ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಂತಸವನ್ನು ಅಭಿವ್ಯಕ್ತಿ ಪಡಿಸುವಾಗ ಮನಸ್ಸು ಉಲ್ಲಾಸಹೊಂದಿ ದೇಹದ ಹಾವ-ಭಾವಗಳು ಬದಲಾಗಿ ಆಂಗಿಕ ಅಭಿನಯವು ಹೊರಹೊಮ್ಮುತ್ತದೆ. ಈ ರೀತಿ ನಲಿಯುವ ಉಲಿಯುವ ಪರಿಪಾಠ ಮಾನವನಿಗೆ ಅನಾದಿ ಕಾಲದಿಂದಲೇ ಬಂದಿರಬೇಕು. ಪ್ರಕೃತಿಯೇ ಇದಕ್ಕೆ ಪೂರಕವಾದ ಅಂಶಗಳನ್ನು ಒದಗಿಸಿರಬಹುದು. ಮಳೆ ಬರುವ ಮುನ್ಸೂಚನೆಯಾದೊಡನೆ ಅಥವಾ ಬಾನಲ್ಲಿ ಕಾಮನಬಿಲ್ಲು ಮೂಡುವಾಗ ಗಂಡು ನವಿಲು ಗರಿಬಿಚ್ಚಿ ನಾಟ್ಯ ಗೈಯುತ್ತದೆ. ವಸಂತಕಾಲದಲ್ಲಿ ಕೋಗಿಲೆ ಮುಂತಾದ ಪಕ್ಷಿಗಳು ಲಯಬದ್ಧವಾಗಿ ಹಾಡಿದರೆ ಇನ್ನು ಕೆಲವು ಪಕ್ಷಿಗಳು ಲಾಸ್ಯದ ಹೆಜ್ಜೆ ಹಾಕುತ್ತವೆ.
ನಾಗರ ಹಾವುಗಳು ಮಿಲನವನ್ನು ಹೊಂದುವ ಸಮಯದಲ್ಲಿ ಬಾಲದ ತುದಿಯಲ್ಲಿ ನಿಂತು ಒಂದನ್ನೊಂದು ಸುರುಳಿ ಸುತ್ತುತ್ತ ನೃತ್ಯ ಮಾಡುತ್ತ ಕೂಡುತ್ತವೆ. ನಮ್ಮ ಸನಾತನ ಧರ್ಮ ಹೇಳುವಂತೆ ಲೋಕಾಧ್ಯಕ್ಷನಾದ ಶಿವನು ತನ್ನ ತಾಂಡವ ನೃತ್ಯದಿಂದ ಸೃಷ್ಟಿ ಮತ್ತು ಲಯವನ್ನು ಮಾಡುತ್ತಾನೆ. ಸುಧರ್ಮ ಸಭೆ ಎಂದು ಕರೆಯಲಾಗುವ ಸ್ವರ್ಗದಲ್ಲಿ ರಂಭೆ, ಊರ್ವಶಿ, ಮೇನಕಾ ಮುಂತಾದ ಅಪ್ಸರಾ ಸ್ತ್ರೀಯರು ನಿಯಮಿತವಾಗಿ ನೃತ್ಯ ಸೇವೆ ಮಾಡುತ್ತಾರೆ.
ಇತಿಹಾಸಕ್ಕೆ ಬಂದರೆ ರಾಜರ ಆಸ್ಥಾನಗಳಲ್ಲಿ ರಾಜನರ್ತಕಿಯರು/ನರ್ತಕರು ಇರುತ್ತಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಕುಣಿತ/ನೃತ್ಯಗಳು ಅಥವಾ ಲಲಿತ ಕಲೆಗಳು ಮಾನವ ಇತಿಹಾಸದ ಉಗಮದಿಂದಲೂ ಅವನೊಂದಿಗೆ ಅಂತಸ್ಥವಾಗಿವೆ.
ಭಾರತದಲ್ಲಿ ಭರತನಾಟ್ಯ, ಕೂಚಿಪುಡಿ, ಒಡಿಸ್ಸಿ, ಮಣಿಪುರಿ, ಕಥಕ್ಕಳಿ, ಮೋಹಿನಿ ಅಟ್ಟಂ, ಕಥಕ್, ಸತ್ರಿಯಾ ಮುಂತಾದವುಗಳು ಶಾಸ್ತ್ರೀಯ ನೃತ್ಯಗಳೆಂದು ಪರಿಗಣಿಸಲ್ಪಟ್ಟಿವೆ. ಕರ್ನಾಟಕದ ಯಕ್ಷಗಾನ ಹಾಗೂ ಭಾಗವತರ ಮೇಳಗಳ ನೃತ್ಯಗಳು ಶಾಸ್ತ್ರೀಯ ನೃತ್ಯಗಳೆಂದು ಹೇಳಲ್ಪಡುತ್ತವೆ. ನಮ್ಮಲ್ಲಿ ಸುಮಾರು ಒಂದೂವರೆ ಸಾವಿರಕ್ಕಿಂತ ಹೆಚ್ಚು ಜಾನಪದ ನೃತ್ಯಗಳಿವೆ. ಅನಂತರದ ಕಾಲಘಟ್ಟದಲ್ಲಿ ಪಾಶ್ಚಾತ್ಯರ ಆಗಮನದಿಂದ ಅಥವಾ ಅವರ ಅನುಕರಣೆಗಳಿಂದ ನಮ್ಮಲ್ಲೂ ಆಧುನಿಕ ನೃತ್ಯಗಳು ಅಸ್ತಿತ್ವಕ್ಕೆ ಬಂದವು.
ಆಧುನಿಕ ನೃತ್ಯಗಳು (Modern Dances) ನಮ್ಮ ನೆಲದಲ್ಲಿ ಸೊಗಸಾಗಿ ಬೆಳೆದವು. ಕೆಲವು ನೃತ್ಯಗಳು ಭಾರತೀಯತೆಯನ್ನು ಸೇರಿಸಿಕೊಂಡು ಮೂಲ ಸ್ವರೂಪದಲ್ಲಿ ಪರಿವರ್ತನೆಗೊಂಡವು. ಶಾಸ್ತ್ರೀಯ ನೃತ್ಯಗಳನ್ನು ಕಲಾಸಂಸ್ಥೆಗಳು ಹಾಗೂ ಗುರು ಶಿಷ್ಯ ಪರಂಪರೆ ಪೋಷಿಸಿಕೊಂಡು ಬಂದರೆ; ಆಧುನಿಕ ನೃತ್ಯಗಳನ್ನು ಚಲನಚಿತ್ರ, ದೂರದರ್ಶನ ಮಾಧ್ಯಮಗಳು ಪೋಷಿಸಿದವು. ಆಧುನಿಕ ನೃತ್ಯಗಳಲ್ಲಿ ಪ್ರಸಿದ್ಧಿಗೊಂಡಿರುವ ನೂರಾರು ವಿಧಗಳಿವೆ. ಹಿಪ್ ಹಾಪ್, ಬೆಲ್ಲಿ, ಸಾಲ್ಸಾ, ಸಾಂಬಾ, ರುಂಬಾ, ಝುಂಬಾ, ಜಾಝ್, ಟ್ಯಾಪ್, ವಾಲ್ಟ್ಜ್, ಟ್ಯಾಂಗೋ, ಬ್ರೇಕ್ ಡ್ಯಾನ್ಸ್, ಸಮಕಾಲೀನ ಹೀಗೆ ಯಾದಿ ಬೆಳೆಯುತ್ತ ಹೋಗುತ್ತದೆ. ಭಾರತದಲ್ಲಿ ಕಳೆದ ಶತಮಾನದ ಕೊನೆಯ ಭಾಗ ಹಾಗೂ ಇಪ್ಪತ್ತೊಂದನೆ ಶತಮಾನದ ಆರಂಭದ ಈ ಕಾಲವು ಆಧುನಿಕ ನೃತ್ಯಗಳಿಗೆ ಪರ್ವಕಾಲ. ದೂರದರ್ಶನದ ನೂರಾರು ವಾಹಿನಿಗಳಲ್ಲಿ ನಿತ್ಯ ನಿರಂತರ ಆಧುನಿಕ ನೃತ್ಯಗಳ ರಿಯಾಲಿಟಿ ಶೋಗಳು ನಡೆಯುತ್ತ ಇರುತ್ತವೆ.
ಲಕ್ಷೋಪಲಕ್ಷ ಜನರು ಆಧುನಿಕ ನೃತ್ಯಗಳನ್ನು ಪರಿಶ್ರಮಗಳಿಂದ ಕಲಿತು, ಕಲಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ. ಹೀಗೆ ಇಂಜಿನಿಯರಿಂಗ್ (ಡಿಪ್ರೋಮಾ) ಕಲಿತರೂ ನೃತ್ಯದ ಮೇಲಿನ ಅತೀವ ಆಸಕ್ತಿಯಿಂದ ನೃತ್ಯ ಸಂಯೋಜಕರಾಗಿ ಉಡುಪಿಯಲ್ಲಿ ಎಕ್ಸ್-ಟ್ರೀಮ್ ಡ್ಯಾನ್ಸ್ ಅಕಾಡೆಮಿಯನ್ನು ಸ್ಥಾಪಿಸಿ ಬದುಕು ಕಟ್ಟಿಕೊಂಡವರು ಮಂಜಿತ್ ಶೆಟ್ಟಿ.
ಉಡುಪಿಯ ಶ್ರೀಮತಿ ಪ್ರೇಮಾ ಹಾಗೂ ಶ್ರೀ ಸುಧಾಕರ್ ಶೆಟ್ಟಿ ದಂಪತಿಗಳ ಮಗ ಮಂಜಿತ್ ಶೆಟ್ಟಿ. ಉಡುಪಿ ನಗರದ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾಥಮಿಕ ಹಾಗೂ ಸಂತ ಮರಿಯ ಪ್ರೌಢ ಶಾಲೆಯಿಂದ ಪ್ರೌಢ ಶಿಕ್ಷಣ ಪಡೆದವರು. ಎಂ.ಜಿ.ಎಂ. ಕಾಲೇಜಿನಿಂದ ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮುಗಿಸಿ ಮಣಿಪಾಲದ ಟಿ.ಎಂ.ಎ.ಪೈ. ಪಾಲಿಟೆಕ್ನಿಕ್ ಸಂಸ್ಥೆಯಿಂದ ಆಟೋಮೊಬೈಲ್ ಇಂಜಿನಿಯರಿಂಗ್ ವಿಭಾಗದಿಂದ ಡಿಪ್ರೋಮಾ ಪದವಿ ಪಡೆದವರು. ಮಂಜಿತ್ ಅವರಿಗೆ ನೃತ್ಯ ಎಂದರೆ ಬಾಲ್ಯದಿಂದಲೇ ಅತೀವ ಆಸಕ್ತಿ. ಆದರೆ ದುಬಾರಿ ಮುಂಗಡ ಹಾಗೂ ಮಾಸಿಕ ಶುಲ್ಕ ನೀಡಿ ನೃತ್ಯ ಶಾಲೆ ಸೇರುವಂತಿರಲಿಲ್ಲ ಅವರ ಅಂದಿನ ಪರಿಸ್ಥಿತಿ. ಒಂಬತ್ತನೆ ತರಗತಿಯಲ್ಲಿರುವಾಗ ಹೇಗಾದರೂ ಮಾಡಿ ನೃತ್ಯ ಕಲಿಯಲೇ ಬೇಕೆಂಬ ಉತ್ಕಟವಾದ ಅಪೇಕ್ಷೆಯನ್ನರಿತ ಆತ್ಮೀಯ ಸಹಪಾಠಿ ನಿಶಾಂತ್ ಅವರ ಸಹಾಯಹಸ್ತದಿಂದ ನೃತ್ಯ ಶಾಲೆಗೆ ಪ್ರವೇಶ ಪಡೆದರು. ಮಂಜಿತ್ ಅವರ ರಂಗಪ್ರವೇಶ ನಡೆದದ್ದು ಖ್ಯಾತ ನೃತ್ಯಪಟು ಪ್ರಭುದೇವ ಅವರು ನರ್ತಿಸಿದ ಮುಕಾಬುಲಾ ಹಾಡಿಗೆ. ಈ ಸಹಾಯಕ್ಕಾಗಿ ನಿಶಾಂತ್ ಅವರಿಗೆ ಇಂದಿಗೂ ಮುಂದಿಗೂ ಕೃತಜ್ಞರಾಗಿದ್ದಾರೆ. ಮಂಜಿತ್ ಅವರಿಗೆ ನಿರಂತರ ಪ್ರೋತ್ಸಾಹ ನೀಡಿದವರು ಅವರ ಹಿರಿಯಕ್ಕ ಮಂಜುಳಾ ಅವರು. ಪ್ರಸ್ತುತ ಪತಿ ದತ್ತರಾಮ್ ಶೆಟ್ಟಿ ಹಾಗೂ ಪುತ್ರ ರೇಯಾನ್ಸ್ ಅವರೊಂದಿಗೆ ಹೈದ್ರಾಬಾದಿನಲ್ಲಿ ನೆಲೆಸಿದ್ದಾರೆ.
ಸತತವಾಗಿ ನೃತ್ಯಾಭ್ಯಾಸವನ್ನು ಜಾರಿಯಲ್ಲಿರಿಸಿದ ಮಂಜಿತ್ ಅವರು ಮುಂದೆ ಮಂಗಳೂರಿನ Excellent Dance Academy ಸೇರುತ್ತಾರೆ. ಅಲ್ಲಿ ಸಂದೇಶ್ ಜಾಹ್ನವಿ, ಗೌತಮ್, ಚರಣ್ ಹಾಗೂ ಸುರೇಶ್ ಆಚಾರ್ಯ ಮುಂತಾದ ನೃತ್ಯಗುರುಗಳ ಗರಡಿಯಲ್ಲಿ ಪಳಗುತ್ತಾರೆ. ಉಡುಪಿಯಲ್ಲಿ ತನ್ನದೇ ಆದ Xtreme Dance Academy (R) ಎಂಬ ನೃತ್ಯ ಶಾಲೆಯನ್ನು 2007 ರಲ್ಲಿ ಸ್ಥಾಪಿಸುತ್ತಾರೆ. ಹದಿಮೂರು ವರ್ಷಗಳ ಹಿಂದೆ ಕೇವಲ ಮೂರು ನೃತ್ಯಾಭ್ಯಾಸಿಗಳೊಂದಿಗೆ ಆರಂಭವಾದ ನೃತ್ಯಶಾಲೆಯಲ್ಲಿ ಇಂದು ಸುಮಾರು ಇನ್ನೂರು ಮಂದಿ ಕಲಿಯುತ್ತಿದ್ದಾರೆ. ಮಂಜಿತ್ ಅವರು ಕಳೆದ ಮೂರು ವರ್ಷಗಳಿಂದ ದೈಹಿಕ ಸದೃಢತೆಗಾಗಿ ಕಲಿಸುವ ಝುಂಬಾ ನೃತ್ಯವನ್ನೂ ಕಲಿಸುತ್ತಿದ್ದಾರೆ.
ಹಲವಾರು ರಿಯಾಲಿಟಿ ಶೋಗಳಿಗಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಅದರಲ್ಲಿ ಧೀ ಜೂನಿಯರ್ಸ್ ಈಟಿವಿ (ತೆಲುಗು), ಸುವರ್ಣ ವಾಹಿನಿಯ Sye to Dance, ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ (ಜೂನಿಯರ್ಸ್), ಸ್ಪಂದನ ವಾಹಿನಿಯ ಡ್ಯಾನ್ಸ್ ಕ ಸೂಪರ್ ಸ್ಟಾರ್, ದೈಜಿವಲ್ಡರ್ ವಾಹಿನಿಯ ಜೂನಿಯರ್ ಮಸ್ತಿ, ಚಂದನ ವಾಹಿನಿಯ ಮಧುರ ಮಧುರವೀ ಮಂಜುಳಗಾನ ಪ್ರಮುಖವಾಗಿವೆ. ಅನೇಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆಗಳಲ್ಲಿ ವಿಜಯಶಾಲಿಯಾಗಿದ್ದಾರೆ.
ಅವರ ಈ ವಿಜಯಯಾತ್ರೆಯು ಕರ್ನಾಟಕದ ಗಡಿ ದಾಟಿ ಪುಣೆ ಮುಂಬೈ, ಹೈದ್ರಾಬಾದ್, ಗೋವಗಳಿಗೂ ವಿಸ್ತರಿಸಲ್ಪಟ್ಟಿದೆ. ಮಲ್ಪೆ ರೋಟರಿ ಕ್ಲಬ್ಬು ’ನಾಟ್ಯ ಚತುರ’ ಎಂಬ ಬಿರುದನ್ನಿತ್ತು ಸನ್ಮಾಸಿದೆ. ಮಂಜಿತ್ ಅವರು ನಿಶುಲ್ಕವಾಗಿ ಆಶಾ ನಿಲಯದ ದಿವ್ಯಾಂಗ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ ಮತ್ತು ಸ್ಪರ್ಧೆಲ್ಲಿ ಆ ಮಕ್ಕಳು ಗೆದ್ದಿದ್ದಾರೆ. ಜಪಾನಿನಲ್ಲಿ ನಡೆಯುವ ನೃತ್ಯ ಸ್ಪರ್ಧೆಯಲ್ಲಿ ಜೆಸಿಐ ಸಂಸ್ಥೆಯನ್ನು ಪ್ರತಿನಿಧಿಸುವ ಮಕ್ಕಳಿಗೆ ನೃತ್ಯ ಸಂಯೋಜನೆ ಮಾಡುವ ಯೋಜನೆಯನ್ನಿಟ್ಟು ಕೊಂಡಿದ್ದಾರೆ.
ಮಂಜಿತ್ ಅವರು ಬಾಲಿವುಡ್, ಅರೆಶಾಸ್ತ್ರೀಯ (Semi Classical) ಫ್ರೀಸ್ಟೈಲ್, ಸಮಕಾಲೀನ (Contemporary) ಮೊದಲಾದ ನೃತ್ಯ ಪ್ರಕಾರಗಳನ್ನು ಕಲಿಸುತ್ತಾರೆ. ಹದಿಮೂರು ವರ್ಷಗಳಲ್ಲಿ ತಮ್ಮ ನೃತ್ಯಶಾಲೆಯಲ್ಲಿ ಒಂದೂವರೆ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೃತ್ಯವನ್ನು ಕಲಿತಿದ್ದಾರೆ. ಒಟ್ಟಾರೆಯಾಗಿ ಹತ್ತು ಸಾವಿರದಷ್ಟು ವಿದ್ಯಾರ್ಥಿಗಳಿಗೆ ನೃತ್ಯ ಕಲಿಸಿದ್ದಾರೆ. ಮಂಜಿತ್ ಅವರ ಕೆಲವು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ವಿಜಯಿಯಾಗಿ ಕೀರ್ತಿ ತಂದಿದ್ದಾರೆ. ಮಂಜಿತ್ ಅವರ ಅನುಜೆ ಸ್ಪೂರ್ತಿ ಡಿ. ಶೆಟ್ಟಿಯವರು 2018ರಲ್ಲಿ ’ಮಿಸ್ ಟೀನ್’ ಕರ್ನಾಟಕ ಸ್ಪರ್ಧೆಯಲ್ಲಿ ವಿಜಯಿಯಾಗಿ ’ಮಿಸ್ ಟೀನ್ ಇಂಡಿಯಾ’ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದಾರೆ. 2019 ರಲ್ಲಿ ಹೈದ್ರಾಬಾದಿನಲ್ಲಿ ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ರೂಪದರ್ಶಿಯಾಗಿ ಹೊರಹೊಮ್ಮಿದ್ದಾರೆ. ಚಿಕ್ಕಮಗಳೂರಲ್ಲಿ ನಡೆದ ಕ್ವೀನ್ ಆಫ್ ಕರ್ನಾಟಕ’ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪಂದನ ವಾಹಿನಿಯಲ್ಲಿ ನಡೆದ ಡ್ಯಾನ್ಸ್ ಕ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿ ಪ್ರಥಮ ರನ್ನರ್ ಆಫ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೃತಿ ಉಚ್ಚಿಲ್ ಅವರು ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ (ಜೂನಿಯರ್ಸ್) ಹತ್ತು ಅತ್ಯುತ್ತಮ ಸ್ಪರ್ಧೆಗಳಲ್ಲಿ ಒಬ್ಬರಾಗಿದ್ದರು. ಸ್ಪಂದನ ವಾಹಿನಿಯ ಡ್ಯಾಕ್ಸ್ ಕ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಪ್ರಥಮ ರನ್ನರ್ ಆಫ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಾನ್ವಿ ಶಾನುಭೋಗ್ ದೈಜಿ ವಲ್ಡರ್ ವಾಹಿನಿಯ ಜೂನಿಯರ್ ಮಸ್ತಿಯಲ್ಲಿ ದ್ವಿತೀಯ ರನ್ನರ್ ಆಫ್ ಪ್ರಶಸ್ತಿಯನ್ನೂ, ಸ್ಪಂದನ ವಾಹಿನಿಯ ಡ್ಯಾನ್ಸ್ ಕ ಸೂಪರ್ ಸ್ಟಾರ್ ನಲ್ಲಿ ಸೆಮಿ ಫೈನಲಿಸ್ಟ್ ಆಗಿ ಹಂತ ತಲುಪಿದ್ದರು. ಹರ್ಷಿತಾ ಸೇರಿಗಾರ್ ಅವರು ದೈಜಿ ವಲ್ಡರ್ ವಾಹಿನಿಯ ಜೂನಿಯರ್ ಮಸ್ತಿಯಲ್ಲಿ ಹಾಗೂ ಸ್ವಂದನ ವಾಹಿನಿಯ ಡ್ಯಾನ್ಸ್ ಕ ಸೂಪರ್ ಸ್ಟಾರ್ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆದವರು. ಸೋಹನ್ ಆಳ್ವ ಅವರು ದೈಜಿ ವಲ್ಡರ್ ವಾಹಿನಿಯ ಕಿಂಗ್ ಆಫ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೆಮಿ ಫೈನಸ್ಟ್ ಆದವರು. ಸೋಹನ ಶಂಕರ್ ಅವರು ದೈಜಿ ವಲ್ಡರ್ ವಾಹಿನಿಯ ಕ್ವೀನ್ ಆಫ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಮತ್ತು ಜೂನಿಯರ್ ಮಸ್ತಿಯಲ್ಲಿ ಸೆಮಿ ಫೈನಲಿಸ್ಟ್ ಆದವರು. ತನಿಶಾ ಪೂಜಾರಿ, ಸೃಷ್ಟಿ ಗುರುರಾಜ್ ಜೂನಿಯರ್ ಮಸ್ತಿ ಸ್ಪರ್ಧೆಯಲ್ಲಿ ಕಾರ್ಟರ್ ಫೈನಲಿಸ್ಟ್ ಆದವರು. ದಿಶ್ವಿ ಅವರು ಜೂನಿಯರ್ ಮಸ್ತಿಯಲ್ಲಿ ’ಚೋಟ ಪ್ಯಾಕೆಟ್’ ಆದವರು. ವೈಷ್ಣವಿ ಶೆಟ್ಟಿ ಅವರು ಮಿಸ್ ಟೀನ್’ ಮಣಿಪಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು. ಹೀಗೆ ಪಟ್ಟಿ ಬೆಳೆಯುತ್ತದೆ.
ಭಾವ, ತಾಳ, ಲಯ ಯುಕ್ತವಾದ ಅಭಿನಯವೇ ನೃತ್ಯ. ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ನೈತಿಕವಾಗಿ ವ್ಯಕ್ತಿಯ ನಡವಳಿಕೆಗಳನ್ನು ತಿದ್ದಿ ವಿಕಾಸದೆಡೆಗೆ ಪ್ರೇರೇಪಿಸುವ ಶಕ್ತಿ ನೃತ್ಯ ಕಲೆಗಿದೆ. ಅಂತಃಕರಣವನ್ನು ಪ್ರಚೋದಿಸುವ ಅತಿ ಸುಂದರವಾದ ನೃತ್ಯ ಜೀವನದ ಬರಿಯ ಪ್ರತಿಬಿಂಬ ಅಥವಾ ಆಕರ್ಷಣವಲ್ಲ. ಅದು ಜೀವನವೇ ಆಗಿದೆ ಎಂದು ಸೊಗಸಾಗಿ ವ್ಯಾಖ್ಯಾನಿಸಿದ್ದಾರೆ ವಿದೇಶಿ ಸಾಹಿತಿಯೊಬ್ಬರು. ಮೈ-ಮನವನ್ನು ಮುದಗೊಳಿಸುವ ನೃತ್ಯವನ್ನೇ ಪೂಜಿಸುತ್ತ, ಆರಾಧಿಸುತ್ತ, ಅದನ್ನೇ ಉಸಿರು ಮತ್ತು ಬದುಕನ್ನಾಗಿಸಿಗೊಂಡ ಮಂಜಿತ್ ಅವರಿಗೆ ಭವಿತವ್ಯದಲ್ಲಿ ಇನ್ನಷ್ಟು ಮತ್ತಷ್ಟು ಕೀರ್ತಿ ಬರಲಿ. ಅವರ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಹೆಸರು ಗಳಿಸಲಿ.
Get In Touch With Us info@kalpa.news Whatsapp: 9481252093
Discussion about this post