ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶೇಷ ಲೇಖನ: ಕೆ.ವಿ. ಅಜೇಯ ಸಿಂಹ
ಅಮ್ಮ, ಮದರ್, ಮಮ್ಮಿ, ಮಾ ಹೀಗೆ ಏನೇ ಕರೆದರೂ ಅವಳು ಅವಳೇ…ಎಲ್ಲದರಲ್ಲೂ ಮ ಕಾರವಿದೆ ಅದೇ ಮಮತೆ. ಅದೇ ಹೆಣ್ಣು. ಅವಳೇ ತಾಯಿ…ತಾಯಿಯಾಗುವುದೆಂದರೆ ಅದು ತನ್ನೊಡಲ ಕಂದನಿಗೆ ಮಾತ್ರವಲ್ಲ, ಜಗದೆಲ್ಲ ಕಂದಮ್ಮಗಳಿಗೆ ಎನ್ನುವ ಮಹೋನ್ನತ ಭಾವವನ್ನು ಮತ್ತೆ ಮತ್ತೆ ಮೂರ್ತರೂಪವಾಗಿಸುತ್ತಿದೆ ಹಾಸನದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜುಲೈ 25ರಂದು ಸಂಜೆ 6:30ಕ್ಕೆ ನಡೆಯುತ್ತಿರುವ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ….
ರಂಗಕಲಾವಿದೆ ಪೂಜಾ ರಘುನಂದನ್ ಸ್ವಾನುಭವವನ್ನು ಪ್ರೇಕ್ಷಕರೆದುರು ಅನಾವರಣಗೊಳಿಸುತ್ತಿದ್ದಾರೆ. ಇದಕ್ಕೆ ಕೃಷ್ಣಮೂರ್ತಿ ಕವತ್ತಾರ್ ಅವರ ದಕ್ಷ ನಿರ್ದೇಶನವಿದೆ. ಸಮಾಜಮುಖಿಯಾಗಿ ರೋಟರಿ ಸಂಸ್ಥೆಯ ಅಧ್ಯಕ್ಷೆಯಾಗಿ ಛಾಪುಮೂಡಿಸಿರುವ, ಸೆನ್ಸಾರ್ ಮಂಡಳಿ ಸದಸ್ಯರಾಗಿರುವ ಪೂಜಾ ರಘುನಂದನ್ ಅವರ ಬದುಕಿನ ಕಥೆ ಇದು. ಬರಿದಾದ ಒಡಲು ಎಂದು ಕೊರಗುತ್ತಿರುವ ಅಸಂಖ್ಯಾತ ದಂಪತಿಗಳಿಗೆ, ಮಡಿಲು ತುಂಬುವ ಪುಟ್ಟಕಂದಮ್ಮನೆಡೆಗೆ ಕರೆದೊಯ್ಯವ ಶ್ರೇಷ್ಠತಮ ಕಾರ್ಯ ಇದಾಗಿದೆ. ಕುಂದಾನಗರಿ ಬೆಳಗಾವಿಯಲ್ಲಿ ಜನಿಸಿ, ತಾಯಿ ಹೇಮಾವತಿಯ ಮಡಿಲಾದ ಹಾಸನಕ್ಕೆ ಬಂದು ಸೇರಿದ ಪೂಜಾ ರಘುನಂದನ್ ಅವರ ಬದುಕಿನಲ್ಲಿ ನಂದುತ್ತಿದ್ದ ಆಶಾಕಿರಣವು ಮತ್ತೆ ಮಹಾಜ್ಯೋತಿಯಾದ ಕಥಾನಕ ಇದಾಗಿದೆ.
ಏಕವ್ಯಕ್ತಿ ರಂಗಪ್ರಯೋಗವೇ ಸವಾಲು
ಪಾತ್ರವೊಂದರ ಚಿತ್ರಣವನ್ನು ರಂಗಕ್ಕೆ ತರುವುದೇ ಕಲಾವಿದನಿಗೆ ಸವಾಲು, ವ್ಯಕ್ತಿಯೋರ್ವನೇ ಬೇರೇ ಬೇರೆ ಪಾತ್ರಗಳು, ಅವುಗಳ ಮನೋಧರ್ಮವನ್ನು ರಂಗದಲ್ಲಿ ತಂದು, ಪ್ರೇಕ್ಷಕನಿಗೆ ಆಪ್ತವಾಗಿ ವಿಚಾರಧಾರೆಗಳನ್ನು ಮುಟ್ಟಿಸುವುದು ಅತ್ಯಂತ ದೊಡ್ಡ ಸವಾಲು. ಇದನ್ನು ಪ್ರೀತಿಯಿಂದ ಒಪ್ಪಿಕೊಂಡಿರುವ ಪೂಜಾ ರಘುನಂದನ್ ತಾಯಿಯಾಗುವುದೆಂದರೆ…ಎನ್ನುತ್ತಾ ರಂಗಕ್ಕೆ ಬರುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿಂತಿದ್ದಾರೆ. ಪೂಜಾ ಪತಿ ರಘುನಂದನ್ ಹಾಗೂ ಕುಟುಂಬಸ್ಥರು ಇದರ ಜೊತೆಗೆ ನಿಂತಿದ್ದಾರೆ. ಹಾಸನದ ರಂಗಹೃದಯ ತಂಡದ ಪ್ರಸ್ತುತಿ ಇದಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀವಿದ್ಯಾ ಫೌಂಡೇಷನ್ ಇವರೊಂದಿಗೆ ಕೈಜೋಡಿಸಿದ್ದಾರೆ.ಮಾತೃಹೃದಯಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್
ಸ್ವತಃ ಏಕವ್ಯಕ್ತಿ ರಂಗಪ್ರಯೋಗದಲ್ಲಿ ಅಭಿನಯಿಸಿ ರಂಗಾಭಿರುಚಿಕರಲ್ಲಿ ಮನೆಮಾಡಿರುವ ಕೃಷ್ಣಮೂರ್ತಿ ಕವತ್ತಾರ್ ಸದಾ ಕ್ರಿಯಾಶೀಲ ವ್ಯಕ್ತಿ. ಶಿಸ್ತುಬದ್ದ ನಿರ್ದೇಶನಕ್ಕೆ ಹೆಸರು ಮಾಡಿದ್ದಾರೆ. ಶಿಲೆಯೂ ಕಲೆಯಾಗಬಲ್ಲ ಕೈಗುಣ ಇವರದ್ದು. ಈ ಪ್ರಯೋಗದಲ್ಲಂತೂ ಪೂಜಾ ರಘುನಂದನ್ ಅವರ ಜೀವನದ ಕಥನವನ್ನು ಸ್ವತಃ ಮನದಿಂದ ಅನುಭವಿಸುತ್ತಾ, ಪ್ರಯೋಗದ ಎಲ್ಲಾ ಭಾವಗಳನ್ನೂ ಪ್ರೀತಿಯಿಂದ ಕಟ್ಟಿಕೊಟ್ಟಿದ್ದಾರೆ. ವಿಭಿನ್ನ ರಂಗತಂತ್ರಗಳನ್ನು ಬಳಸಿ ನಾಟಕ ಕಟ್ಟುವಲ್ಲಿ ಸಿದ್ಧಹಸ್ತರಾದ ಕೃಷ್ಣಮೂರ್ತಿ ಕವತ್ತಾರ್ ರಂಗರೂಪ-ನಿರ್ದೇಶನ-ಸಂಗೀತದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ…
ತಾಯಿಯಾಗುವುದೆಂದರೆ ಅದು ದೈಹಿಕ ಪ್ರಕ್ರಿಯೆಗಿಂತ ಮನೋನ್ನತಿಯ ಹಂತ ಎಂಬ ತಾತ್ವಿಕ ದರ್ಶನ ಇದರಲ್ಲಿದೆ. ತಾಯಿಯಾಗುವ ಕ್ಷಣ ಹಂಬಲಿಸಿ, ಕಣ್ಣೀರ್ಗರೆದ ಅಸಂಖ್ಯಾತ ಸ್ತ್ರೀಹೃದಯಗಳ ಮನದ ಮಾತಿದು. ಪಿಸುಮಾತುಗಳಲ್ಲೇ ನಡೆಯುತ್ತಿದ್ದ ಈ ವಿಚಾರವೀಗ ಅಂತಲ್ಲ, ಅಂತಿಲ್ಲ ಎಂಬುದನ್ನು ಜಗಜ್ಜಾಹೀರಾಗಿ ಗಟ್ಟಿಧ್ವನಿಯಲ್ಲಿ ಈ ಹೆಣ್ಣುಮಗಳು ಹೇಳಲು ಹೊರಟಿದ್ದಾರೆ. ಅದನ್ನು ಅಷ್ಟೇ ಸಂಭ್ರಮದಿಂದ ಹೃನ್ಮನ ತುಂಬಿಸಿಕೊಳ್ಳುವ ಪ್ರೇಕ್ಷಕರಿಗಾಗಿ ಕಾಯುತ್ತಿದ್ದಾರೆ.
ಕಂಡ ದೇವರಿಗೆಲ್ಲಾ ಹೊತ್ತ ಹರಕೆ, ಬಲ್ಲವರ ಹಾರೈಕೆ, ಸಾಮಾಜಿಕ, ಕಾನೂನಾತ್ಮಕ ಸವಾಲುಗಳು,ನೋವು- ನಲಿವುಗಳು, ಕಣ್ಣೀರು, ಆನಂದಾಶ್ರು ಹೀಗೆ ಬದುಕಿನ ಎಲ್ಲ ರಸಭಾವಗಳ ಹೂರಣವೇ ರಂಗದಲ್ಲಿ ತೆರೆದುಕೊಳ್ಳಲಿದೆ. ಧೈರ್ಯದಿಂದ ತನ್ನದೇ ಬದುಕಿನ ಕಥೆಯನ್ನು ರಂಗದಲ್ಲಿ ಕಟ್ಟಿಕೊಡುತ್ತಿರುವ ಪೂಜಾ ರಘುನಂದನ್ ಅವರಿಗೆ ಅಂತೆಯೇ ಮಾತೃಹೃದಯಿಯಾಗಿ ಒಂದರ್ಥದಲ್ಲಿ ತಾನೇ ತಾಯಿಯಾಗಿ ರಂಗರೂಪ, ಸಂಗೀತದೊಂದಿಗೆ ರಂಗನಿರ್ದೇಶನ ಮಾಡಿದ್ದಾರೆ ಹಿರಿಯ ರಂಗನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್.
ಅಮ್ಮನ ಅಮೃತಧಾರೆಯಲ್ಲಿ ಮಿಂದಿರುವ ಸಮಸ್ತ ಜೀವಸಂಕುಲವೇ ನೋಡಬೇಕಾದ ಏಕವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ…
ಹೀಗಾಗಿ ನೋಡಲೇಬೇಕು:
- ಅಮ್ಮನನ್ನು ಆರಾಧಿಸುವ ಮನಸುಗಳನ್ನು ಮುದಗೊಳಿಸುವ ರಂಗಚಿತ್ರಣ
- ಸ್ತ್ರೀಯರನ್ನು ಗೌರವಿಸುವ ಪ್ರತಿಯೊಬ್ಬರಿಗೂ ಮನಮುಟ್ಟುವ ಕಥಾನಕ
- ಅಭಿನಯ ಹಾಗೂ ಸಂಗೀತವನ್ನು ಮೇಳೈಸಿದ ರಂಗಪ್ರಯೋಗ
- ಹಾಸನದ ಮೊದಲ ಮಹಿಳಾ ಏಕವ್ಯಕ್ತಿ ರಂಗಪ್ರಯೋಗ
ಪ್ರಥಮ ಪ್ರಯೋಗ ನೋಡಲು ಮರೆಯದಿರಿ
ರಂಗಹೃದಯ ತಂಡದ ಪ್ರಸ್ತುತಿಯ ಏಕವ್ಯಕ್ತಿ ರಂಗಪ್ರಯೋಗ
ತಾಯಿಯಾಗುವುದೆಂದರೆ…
ರಂಗದಲ್ಲಿ ಪೂಜಾ ರಘುನಂದನ್
ರಂಗರೂಪ-ನಿರ್ದೇಶನ-ಸಂಗೀತ : ಕೃಷ್ಣಮೂರ್ತಿ ಕವತ್ತಾರ್
ಜುಲೈ 25ರ ಸೋಮವಾರ ಸಂಜೆ 6:30ಕ್ಕೆ ಹಾಸನದ ಹಾಸನಾಂಬಾ ಕಲಾಕ್ಷೇತ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post