ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕ್ಷಣ ಕ್ಷೇತ್ರದ ಲೋಪದೋಷಗಳನ್ನು ಸರಿಪಡಿಸಿ ಜಾಗತಿಕಮಟ್ಟದ ವಿದ್ಯಾರ್ಥಿಕೇಂದ್ರಿತ ಶಿಕ್ಷಣ ಒದಗಿಸುವ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ ಅವರು ಹೇಳಿದರು.
ಅವರು ಬುಧವಾರ ಸಹ್ಯಾದ್ರಿ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮೂರು ದಶಕಗಳ ಬಳಿಕ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ. ಜಗತ್ತಿನ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಗಳ ಅತ್ಯುತ್ತಮ ಶಿಕ್ಷಣ ವಿಧಾನಗಳನ್ನು ಅಳವಡಿಸಿಕೊಂಡಿರುವ ಈ ನೂತನ ಶಿಕ್ಷಣ ನೀತಿ, ಇದರ ಪ್ರಯೋಜನ ದೇಶದ ಎಲ್ಲ ವರ್ಗಗಳ ವಿದ್ಯಾರ್ಥಿಗಳಿಗೂ ತಲುಪಿಸುವ ಸದಾಶಯ ಹೊಂದಿದೆ ಎಂದರು.
ಶಿಕ್ಷಣದ ಮೂಲಕ ಮಾತ್ರ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಪ್ರಬಲ ಸ್ಪರ್ಧೆಯಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಜಾಗತಿಕ ಮಟ್ಟದ ಶಿಕ್ಷಣ ಮತ್ತು ಕೌಶಲ್ಯಗಳ ಅಗತ್ಯವಿದ್ದು, ನೂತನ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿದೆ ಎಂದು ಹೇಳಿದರು.
ನೂತನ ಶಿಕ್ಷಣ ನೀತಿಯು ಶಿಕ್ಷಣ ಸಂಸ್ಥೆಗಳಿಗೆ ಜವಾಬ್ದಾರಿಯೊಂದಿಗೆ ಸಂಪೂರ್ಣ ಅಧಿಕಾರವನ್ನು ನೀಡುತ್ತದೆ. ಪ್ರತಿಯೊಂದು ಸಂಸ್ಥೆ ಸ್ವಾಯತ್ತತೆಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಖಾಸಗಿ ಸಂಸ್ಥೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ. ಕೇವಲ ಮೂಲಭೂತ ಸೌಕರ್ಯಗಳು ಮಾತ್ರವಲ್ಲದೆ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವುದು, ಅಹವಾಲುಗಳನ್ನು ಸರಿಯಾಗಿ ಆಲಿಸಲು ವೇದಿಕೆಗಳನ್ನು ಕಲ್ಪಿಸಬೇಕಾಗಿದೆ. ಪ್ರತಿಯೊಂದು ಸಂಸ್ಥೆಗಳು ಪಡೆಯುವ ಶುಲ್ಕದ ವಿವರಗಳೂ ಸಹ ಸಾರ್ವಜನಿಕವಾಗಿ ಲಭ್ಯವಿರಬೇಕಾಗಿದೆ ಎಂದರು.
ಕೊನೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಸಭೀಕರ ಪ್ರಶ್ನೆಗಳಿಗೆ ಉತ್ತರಿಸಿದರು. ಹೊಸ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿಲ್ಲ. ಕಳೆದ ಏಳು ವರ್ಷಗಳ ಸತತ ಪರಿಶ್ರಮದ ಬಳಿಕ ನೂತನ ಶಿಕ್ಷಣ ನೀತಿಯನ್ನು ರೂಪುಸಲಾಗಿದ್ದು, ಕಳೆದ ಒಂದು ವರ್ಷದಲ್ಲಿ ಸಂಪೂರ್ಣ ಪೂರ್ವ ತಯಾರಿಯನ್ನು ಮಾಡಿದ ನಂತರವಷ್ಟೇ ಅನುಷ್ಠನಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಮುಂದಿನ 10ರಿಂದ 15ವರ್ಷಗಳ ಅವಧಿಯಲ್ಲಿ ಹೊಸ ಶಿಕ್ಷಣ ನೀತಿಯ ಪರಿಣಾಮಗಳನ್ನು ಗುರುತಿಸಲು ಸಾಧ್ಯವಿದೆ. ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿಗೆ ತಂದಿರುವ ಪ್ರಥಮ ರಾಜ್ಯವಾಗಿದ್ದು, ಇದನ್ನು ಸಮರ್ಪಕವಾಗಿ ಜಾರಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಗುರುತಿಸಿ ಅದರ ವಿಕಸನಕ್ಕೆ ಅವಕಾಶ ಕಲ್ಪಿಸಲು ನೂತನ ಶಿಕ್ಷಣ ನೀತಿಯಿಂದ ಸಾಧ್ಯವಿದೆ. ಶಿಕ್ಷಣವು ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ನೈತಿಕತೆಯನ್ನೂ ಕಲಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲಸಚಿವೆ ಜಿ. ಅನುರಾಧ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಷಿ, ಪ್ರೊ. ಸಿ. ಎಂ. ತ್ಯಾಗರಾಜ್, ಡಾ. ಧನಂಜಯ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post