ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬದುಕಿನುದ್ದಕ್ಕೂ ಬಯಸಿದ್ದು ಕೇವಲ ಮಾನವ ಕಲ್ಯಾಣವನ್ನು…ಸ್ವಾರ್ಥ ಎಂಬ ಶಬ್ದವಿಲ್ಲದ ಕೋಶವನ್ನೋದಿದವರು ಮಾತ್ರ ದೊಡ್ಡವರಾಗುವರೇನೋ ಎಂದೆನಿಸುತ್ತದೆ.
ತಾಯಿ ಮಾತ್ರ ಹೆತ್ತು ತಾಯಿಯ ಸ್ಥಾನವನು ತುಂಬುವಳು. ತಂದೆಯೂ ಆಗಿ ಹೊರಬಲ್ಲಳು. ಗುರುವೂ ಆಗಿ ತಿದ್ದಿ ಮುನ್ನಡೆಸುವಳು. ಗೆಳತಿಯೂ ಆಗಿ ಮನಸನು ಹಂಚಿಕೊಳ್ಳುವಳು. ಬಂಧುವೂ ಆಗಿ ಕೈಚಾಚಬಲ್ಲಳು. ಬಳಗವೂ ಎನಿಸಿ ಹೆಗಲು ಕೊಡಬಲ್ಲಳು. ಶ್ರೀವಿಶ್ವೇಶತೀರ್ಥಶ್ರೀಪಾದರು ನಮಗೆ ಅಕ್ಷರಶಃ ಈ ಬಗೆಯ ತಾಯಿಯಾಗಿದ್ದಾರೆ.
ತಾಯಿ ಇಷ್ಟ ಆಗುವುದೇ ತ್ಯಾಗದಿಂದ. ಆ ತ್ಯಾಗ ನಮಗೆ ತಿಳಿದಿರುವುದಿಲ್ಲ ಅಷ್ಟೆ. ಮಗುವಾಗಿದ್ದಾಗ ರೆಚ್ಚೆ ಹಿಡಿದು ನಿದ್ದೆಡಿಸಿರುತ್ತೇವೆ. ಬೇಡವೆಂದುದನ್ನೇ ಮಾಡಿ ತಾಳ್ಮೆಯನ್ನು ತಾಳೆ ಹಿಡಿದಿರುತ್ತೇವೆ. ಅವಳಿಗೆ ನೂರಾರು ಜವಾಬ್ದಾರಿಗಳಿರುವುದನ್ನು ತೋರಗೊಡದೆ ನಮಗೆ ಪ್ರಪಂಚವಾಗಿರುತ್ತಾಳೆ. ಕಷ್ಟಗಳ ಹೊಟ್ಟೆಯಲ್ಲೇ ಹೊತ್ತು ನಮ್ಮನ್ನು ಅವುಚಿಕೊಂಡೆ ಅತ್ತಿದ್ದಾಳೆ. ಕೇಳಿದರೆ ನಕ್ಕುಬಿಟ್ಟಿದ್ದಾಳೆ. ತಣ್ಣೀರಿನ ಬಟ್ಟೆ ಏಕೆಂದಾಗ ಹೊಟ್ಟೆ ನೋವೆಂದಿದ್ದಾಳೆ. ಆದರೆ ನಮಗೆಂದೂ ಆ ಬಟ್ಟೆಯನ್ನು ಕಟ್ಟಿ ನೋವು ಗುಣಪಡಿಸಲಿಲ್ಲ. ನಾವು ಏಕೆ ಹಾಗೆ ಎಂದು ಎಂದೂ ಕೇಳಲಿಲ್ಲ. ಕೇಳುವ ಬುದ್ಧಿ ಬಂದಿದ್ದಾಗ ಇದೆಲ್ಲವೂ ಮರೆತುಹೋಗಿತ್ತು. ಈಗ ನೆನಪಾಗುತ್ತಿದೆ… ಕೇಳಲಾಗುತ್ತಿಲ್ಲ..
ತಂದೆ ಮೆಚ್ಚೆನಿಸುವುದು ಬೇಕೆನಿಸಿದ್ದನ್ನು ಕೇಳುವ ಮುನ್ನವೇ ತಂದುಕೊಡುವ ನಮ್ಮ ಗೋಡೆಗಳ ನಡುವಿನ ಪ್ರಪಂಚದ ಹೀರೋ. ತನ್ನ ಆಸೆಗಳ ಬಚ್ಚಿಟ್ಟು ಹೊರೆ ಎಂದುಕೊಳ್ಳದೆ ಹೊರುವ ಶಕ್ತಿ. ತಿಳಿಯದೆ ಬಂದೊದಗಿದ ಹಲವು ಆಪತ್ತುಗಳ ಪರಿಹರಿಸಿ ನಮ್ಮ ನಗುವೊಂದನ್ನೆ ಪ್ರಶಸ್ತಿಯಾಗಿ ಸ್ವೀಕರಿಸಿ ಹೆಮ್ಮೆ ಪಡುವ ಹೋರಾಟಗಾರ. ಬೆಳೆದಿರುವೆವು ಎಂದುಕೊಂಡು ಪ್ರಶ್ನಿಸಿದಾಗಲು ಹೆಗಲಿಗೆ ಕೈಹಾಕಿ ಮಾತಾಡಿಸುವಾಗ ಕೈಕೊಡವಿದ್ದನ್ನೂ ಹದವಾಗಿ ಸ್ವೀಕರಿಸುವ ಪ್ರಬುದ್ಧ. ಹೆತ್ತವರ ನಗು ನಾವು ಹೆತ್ತವರೆನಿಸುವವರೆಗು ಅರಿವಾಗುವುದೆ ಇಲ್ಲ. ಈಗ ಅರಿವಾಗುತ್ತಿದೆ… ಬಿಡಿಸಲಾಗುತ್ತಿಲ್ಲ..
ಬೆಳೆದಂತೆ ನಮ್ಮ ಬದುಕನ್ನು ಆವರಿಸಿಕೊಳ್ಳುವುದು ಗುರು. ಅವರ ವಿದ್ಯೆಯ ಭಾರ, ಅವರ ನಡೆಯ ದೊಡ್ಡತನ, ಅವರ ಆತ್ಮವಿಶ್ವಾಸದ ಸಿರಿವಂತಿಕೆ, ಹೇಳಿಕೊಡುವ ಕಲೆಗಾರಿಕೆ ಇವೆಲ್ಲ ಸೇರಿಕೊಂಡ ಗುರು ಆವರಿಸಿಕೊಳ್ಳದೆ ಇರುವುದಾದರೂ ಹೇಗೆ??
ತನ್ನ ಮಕ್ಕಳಿಗಿಂತಲು ಹೆಚ್ಚು ಪ್ರೀತಿಸಬಲ್ಲ ಶಕ್ತಿ ಇರುವುದಾದರೆ ಅದು ಗುರುವಿಗೆ ಮಾತ್ರ. ಶಿಕ್ಷೆಯಿಂದ ಶಿಕ್ಷಣ ನೀಡಿ, ಮತ್ತೆ ಹೆತ್ತು, ಶಿಷ್ಯನ ಅದಟನ್ನು ಅಳೆದು, ಗುರುತಿಸಿ ತಕ್ಕುದಾದಷ್ಟೆ ಬಡಿಸುವ ತಾಕತ್ತೇ ಗುರು. ಜೀವನಾನುಭವಗಳ ಹೊಸೆದು ಸಿಪ್ಪೆ ಸುಲಿದಂತೆ ಪಠ್ಯದಾಚೆಗಿನ ಹೊಚ್ಚ ಅಚ್ಚ ಬದುಕನ್ನು ಬಣ್ಣತುಂಬಿ ಕಟ್ಟಿಕೊಡುವ ನಿಸ್ಸೀಮ. ಜಂಜಡಗಳೆಲ್ಲ ಇಲ್ಲಿ ವಿಶ್ರಾಮ.
ಮೊದಲು ಮಾನವೀಯತೆಯಿಂದ ಒಡಗೂಡಿದ ಭಾರತೀಯತೆ. ನಂತರ ಧರ್ಮ, ಭಾಷೆ, ವೃತ್ತಿ, ಪ್ರಾಂತ್ಯ, ಸಂಸ್ಕೃತಿಗಳ ಗಡಿಯೆಂದು ಬೋಧಿಸಿದಾತನೆ ನಿಜವಾದ ಗುರು. ಗಿಣಿ ಕುಕ್ಕಿದ ಹಣ್ಣೆಂಬಂತೆ ಬರಬಹುದಾದ ಸಂಶಯಗಳ ತಾವೇ ಬಿಚ್ಚಿ ಸರಳ ಉತ್ತರ ನೀಡುತ್ತಿರುತ್ತಾರೆ. ಆಗ ಬೇರೆಡೆಗೆ ಜಾರಿದ ಬಗೆ ಗಮನಿಸಲಿಲ್ಲ. ಈಗ ಸಂದೇಹಿಸುತ್ತಿದೆ. ಯಾವುದು ಕಳಿತ ಹಣ್ಣು??? ಗುರುತು ಹತ್ತುತ್ತಿಲ್ಲ….
ಗೆಳೆಯ ನೋ ಗೆಳತಿ ಯೋ ಇರುವಾಗ ಬದುಕು ಹಸನೆನಿಸುತ್ತದೆ. ತಪ್ಪುಗಳ ತಪ್ಪಿಸಿ, ಸರಿದಾರಿ ತೋರುವ ಸರದಾರ. ಕೊರತೆಗಳ ಗುಟ್ಟು ಮುಚ್ಚಿಟ್ಟು ಪ್ರತಿಭೆಗಳ ಬಿಚ್ಚಿಡುವ ಹರಿಕಾರ. ಆಪತ್ತುಗಳ ಬಿರುಕನ್ನು ಸಂಬಂಧಗಳ ಹರುಕನ್ನು ಹೊಲಿವ ನೇಕಾರ. ತಪ್ಪದೆ, ಸರಿಹೊತ್ತಿಗೆ ಕೈಚಾಚಿ ಬದುಕಿಸುವ ಜೊತೆಗಾರ. ಆಗಲೆ ನೇಹಿಗತನಕ್ಕೊಂದು ಬೆಲೆ. ಅಂತಹ ಕೆಳೆತನ ಜೊತೆಗಿದ್ದರೂ ಕೆಡುಕು ಬಗೆವವರನ್ನೆ ಒಪ್ಪಿಕೊಳ್ಳತ್ತದೆ. ತಪ್ಪುಗಳ ಬೆಂಬಲಿಸುವುದನೆ ಮನ ಹಚ್ಚಿಕೊಳ್ಳುತ್ತದೆ.
ಎಲ್ಲೋ ಅಂಟಿಕೊಂಡಿದೆ ಎಂದು ತಿಳಿಯುತ್ತಿದೆ ಬಿಡಿಸಲಾಗುತ್ತಿಲ್ಲ… ಬಂಧಗಳಿಂದ ಬಿಡಿಸಿ ಹೊರತರುವ ಬಂಧು ಎಲ್ಲರೂ ಒಂದಾಗಿರಲು ಒತ್ತಾಯಿಸುತ್ತಿರುತ್ತಾನೆ. ಮನೆಯೊಳಗಣ ಹುಳಕು ಹೊರಬೀಳದಂತೆ ಎಚ್ಚರವಹಿಸುತ್ತಾನೆ. ಎಡವಿದ್ದನ್ನು ಅಲ್ಲಲ್ಲಿಯೆ ತೋರಗೊಟ್ಟು ಹಿರಿಯನೆನಿಸಿ ತಾನು ನಡೆದ ದಾರಿಯನು ಹಾಸಿಹೋಗುತ್ತಾನೆ. ಸಣ್ಣತನ ಅಧಿಕಾರ ಕುಹಕ ಹೊಟ್ಟೆಕಿಚ್ಚುಗಳಿಂದ ಕೌಟುಂಬಿಕ ಸಾಮರಸ್ಯ ಕೆಡದಂತೆ ತಡೆಯಲು ತಾನೆ ಏಟು ತಿನ್ನುತ್ತಾ ಗೋಡೆಯಾಗುತ್ತಾನೆ. ಇದೆ ತಡೆಯೆಂದು ಭಾವಿಸಿ ಗೋಡೆಯನ್ನು ಕೆಡವಿದ್ದೇವೆ. ಕೆಡುಕು ಗುಟುರು ಹಾಕಿಕೊಂಡು ಓಡೋಡಿ ನಮ್ಮತ್ತ ಬರುತ್ತಲಿದೆ. ಅಡಗಿಕೊಳ್ಳಲು ಗೋಡೆ ಇಲ್ಲ..
ಸಮಾಜ ಬಳಗದಿಂದಲೆ ಗಟ್ಟಿಗೊಳ್ಳುತ್ತದೆ. ಎಲ್ಲರ ಕಲ್ಯಾಣದ ನೊಗ ಹೊರುವ ಬಳಗ ಬದುಕನು ಬೆಳಗುತ್ತದೆ. ಎಲ್ಲರೂ ತಮ್ಮ ಪಕ್ಕದಲ್ಲಿದ್ದವರನು ಎತ್ತಿದರೆ ಸಮಾಜದ ಕೊರೆ ಮರೆಯಾಗುತ್ತದೆ. ನೀರಿನಲ್ಲಿ ಕುಳಿ ಉಳಿಯದಂತೆ. ನಮ್ಮ ಬಳಗವೆಂದರೆ ಸಾಮಾಜಿಕ-ಧಾರ್ಮಿಕ ಕಳಕಳಿಯಿಂದ ಸಾಂಸ್ಕೃತಿಕ-ಚಾರಿತ್ರಿಕ ಬಳುವಳಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಮಹತ್ತರ ಹೊಣೆ ಹೊತ್ತಿರುವ ಮೇಲ್ಮಾಳಿಗೆ. ಕೊಳಗಗಳಲಿ ಅಳೆಸಿಕೊಂಡರೂ ಹಳ್ಳವಿದ್ದಲ್ಲಿಗೆ ಹರಿಯಗೊಡುವ ಜೋಳಿಗೆ… ಸೋರುತಿಹುದು ಮನೆಯ ಮಾಳಿಗೆ…ಜಾರುತಿಹುದು ಹೆಗಲ ಜೋಳಿಗೆ…
ಎಲ್ಲ ಬಗೆಯ ಸಂಬಂಧಗಳನ್ನೂ ಒಟ್ಟಿಗೆ ನಿಭಾಯಿಸಬಲ್ಲ ನಮ್ಮೆಲ್ಲರ ತಾಯಿ ಈ ಹೊತ್ತು ನಮ್ಮೊಂದಿಗಿಲ್ಲ… ಯಾವ ದೃಷ್ಟಿಯಿಂದ ಗಮನಿಸಿದರೂ ಯಾವ ಹಿನ್ನೆಲೆಯಿಂದ ಬಂದವನಾದರೂ ಈ ತಾಯಿಯಲ್ಲಿ ಕಲಿಯುವಂತದ್ದು ತುಂಬ ಇದೆ. ಎಲ್ಲಬಗೆಯ ಶಾಸ್ತ್ರಗಳಲ್ಲಿಯೂ ಎತ್ತಿದ ಕೈ. ವಿದ್ಯಾ-ಪ್ರೇಮಿ. ಸೂಕ್ಷ್ಮ-ಗ್ರಾಹಿ. ಅಗಾಧವಾದ ನೆನಪಿನ ಮುದ್ದೆ. ನಿರಂತರ ಪಾಠ-ಪ್ರವಚನಗಳಲ್ಲಿ ತೊಡಗಿಸಿಕೊಂಡು ಕ್ಷಣವನ್ನೂ ವ್ಯರ್ಥಗೊಳಿಸದ ಕ್ರಿಯಾಶೀಲ. ಭಕ್ತಾನುಕಂಪಿ. ಶಿಷ್ಯ-ವತ್ಸಲ. ಕಠಿಣ ವಿಷಯಗಳನು ಸರಳೀಕರಿಸುವ ವಾಕ್ಪಟು. ಸಾರಗ್ರಾಹಿ. ಸಂಸ್ಕೃತ ಕನ್ನಡ ಎರಡರಲ್ಲೂ ಅಸೀಮ ಬರೆಹಗಾರ. ಎಲ್ಲ ಬಗೆಯ ಜನರನ್ನು ನಿಭಾಯಿಸುವ, ಸಮಾನವಾಗಿ ಪ್ರೀತಿಸುವ ಮಾನವತಾ-ವಾದಿ. ಕಲಾ-ಪೋಷಕ. ಕವಿ-ಹೃದಯಿ. ರಸಾಸ್ವಾದಕ. ಪ್ರಾಣೋಪಾಸಕ. ತಪಸ್ವೀ. ಕೃಷ್ಣ-ಪೂಜಾ-ಸೇವಕ. ಅನುಷ್ಠಾನ-ಶೀಲ. ತುಳಿತಕ್ಕೊಳಗಾದವರ ದನಿ. ಪರಿಸರ ಪ್ರಿಯ. ದೀನರಾದ ನಾನಾ-ಜನರ ಶುಶ್ರೂಷಕ. ಮುಗ್ಧ-ಶುದ್ಧ-ಹೃದಯಿ. ರಾಜ-ಗುರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ, ನಕ್ಸಲರ ಮನವೊಲಿಸಿದ ಸಮಾಜ-ಸುಧಾರಕ. ಧಾರ್ಮಿಕ ಮುಖಂಡ. ಇಂಥವರನು ಕಳೆದುಕೊಂಡು ಮಾನವ ಸಮಾಜ ಬರಿದಾಗಿದೆ.
ಆದರೂ…… ನಮ್ಮ ತಾಯಿ..
ಕೊಟ್ಟು ಹೋದ ನುಡಿಸಿರಿ ಬೆಳಕು ಎದೆಯಲ್ಲಿ ಹರಳಾಗಿದೆ.
ಬಿಟ್ಟು ಹೋದ ಗುರಿಹೊತ್ತ ದಾರಿ ನಡೆದಾಡಿ ಹದವಾಗಿದೆ.
ನೆಟ್ಟು ಹೋದ ಆಲದ ಮರ ಎಲ್ಲ ಜೀವಿಗಳಿಗು ನೆರಳಾಗಿದೆ.
ಇಟ್ಟುಹೋದ ನಮ್ಮ ಮೇಲಿನ ಭರವಸೆ ನಡೆಸಿ ಕೊಡುವ ಸಮಯ ಬಂದಿದೆ..
ಇಂತಿ ನಿಮ್ಮ ಮಗು
ಭಾರತೀಯ
Get in Touch With Us info@kalpa.news Whatsapp: 9481252093
Discussion about this post