ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನವನ ಜೀವನವೆಂದರೆ ಒಂದು ಅರ್ಥಪೂರ್ಣ ಪ್ರಯಾಣ. ಈ ಪ್ರಯಾಣದಲ್ಲಿ ಪ್ರತಿಯೊಬ್ಬರೂ ಒಂದೇ ವಿಷಯವನ್ನು ಹುಡುಕುತ್ತಿದ್ದಾರೆ ಅದು “ಆನಂದ”. ಆದರೆ ಈ ಆನಂದವನ್ನು ನಾವು ಹೊರಗಿನ ಜಗತ್ತಿನಲ್ಲಿ ಹುಡುಕುತ್ತೇವೆ. ಹಣದಲ್ಲಿ, ಸಂಬಂಧಗಳಲ್ಲಿ, ಪದವಿಯಲ್ಲಿ ಅಥವಾ ಯಶಸ್ಸಿನಲ್ಲಿ ಅದು ಸಿಗುತ್ತದೆ ಎಂದು ಭಾವಿಸುತ್ತೇವೆ. ಆದರೂ ಏನೋ ಒಂದು ಕೊರತೆ, ಅಸಮಾಧಾನ ನಮ್ಮೊಳಗೆ ಉಳಿಯುತ್ತದೆ. ಇದಕ್ಕೆ ಕಾರಣ, ನಿಜವಾದ ಆನಂದವು ಹೊರಗಿಲ್ಲ, ಅದು ನಮ್ಮೊಳಗಿನ ಆತ್ಮದಲ್ಲಿ ಅಡಗಿದೆ ಎಂಬ ಸತ್ಯವನ್ನು ನಾವು ಮರೆತಿದ್ದೇವೆ ಎಂದು ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಜ್ಞಾನ ಕ್ಷೇತ್ರದ ಬೆಂಗಳೂರು ಆಶ್ರಮದ ಸಾಧ್ವಿ ಶುಭಕರಿ ಜೀ ನುಡಿದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಹಾಗೂ ನಮ್ಮ ಯೋಗ ಕುಟುಂಬ ಇವರ ಆಶ್ರಯದಲ್ಲಿ ರವಿಶಂಕರ ಗುರೂಜೀಯವರ ಜನ್ಮೋತ್ಸವ ಹಾಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ಸಂಭ್ರಮಾಚರಣೆ ಅಂಗವಾಗಿ ಏರ್ಪಡಿಸಿದ್ದ 3 ದಿನಗಳ ಆನಂದ ಅನುಭೂತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ನಾನು ದೇಹವಲ್ಲ, ನಾನು ಶಾಶ್ವತ ಆತ್ಮ” ಎಂಬ ಜ್ಞಾನವು ವ್ಯಕ್ತಿಯನ್ನು ನಿಜವಾದ ಧೈರ್ಯಶಾಲಿಯನ್ನಾಗಿ ಮಾಡುತ್ತದೆ. ಇದೇ ಮೃತ್ಯುವನ್ನು ಜಯಿಸುವುದಾಗಿದೆ. ಜೀವನದ ಗುರಿ ಎಂದರೆ ಕೇವಲ ಬದುಕುವುದಲ್ಲ, ಸಂತೋಷದಿಂದ, ಶಾಂತಿಯಿಂದ ಮತ್ತು ಪ್ರೀತಿಯಿಂದ ಬದುಕುವುದು. ಇದನ್ನು ಸಾಧಿಸಲು ಆರೋಗ್ಯಕರ ಮನಸ್ಸು ಅತ್ಯಂತ ಮುಖ್ಯ. ಉಸಿರಾಟದ ಸರಿಯಾದ ಲಯ, ಪ್ರಾಣಾಯಾಮ, ಧ್ಯಾನ ಮತ್ತು ಸಾತ್ವಿಕ ಜೀವನಶೈಲಿ ಮನಸ್ಸನ್ನು ಶುದ್ಧಗೊಳಿಸುತ್ತವೆ ಎಂದರು.
ಪ್ರೀತಿ, ಶಾಂತಿ, ಆನಂದ ಇವುಗಳು ನಮ್ಮ ಸ್ವಭಾವವಾಗುತ್ತವೆ. ಹೊರಗಿನ ಪರಿಸ್ಥಿತಿಗಳು ಹೇಗಿದ್ದರೂ, ಒಳಗಿನ ಸಮತೋಲನ ಕಾಪಾಡಿಕೊಳ್ಳುವ ಶಕ್ತಿ ನಮಗೆ ಬರುತ್ತದೆ. ಆದುದರಿಂದ, ಆನಂದವನ್ನು ಹೊರಗೆ ಹುಡುಕುವ ಬದಲು ನಮ್ಮೊಳಗೆ ತಿರುಗಿ ನೋಡುವುದು ಮುಖ್ಯ. ಸಾಧನೆ, ಜ್ಞಾನ ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಿದರೆ ಜೀವನವು ಸುಂದರವಾದ ಯಾತ್ರೆಯಾಗುತ್ತದೆ. ಪ್ರತಿಯೊಂದು ಕ್ಷಣವೂ ಪೂರ್ಣತೆಯ ಅನುಭವವನ್ನು ನೀಡುತ್ತದೆ ಎಂದರು.
ಶಿಬಿರದಲ್ಲಿ 30ಕ್ಕಿಂತ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ತನ್ಮೂಲಕ ಆನಂದದ ಅನುಭೂತಿಯ ದಿವ್ಯಾನುಭವವನ್ನು ಪಡೆದರು,ಶಿಬಿರ ಆಯೋಜನೆಯಲ್ಲಿ ಪ್ರಮುಖವಾಗಿ ಗಿರಿರಾಜ್, ಹೊನ್ನಪ್ಪ, ಮೋಹನಮೂರ್ತಿ ಪ್ರಮುಖ ಪಾತ್ರ ವಹಿಸಿದರು. ಆರ್ಟ್ ಆಫ್ ಲಿವಿಂಗ್ ಹಿರಿಯ ಶಿಕ್ಷಕರಾದ ಚಂದ್ರಹಾಸ್ ಹಾಗೂ ಶಬರೀಶ್ ಕಣ್ಣನ್ ಶಿಬಿರಾರ್ಥಿಗಳಿಗೆ ವಿಶೇಷ ತರಬೇತಿ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















