ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜನ್ಮಕ್ಕೆ ಕಾರಣನಾದ ಪಾಪಿ ತಂದೆಯೊಬ್ಬ ತನ್ನ ಮಗಳ ಮೇಲೆಯೇ ಒಂದಲ್ಲ ಎರಡಲ್ಲ, ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಹೌದು… ತಂದೆ ಮಗಳ ಸಂಬಂಧ ಎಂದರೆ ಅದು ಅತ್ಯಂತ ಪವಿತ್ರ ಹಾಗೂ ಬೆಲೆ ಕಟ್ಟಲಾಗದ ಅನುಬಂಧ. ಆದರೆ, ಶಿವಮೊಗ್ಗ ತಾಲೂಕಿನ ಗೊಂವಿದಪುರದ ನೀಚ ವ್ಯಕ್ತಿಯೊಬ್ಬ ತಾನು ಜನ್ಮಕೊಟ್ಟ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಲಿಂಗಾಪುರ ಗ್ರಾಮದ ಶುಂಠಿ ವ್ಯಾಪಾರಿ ಗೋಣಪ್ಪ (45) ಎನ್ನುವ ಪರಮಪಾಪಿಯೇ ಮಗಳನ್ನೇ ಅತ್ಯಾಚಾರ ಮಾಡಿದ ಆರೋಪಿ.
ಈತನಿಗೆ ಒಬ್ಬಳೇ ಮಗಳು ಹಾಗೂ ಇಬ್ಬರು ಗಂಡು ಮಕ್ಕಳು. ತನ್ನ ಪತಿ ಮಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ ತಾಯಿ ಅಸಹಾಯಕ ಸ್ಥಿತಿಯಲ್ಲಿದ್ದಳು. ಆಗ, ತಂದೆಯಿಂದ ಮಗಳನ್ನು ಪಾರು ಮಾಡಲು ಪ್ಲಾನ್ ಮಾಡಿದ ತಾಯಿ, ಆಕೆಗೊಂದು ಗಂಡು ಹುಡುಕಿ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದಳು. ಈಗಷ್ಟೇ ಮಗಳ ವಯಸ್ಸು 18 ತುಂಬಲಿರುವುದರಿಂದ ಮದುವೆಗೆ ಸಿದ್ಧತೆ ನಡೆಸಿದ್ದಳು.
ಯಾವಾಗ ಎಂಗೇಜ್ ಮೆಂಟ್ ಆಯಿತೋ ಪಾಪಿ ತಂದೆ ಕೆರಳಿದ್ದ. ಅತನನ್ನು ಮದುವೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಮಗಳಿಗೆ ಹೆದರಿಸಿದ್ದ. ತಂದೆಯ ದುಷ್ಟತನದ ವರ್ತನೆಯಿಂದ ಮಗಳು ಕಣ್ಣೀರಿಟ್ಟಿದ್ದಳು. ಗಂಡ ಮಗಳನ್ನು ಬಿಡುವುದಿಲ್ಲ ಎಂದು ಗೊತ್ತಾದ ತಾಯಿ ಕೊನೆಗೊಂದು ಕಠಿಣ ನಿರ್ಧಾರ ಕೈಗೊಂಡಿದ್ದಳು.
ಮಗಳೊಂದಿಗೆ ತನ್ನಿಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ತವರು ಮನೆ ಶಿವಮೊಗ್ಗಕ್ಕೆ ಬಂದಿದ್ದಳು. ಆದರೆ ಹೆತ್ತಮ್ಮನ ಮನೆಗೆ ಹೋಗದ ತಾಯಿ ಮಕ್ಕಳೊಂದಿಗೆ ಅತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿಯೇ ಬಿಟ್ಟಿದ್ದಳು.ಸಾಯುವ ಮುನ್ನ ತನ್ನಕ್ಕ ಚಂದ್ರಮ್ಮಳ ಮೊಬೈಲ್ ಗೆ ಕರೆ ಮಾಡಿ ಹೆತ್ತಪ್ಪನ ಅತ್ಯಾಚಾರದ ಸಂಪೂರ್ಣ ಕಥೆ ವಿವರಿಸಿದ್ದಳು. ತಮಗೆ ಇದರಿಂದ ಬಿಡುಗಡೆಯಾಗಲು ಸಾವೇ ಗತಿ ಎಂದು ತನ್ನ ನಿರ್ಧಾರ ತಿಳಿಸಿದ್ದಳು.
ಅಕ್ಕ ಚಂದ್ರಮ್ಮ ತಂಗಿಯನ್ನು ಸಂತೈಯಿಸಿ ಹೀಗೊಂದು ನಿರ್ಧಾರ ಕೈ ಬಿಡುವಂತೆ ಮಾಡಿದ್ದಳು. ಆಕೆಯ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಳು. ಶಿವಮೊಗ್ಗ ತಾಲೂಕಿನ ಗೊಂವಿದಪುರ ಗ್ರಾಮದ ತವರು ಮನೆಯಲ್ಲಿ ಪಾಪಿ ತಂದೆಯನ್ನು ಹೆಡೆಮುರಿ ಕಟ್ಟುವ ಪ್ಲಾನ್ ನಡೆಯಿತು. ಅಂದುಕೊಂಡಂತೆ ಹೆಂಡತಿ ಮಕ್ಕಳು ಕಾಣುತ್ತಿಲ್ಲ ಎಂದು ಹೆಂಡತಿಯ ಅಕ್ಕನಿಗೆ ಗೋಣಪ್ಪ ಕರೆ ಮಾಡಿದ್ದ. ಊರಿಗೆ ಬಂದು ಕರೆಕೊಂಡು ಹೋಗುವಂತೆ ಅಕ್ಕ ತಿಳಿಸಿದ್ದಳು.
ಹೀಗೆ, ಪತ್ನಿಯ ತವರಿಗೆ ಬಂದ ಪಾಪಿ ಗಂಡ ಗೋಣಪ್ಪನಿಗೆ ತವರಿನ ಗ್ರಾಮಸ್ಥರು ಧರ್ಮದೇಟು ನೀಡಿದ್ದರು. ಮನೆಯಲ್ಲಿ ಕೂಡಿ ಹಾಕಿ ಪೋಲಿಸರ ವಶಕ್ಕೊಪ್ಪಿಸಿದ್ದರು. ಇದೀಗ ಶಿವಮೊಗ್ಗದ ಮಹಿಳಾ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್’ಐಆರ್ ದಾಖಲಾಗಿದೆ. ಪಾಪಿ ತಂದೆಯನ್ನು ಜೈಲಿಗೆ ಕಳುಹಿಸಲು ಪೋಲಿಸರು ಮುಂದಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post