ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಚೆನ್ನೈ ಕನ್ನಡ ಬಳಗ Chennai Kannada Balaga ಜನಪದ ಗೀತೆಗಳ ಗಾಯನ ಸ್ಪರ್ಧೆಯನ್ನು 1968ರಲ್ಲಿ ಆರಂಭಿಸಿದರು. ಮೊದಲ ಕೆಲವು ವರ್ಷಗಳಲ್ಲಿ ಹೆಚ್ಚು ಸ್ಪರ್ಧಾಳುಗಳು ಇರಲಿಲ್ಲ. ಆ ಸಮಯದಲ್ಲಿ ಭಾವ ಗೀತೆಯನ್ನೂ ಹಾಡುತ್ತಿದ್ದರು. ನಂತರ 1972ರಲ್ಲಿ ಆವಡಿ ಕನ್ನಡ ಸಂಘದ ಸದಸ್ಯರು ಪಾಲ್ಗೊಂಡರು. ಆಗ ಜನಪದ ಸಾಹಿತ್ಯದ ಸೊಗಡು ಬಳಗದ ಸದಸ್ಯರಿಗೆ ಅರಿವಾಯಿತು. ನಂತರದ ವರ್ಷಗಳಲ್ಲಿ ಜನಪದ ಸಾಹಿತ್ಯವಿದ್ದ ಹಾಡುಗಳನ್ನು ಮಾತ್ರ ಪರಿಗಣಿಸಲಾಯಿತು. ಆ ದಿನಗಳಲ್ಲಿ ಬಳಗದ ಎಲ್ಲಾ ಕಾರ್ಯಕ್ರಮಗಳು ರಾಯಪೇಟಾ ವುಡ್‌ಲ್ಯಾಂಡ್ಸ್ ಹೋಟೆಲಿನ ಬಯಲು ರಂಗಸ್ಥಳದಲ್ಲಿ ನಡೆಯುತ್ತಿತ್ತು. ಚೆನ್ನೆöÊನ ಬಹುತೇಕ ಎಲ್ಲಾ ಕನ್ನಡ ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.
ಈ ಸಂದರ್ಭದಲ್ಲಿ ನಡೆಯುವ ತಿಂಡಿ ಸಂತೆಯು ತುಂಬಾ ಜನಪ್ರಿಯವಾಗಿತ್ತು. ಬಳಗದ ಸದಸ್ಯರು ವಿವಿಧ ಬಗೆಯ ತಿಂಡಿ ತಿನಸುಗಳನ್ನು ಮನೆಯಲ್ಲಿ ತಯಾರಿಸಿ ಅಲ್ಲಿ ಬಂದು ಮಾರುತ್ತಿದ್ದರು. ಕೆಲವರು ಅಲ್ಲೇ ಬಂದು ಬಿಸಿಬಿಸಿಯಾಗಿ ತಯಾರಿಸಿ ತಾಜಾ ತಾಜಾ ತಿಂಡಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದರು. ಅದರಿಂದ ಬರುವ ಲಾಭಾಂಶವನ್ನು ಬಳಗಕ್ಕೆ ಕೊಡುತ್ತಿದ್ದರು. ಕಾಫಿ, ಚಹಾ, ಚಕ್ಕುಲಿ, ಸಿಹಿ ತಿಂಡಿಗಳು, ಮೊಸರನ್ನ, ಚಿತ್ರಾನ್ನ, ಪುಳಿಯೋಗರೆ, ರೊಟ್ಟಿ ಇತ್ಯಾದಿ ಆಹಾರ ಪದಾರ್ಥಗಳು ಮಾರಾಟಕ್ಕಿಡುತ್ತಿದ್ದರು. ತೆರೆದ ಸಭಾಂಗಣವಾದ್ದರಿಂದ ಹಾಡುಗಳನ್ನು ಕೇಳಿಕೊಂಡು ತಿಂಡಿಯ ಸವಿಯನ್ನು ಮೆಲ್ಲುತ್ತಿದ್ದರು.
ಜನಪದ ಗೀತೆ ಸ್ಪರ್ಧೆಗೆ ಸರಿಯಾದ ಪೈಪೋಟಿ ಬಂದಿದ್ದು ನೈವೇಲಿ ಕನ್ನಡ ಸಂಘದವರ ಆಗಮನದಿಂದಲೇ ಎಂದು ಹೇಳಬಹುದು. ಸುಮಾರು 1976ರಲ್ಲಿ ನೈವೇಲಿ ಕನ್ನಡ ಸಂಘದಿAದ ಸುಮಾರು 48 ಮಂದಿ ಭಾಗವಹಿಸಿದ್ದರು. ಅವರನ್ನು ಹಾರ್ದಿಕವಾಗಿ ಬರಮಾಡಿಕೊಂಡು ಅತಿಥಿ ಸತ್ಕಾರ ಮಾಡಲಾಗುತ್ತಿತ್ತು. ಅವರಿಗೆ ಊಟವನ್ನು ಬಳಗದ ಸದಸ್ಯರೇ ಅವರವರ ಮನೆಯಿಂದ ತಯಾರಿಸಿ ತರುತ್ತಿದ್ದರು. ಬಳಗದ ಎಲ್ಲ ಸದಸ್ಯರೂ ತಮ್ಮ ತಮ್ಮ ಮನೆಯ ಒಂದು ಕಾರ್ಯಕ್ರಮವೆಂದು ಸಂತೋಷದಿಂದ ಈ ಕೆಲಸಗಳನ್ನು ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಳಗದ ಸದಸ್ಯರಿಗೆ ಊಟ ನೀಡಬೇಕೆಂಬ ಸಲಹೆ ನಮ್ಮ ಬಳಗದ ಸದಸ್ಯರಾದ ಶ್ರೀ ಮುಕ್ತೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಲ್ಲದೆ ಅದಕ್ಕಾಗಿ ರೂ. 25,000/- ಹಣವನ್ನು ನೀಡಿದರು. ಅದರಿಂದಾಗಿ ಮುಂದಿನ ವರ್ಷದಿಂದ ಸ್ಪರ್ಧೆಯ ಎಲ್ಲರಿಗೂ ಭೊಜನದ ವ್ಯವಸ್ಥೆ ಮಾಡಲಾಯಿತು. ಅದಕ್ಕಾಗಿ ಬಳಗವು ಶ್ರೀ ಮುಕ್ತೇಶ್ ಅವರ ಸಹಾಯವನ್ನು ಎಂದಿಗೂ ಮರೆಯಲಾರದು.
ಆರಂಭದಲ್ಲಿ 4 ಗಂಟೆಗೆ ಈ ಕಾರ್ಯಕ್ರಮ ಆರಂಭಿಸಲಾಗುತ್ತಿತ್ತು. ನಂತರ ಸ್ಪರ್ಧಾಳುಗಳ ಸಂಖ್ಯೆ ಹೆಚ್ಚಾದಂತೆ ಬೆಳಗ್ಗೆಯಿಂದಲೇ ಆರಂಭಿಸಲಾಯಿತು. ಕೆಲವೊಮ್ಮೆ 150ಕ್ಕೂ ಹೆಚ್ಚು ಸ್ಪರ್ಧಾಳುಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದೂ ಇದೆ! ಕೆಲವೊಮ್ಮೆ ಮಳೆ ಬಂದು ಸ್ಫರ್ಧೆಯನ್ನು ಹೋಟೆಲಿನಲ್ಲಿದ್ದ ಮೈಸೂರು ಇಂಜಿನಿರ‍್ಸ್ ಅಸೋಸಿಯೇಶನ್‌ನ ಕೊಠಡಿಯಲ್ಲಿ ಮಾಡಬೇಕಾಗಿ ಬಂದಿತ್ತು. ಕೊಠಡಿಯಲ್ಲಿ ಹೆಚ್ಚು ಜನ ಸೇರುವಂತಿರಲಿಲ್ಲ. ಈ ಕಾರಣಕ್ಕಾಗಿ ಬಳಗವು ಕರ್ನಾಟಕ ಸಂಘದ ರಾಮರಾವ್ ಕಲಾಮಂಟಪದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಆರಂಭಿಸಿದರು.
ಜನಪದ ಗೀತೆಯ ಬೆಳ್ಳಿ ಹಬ್ಬವನ್ನು ಅತಿ ವಿಜೃಂಭಣೆಯಿAದ ಎರಡು ದಿನಗಳ ಕಾಲ ಆಚರಿಸಲಾಯಿತು. ಕರ್ನಾಟಕದಿಂದ ಜನಪದ ತಂಡವನ್ನು ಆಹ್ವಾನಿಸಿ ಜನಪದ ಗೀತೆಯ ಹಾಡುಗಾರಿಕೆ, ಕುಣಿತ, ನೃತ್ಯ, ಡೋಲು ಕುಣಿತ ಇತ್ಯಾದಿಗಳ ಪ್ರದರ್ಶನದಿಂದ ಚೆನ್ನೈ ಕನ್ನಡಿಗರ ಮನಸೂರೆಗೊಂಡಿದ್ದವು.
Also read: ನ.5: ಚೆನ್ನೈ ಕನ್ನಡ ಬಳಗದ ಜಾನಪದ ಗೀತೆ ಸ್ಪರ್ಧೆ ಸುವರ್ಣ ಸಂಭ್ರಮ | ವಿಶೇಷ ಕಾರ್ಯಕ್ರಮ ಆಯೋಜನೆ
ಚೆನ್ನೈನಲ್ಲಿ ತೀರ್ಪುಗಾರರ ಅಭಾವವಿದ್ದರಿಂದ ಮತ್ತು ತೀರ್ಪಿನ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ತೀರ್ಪುಗಾರರನ್ನು ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಿಂದ ಆರಿಸಿ ಆಹ್ವಾನಿಸಲಾಗುತ್ತಿದೆ. ಇದಕ್ಕೆ ಕರ್ನಾಟಕ ಜನಪದ ಅಕಾಡೆಮಿಯವರು ನಮಗೆ ಇಬ್ಬರು ತೀರ್ಪುಗಾರರನ್ನು ಪ್ರತಿ ವರ್ಷ ಕಳುಹಿಸಿ ಸಹಾಯ ಮಾಡುತ್ತಿದ್ದಾರೆ.
ಕರ್ನಾಟಕ ಸಂಘದ ಸಭಾಂಗಣದಲ್ಲಿ ಸ್ಪರ್ಧೆ ಮಾಡಲಾರಂಭಿಸಿದ್ದರಿAದ ರಂಗ ಮಂದಿರವನ್ನು ಜನಪದದ ಹಿನ್ನೆಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಅಲಂಕಾರ ಮಾಡಲು ಆರಂಭಿಸಿದರು. ರಂಗ ಮಂದಿರವು ಎಲ್ಲಾ ಕಡೆ ಜನಪದಲ್ಲಿ ಬಳಸುವ ವಸ್ತುಗಳನ್ನು ಬಳಸಿ ಶೃಂಗರಿಸಲಾಗುವುದು. ಇದಕ್ಕಾಗಿ ಹತ್ತು ಹದಿನೈದು ದಿನಗಳ ಕಾಲ ಕಂಪ್ಯೂಟರ್‌ನಲ್ಲಿ ಬೇರೆ ಬೇರೆ ವಿನ್ಯಾಸಗಳನ್ನು ಮಾಡಿ ಆರಿಸುತ್ತಾರೆ. ಒಂದೊಂದು ವರ್ಷ ಒಂದೊಂದು ವಿನ್ಯಾಸ. ಇದಕ್ಕಾಗಿ ಬಳಗದ ಮಹಿಳೆಯರು ಹಾಗೂ ಮಹನೀಯರು ರಾತ್ರಿ ಇಡೀ ಕೆಲಸ ಮಾಡುತ್ತಿದ್ದರು.
ಬೆಳಗ್ಗೆ 10 ಗಂಟೆಗೆ ಸ್ಪರ್ಧೆಯು ಆರಂಭಗೊಂಡು ಮಧ್ಯಾಹ್ನ ಭೊಜನ ವಿರಾಮದ ನಂತರ ಮುಂದುವರಿದು ಸಂಜೆ 7 ಗಂಟೆಗೆ ಮುಕ್ತಾಯವಾಗುತ್ತದೆ. ಇದರಲ್ಲಿ ಮಕ್ಕಳು, ಹುಡುಗರು, ಹುಡುಗಿಯರು, ಹೆಂಗಸರು, ಗಂಡಸರು, ಹಿರಿಯ ನಾಗರಿಕರು ಹೀಗೆ ಮಯೋಮಿತಿಗೆ ಅನುಸಾರವಾಗಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಇದಲ್ಲದೆ ವೃಂದ ಗಾಯನ, ಯುಗಳ ಗೀತೆಯೂ ಇದೆ. ತೀರ್ಪುಗಾರರು ಸ್ಪರ್ಧೆಯ ಬಗ್ಗೆ ಅವರ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ನಂತರ ಮುಖ್ಯ ಅತಿಥಿಗಳು ಬಹುಮಾನ ವಿತರಿಸುತ್ತಾರೆ. ರಾತ್ರಿ ಭೋಜನದ ವ್ಯವಸ್ಥೆಯನ್ನು ಸಹ ಮಾಡಲಾಗುತ್ತದೆ.
ನೈವೇಲಿ ಕನ್ನಡ ಸಂಘದ ಬಗ್ಗೆ ಹೇಳುವುದಾದರೆ ಅವರಲ್ಲಿರುವ ಸದಸ್ಯರೆಲ್ಲರಿಗೂ ಬಳಗದ ಈ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದರೆ ಅಷ್ಟೊಂದು ಉತ್ಸಾಹ. ಬೆಳಗ್ಗೆನೇ ಎಲ್ಲರನ್ನು ಒಂದುಗೂಡಿಸಿ ಮೊದಮೊದಲು ಒಂದು ಬಸ್ ತುಂಬಾ ಜನ ಬರುತ್ತಿದ್ದರು. ಬಸ್‌ನಲ್ಲಿ ಬರುವಾಗಲೇ ಹಾಡು ಹಾಡಿಕೊಂಡು ಬರುವುದು ವಾಡಿಕೆ. ಅವರಲ್ಲಿ ಶ್ರೀ ಶಾಂತಪ್ಪ ಎನ್ನುವರು ಬಹಳ ಸೊಗಸಾಗಿ ಜನಪದ ಹಾಡು ಹೇಳುತ್ತಿದ್ದರು. ಮದರಾಸಿನ ಎಲ್ಲಾ ಕನ್ನಡಿಗರು ಅವರ ಹಾಡು ಕೇಳಲು ತುಂಬ ಉತ್ಸಾಹದಿಂದ ಕಾಯುತ್ತಿದ್ದರು. ಇವರು ನೈವೇಲಿಯ ಸಂಘದವರಿಗೆ ಹಾಡು ಹೇಗೆ ಹೇಳಬೇಕೆಂದು ತರಬೇತು ನೀಡುತ್ತಿದ್ದರು. ಅವರ ಶ್ರೀಮತಿಯವರು ಸಹ ತುಂಬಾ ಚೆನ್ನಾಗಿ ಹಾಡುತ್ತಿದ್ದರು. ಈ ಎಲ್ಲ ಕಾರಣಗಳಿಂದಾಗಿ ಸಮಗ್ರ ಪ್ರಶಸ್ತಿಗೆ ನೀಡಲಾಗುವ ಪರ್ಯಾಯ ಫಲಕವು ಬಹುಪಾಲು ನೈವೇಲಿ ಸಂಘದವರ ಪಾಲಾಗುತ್ತಿತ್ತು. ಕನ್ನಡ ಬಳಗಕ್ಕೂ ನೈವೇಲಿ ಸಂಘಕ್ಕೂ ಪ್ರತಿ ವರ್ಷ ಪೈಪೋಟಿ ನಡೆಯುತ್ತಿತ್ತು. ಕೆಲವೊಮ್ಮೆ ಒಂದೆರಡು ಅಂಕಗಳಿAದ ಫಲಕವು ಕೈ ತಪ್ಪಿದ್ದೂ ಇದೆ. ಪೈಪೋಟಿ ಆರೋಗ್ಯಕರವಾಗಿ ಇರುತ್ತದೆಯೇ ಹೊರತು ಯಾವತ್ತೂ ಮನಸ್ತಾಪಕ್ಕೆ ಕಾರಣವಾಗಿಲ್ಲ.
ಸ್ಪರ್ಧೆ ಮುಗಿದ ನಂತರ ಸ್ಪರ್ಧಾಳುಗಳಿಗೆ ಮೊದಲು ಭೋಜನ ನೀಡಿ ನಂತರ ಬಳಗದವರು ಭೋಜನ ಮಾಡುವುದು ಸಂಪ್ರದಾಯ. ಎಲ್ಲರನ್ನು ಸಂತೋಷದಿAದ ಬೀಳ್ಕೊಟ್ಟ ನಂತರ ಬಳಗದ ಸದಸ್ಯರು ಅವರವರ ಮನೆಗಳಿಗೆ ತೆರಳುತ್ತಾರೆ. ನೈವೇಲಿಯ ಸದಸ್ಯರು ಬಸ್ಸಿನಲ್ಲಿ ವಾಪಸ್ಸಾಗುವಾಗುವ ದಾರಿಯುದ್ದಕ್ಕೂ ಅಂದು ಬಹುಮಾನ ಪಡೆದ ಹಾಡುಗಳನ್ನು ಹಾಡುತ್ತಾ ಸಂಭ್ರಮಿಸುತ್ತಾ ದಾರಿ ಸವೆಸುತ್ತಾರೆ.
ಈ ಸ್ಪರ್ಧೆಯಲ್ಲಿ ಕರ್ನಾಟಕ ಸಂಘ, ಟಿ.ನಗರ, ಕನ್ನಡ ಸಂಘ ಅಯನಾವರಂ, ಕನ್ನಡಿಗರ ಕೂಟ, ಬಂಟರ ಸಂಘ, ಮದರಾಸು, ಚೆನ್ನೈ ಹವ್ಯಕ, ಮದರಾಸು ವಿಶ್ವ ವಿದ್ಯಾನಿಲಯ (ಕನ್ನಡ ವಿಭಾಗ), ಕನ್ನಡ ಸಂಘ ಕಲ್ಪಾಕಮ್ ಹಾಗೂ ಕನ್ನಡ ಬಳಗದ ಸದಸ್ಯರು ಭಾಗವಹಿಸುತ್ತಿದ್ದಾರೆ.
ಹೊರನಾಡು, ತಮಿಳುನಾಡಿನಲ್ಲಿದ್ದು ಕೊಂಡು ಸತತವಾಗಿ ನಲವತ್ತೊಂಬತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ಜಾನಪದ ಗೀತೆ ಸ್ಪರ್ಧೆ ನಡೆಸಿಕೊಂಡು ಬಂದು ಇಂದು ಸುವರ್ಣ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಬಹುಶಃ ನಾಡಿನ ಯಾವುದೇ ಸಂಘಟನೆ ಇಂತಹ ಸುದೀರ್ಘ ಅವಧಿಯ ಸ್ಪರ್ಧೆಯನ್ನು ನಡೆಸಿದ ಉದಾಹರಣೆಗಳು ಇರಲಿಕ್ಕಿಲ್ಲ. ಹೀಗಾಗಿ ಇದೊಂದು ಸಾಧನೆಯೇ ಸರಿ.
ಇದು ಕನ್ನಡ ಬಳಗದ ಒಂದು ಹೆಮ್ಮೆಯ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಬಳಗದ ಈ ಕಾರ್ಯಕ್ರಮವನ್ನು ನೋಡಿದ ಕರ್ನಾಟಕದಿಂದ ಬಂದ ತೀರ್ಪುಗಾರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಸ್ಪರ್ಧೆಯು ಕರ್ನಾಟಕದಲ್ಲಿ ಸಹ ಈ ರೀತಿ ಆಯೋಜಿಸುವುದಿಲ್ಲ ಎಂಬುದು ಅವರ ಅಭಿಮತವಾಗಿದೆ. ಇದೊಂದು ಬಳಗದ ಸದಸ್ಯರಿಗೆ ಹಬ್ಬ.
ಈ ಹಬ್ಬಕ್ಕಿಂದು (ನವೆಂಬರ್ 5, 2023) ಸುವರ್ಣ ಮಹೋತ್ಸವ. ಜಾನಪದ ಗೀತೆ ಸ್ಪರ್ಧೆ ಎಂದರೆ ಅದೊಂದು ಸಂಭ್ರಮ.. ಸಂತಸ..
ವಿಶೇಷ ಲೇಖನ: ಎಸ್. ರಾಮಚಂದ್ರ ಭಟ್, ಚೆನ್ನೈ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post