ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕರುನಾಡಲ್ಲಿ ತುಳುನಾಡ ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ನೆಲೆಗಟ್ಟು, ಆಚಾರ ವಿಚಾರಗಳು ವಿಭಿನ್ನವಾದುದು. ವಿಶಿಷ್ಟವಾದುದು. ಅನನ್ಯವಾದುದು. ಅದಕ್ಕೆ ತಕ್ಕಂತಿದೆ ಅದರ ಪ್ರಾಕೃತಿಕವಾದ ಭೌಗೋಳಿಕತೆ. ಪ್ರಾಚೀನ ಹಾಗೂ ಮೂಲದ್ರಾವಿಡ ಭಾಷೆಯಾದ ತುಳುವಿನೊಂದಿಗೆ ಹಲವು ಭಾಷೆಗಳ ಮಾತುಕತೆ. ಯಕ್ಷಗಾನ ಕಲೆಯ ಲಯಬದ್ಧವಾದ ಮಾರ್ದವತೆ. ದೈವಾರಾಧನೆ, ನಾಗಾರಾಧನೆ, ಪ್ರಕೃತಿಯಾರಾಧನೆಗಳ ದೈವೀಕತೆ. ಪಡುವಣ ಕಡಲ ಘನ ಗಂಭೀರತೆ. ಪಶ್ಚಿಮ ಘಟ್ಟಗಳ ನಿಗೂಢತೆ. ನೇತ್ರಾವತಿ ಕುಮಾರಧಾರ, ಪುಲನಿ, ಫಾಲ್ಗುಣಿ, ಪಯಸ್ವಿನಿ, ಸ್ವರ್ಣ, ಸೀತಾ, ಚಂದ್ರಗಿರಿ ಪಾವನ ತರಂಗಿಣಿಗಳ ಪರಿಶುದ್ಧತೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಮಿಷನರಿ, ಜೈನ ಧರ್ಮೀಯರ ಭಾವೈಕ್ಯತೆ. ಈ ಎಲ್ಲ ಕಾರಣಗಳಿಂದಾಗಿ ತುಳುನಾಡು ಕರ್ನಾಟಕ ಸಂಸ್ಕೃತಿಯೊಂದಿಗೆ ಬೆರೆತರೂ ತನ್ನ ತನವನ್ನೂ ವೈಶಿಷ್ಟ್ಯವನ್ನು ಉಳಿಸಿಕೊಂಡು ಬರುತ್ತಿದೆ.
ಇಂತಹ ವೈವಿಧ್ಯಮಯ ಸಂಸ್ಕೃತಿ, ಸಂಸ್ಕಾರ ಹೊಂದಿದ ತುಳುವರು ಕನ್ನಡ ಚಲನಚಿತ್ರರಂಗ ಬಾನೆತ್ತರ ಬೆಳೆಯುವಲ್ಲಿ ತಮ್ಮ ಅನನ್ಯವಾದ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ಅಭಿನಯ, ನಿರ್ದೇಶನ, ನಿರ್ಮಾಣ, ಸಂಗೀತ, ಸಾಹಿತ್ಯ, ಕಲೆ, ನೃತ್ಯ, ತಾಂತ್ರಿಕತೆ ಯಾವ ಕ್ಷೇತ್ರದಲ್ಲೂ ಹಿಂದೆ ಬಿದ್ದವರಲ್ಲ. ಸ್ಯಾಂಡಲ್ ವುಡ್, ಗಾಂಧಿನಗರ, ಚಂದನವನ ಎಂದೆಲ್ಲ ಅನ್ವರ್ಥನಾಮಗಳಿಂದ ಕರೆಯಲ್ಪಡುವ ಕನ್ನಡ ಚಿತ್ರರಂಗದ ಶೈಶವದ ದಿನದಿಂದ ಇಂದಿನವರೆಗೆ ತುಳುನಾಡ ಕಲಾವಿದರ ಕೊಡುಗೆ ಅಪಾರವಾದುದು. ಅಪೂರ್ವವಾದುದು. ನಾವಿಲ್ಲಿ ಮೂರು ಹಂತಗಳಲ್ಲಿ ಕನ್ನಡ ಚಿತ್ರೋದ್ಯಮದಲ್ಲಿ ದುಡಿದ ತುಳುನಾಡಿನ ಕಲಾವಿದರನ್ನು ಹೆಸರಿಸಬಹುದು. ಕಲ್ಪನಾ, ಲೀಲಾವತಿ, ಜಯಮಾಲಾ, ಜಯಲಕ್ಷ್ಮೀ, ವಾದಿರಾಜ್, ಬಿ.ವಿ. ಕಾರಂತ, ಸದಾನಂದ ಸುವರ್ಣ, ಉಡುಪಿ ಜಯರಾಂ, ವಿಶುಕುಮಾರ್, ಕಿಶೋರಿ ಬಲ್ಲಾಳ್, ಮುದ್ದು ಸುವರ್ಣ ಮೊದಲಾದವರು ಪ್ರಥಮ ಹಂತದಲ್ಲಿ ಬರುತ್ತಾರೆ. ಸದಾಶಿವ ಸಾಲಿಯಾನ್, ವಿ. ಮನೋಹರ್, ಕಾಸರಗೋಡು ಚಿನ್ನ, ವಿನಯ ಪ್ರಸಾದ್, ಗುರುಕಿರಣ್, ಯಜ್ಞೇಶ್ ಶೆಟ್ಟಿ, ಸುಲೋಚನ ರೈ, ಭವ್ಯಶ್ರೀ ರೈ, ಶಿವಧ್ವಜ್ ಮುಂತಾದವರು ಎರಡನೆ ಹಂತದಲ್ಲಿ ಬಂದವರು. ಮೂರನೆ ಅಥವಾ ಪ್ರಸ್ತುತ ಹಂತದಲ್ಲಿ ತುಳುನಾಡಿನಿಂದ ಬರುತ್ತಿರುವ ಕಲಾವಿದರಲ್ಲಿ ಅವಂತಿಕಾ ಶೆಟ್ಟಿ, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಸಂದೀಪ್ ಶೆಟ್ಟಿ, ಶುಭ ಪೂಂಜಾ, ಪ್ರಮೋದ್ ಕಿರಾಡಿ, ಸಪ್ತ ಪಾವೂರು, ಸಂಯುಕ್ತ ಹೆಗ್ಡೆ, ಪ್ರಕಾಶ್ ತುಮಿನಾಡ್ ಮೊದಲಾದರು.
ತೃತೀಯ ಹಂತದ ಕಲಾವಿದರ ಯಾದಿಯಲ್ಲಿ ಹೊಸ ಹೆಸರೊಂದು ಕೇಳಿ ಬರುತ್ತಿದೆ. ಅವರೇ ಸುನಿತಾ ಮರಿಯಾ ಪಿಂಟೋ. ಸುನಿತಾ ಅವರು ಸುರತ್ಕಲ್ ಸಮೀಪದ ತೋಕೂರಿನವರು. ಶ್ರೀಮತಿ ಐರಿನ್ ಹಾಗೂ ಜೆರ್ಮಿ ಪಿಂಟೋ ಅವರ ಹಿರಿಯ ಮಗಳು. ತೋಕೂರು, ಸಕಲೇಶಪುರ ಸಮೀಪದ ಅರೆಹಳ್ಳಿ ಮತ್ತು ಪೇಜಾವರಗಳಲ್ಲಿ ಪ್ರೌಢ ಶಿಕ್ಷಣ ಪಡೆದವರು. ಅನಂತರ ಮಂಗಳೂರು ಕೆನರಾ ಕಾಲೇಜಿನಿಂದ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದವರು. ದುಬೈ ಮೂಲದ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಮಾರಾಟ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉದ್ಯೋಗಕ್ಕೆ ಸೇರಿದವರು. ಸಂಸ್ಥೆಯ ವತಿಯಿಂದ ಹಲವು ದೇಶಗಳನ್ನು ಸುತ್ತಿದ್ದಾರೆ. ಬಾಲ್ಯದಿಂದಲೂ ಅಭಿನಯದಲ್ಲಿ ಅದೃಷ್ಟವನ್ನು ಅರಸುತ್ತಿದ್ದರೂ ಅವಕಾಶಗಳು ಬಂದೊದಗಲೇ ಇಲ್ಲ. ಅನಿರೀಕ್ಷಿತವಾಗಿ ಅನೇಕ ವರ್ಷಗಳಿಂದ ಅರಸುವ ಬಳ್ಳಿ ಕಾಲಿಗಡರಿದಂತೆ ಮುಖಕ್ಕೆ ಬಣ್ಣ ಹಚ್ಚುವ ಶುಭಗಳಿಗೆ ಪ್ರಾಪ್ತವಾದದ್ದು ರಾಜ್ ಮ್ಯೂಸಿಕ್ ಸಂಸ್ಥೆಯ ’ಸಿಕ್ಕಿದ್ರೆ ಸೀರುಂಡೆ’ ಎಂಬ ಸಾರ್ವಜನಿಕ ತಮಾಷೆ ಕಾರ್ಯಕ್ರಮ (Public Prank Program) ದಲ್ಲಿ.
ಸುನೀತಾ ಅವರಿಗೆ ಕನ್ನಡ ಚಿತ್ರರಂಗದ ಬಾಗಿಲು ತೆರೆದದ್ದು ಖ್ಯಾತ ನಟಿ ರಾಧಿಕಾ ಯಶ್ ಅಭಿನಯದ ’ದೊಡ್ಮನೆ ಹುಡುಗ’ ಚಿತ್ರದಲ್ಲಿ. ಅನಂತರ ಅವಕಾಶಗಳು ಅವರನ್ನು ಹುಡುಕಿಕೊಂಡು ಬರತೊಡಗಿದವು. ’ಚಕ್ರವ್ಯೂಹ’, ’ರಾಜು ಕನ್ನಡ ಮೀಡಿಯಂ’, ’ರನ್ ಆಂಟೋನಿ’, ’ವರ್ಣಮಯ’, ’ಕ್ರೇಝೀ ಬಾಯ್ಸ್’, ’ಸ್ವಾರ್ಥ ರತ್ನ’, ’ಜಾಗ್ವರ್’, ಔಅ, ’ಪ್ರೇಮ ಬರಹ’ ಮುಂತಾದ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಪಳಗಿದರು. ಚಂದನವನದ ಅಭಿನಯದ ಬಲ್ಪಿಂದ ಕೊಲಿವುಡ್ (ತಮಿಳು) ನಲ್ಲಿ ಸಾಲಾಗಿ ಅವಕಾಶಗಳು ದೊರೆತವು. ತುಂಗಾವನಂ, 2 6LAW ಸೆಂಚುರಿ ಪುಲಿಕೇಶಿ, ತೆರಿ, ಓರುನಾಲ್ ಕೂರು, ಬಯಮೊರು, ಪ್ರಯಾನಂ, ಇಂದ್ರಜೀತ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತುಳು ಭಾಷೆಯ ’ಉಮಿಲ್’, ಕೊಂಕಣಿಯ ಪ್ಲಾನಿಂಗ್ ದೇವಾಚೆ, ಮಲಯಾಳಂನ ಕಿಂಗ್ ಲೇರ್ಯ, ತೆಲುಗುವಿನ ’ರೋಗ್’ ಚಿತ್ರಗಳಲ್ಲಿ ಅವಕಾಶ ಪಡೆದು ಅಭಿನಯಿಸಿದ್ದಾರೆ.
ಸುನಿತಾ ಪಿಂಟೋ ಅಭಿನಯಿಸಿದ ಕನ್ನಡ ಚಿತ್ರ ’ವರ್ಣಮಯ’ ಚಿತ್ರರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಾಲಾಶ್ರೀ, ಪುನೀತ್ ರಾಜಕುಮಾರ್, ರಾಧಿಕಾ ಕುಮಾರಸ್ವಾಮಿಯವರ ಅಭಿನಯವನ್ನು ಮೆಚ್ಚುವ ಇವರು ದುನಿಯ ಸೂರಿಯವರ ನಿರ್ದೇಶನವನ್ನು ಬಹಳ ಇಷ್ಟಪಡುತ್ತಾರೆ. ಝೀ ವಾಹಿನಿಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ’ಜೊತೆ ಜೊತೆಯಲಿ’ ಹಾಗೂ ಕಲ್ಹರ್ಸ್ ವಾಹಿನಿಯ ’ಮಿಥುನ ರಾಶಿ’ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ ಮಲಯಾಳಂ ಕಿರುತೆರೆಯ Deal or No Deal ಎಂಬ ಕಾರ್ಯಕ್ರಮದಲ್ಲಿ ರೂಪದರ್ಶಿಯಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರಲ್ಲಿ ಉದ್ಯಮಿಯಾಗಿರುವ ಸಾಂತೂರಿನ ಮಹೇಶ್ ಅವರನ್ನು ವರಿಸಿರುವ ಸುನಿತಾ ಬೆಂಗಳೂರಲ್ಲೇ ವಾಸವಾಗಿದ್ದಾರೆ. ಪಂಚ ದ್ರಾವಿಡ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿರುವ ಸುನಿತಾ ಅವರಿಗೆ ಆ ಎಲ್ಲ ಭಾಷೆಗಳಲ್ಲಿ ಪೂರ್ಣ ಪ್ರಮಾಣದ ನಾಯಕಿ ಪಾತ್ರಗಳು ದೊರೆಯಲಿ. ಅವರ ಅಭಿನಯದ ಚಿತ್ರಗಳು ಚಿತ್ರ ರಸಿಕರ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಲಿ. ವೈಯುಕ್ತಿಕವಾಗಿ ಸುನಿತಾ ಅವರಿಗೂ ತನ್ಮೂಲಕ ಹೆತ್ತವರಿಗೂ ತುಳುನಾಡಿಗೂ ಕೀರ್ತಿ ಬರಲಿ.
Get In Touch With Us info@kalpa.news Whatsapp: 9481252093
Discussion about this post