ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾಮಿ ವಿವೇಕಾನಂದರ ಪರಮ ಶಿಷ್ಯೆಯಾಗಿದ್ದ ಸೋದರಿ ನಿವೇದಿತಾ ಅವರ ದೇಶ ಭಕ್ತಿ, ಸಾಮಾಜಿಕ ಸೇವಾ ಮನೋಭಾ ಇತ್ಯಾದಿ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ನಗರದ ಕಮಲಾ ನೆಹರು ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಡಾ.ಎಚ್.ಎಸ್.ನಾಗಭೂಷಣ ತಿಳಿಸಿದರು.
ಅವರು ಇಂದು ತಮ್ಮ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯು ಐಕ್ಯೂಎಸಿ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಸೋದರಿ ನಿವೇದಿತಾರ ಜನ್ಮ ದಿನಾಚರಣೆ ಹಾಗೂ ನಿವೇದನಾ ಸೇವಾ ಇಂಟನ್೯ಷಿಪ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸೋದರಿ ನಿವೇದಿತಾ ಅವರು ಯುನೈಟೆಡ್ ಕಿಂಗ್ನಡಂನ ಐರ್ಲೆಂಡಿನಲ್ಲಿ ಜನಿಸಿದರೂ ಭಾರತೀಯ ಸಂಸ್ಕೃತಿ, ಭಾರತೀಯರ ಹೃದಯ ವೈಶಾಲ್ಯತೆಗೆ ಮಾರುಹೋಗಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಜನ್ಮ ನಾಮ ಮಾರ್ಗರೇಟ್ ನೋಬೆಲ್ ಆಗಿದ್ದ ಇವರಿಗೆ ಸ್ವಾಮಿ ವಿವೇಕಾನಂದರು ನಿವೇದಿತಾ ಎಂದು ನಾಮಕರಣ ಮಾಡಿ ಧೀಕ್ಷೆ ನೀಡಿದರು ಎಂದು ವಿವರಿಸಿದರು.
ಕೇವಲ ಭಾರತದ ಆಧ್ಯಾತ್ಮ, ಸಾಮಾಜಿಕ ವೈಶಾಲ್ಯತೆ ಅಲ್ಲದೆ ದೇಶದ ಸ್ವಾತಂತ್ರ್ಯ ಚಳವಳಿಯಲ್ಲೂ ಸಕ್ರಿಯವಾಗಿ ಹೋರಾಟ ಮಾಡಿದವರು ನಿವೇದಿತಾ ಎಂದು ಬಣ್ಣಿಸಿದರು.
ನಮ್ಮ ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಇಂದು ಸೋದರಿ ನಿವೇದಿತಾ ಅವರ ಜನ್ಮ ದಿನ ಆಚರಿಸುತ್ತಿರುವುದು ನಿಜಕ್ಕೂ ಇಂದಿನ ಯುವಜನತೆಗೆ ಪ್ರೇರಣಾದಾಯಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರತಿಷ್ಠಾನದ ವಿದ್ಯಾ ರಾಘವೇಂದ್ರ, ಮಮತಾ, ಶ್ರೀಮತಿ ಮಂಜುಳಾ ಎನ್ ಮತ್ತಿತರರಿದ್ದರು. ಕು.ಸತ್ಯವತಿ ಬಿ.ಸ್ವಾಗತಿಸಿದರು. ಕು.ನಾಗವೇಣಿ ಎನ್.ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನಿವೇದಿತಾ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ ಏರ್ಪಡಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post