ಕಲ್ಪ ಮೀಡಿಯಾ ಹೌಸ್
ಸೊರಬ: ‘ಸುರಭಿ’ ಕಾವ್ಯನಾಮದಿಂದ ಪರಿಚಿತರಾಗಿದ್ದ ಹಿರಿಯ ಸಾಹಿತಿ ಸೈಯದ್ ಶಹಾಬುದ್ದೀನ್ (78) ಗುರುವಾರ ಪಟ್ಟಣದ ಮಾರ್ಕೆಟ್ ರಸ್ತೆಯ ಸ್ವಗೃಹದಲ್ಲಿ ವಯೋಸಹಜವಾಗಿ ನಿಧನ ಹೊಂದಿದರು.
ಉರ್ದು ಮಾತೃಭಾಷೆಯಾಗಿದ್ದರೂ ಕನ್ನಡ ಕಂಪನ್ನು ತಾಲ್ಲೂಕು ಮಾತ್ರವಲ್ಲದೇ ರಾಜ್ಯ ಸೇರಿದಂತೆ ಹೊರರಾಜ್ಯಗಳಲ್ಲೂ ಚೆಲ್ಲಿದ ಕೀರ್ತಿ ಸುರಭಿ ಶಹಾಬುದ್ದೀನ್ ಅವರದ್ದಾಗಿತ್ತು. ಪ್ರಾಥಮಿಕ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲಿ ಪಡೆದರೂ ಸಹ, ಮಾಧ್ಯಮಿಕ ಮತ್ತು ಪದವಿಯನ್ನು ಕನ್ನಡದಲ್ಲಿ ಅಧ್ಯಯನ ಮಾಡಿದ್ದರು. ಸದಾ ಮಕ್ಕಳೊಂದಿಗೆ ಬೆರೆಯುವ ಗುಣ ಹೊಂದಿದ್ದ ಅವರು ಮೊದಲ ಬಾರಿಗೆ ಲಾಕ್‌ಡೌನ್ ಜಾರಿಯಾಗಿ ಶಾಲಾ ಕಾಲೇಜ್‌ಗಳು ಮುಚ್ಚುತ್ತಿದ್ದಂತೆ ಮಾನಸಿಕವಾಗಿ ಕುಗ್ಗಿದ್ದರು ಎನ್ನುತ್ತಾರೆ ಅವರ ಕುಟುಂಬಸ್ಥರು. ಅವರು ಪತ್ನಿ, ಇಬ್ಬರ ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕನ್ನಡ ಭಾವಗೀತೆಗಳೊಂದಿಗೆ ಬೆಸೆದ ನಂಟು
ವೃತ್ತಿಯಲ್ಲಿ ಶಿಕ್ಷಕರಾಗದಿದ್ದರೂ ಸಹ, ಮಕ್ಕಳಿಗೆ ಕನ್ನಡ ಭಾವಗೀತೆಗಳನ್ನು ಕಲಿಸುವುದು ಮತ್ತು ಶಾಲಾ-ಕಾಲೇಜ್‌ಗಳಲ್ಲಿ ಕನ್ನಡ ಭಾವಗೀತೆಗಳನ್ನು ಹಾಡುತ್ತಲೇ ಬದುಕು ಕಟ್ಟಿಕೊಂಡಿದ್ದರು. 1964ರಿಂದಲೇ ಪ್ರಸಿದ್ಧ ಕವಿಗಳ ಕವಿತೆಗಳನ್ನು ಹಾಗೂ ಜಾನಪದ ಗೀತೆಗಳನ್ನು ಹಾಡುತ್ತಾ ಕನ್ನಡದ ಸೊಗಡನ್ನು ಮಕ್ಕಳಿಗೆ ಗಾಯನದ ಮೂಲಕ ತಿಳಿಸುವುದು ಹಾಗೂ ಅಂದಿನ ಕಾಲದಲ್ಲಿ ಶಾಲಾ-ಕಾಲೇಜ್‌ಗಳಲ್ಲಿ ನೀಡುವ ಕಾಣಿಕೆಯೇ ಅವರ ಜೀವನಾಧಾರವಾಗಿತ್ತು. ಯಾವುದೇ ಸಂಗೀತ ಶಾಲೆಯಲ್ಲಿ ಅಭ್ಯಾಸ ಮಾಡದಿದ್ದರೂ ಸಹ ಅವರಿಗೆ ಭಗವಂತ ಕಂಠ ಮಾಧುರ್ಯ ಕರುಣಿಸಿದ್ದನು.
ಸಾಹಿತ್ಯಕ್ಕೆ ಕೊಡುಗೆ
‘ಸುರಭಿ ಕಾವ್ಯ ನಾಮದಿಂದ ಪರಿಚಿತರಾಗಿದ್ದ ಶಹಾಬುದ್ದೀನ್ ಅವರು ಲವ್-ಇನ್-ಕಾಲೇಜ್ ಎಂಬ ನಾಟಕ, ನಂಬಲಾಗದ ಜಗತ್ತು ಎಂಬ ಕಾದಂಬರಿ, ಎರಡು ಜಡೆಯವಳು, ಪುಣ್ಯದ ಸಂಘ, ನನ್ನವಳು, ವರದಕ್ಷಿಣಿ ಸಮಸ್ಯೆ, ಹೆಣ್ಣಿನ ಕಣ್ಣೀರು, ಜಟಕಾ ಸೇರಿದಂತೆ ಅನೇಕ ಕವನಗಳನ್ನು ರಚಿಸಿದ್ದಾರೆ. ಸಮಾಜದಲ್ಲಿನ ವಾಸ್ತವಿಕತೆಯನ್ನು ತೆರೆದಿಡುವ ಪ್ರಯತ್ನದಲ್ಲಿ ಮಹಿಳಾ ಶೋಷಣೆ, ಸಮಾನತೆಗಳು ಇವರ ಬರಹಗಳಲ್ಲಿ ಬಿಂಬಿತವಾಗಿದೆ.
ಪ್ರಶಸ್ತಿ ಮತ್ತು ಸನ್ಮಾನಗಳು
ಕನ್ನಡ ಭಾವಗೀತೆಗಳು, ಜನಪದಗೀತೆಗಳು ಹಾಗೂ ಪ್ರಸಿದ್ಧ ಕವಿಗಳ ಕವನಗಳನ್ನು ತಮ್ಮ ಕಂಠದ ಮೂಲಕ ಜೀವ ತುಂಬಿ ಹಾಡುತ್ತಿದ್ದರು. ಜೊತೆಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಇವರನ್ನು ಗುರುತಿಸಿ 2000ರಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. 2007ರಲ್ಲಿ ಶಿವಮೊಗ್ಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಸಾರ್ವಜನಿಕ ಸನ್ಮಾನ, 2011ರಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸನ್ಮಾನ ಸೇರಿದಂತೆ ಕೆಲ ಸಂಘ-ಸಂಸ್ಥೆಯವರು ಹಾಗೂ ಶಾಲಾ ಕಾಲೇಜ್‌ಗಳು ಗುರುತಿಸಿ ಸನ್ಮಾನಿಸಿವೆ. ಆದರೆ, ಸುರಭಿ ಶಹಾಬುದ್ದೀನ್ ತಮ್ಮ ಜೀವನವನ್ನೇ ಕನ್ನಡಕ್ಕಾಗಿ ಮೀಸಲಿಟ್ಟು ಸೇವೆ ಸಲ್ಲಿಸಿದರೂ, ಸರ್ಕಾರವಾಗಲೀ, ಯಾವುದೇ ಜನಪ್ರತಿನಿಧಿಗಳು ಎಲೆಮರೆಯ ಕಾಯಿಯಂತೆ ಕನ್ನಡದ ಕೆಲಸ ಮಾಡಿದವರನ್ನು ಗುರುತಿಸಲಿಲ್ಲ ಎಂಬುದು ‘ಸುರಭಿ ಶಹಾಬುದ್ದೀನ್’ ಅಭಿಮಾನಿಗಳಲ್ಲಿನ ಬೇಸರದ ಸಂಗತಿ.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post