ಕಲ್ಪ ಮೀಡಿಯಾ ಹೌಸ್ | ಸೊರಬ |
ಏಳು ಬೀಳು ಇದ್ದಾಗಲೆ ಕೃಷಿಯಲ್ಲಿ ಮೇಲೆ ಬರಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ದೊರೆರಾಜ್ ಹೇಳಿದರು.
ತಾಲ್ಲೂಕು ಯಲಸಿ ಸುವರ್ಣವನದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಡಿಕೆ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೊದಲು ಕೆಲವು ಸಾವಿರವಿದ್ದ ಅಡಿಕೆ ತೋಟವೀಗ ತಾಲ್ಲೂಕಿನಲ್ಲಿ ೨೬ ಸಾವಿರ ಹೆಕ್ಟೇರ್ ದಾಟಿದೆ. ಹಲವು ಪ್ರಯೋಗಗಳ ಬಳಕೆಯೂ ಆಗಿದೆ. ಇವೆಲ್ಲದರ ನಡುವೆ ಈಗಿನ ಪರಿಸರದ ಸ್ಥಿತಿಗೆ ಹೊಂದಿಕೊಂಡು ಕೃಷಿ ಸುಸ್ಥಿರತೆಗೆ ಮುಂದಾಗಬೇಕಾಗಿರುವುದು ಸರಿಯಾದ ಮಾರ್ಗ ಎಂದರು.
ಮಣ್ಣಿನ ಮಹತ್ವ, ರಾಸಾಯನಿಕ ಬಳಕೆಯ ಸಾಧಕ ಬಾಧಕ, ಬಳಕೆ ವಿಧಾನ, ಅಡಿಕೆ ಮರ ಬೆಳೆಸುವ ವಿಧಾನ, ನೀರು ನಿರ್ವಹಣೆ, ಕೃಷಿಯ ಸಮತೋಲನಕ್ಕೆ ನೆರವಾಗುವ ಪ್ರಾಕೃತಿಕ ಮಳೆ, ಸಿಡಿಲು, ಗೊಬ್ಬರ ತಯಾರಿಕೆ ವಿಧಾನ. ಕೀಟಗಳಿಂದ ಸಂರಕ್ಷಣೆ, ಜೈವಿಕ ಗೊಬ್ಬರ ತಯಾರಿ, ಗೋಸಾಕಾಣಿಕೆ ಅದರ ಫಲ, ಮಹತ್ವತೆ, ಬಸವನ ಹುಳ ನಿಯಂತ್ರಣ, ಪಾತಿ ವಿಧಾನ, ಕೃಷಿಯಲ್ಲಿ ಜೇನಿನ ಪಾತ್ರ ಮುಂತಾದ ಕೃಷಿಕರ ಪ್ರಶ್ನೆಗೆ ಉತ್ತರಿಸಿದ ಅವರು ಅಡಿಕೆ ಬೆಳೆಗೆ ಅತಿಯಾದ ರಾಸಾಯನಿಕ ಬಳಕೆ ಮಾರಕ ಎಂಬುದನ್ನು ನೆನಪಿನಲ್ಲಿಡಿ ಎಂದರು.
ಪ್ರಗತಿಪರ ಸಾವಯವ ಕೃಷಿಕ ಶ್ರೀಧರ ಮೂರ್ತಿ ನಡಳ್ಳಿ ತಮ್ಮ ಕೃಷಿ ಅನುಭವ ಹಂಚಿಕೊಂಡರು.
ಶಿರಸಿಯ ಸಂಪನ್ಮೂಲ ವ್ಯಕ್ತಿ ಸುಕೀರ್ತ ಹೆಗಡೆ, ಸ್ವದೇಶಿ ಉತ್ಪನ್ನಗಳ ಅವಶ್ಯಕತೆಯ ಬಗ್ಗೆ, ಮಣ್ಣಿನಲ್ಲಿನ ಖನಿಜಾಂಶ, ಪೋಷಕಾಂಶಗಳ ವೃದ್ಧಿಗೆ ನೈಸರ್ಗಿಕವಾಗಿ ಬಳಸಬಹುದಾದ ವಿಧಾನ, ಪ್ರಸ್ತುತ ಲಭ್ಯವಿರುವ ಸ್ವದೇಶಿ ಟಾನಿಕ್, ಅದರ ಬಳಕೆ ವಿಧಾನದ ಕುರಿತು ಮಾಹಿತಿ ಹಂಚಿಕೊಂಡರು. ಭೂಮಿಯ ಸಂರಕ್ಷಣೆಯೆ ಕೃಷಿಕನಿಗೆ ಜೀವಾಳ ಹಾಗಾಗಿ, ಮಣ್ಣು ಜೀವಂತವಾಗಿರಲು ಕೃಷಿಕ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಸಾಧಕ ತಾರಕನಾಥ ಕಾನ್ಗೋಡು ಈಚೆಗಿನ ಸ್ವದೇಶಿ ಕೃಷಿ ಉತ್ಪನ್ನಗಳನ್ನು ಪ್ರದರ್ಶನದ ಮೂಲಕ ಪರಿಚಯಿಸಿದರು.
ಜೇನು ಕೃಷಿಕ ಸುವರ್ಣ ವನದ ಗೌತಮ ಬಿಚ್ಚುಗತ್ತಿ ಜೇನುಕೃಷಿಯ ಕುರಿತು ಮಾಹಿತಿ ನೀಡಿದರು.
ಬರಹಗಾರ ಕಲಗಾರ್ ಲಕ್ಷ್ಮೀನಾರಾಯಣ ತಾಳಗುಪ್ಪ, ಪ್ರಗತಿಪರ ಕೃಷಿಕರಾದ ಪ್ರಸನ್ನಗೌಡ ಗುಡವಿ, ರಜನಿ ಬಸವರಾಜಗೌಡ ಗುಂಡಶೆಟ್ಟಿಕೊಪ್ಪ, ಅಭಿಷೇಕ್ ಡಿ.ಕೊಂಡಿಕಾರ್, ಬಾಲಕೃಷ್ಣ ಕೊಠಾರಿ, ಆರತಿ ಮಹೇಶ್, ಇನ್ನೂ ಅನೇಕ ರೈತರು ಪಾಲ್ಗೊಂಡರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post