ಕೊಲ್ಕತ್ತಾ: ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡೆಸುತ್ತಿರುವ ಸಂವಿಧಾನ ಉಳಿಸಿ ಧರಣಿ 3ನೆಯ ದಿನಕ್ಕೆ ಕಾಲಿಟ್ಟಿದ್ದು, ಸಿಬಿಐ ಮುಂದೆ ಹಾಜರಾಗುವಂತೆ ಕೊಲ್ಕತ್ತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಅಲ್ಲದೇ ಸಿಬಿಐಗೆ ಸಹಕಾರ ನೀಡುವಂತೆಯೂ ಸೂಚಿಸಿದೆ.
ಶಾರದಾ ಚಿಟ್‌ಫಂಡ್ ಹಗರಣದ ತನಿಖೆಯ ವಿಚಾರವಾಗಿ ಸಿಬಿಐ ಎದುರು ಹಾಜರಾಗಿ ಸಹಕಾರ ನೀಡಬೇಕು ಎಂದು ಆದೇಶ ನೀಡಿರುವ ನ್ಯಾಯಾಲಯ, ಇದರ ಜೊತೆಗೆ ಕುಮಾರ್ ಅವರನ್ನು ಬಂಧಿಸಕೂಡದು ಎಂದು ಸಿಬಿಐಗೆ ಸಲಹೆ ನೀಡಿದೆ. ಈ ಮಧ್ಯೆ ಮಧ್ಯಂತರ ಪರಿಹಾರ ಕೋರಿ ರಾಜೀವ್ ಕುಮಾರ್ ಕಲ್ಕತ್ತಾ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಫೆ.೭ಕ್ಕೆ ಮುಂದೂಡಲಾಗಿದೆ.
ಶಾರದಾ ಹಾಗೂ ರೋಸ್ ವ್ಯಾಲಿ ಚಿಟ್ ಫಂಡ್ ಪ್ರಕರಣಗಳಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಭ್ರಷ್ಟಾಚಾರ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇವುಗಳ ವಿದ್ಯುನ್ಮಾನ ಸಾಕ್ಷಿಗಳನ್ನು ನಾಶಪಡಿಸಲು ಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ತಂಡ ಭಾನುವಾರ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಬಳಿಕ ಕೋಲ್ಕತ್ತ ಪೊಲೀಸರು ಐದು ಸಿಬಿಐ ಅಧಿಕಾರಿಗಳನ್ನು ಬಂಧಿಸಿದ್ದರು. ನಂತರ ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಧರಣಿ ಆರಂಭಿಸಿದ್ದಾರೆ.
ಶಿಲ್ಲಾಂಗ್ ನಲ್ಲಿ ಸಿಬಿಐ ಮುಂದೆ ರಾಜೀವ್ ಕುಮಾರ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
Discussion about this post