ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ನಡುವೆ ಇರುವ ಅನೇಕ ಸ್ಥಳೀಯ ಸವಾಲುಗಳಿಗೆ ತಾಂತ್ರಿಕವಾಗಿ ಪರಿಹಾರ ನೀಡುವತ್ತ ಎಂಜಿನಿಯರಿಂಗ್ ಸಂಶೋಧನಾರ್ಥಿಗಳು ಚಿತ್ತ ಹರಿಸಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ #JNNCE ಬುಧವಾರ ಏರ್ಪಡಿಸಿದ್ದ ಕಾಲೇಜಿನ ನೂತನ ರಿಸರ್ಚ್ ಪ್ರಮೋಷನ್ ಪಾಲಿಸಿ (ಜೆ.ಎನ್.ಎನ್.ಸಿ.ಇ ಸಂಶೋಧನಾ ಬೆಂಬಲ ನೀತಿ) ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಎಂಜಿನಿಯರಿಂಗ್ ವಲಯದಲ್ಲಿರುವ ಬೋಧಕರು ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತರಾಗಬಾರದು. ನೀವು ಭಾಗವಹಿಸುವ ತಾಂತ್ರಿಕ ವಿಚಾರ ಸಂಕಿರಣಗಳಿಂದ ಪಡೆಯುವ ಜ್ಞಾನವನ್ನು ಆವಿಷ್ಕಾರಿ ಯೋಜನೆಗಳನ್ನು ರೂಪಿಸಲು ಸದ್ಬಳಕೆಯಾಗಲಿ. ನಮ್ಮ ಸುತ್ತಲಿರುವ ಮೂಲಭೂತ ಅಗತ್ಯತೆಗಳು ಹಾಗೂ ನಿರ್ವಹಣೆಯಲ್ಲಿನ ಸವಾಲುಗಳಿಗೆ ತಾಂತ್ರಿಕ ಪರಿಹಾರ ನೀಡಲು ಕಾಲೇಜು ರೂಪಿಸಿರುವ ಇಂತಹ ಸಂಶೋಧನಾ ನೀತಿಗಳನ್ನು ಬಳಸಿಕೊಳ್ಳಿ ಎಂದು ಹೇಳಿದರು.
Also read: ಮಂಗಳೂರು ದಸರಾ ಟ್ರೋಫಿ-2024 | ಪಂಜ ಫ್ರೆಂಡ್ಸ್ RCP ನಿಟ್ಟೆ ತಂಡಕ್ಕೆ ಗೆಲುವು
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಕಾಲೇಜು ಅನೇಕ ಕೊಡುಗೆಗಳನ್ನು ನೀಡುವ ಮಹತ್ವಾಕಾಂಕ್ಷೆಗೆ ಸಂಶೋಧನಾ ಬೆಂಬಲ ನೀತಿಯು ಮತ್ತಷ್ಟು ಬಲ ನೀಡಿದೆ. ಪ್ರತಿಯೊಬ್ಬ ಎಂಜಿನಿಯರಿಂಗ್ ಉಪನ್ಯಾಸಕರಲ್ಲಿ ಸಂಶೋಧನಾ ಸಾಮರ್ಥ್ಯವಿದೆ. ಅಂತಹ ಕೌಶಲ್ಯತೆಗಳನ್ನು ಬಳಸಿ ತಾಂತ್ರಿಕ ಸ್ಪರ್ಶತೆಯ ಮೂಲಕ ಸಾಮಾಜಿಕ ಕಳಕಳಿಯನ್ನು ಮೆರೆಯಿರಿ ಎಂದು ಹೇಳಿದರು.
ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಮಾತನಾಡಿ, ಸಂಶೋಧನಾ ಚಟುವಟಿಕೆಗಳಿಗೆ ಪ್ರೇರಣೆ ನೀಡುವುದು ಈ ಪಾಲಿಸಿಯ ಪ್ರಾಥಮಿಕ ಉದ್ದೇಶವಾಗಿದ್ದು, ವಿದ್ಯಾಸಂಸ್ಥೆ ಮತ್ತು ಕೈಗಾರಿಕೆಗಳ ನಡುವಿನ ಕೊಂಡಿಯಾಗಲಿದೆ. ಕಂಪನಿಗಳೊಂದಿಗೆ ಒಡಂಬಡಿಕೆ, ಯೋಚನೆಗಳನ್ನು ಉತ್ಪನ್ನ ಯೋಜನೆಗಳಾಗಿ ನಿರ್ಮಾಣ, ಪ್ರತಿ ತಾಂತ್ರಿಕ ವಿಷಯಗಳಿಗೆ ಸೆಂಟರ್ ಫಾರ್ ಎಕ್ಸಲೆನ್ಸ್ ನಿರ್ಮಾಣ, ಪೇಟೆಂಟ್ ಫೈಲಿಂಗ್, ಕಾಪಿ ರೈಟ್ಸ್ ಪ್ರಕ್ರಿಯೆ ಒಳಗೊಂಡಿದೆ.
ಇದರೊಂದಿಗೆ ಸಂಶೋಧನಾ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಸಂಶೋಧನೆ ನಡೆಸಲು ಸರ್ಕಾರಿ ಖಾಸಗಿ ಸಂಸ್ಥೆಗಳಿಂದ ಆರ್ಥಿಕ ಬೆಂಬಲ ಪಡೆಯುವ ಪ್ರಯತ್ನಗಳು, ಪ್ರತಿಷ್ಟಿತ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಬಂಧಗಳ ಪ್ರಕಟಣೆಯಂತಹ ಕಾರ್ಯಚಟುವಟಿಕೆಗಳು ಈ ನೀತಿಯ ಮೂಲಕ ನಡೆಯಲಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post