ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇದೊಂದು ಅಪೂರ್ವ ಸಂದರ್ಭ. ಆದರ್ಶ ಸಾಂಸ್ಕøತಿಕ ಕಾರ್ಯಕ್ರಮ. ಒಮ್ಮನಸ್ಸಿನ ಭಕ್ತಿ ದೇವರಿಗೆ ಬಹಳ ಪ್ರಿಯ. ದೇವರ ಪೂಜೆ-ಪುನಸ್ಕಾರ, ಸಂಸ್ಕಾರ, ಅತಿಥಿ ಸತ್ಕಾರ ಎಲ್ಲವೂ ಈಶ್ವರಪ್ಪ #K S Eshwarappa ಅವರ ಕುಟುಂಬದಲ್ಲಿ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಈ ಕುಟುಂಬ ಆದರ್ಶ ಕುಟುಂಬ ಎಂದು ಬೆಕ್ಕಿನ ಕಲ್ಮಠದ ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಅವರು ಇಂದು ಯುವ ಮುಖಂಡ ಕೆ.ಈ.ಕಾಂತೇಶ್ ಅವರ 45 ನೇ ಜನ್ಮ ದಿನದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕಾಂತೇಶ್ #Kantesh ಗೆಳೆಯರ ಬಳಗದ ವತಿಯಿಂದ ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ‘ಶುಭಾಶೀರ್ವಾದ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿದ್ದ ಶ್ರೀಗಳ ಪಾದಪೂಜೆ ಮತ್ತು 50 ವರ್ಷ ವೈವಾಹಿಕ ಜೀವನ ಪೂರೈಸಿದ ಹಿರಿಯ ದಂಪತಿಗಳಿಂದ ಕೆ.ಈ.ಕಾಂತೇಶ್ ಅವರಿಗೆ ಶುಭಾಶೀರ್ವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸಂದರ್ಭವನ್ನು ನೋಡಿದಾಗ ಮಹಾರಾಜರ ಪಟ್ಟಾಭಿಷೇಕ ನೆನಪಾಗುತ್ತದೆ ಎಂದರು.
ಹುಟ್ಟು ಹಬ್ಬ ಎನ್ನುವುದು ಕೇವಲ ನೆಪ ಮಾತ್ರ. ಕೆ.ಎಸ್.ಈಶ್ವರಪ್ಪ ಅವರ ಸೇವಾ ಕಾರ್ಯಗಳನ್ನು ನೋಡುತ್ತಾ ಬಂದಿದ್ದೇವೆ. ಮಠ, ಮಂದಿರ, ಶಾಲೆ, ಶಿಕ್ಷಣ ಸಂಸ್ಥೆಗಳಲ್ಲಿ ಬಹುಮುಖವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ. ಸಕ್ರಿಯವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡು ಬದಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಹಾರೈಸಿದರು.
ಕೂಡ್ಲಿ ಶ್ರೀ ಶೃಂಗೇರಿ ಸಂಸ್ಥಾನ ಮಠದ ಶ್ರೀ ಅಭಿನವ ಶಂಕರ ಭಾರತಿ ಮಹಾ ಸ್ವಾಮಿಗಳು ಆಶೀರ್ವಚನ ನೀಡಿ, ಕಾಂತೇಶ್ ಅವರ 45ರ ಜನ್ಮ ದಿನದ ಸಂಭ್ರಮಾಚರಣೆಯ ಹಿನ್ನೆಲೆ ಕೆಲವರು ಬೇರೆ ಬೇರೆ ರೀತಿಯಾದ ವಿಚಾರಗಳನ್ನು ತಲೆಯಲ್ಲಿಟ್ಟುಕೊಂಡು ಯಾರಾದರೂ ಗೌರವಿಸುವಾಗ ಅವರದೇನು? ಅವರಿಗೇಕೆ ಗೌರವ, ಎಲ್ಲರೂ ಮಾನವರೇ ಎನ್ನುತ್ತಾರೆ. ಆದರೆ ಒಬ್ಬ ಮಾನವ ಇನ್ನೊಬ್ಬ ಮಾನವನಿಗೆ ಗೌರವಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸೃಷ್ಟಿಕರ್ತರಿಗೆ ಮಾತ್ರ ದೇವರು ಎನ್ನುವುದಿಲ್ಲ. ನಾವು ಯಾರನ್ನು ಬೇಕಾದರೂ ಪೂಜಿಸಬೇಕು. ಯಾರು ಪೂಜ್ಯರು ಯಾರು ಅಪೂಜ್ಯರು ಎಂದು ತಿಳಿದುಕೊಳ್ಳಬೇಕು. ಸಮಾಜದಲ್ಲಿ ಯಾರು ಗೌರವನ್ನು ಪಡೆದುಕೊಂಡಿರುತ್ತರೂ ಅವರನ್ನು ಅನುಸರಿಸುವುದು ಸಮಾಜದ ಸಹಜ ಸ್ವಭಾವ. ನಾಯಕರಾದ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಈ.ಕಾಂತೇಶ್ ಕೂಡಾ ಅವರ ತಂದೆಯ ರೀತಿಯಲ್ಲಿಯೇ ಮುಂದುವರೆಯಲಿ ಎಂದು ಹೇಳಿದರು.
ಈಗಲೂ ಸಮಾಜ ಎನ್ನುವ ಸಾಮ್ರಾಜ್ಯ ಇದೆ. ಸಮಾಜ ಸೇವೆಯಲ್ಲಿರುವ ರಾಜರೆಂದರೆ ಅದು ಈಶ್ವರಪ್ಪ ಅವರು ಅವರ ಮಗ ಕಾಂತೇಶ್ ಯುವ ರಾಜ. ಅವರ 45 ರ ಜನ್ಮ ದಿನ ಪಟಾಭಿಷೇಕ ಇದ್ದಂತೆ. ಅವರ ತಂದೆಯವರು ಸಮಾಜ ಸೇವಾ ದೀಕ್ಷೆಯನ್ನು ನೀಡಿ, ಇಷ್ಟು ಜನರ ಸಾನಿಧ್ಯದಲ್ಲಿ ನೆರೆವೇರಿಸಿಕೊಟ್ಟಿದ್ದಾರೆ.
-ಬೆಕ್ಕಿನ ಕಲ್ಮಠ ಶ್ರೀ
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಈ ಒಂದು ಪವಿತ್ರ ಕಾರ್ಯಕ್ರಮದಲ್ಲಿ ಯತೀಂದ್ರ ರವರ ಸಮ್ಮುಖದಲ್ಲಿ ಆಶೀರ್ವಾದ ಪಡೆದಿರುವುದು ಹೆಮ್ಮೆಯ ವಿಷಯ. ಬದುಕು ಸಾರ್ಥಕತೆಯ ಹಾದಿಯಲ್ಲಿರುವ ವ್ಯಕ್ತಿಯನ್ನು ಸಾವಿರಾರು ವರ್ಷ ಸ್ಮರಿಸುತ್ತೇವೆ. ಕೆ.ಎಸ್.ಈಶ್ವರಪ್ಪ ಅವರು ಗೆಲುವು ಸೋಲುಗಳನ್ನು ಅನುಭವಿಸಿ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ದಾಂಪತ್ಯ ಜೀವನದಲ್ಲಿ ಬೇಕು ಬೇಡಗಳನ್ನು, ಗೆಲುವು ಸೋಲುಗಳನ್ನು, ಸಿಹಿ ಕಹಿಗಳನ್ನು ಉಂಡಂತಹ ದಂಪತಿಗಳ ಆಶೀರ್ವಾದ ಪಡೆದಿದ್ದಾರೆ. ಒಂದು ಮಾವಿನ ಹಣ್ಣು ಸಮೃದ್ಧ ಹಣ್ಣುಗಳಿಂದ ಕಂಗೊಳಿಸುತ್ತಿದ್ದರೆ. ಅದನ್ನು ನೋಡಿದ ಮನುಷ್ಯ ಪದೇ ಪದೇ ಕಲ್ಲು ಹೊಡೆದು ಹಣ್ಣು ಪಡೆದುಕೊಳ್ಳುತ್ತಿರುತ್ತಾನೆ. ಹಾಗೆಯೇ ಎಲ್ಲಿ ಒಳ್ಳೆಯತನ ಇರುತ್ತದೆಯೋ ಅಲ್ಲಿ ಪೆಟ್ಟು ಬೀಳುವುದು ಸಹಜ. ಅದನ್ನು ಎದುರಿಸು ನಾವು ಮುಂದೆ ಬೆಳೆಯಬೇಕು ಎಂದು ಹೇಳಿದರು.
Also read: ಕೋರ್ಟ್ ಆದೇಶದನ್ವಯ ಮೊಹಮ್ಮದ್ ಸಮೀರ್ ವೀಡಿಯೋ ಡಿಲೀಟ್
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಯುವಕರ ನೇತರ ಯುವಕರ ಕಣ್ಮಣಿ ಕೆ.ಈ.ಕಾಂತೇಶ್ ಅವರ ಜನ್ಮ ದಿನಾಚರಣೆಯನ್ನು ಕೆ.ಈ.ಕಾಂತೇಶ್ ಗೆಳೆಯರ ಬಳಗದ ವತಿಯಿಂದ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ. ಕೆ.ಎಸ್.ಈಶ್ವರಪ್ಪ ಅವರ ಯಾವುದೇ ಕಾರ್ಯಕ್ರಮದಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ. ಕೆ.ಎಸ್.ಈಶ್ವರಪ್ಪ ಅವರು ಉಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮಠಗಳಿಗೆ ಕಾಯಕಲ್ಪ ಕೊಡುವಲ್ಲಿ ಮುಂಚೂಣಿಯಲ್ಲಿದ್ದರು. ಅವರು ನೆನೆಪುಳಿಯುವ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನೂ ಒದಗಿಸುವ ಕಾರ್ಯಕ್ರಮ ಮಾಡಿದ್ದಾರೆ. ನಮ್ಮೆಲ್ಲರ ಮಠಗಳಿಗೆ
ಕೋಟಿ ಕೋಟಿ ಅನುದಾನಗಳನ್ನು ಪಡೆದು ಸೌಲಭ್ಯ ಒದಗಿಸಿದ್ದಾರೆ. ಧಾರ್ಮಿಕ ಪೀಠಕ್ಕೆ ಸಹಕಾರ ನೀಡಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳುತ್ತಾರೆ ಎನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ರಾಜಕೀಯ ಏರುಪೇರುಗಳನ್ನು ಸಮಚಿತ್ತವಾಗಿ ತೆಗೆದುಕೊಂಡಿದ್ದಾರೆ. ರಾಜಕೀಯವಾಗಿ ನಿರಂತರ ಹೋರಾಟ ಅವರದಿರುತ್ತದೆ. ಅವರು ಬೆಳೆದುಕೊಂಡು ಬದಿರುವ ಹಿನ್ನೆಲೆ ಸಂಸ್ಕಾರ. ವೈಭೋಗದ ಆಡಂಬರದ ಹುಟ್ಟುಹಬ್ಬಕ್ಕಿಂತ ಈ ರೀತಿಯ ಅರ್ಥಪೂರ್ಣ ಹುಟ್ಟುಹಬ್ಬವನ್ನು ಎಲ್ಲರೂ ಅನುಸರಿಸಬೇಕು ಎಂದರು.
ಚಿಕ್ಕಮಗಳೂರು ಬಸವ ತತ್ವ ಪೀಠ, ಶಿವಮೊಗ್ಗ ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿ, ಕಾಂತೇಶ್ ಹುಟ್ಟು ಹಬ್ಬ ಕೇವಲ ನೆಪ ಮಾತ್ರ. ಎಲ್ಲಾ ಹಿರಿಯರ ಆಶೀರ್ವಾದ ಪಡೆಯುವುದು ಬಹಳ ವಿಶೇಷವಾದ ಕಾರ್ಯಕ್ರಮ. 50 ವರ್ಷ ಪೂರೈಸಿದ ಹಿರಿಯ ದಂಪತಿಗಳಿಗೆ ಗೌರವಿಸಿದ್ದಾರೆ. ತಂದೆ ಹಾದಿಯಲ್ಲಿ ಹೋಗುತ್ತಿರುವ ಕಾಂತೇಶ್ ಅವರು ತಂದೆಗೆ ತಕ್ಕ ಮಗ ಎಂದರು.
ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಚೇತನ್ ಮಾತನಾಡಿ, ಯಾವ ಸಮಾಜವನ್ನು ಕಟ್ಟಬೇಕೆಂದು ಹೋರಾಟ ಮಾಡುತ್ತಿದ್ದೆವು ಅಂತಹ ಸಮಾಜವನ್ನು ಕಣ್ಣಮುಂದೆ ನೋಡಿದಂತಹ ಸಂದರ್ಭ ಇದು. ನಮ್ಮ ದೇಶದಲ್ಲಿ ಹುಟ್ಟುಹಬ್ಬವನ್ನು ಒಂದು ರೀತಿಯ ಹಬ್ಬದ ರೀತಿಯಲ್ಲಿಯೇ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಎಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ಕಾಂತೇಶ್ ಅವರು ತಂದೆಯ ಹಾದಿಯಲ್ಲಿಯೇ ಸಾಗಲಿ. ಹೆಚ್ಚು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಕೆ.ಎಸ್.ಈಶ್ವರಪ್ಪ ಅವರ ಕುಟುಂಬ ಹೀಗೆ ಮುಂದುವರೆಯಲಿ ಎಂದು ಕಾಂತೇಶ್ ಅವರಿಗೆ ಶುಭ ಹಾರೈಸಿದರು.
ಪ್ರಾಸ್ತಾವಿಕ ಮಾತನಾಡಿದ ಮಹಾಲಿಂಗಯ್ಯ ಶಾಸ್ತ್ರಿ, ಇವತ್ತಿನ ದಿನ ದಾಂಪತ್ಯ ಎನ್ನುವಂತಹದ್ದು ಮದುವೆ ಆಗಿ 2-3 ವರ್ಷಗಳಲ್ಲಿ ವಿಚ್ಚೇದನ ಆಗುವಂತೆ ಅಗಿದೆ. ಈ ಜನ್ಮದಿನ ಸಂಭ್ರಮದಲ್ಲಿ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೀವನದಲ್ಲಿ ಒಂದು ಬಾರಿ ಮಾತ್ರ ಮದುವೆ ಆಗುವುದು. ಅತ್ಯಮೂಲ್ಯ ಕ್ಷಣ ಇದು. ಅದನ್ನು ಜೀವನದುದ್ದಕ್ಕೂ ಕಾಪಾಡಿಕೊಂಡು ಹೋಗಬೇಕು. ಪ್ರಸ್ತುತ ಕೆ.ಈ.ಕಾಂತೇಶ್ ಅವರ ಹೆಸರು ಶಿವಮೊಗ್ಗದಲ್ಲಿ ಮನ್ನಣೆಯಲ್ಲಿದೆ. ಅವರು ಇಷ್ಟು ದಿನ ಎಲೆಮರೆ ಕಾಯಿಯಂತೆ ಇದ್ದರು. ಈಗ ಕೆ.ಈ.ಕಾಂತೇಶ್ ಅವರು ಜನ ಸೇವೆ ಮಾಡುತ್ತಿದ್ದಾರೆ. 45 ವರ್ಷ ಪೂರೈಸಿ ಪೂಜ್ಯರಿಂದ ಆಶೀರ್ವಾದ ತೆಗೆದುಕೊಳ್ಳಲಿದ್ದಾರೆ. ಇಷ್ಟೊಂದು ಸ್ವಾಮೀಜಿಗಳಿಂದ ಆಶೀರ್ವಾದ ಪಡೆಯುತ್ತಿರುವ ಅವರೇ ಧನ್ಯರು ಎಂದರು.
ಈ ಸಂದರ್ಭದಲ್ಲಿ 45 ರ ಸಂಭ್ರಮದಲ್ಲಿರುವ ಕೆ.ಈ.ಕಾಂತೇಶ್ ಅವರ ಜನ್ಮ ದಿನಾಚರಣೆಯ ನಿಮಿತ್ತ ಕೆ.ಈ. ಕಾಂತೇಶ್ ದಂಪತಿಗಳು ಶ್ರೀಗಳಿಗೆ ಪಾದ ಪೂಜೆ ನೆರವೇರಿಸಿದರು. ಹಾಗೂ 50 ವರ್ಷ ಪೂರೈಸಿದ ಹಿರಿಯರಿಂದ ಶುಭಾಶೀರ್ವಾದ ಪಡೆದರು. ರಾಷ್ಟ್ರೀಯ ಸ್ವಯಂಸೇವಕರಾದ ಲೋಕೇಶ್, ಚೇತನ್ ಅವರಿಗೆ ಗೌರವಿಸಲಾಯಿತು.
ದಾಸೋಹ ಟ್ರಸ್ಟ್ ವತಿಯಿಂದ ಪುಸ್ತಕ ಬಿಡುಗಡೆ ನೆರವೇರಿತು. ಆಗಮಿಸಿದ ಎಲ್ಲ ದಂಪತಿಗಳಿಗೆ ಪುಸ್ತಕ ಮತ್ತು ಶ್ರೀ ರಾಮ ರಕ್ಷೆಯನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಹೊಸದುರ್ಗ ಶಾಖಾ ಮಠದ ಕಾಗಿನೆಲೆ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ. ಡಾ. ಮಹಾಂತ ಸ್ವಾಮೀಜಿ, ಹಿರೇಮಠ ಬಿಳಕಿಯ ಶ್ರೀ ಷ.ಬ್ರ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಹಿರೇಮಠದ ಶ್ರೀ ಷ.ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಬ್ರಹ್ಮಕುಮಾರಿ ಸಂಸ್ಥೆಯ ಬ್ರಹ್ಮಕುಮಾರಿ ಅನಸೂಯ ಅಕ್ಕನವರು, ಆರ್.ಎಸ್.ಎಸ್.ನ ವಿಭಾಗ ಕಾರ್ಯವಾಹಕ ಗಿರೀಶ್ ಕಾರಂತ್, ಚೇತನ್.ಜಿ, ಲೋಕೇಶ್, ಕೆ.ಎಸ್.ಈಶ್ವರಪ್ಪ ಅವರ ಕುಟುಂಬದವರು ಹಾಗೂ ಗುರು ಹಿರಿಯರು, 50 ವರ್ಷ ಪೂರೈಸಿದ ದಂಪತಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೆ.ಈ.ಕಾಂತೇಶ್ ಪುತ್ರಿ ಸಿಂಧು ಪ್ರಾರ್ಥನೆ ಮಾಡಿದರು. ಈ.ವಿಶ್ವಾಸ್ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post