ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಹುಲ್‌ಗಾಂಧಿ #Rahul Gandhi ನಮ್ಮ ದೇಶದ ವಿರೋಧಿಗಳ ನಾಯಕರಂತೆ ವರ್ತಿಸುತ್ತಿದ್ದು, ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾದ ಬಗ್ಗೆ ಒಳ್ಳೆಯ ಮಾತನಾಡುತ್ತಾರೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ದೇಶವನ್ನೇ ಅವಹೇಳನಕಾರಿಯಾಗಿ ಬಿಂಬಿಸುತ್ತಾರೆ. ಇದು ದೇಶಕ್ಕೆ ಮಾಡಿದ ಅವಮಾನ ಎಂದು ರಾಜ್ಯ ಬಿಜೆಪಿ ವಕ್ತಾರ ಮೋಹನ್ ವಿಶ್ವ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸಂಸತ್‌ನಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕರಾದ ರಾಹುಲ್‌ಗಾಂಧಿಯವರು ದೇಶದ ಪ್ರಶ್ನೆ ಬಂದಾಗ ದೇಶವಿರೋಧಿ ಹೇಳಿಕೆ ನೀಡುತ್ತಿರುವುದು ವಿಪರ್ಯಾಸವಾಗಿದೆ. ಸಂಸತ್‌ನಲ್ಲಿ ಸಂವಿಧಾನದ ಬಗ್ಗೆ ಮಾತನಾಡುವ ಅವರು, ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಾರೆ. ಮೀಸಲಾತಿ ತೆಗೆದುಹಾಕುತ್ತೇವೆ ಎಂದು ಹೇಳುತ್ತಾರೆ. ಅವರ ಅಜ್ಜ ಮಾಜಿ ಪ್ರಧಾನಿ ನೆಹರು, ಅಜ್ಜಿ ಇಂದಿರಾಗಾAಧಿ ಹಾಗೂ ಅವರ ತಂದೆ ರಾಹುಲ್‌ಗಾಂಧಿ ಕೂಡ ಮೀಸಲಾತಿ ವಿರೋಧಿಗಳಾಗಿದ್ದರು. ಅಂಬೇಡ್ಕರ್ ಅವರಿಗೆ ತೊಂದರೆ ನೀಡುತ್ತ ಬಂದ ಪಕ್ಷ ಕಾಂಗ್ರೆಸ್. ದಲಿತರನ್ನು ಕೇವಲ ಓಟ್ ಬ್ಯಾಂಕಾಗಿ ಕಾಂಗ್ರೆಸ್ ಬಳಸಿಕೊಂಡು ಬಂದಿದೆ ಎಂದರು.
1955ರಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕಾಂಗ್ರೆಸ್ ಮೀಸಲಾತಿ ವಿರೋಧಿಸಿತ್ತು. ಓಬಿಸಿಗಳಿಗೆ ಅನ್ಯಾಯ ಮಾಡಿತ್ತು. ಈಗ ಮತ್ತೆ ರಾಹುಲ್‌ಗಾಂಧಿ ಹೇಳಿಕೆಯನ್ನು ಬಿಜೆಪಿ ಕಠಿಣವಾಗಿ ಖಂಡಿಸುತ್ತದೆ. ಇದೇ ರೀತಿ ಅವರ ದ್ವಂದ್ವ ಹೇಳಿಕೆಗಳು ಮುಂದುವರೆದರೆ ಬಿಜೆಪಿ ದೇಶದಾದ್ಯಂತ ಪ್ರತಿಭಟನೆ ಮಾಡಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಬೆಲೆಏರಿಕೆ , ಭ್ರಷ್ಟಚಾರ, ಮೇಲಿಂದ ಮೇಲೆ ಹಗರಣಗಳು, ವರ್ಗಾವಣೆಯ ದಂಧೆ ನಡೆಯುತ್ತಿದೆ. ದಲಿತರಿಗಾಗಿ ಮೀಸಲಿಟ್ಟ 24.500 ಸಾವಿರ ಕೋಟಿಯನ್ನು ಗ್ಯಾರಂಟಿಗಾಗಿ ವರ್ಗಾಯಿಸಿದೆ. ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದಾರೆ. ತಮ್ಮ ಹಳೇ ಚಾಳಿಯನ್ನು ಕಾಂಗ್ರೆಸ್ ಮುಂದುವರೆಸಿದೆ. ರಾಹುಲ್‌ಗಾಂಧಿ ದೇಶದ ಜನರ ಕ್ಷಮೆ ಕೇಳಬೇಕು ಎಂದರು.
Also read: ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ
ನಾಗಮಂಗಲ ಗಣೇಶೋತ್ಸವದಲ್ಲಿ ನಡೆದ ಕೋಮು ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಳೆದ 14 ತಿಂಗಳಿಂದ ಋಣ ಸಂದಾಯ ರಾಜಕಾರಣ ಮಾಡುತ್ತಿದೆ. ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಕೋರರನ್ನು ರಕ್ಷಿಸುವ ಕಾರ್ಯ ಮಾಡಿದೆ. ಗಣಪತಿ ಮೆರವಣ ಗೆಯ ಮೇಲೆ ಕಲ್ಲು ತೂರಿ ತಲ್ವಾರ್ ಝಳಪಿಸಿದವರನ್ನು ಬಿಟ್ಟು ಗಣೇಶ ಮಂಡಳಿಯವರನ್ನೇ ಠಾಣೆಗೆ ಕರೆದೊಯ್ದಿದ್ದಾರೆ. ಈ ರೀತಿಯ ಹಿಂದೂ ವಿರೋಧಿ ಹಾಗೂ ಒಂದು ವರ್ಗದ ಓಲೈಕೆ ರಾಜಕಾರಣ ಮುಂದುವರೆಸಿದರೆ ಜನ ತಕ್ಕ ಪಾಠ ಕಲಿಸುತ್ತಾರೆ. ಬೇರೆ ವರ್ಗಗಳಿಗೆ ಇಲ್ಲದ ನಿರ್ಬಂಧ ಹಿಂದೂ ಹಬ್ಬಗಳಿಗೆ ಮಾತ್ರ ಯಾಕೆ? ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ. ಶ್ರೀನಾಥ್, ಹರಿಕೃಷ್ಣ ಹಾಗೂ ರಾಜ್ಯ ಮಾಧ್ಯಮ ಸದಸ್ಯರಾದ ವಿಜಯೇಂದ್ರ, ಪ್ರಮುಖರಾದ ಅಣ್ಣಪ್ಪ, ಚಂದ್ರಶೇಖರ್, ಶ್ರೀನಾಗ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post