ಕಲ್ಪ ಮೀಡಿಯಾ ಹೌಸ್ | ಕಾಪು |
ಉಡುಪಿ–ಮಂಗಳೂರು ನಡುವೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ಟೈಮಿಂಗ್ಸ್ ಸ್ಪರ್ಧೆ ಮತ್ತೊಮ್ಮೆ ಮಿತಿಮೀರಿದ್ದು, ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗುವ ಭೀಕರ ಘಟನೆ ಸೋಮವಾರ ಬೆಳಿಗ್ಗೆ ಕಾಪು ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿ ನಡೆದಿದೆ.
ಘಟನೆ ಹೇಗೆ ನಡೆದಿದೆ?
ಉಡುಪಿಯಿಂದ ಮಂಗಳೂರಿಗೆ ಹೊರಟಿದ್ದ ‘ಸಂದೇಶ್ ಟ್ರಾವೆಲ್ಸ್’ ಮತ್ತು ‘ಆನಂದ್ ಟ್ರಾವೆಲ್ಸ್’ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಉದ್ಯಾವರದಿಂದಲೇ ಟೈಮಿಂಗ್ಸ್ ವಿಚಾರವಾಗಿ ಜಗಳ ಆರಂಭವಾಗಿತ್ತು.
ಕಾಪು ತಲುಪಿದಾಗ ಸಂದೇಶ್ ಟ್ರಾವೆಲ್ಸ್ ಬಸ್ ಪ್ರಯಾಣಿಕರನ್ನು ಹತ್ತಿಸಲು ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ವೇಳೆ, ಹಿಂಬದಿಯಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ಚಾಲಕ ಆಕ್ರೋಶದಿಂದ ನೇರವಾಗಿ ಬಲಭಾಗಕ್ಕೆ ಢಿಕ್ಕಿ ಹೊಡೆದಿದ್ದಾನೆ.
ಪ್ರಯಾಣಿಕರಲ್ಲಿ ಭೀತಿ
ಢಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿ ಬೊಬ್ಬೆ ಹೊಡೆದಿದ್ದಾರೆ. ಅದೃಷ್ಟವಶಾತ್ ದೊಡ್ಡ ಪ್ರಮಾಣದ ಗಾಯಗಳ ವರದಿ ಇಲ್ಲದಿದ್ದರೂ, ಘಟನೆಯಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
Also read>> Shivamogga | ಅಪರಿಚಿತ ವಾಹನ ಡಿಕ್ಕಿ, ಸ್ಥಳದಲ್ಲೇ ಬೈಕ್ ಸವಾರ ಸಾವು
ಸಂಚಾರ ಅಸ್ತವ್ಯಸ್ತ
ಅಪಘಾತದ ನಂತರ ಚಾಲಕರು ರಸ್ತೆಯಲ್ಲೇ ಬಸ್‌ಗಳನ್ನು ಅಡ್ಡವಾಗಿ ನಿಲ್ಲಿಸಿ ಪರಸ್ಪರ ವಾಗ್ವಾದ ನಡೆಸಿದ ಪರಿಣಾಮ, ಸುಮಾರು 15 ನಿಮಿಷಗಳ ಕಾಲ ಕಾಪು ಸರ್ವಿಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
ಸಾರ್ವಜನಿಕರು ಮತ್ತು ಆಟೋ ಚಾಲಕರು ಮನವಿ ಮಾಡಿದರೂ, ಚಾಲಕರು ಬಸ್‌ಗಳನ್ನು ತೆರವುಗೊಳಿಸಲು ನಿರಾಕರಿಸಿದರು.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಬಸ್‌ಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.
ಸಾರ್ವಜನಿಕರ ಆಕ್ರೋಶ
ಕಾಪು ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ನಿರಂತರ ಕಿರಿಕಿಯಿಂದ ಬೇಸತ್ತಿರುವ ಸಾರ್ವಜನಿಕರು, ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್ ಸಂಚಾರವನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







