೂಮಿ, ಬಂಡವಾಳ, ಅಧಿಕಾರಗಳನ್ನು ಪಿತ್ರಾರ್ಜಿತ ಆಸ್ತಿಯಂತೆ ಶತಮಾನಗಳಿಂದಲೂ ಅನುಭವಿಸುತ್ತಾ ಬಂದಿದ್ದಾರೆ. ದಲಿತ ಸಮುದಾಯಗಳಲ್ಲಿ ಬಂಡಾಯದ ಕಿಚ್ಚನ್ನು ಹಚ್ಚಿಸಿ ಸಮ ಸಮಾಜದ ನಿರ್ಮಾಣ ನಮ್ಮ ಗುರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ವಿಶ್ರಾಂತ ಪ್ರಾಧ್ಯಾಪಕ ಡಾ. ಸಣ್ಣರಾಮ, ರಾಜ್ಯ ಸಂಘಟನಾ ಸಂಚಾಲಕ ಹನುಮಂತಪ್ಪ ಕಾಕರಗಲ್, ದಲಿತ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ದಸಂಸನ ಜಿಲ್ಲಾ ಸಂಚಾಲಕ ಎಂ. ಏಳುಕೋಟಿ, ಪ್ರಮುಖರಾದ ಎಸ್.ಪಿ. ಶೇಷಾದ್ರಿ, ಬಿ.ಎ. ಕಾಟ್ಕೆ, ಮುಂಡರಗಿ ನಾಗರಾಜ್, ಎಸ್.ಎನ್. ಬಳ್ಳಾರಿ, ಕಮಲಮ್ಮ, ಪಕ್ಕೀರಪ್ಪ ಮುಂಡಗೋಡು, ಡಾ. ಅವನಿಕ, ರಮೇಶ್ ಸೇರಿದಂತೆ ದಸಸಂನ ಜಿಲ್ಲಾ ಮತ್ತು ರಾಜ್ಯ ಸಂಚಾಲಕರು, ಪದಾಧಿಕಾರಿಗಳು ಸೇರಿದಂತೆ ಹಲವರಿದ್ದರು. ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಿವಬಸಪ್ಪ ಸ್ವಾಗತಿಸಿದರು. ಎಂ. ಏಳುಕೋಟಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post