ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಶಿವಮೊಗ್ಗದಲ್ಲಿ ಡಿ. 22-28ರಿಂದ 28ರ ವರೆಗೆ ಸಂಗೀತ ಕ್ಷೇತ್ರದಲ್ಲಿ ದಾಖಲಾರ್ಹವಾಗುವ ಸಮಾರೋಹವೊಂದು ಜರುಗಲು ಈಗ ಕ್ಷಣಗಣನೆ ಆರಂಭವಾಗಿದೆ. ರಾಷ್ಟ್ರೀಯ ಮಟ್ಟದ ವೀಣಾ ದಿಗ್ಗಜರು ಇದಕ್ಕೆ ಸಾಕ್ಷಿಯಾಗಲಿದ್ದಾರೆ. ಒಂದು ವಾರ ಕಾಲ ಅದೆಂಥ ಉತ್ಸವ ನಡೆದೀತು? ಇದರ ಹಿನ್ನೆಲೆ ಏನು, ಯಾಕಾ ಇಂಥ ಉತ್ಸವಗಳು ಸಂಗೀತ ರಂಗದಲ್ಲಿ ಮಹತ್ವಪೂರ್ಣ ಎನಿಸುತ್ತವೆ, ಸಜ್ಜನರು ಮತ್ತು ಸಂಗೀತ ಪ್ರೇಮಿಗಳು ಇಂಥ ಉತ್ಸವಗಳಿಗೆ ಏಕೆ, ಹೇಗೆ ಸ್ಪಂದಿಸುತ್ತಿದ್ದಾರೆ….. ಇತ್ಯಾದಿಗಳನ್ನು ಕೊಂಚ ಅವಲೋಕಿಸಲು ಇದು ಸಕಾಲ.
ಅಂದಹಾಗೆ 22ರ ಸಂಜೆ ರವೀಂದ್ರ ನಗರದ ಗಣಪತಿ ದೇವಾಲಯದಲ್ಲಿ ಸಂಜೆ 6ಕ್ಕೆ ಉತ್ಸವಕ್ಕೆ ಮತ್ತೂರಿನ ಶ್ರೀ ಬೋಧಾನಂದೇಂದ್ರ ಸರಸ್ವತಿ ಸ್ವಾಮೀಜಿ ಚಾಲನೆ ನೀಡಲಿದ್ದು, ಹಿರಿಯ ಸಂಗೀತ ಪೋಷಕ ಎಂ. ಭರದ್ವಾಜ್, ವಿಜಯವಾಣಿ ಬೆಂಗಳೂರು ಕೇಂದ್ರ ಕಚೇರಿ ಮುಖ್ಯ ಉಪ ಸಂಪಾದಕ ಎ.ಆರ್. ರಘುರಾಂ, ಬ್ರಾಹ್ಮಣ ಮಹಾಸಭಾ ವಕ್ತಾರ ಮಾ.ಸ.ನಂಜುಂಡಸ್ವಾಮಿ ಮತ್ತಿರರರು ಸಾಕ್ಷಿಯಾಗಲಿದ್ದಾರೆ. ಇದೇ ಸಂದರ್ಭ ಹಿರಿಯ ಉದ್ಯಮಿ ಎಸ್.ಎಸ್. ಜ್ಯೋತಿ ಪ್ರಕಾಶರಿಗೆ ಅಭಿನಂದನೆಯೂ ನಡೆಯಲಿದೆ. ನಂತರ ಬೆಂಗಳೂರಿನ ವಿದುಷಿ ಭಾಗ್ಯಲಕ್ಷ್ಮೀ ಅವರಿಂದ ವೀಣಾವಾದನ ಕಚೇರಿ ನಡೆಯಲಿದೆ.
ವೀಣೆಯನ್ನು ಕುರಿತು, ಸಪ್ತಾಹ ಕಾರ್ಯಕ್ರಮವನ್ನು 15 ವರ್ಷಗಳಿಂದ ಅರ್ಥಪೂರ್ಣವಾಗಿ ನಡೆದಿರುವುದು, ನಡೆಯುತ್ತಿರುವುದಕ್ಕೆ ಶಾಸ್ತ್ರೀಯ ಪರಂಪರೆಯಲ್ಲಿ ಮಲೆನಾಡಿನ ತವರು ಶಿವಮೊಗ್ಗ ಒಂದು ದಾಖಲೆಯನ್ನೇ ನಿರ್ಮಿಸಿದೆ. 4 ದಶಕಗಳಿಂದ ಕರ್ನಾಟಕ-ಹಿಂದುಸ್ಥಾನಿ ಸೇರಿ ಶಾಸ್ತ್ರೀಯ ಸಂಗೀತದ ವಿವಿಧ ಪ್ರಾಕಾರಗಳಿಗೆ ಆಶ್ರಯ-ಅಪೂರ್ವ ವೇದಿಕೆ ನೀಡಿದ ಅಗ್ರಗಣ್ಯ ಸಂಸ್ಥೆ, ಶ್ರೋತೃಪರಂಪರೆ ಪಾಲನೆಗೆ ಮಹೋನ್ನತ ಕೊಡುಗೆ ನೀಡಿದ ಶ್ರೀ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಮತ್ತು ಗುರುಗುಹ ಸಂಗೀತ ಮಹಾವಿದ್ಯಾಲಯ ಬಹು ಅಪರೂಪದ ‘ಮಾರ್ಗಶಿರ ವೀಣಾ ರಾಷ್ಟ್ರೀಯ ಮಹೋತ್ಸವವನ್ನು ಪ್ರತಿ ವರ್ಷ ಆಯೋಜಿಸುತ್ತದೆ.
ನಾದ ಲಹರಿಗಳನ್ನು ಹೊಮ್ಮಿಸುವ ಕರ್ನಾಟಕ, ಆಂಧ್ರ, ತಮಿಳುನಾಡು ಮತ್ತು ಕೇರಳದ ವಿದ್ವನ್ಮಣಿಗಳು, ಕೇಳುವ ಕಿವಿ, ಸಂಭ್ರಮಿಸುವ ಹೃದಯದ ನೂರಾರು ಶ್ರೋತೃಗಳು ನಾಡಿನ ವಿವಿಧೆಡೆಯಿಂದ ಮಲೆನಾಡಿನ ಮಡಿಲಿನಲ್ಲಿ ಸಂಗಮವಾಗಲಿದ್ದಾರೆ. ಸಾವಿರಾರು ಶ್ರೋತೃಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ.
ಹಿನ್ನೆಲೆ
‘ಮಾಸಾನಾಂ ಮಾರ್ಗಶೀರ್ಶೋಸ್ಮಿ’ ಎನ್ನುತ್ತಾನೆ ಶ್ರೀಕೃಷ್ಣ. ಮಾಸಗಳಲ್ಲಿ ನಾನು ಮಾರ್ಗಶಿರ ಎಂಬುದು ಇದರ ಭಾವಾರ್ಥ. ದ್ವಾಪರದಲ್ಲಿ ನೂತನ ವರ್ಷ ಆರಂಭವಾಗುತ್ತಿದ್ದದ್ದು ಚೈತ್ರದಲ್ಲಿ ಅಲ್ಲ, ಮಾರ್ಗಶಿರದಲ್ಲಿ. ಹಾಗಾಗಿ ಮಾರ್ಗಶಿರ ಅತ್ಯಂತ ಶ್ರೇಷ್ಠ ಮಾಸ. ಮಾಗಿಯ ಚಳಿಯಲ್ಲಿ ದೇಹ ಮತ್ತು ಮನಸ್ಸುಗಳು ಮುದುಡಿ ಕುಳಿತರೆ ಕಾಯಿಲೆಗಳೇ ಹೆಚ್ಚು. ಅದನ್ನು ಹುರಿಗೊಳಿಸಲೇಂದೇ ಅನೇಕ ವ್ರತ, ಕತೆ, ಧನುರ್ಮಾಸ ಆಚರಣೆ, ದತ್ತಾತ್ರೇಯರ ಸ್ಮರಣೆ (ಇತ್ತೀಚೆಗೆ ಅಯ್ಯಪ್ಪ ಸ್ವಾಮಿ ಮಾಲಾಧಾರಣೆ) ಇತ್ಯಾದಿಗಳು ನಮ್ಮ ಸಂಪ್ರದಾಯದಲ್ಲಿವೆ. ಇವೆಲ್ಲವನ್ನೂ 40 ವರ್ಷಗಳ ಹಿಂದೆಯೇ ಚಿಂತಿಸಿ, ಭಾರತೀಯ ಶಾಸೀಯ ಸಂಗೀತಕ್ಕೆ ಮಹತ್ತರ ಕೊಡುಗೆ ನೀಡುವಲ್ಲಿ ಪ್ರಧಾನ ಪಾತ್ರ ವಹಿಸಿದ ವೀಣಾ ನಾದಾರಾಧನೆ ಮಾಡಲು ವಿದ್ವಾನ್ ಶೃಂಗೇರಿ ಎಚ್.ಎಸ್. ನಾಗರಾಜ್ ಅವರು ಚಿಂತಿಸಿದ ಲವಾಗಿಯೇ ರೂಪುತಳೆದದ್ದು ವೀಣಾ ಉತ್ಸವ.
ಹೌದು…
ಒಬ್ಬ ವೀಣಾ ವಿದ್ವಾಂಸರು, ವೀಣಾ ಅಭಿಮಾನಿಗಳು ಮಾಡಲು ಸಾಧ್ಯವಾಗದ ಉತ್ಸವವನ್ನು ನಾವು ಮಾಡುತ್ತೇವೆ ಎಂಬ ಯಾವುದೇ ಹಮ್ಮು-ಬಿಮ್ಮು ಇಲ್ಲದೇ ಕೇವಲ ‘ಶುದ್ಧ ಶಾಸೀಯ ಸಂಗೀತವನ್ನು ಕೇಳುವ ಕಿವಿಗಳು ವೀಣಾನಾದ ಆಲಿಸುವುದರಿಂದ ಪರಿಶುದ್ಧ ಗೊಳ್ಳಬೇಕು, ಆ ಮೂಲಕ ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಗತಿಗಳನ್ನು ಜಾಗೃತಿಗೊಳಿಸಬೇಕು ಎಂಬ ಧ್ಯೇಯದಿಂದ ವೀಣಾವಾದನ ಕಛೇರಿಯನ್ನು ನಾಗರಾಜ್ ಆರಂಭಿಸಿದರು.
1976ರಿಂದ ಗುರುಗುಹ ಸಂಗೀತ ಮಹಾವಿದ್ಯಾಲಯ ಇದಕ್ಕೆ ಆಶ್ರಯವಾದರೆ, ಜಯನಗರದ ಶ್ರೀರಾಮಮಂದಿರ ವೇದಿಕೆಯಾಯಿತು. ಮೊದಮೊದಲಿಗೆ 3 ದಿನ, 5 ದಿನದ ಉತ್ಸವವಾಗಿ ಚಾಲನೆ ಪಡೆದ ವೀಣಾ ಉತ್ಸವ ಕಳೆದ 15 ವರ್ಷಗಳಿಂದ ರಾಷ್ಟ್ರೀಯ ಸಪ್ತಾಹವಾಗಿ ರೂಪುಗೊಂಡಿದೆ. 20-30 ಶ್ರೋತೃಗಳಿಂದ ಮೊದಲುಗೊಂಡು ಇದೀಗ ನಿತ್ಯ ನೂರಿನ್ನೂರು ಕೇಳುಗರು ಸಮ್ಮಿಲನಗೊಳ್ಳುವ ಮಹಾಸಮಾರಾಧನೆಯಾಗಿ ಪರಿವರ್ತನೆಗೊಂಡಿದೆ. ಮೊದಲ ಹಂತದಲ್ಲಿ ವಿದುಷಿಯರಾದ ಎಂ.ಕೆ. ಸರಸ್ವತಿ, ಗೀತಾ ರಮಾನಂದ್, ಡಾ.ಅರುಂಧತಿ ರಾವ್, ಬಿ.ಕೆ. ವಿಜಯಲಕ್ಷ್ಮೀ ರಘು ಮತ್ತಿತರರು ಉತ್ಸವದಲ್ಲಿ ಪ್ರೌಢಿಮೆ ಅನಾವರಣಗೊಳಿಸಿದ್ದು ಇಗ ಸವಿ ನೆನಪು.
ದೇಹವೊಂದು ದೇವವೀಣೆ
ನರನರವೂ ತಂತಿತಾನೆ,
ಹಗಲಿರುಳೂ ನುಡಿಯುತ್ತಿಹ ಉಸಿರಾಟವೇ ಗೀತ
ಅದ ನುಡಿಸೆ ನೀ ಪ್ರವೀಣೆ
ತಾಯಿ ನಿನ್ನ ಕೈಗೆ ನಾನೆ
ಒಪ್ಪಿಸಿಕೊಂಡಿಹೆನು ಬರಲಿ ಜೀವದ ಸಂಗೀತ… ಎನ್ನುತ್ತಾರೆ ವರಕವಿ ದ.ರಾ. ಬೇಂದ್ರೆ.
ಪ್ರಧಾನ ವಾದ್ಯ
ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನಕ್ಕೆ ಸಿಕ್ಕಷ್ಟು ಸಮೃದ್ಧ ವೇದಿಕೆಗಳು ವೀಣಾವಾದನಕ್ಕೆ ಅಷ್ಟಾಗಿ ದೊರಕುತ್ತಿಲ್ಲ. ಪ್ರಮುಖ ಕಚೇರಿಗಳಲ್ಲಿ ಪಕ್ಕವಾದ್ಯವಾಗಿ ಮಾತ್ರ ಬಳಕೆಯಾಗುತ್ತಿದೆ. ಇದಕ್ಕಾಗಿಯೇ ಉತ್ಸವಗಳನ್ನು ಆಯೋಜಿಸುವುದು ವಿರಳವಾಗಿ ವಾದ್ಯದಲ್ಲಿ ಪರಿಣತರ ಸಂಖ್ಯೆ ಕೂಡ ಮುಂದಿನ ದಿನಮಾನಗಳಲ್ಲಿ ಕಡಿಮೆಯಾಗುವ ಆತಂಕವೂ ಇದೆ. ಈ ಎಲ್ಲ ಒತ್ತಟ್ಟಿನ ಚಿಂತನೆಯಿಂದ, ಹಿಂದಿನ ಆದ್ಯತೆ- ಮಾನ್ಯಗೆ ಪಡೆಯುವ ದೃಷ್ಟಿಯಿಂದ ಪ್ರಸ್ತುತ 16ನೆಯ ವರ್ಷದ ವೀಣಾ ಮಹೋತ್ಸವ ರಾಷ್ಟ್ರೀಯ ಸಪ್ತಾಹ ವೀಣಾ ವಿದ್ವಾಂಸರ-ಕಲಾ ರಸಿಕರ ಮತ್ತು ಕಲಿಕಾರ್ಥಿಗಳ ನಡುವೆ ಹೊಸ ಸೇತುವೆಯೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಸದ್ದಿಲ್ಲದ ಕಾರ್ಯ ನಡೆಸುತ್ತಿದೆ.
ವೀಣೆ ಹೇಗೆ ದೈವಿಕ ವಾದ್ಯ
ನಾರದ ವೀಣೆ, ಕಶ್ಯಪ ವೀಣೆ, ಸರಸ್ವತಿ ವೀಣೆ, ಮಹತಿ ವೀಣೆ-ಹೀಗೆ ವಿವಿಧ ಪ್ರಕಾರದ ವೀಣೆಯ ಹೆಸರನ್ನು ನಾವು ಪುರಾಣಗಳಲ್ಲಿ ಕಂಡಿದ್ದೇವೆ. ವೀಣೆ ಒಂದು ದೈವಿಕ ವಾದ್ಯ. ಹಾಗಾಗಿ ಅದು ಎಲ್ಲ ವಾದ್ಯಗಳಿಗಿಂದ ಭಿನ್ನ. ಸಾಮಾನ್ಯರಿಂದ ಹಿಡಿದು ತ್ಯಾಗಿ, ವಿರಾಗಿಗಳಿಗೆ, ಯೋಗಿಗಳಿಗೆ ಮತ್ತು ಪರಮ ಸಂತರಿಗೆ ಇದು ಅಚ್ಚುಮೆಚ್ಚಿನ ವಾದ್ಯವಾಗಿರುವುದು ಭಾರತೀಯ ಸನಾತನ ಪರಂಪರೆಯಲ್ಲಿ ಕಾಣುತ್ತೇವೆ. ಹಾಗಾಗಿಯೇ ಇದನ್ನು ತ್ರಿವರ್ಗ ಮೋಕ್ಷ ಪ್ರದಾಯಿನಿ ಎಂದು ಕರೆಯಲಾಗುತ್ತದೆ.
ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳು ನಿರ್ಣಯಗೊಂಡಿರುವುದೇ ವೀಣೆಯಿಂದ. 72 ಮೇಳಕರ್ತ ರಾಗಗಳು ವೀಣೆಯಲ್ಲಿರುವ 72 ಮೇಳಗಳಿಂದ ಆವಿರ್ಭವಿಸಿವೆ. ವೀಣಾನಾದದಿಂದ ನಮ್ಮ ದೇಹದ 72 ಸಾವಿರ ನಾಡಿಗಳೂ ಚೇತನಗೊಳ್ಳಲಿವೆ. ವೀಣೆಯ 24 ಮೆಟ್ಟಿಲುಗಳು ಮಾನವನ ಬೆನ್ನುಹುರಿಯ 24 ಮಣಿಗಳ ಪ್ರತೀಕವಾಗಿದೆ- ಹೀಗೆ ವೀಣೆ ಕಲೆ, ರಾಗಾರಾಧನೆಗೆ ಮಾತ್ರವಲ್ಲದೇ ಮಾನವನ ಆಕಾರದ ಪ್ರತೀಕವಾಗಿದ್ದು ದೈಹಿಕ-ಮಾನಸಿಕ ಸ್ವಾಸ್ಥ್ಯವೃದ್ಧಿಗೂ ಕಾರಣಕರ್ತವಾಗಿದೆ. ತಂತಿ ವಾದ್ಯದಲ್ಲಿ ಪ್ರಕೃತಿಸ್ವರೂಪಿ ಎಂದು ಕರೆಯಲ್ಪಡುವ ಏಕೈಕ ವಾದ್ಯ ವೀಣೆ.
ಸಂಪ್ರದಾಯಗಳಲ್ಲಿ ಭಾರತೀಯ ಸಂಪ್ರದಾಯದಲ್ಲಿ ವೀಣೆ ಪ್ರತಿಮನೆಯಲ್ಲಿ ಇರುವ ವಾದ್ಯವಾಗಿತ್ತು. ಇಂದು ಕಾಲ ಬದಲಾಗಿದೆ. ಆದರೂ ಹೋಮ, ಹವನ, ಸೀಮಂತ ಇತ್ಯಾದಿ ಸಂದರ್ಭ ಮನೆಮನೆಗಳಲ್ಲಿ ವೀಣಾವಾದನ ನಡೆಯುತ್ತಿತ್ತು. ಗರ್ಭಸ್ಥ ಶಿಶು ವೀಣಾವಾದನದಿಂದ ಆರೋಗ್ಯವಂತವಾಗಿ ಬೆಳೆಯುತ್ತದೆ ಎಂಬುದು ಇಂದಿನ ಸಂಶೋಧನೆಗಳಿಂದಲೂ ಸಾಬೀತಾಗಿದೆ. ನಿರಪೇಕ್ಷವಾಗಿ ವೀಣಾನಾದ ಕೇಳುವಾತ ಯೋಗಿಯಾಗುತ್ತಾನೆ ಎಂಬುದು ಪರಿಣತರ ಅಭಿಮತ.
ಕಲಾ ಕೋವಿದರ ಸಮ್ಮಿಲನ
ಈ ಸಪ್ತಾಹದಲ್ಲಿ ಪ್ರೌಢಿಮೆ ಮೆರೆಯುತ್ತಿರುವ ಕಲಾವಿದರು ಅಸಾಮಾನ್ಯ ಪ್ರತಿಭಾನ್ವಿತರು. ಈ ಸರಣಿಯಲ್ಲಿ ಬೆಂಗಳೂರಿನ ಎಸ್.ಜಿ. ಭಾಗ್ಯಲಕ್ಷ್ಮೀ, ಆಸ್ಟ್ರೇಲಿಯಾದ ಅಯ್ಯರ್ ಬ್ರದರ್ಸ್, ಚೆನ್ನೈನ ಭಾರದ್ವಾಜ್ ರಾಮನ್, ತಿರುವನಂತಪುರದ ಶರಣ್ಯಾ ಬಿ. ಮಂಗಳ್, ಶೋಭನಾ ಸ್ವಾಮಿನಾಥನ್, ಹೈದ್ರಾಬಾದಿನ ಈಮನಿ ಲಲಿತಾ ಕೃಷ್ಣನ್ ಮತ್ತು ಶಿವಮೊಗ್ಗದ ಬಿ.ಕೆ. ವಿಜಯ ಲಕ್ಷ್ಮೀ ಅವರು ಈ ಬಾರಿಯ ಉತ್ಸವದಲ್ಲಿ ತಮ್ಮ ವಿದ್ವತ್ ಪ್ರದರ್ಶನ ಮಾಡಿ ಶ್ರೋತೃಗಳನ್ನು ತಣಿಸಲಿದ್ದಾರೆ.
ವೀಣಾ ನಾದ ಧ್ಯಾನ ಯಜ್ಞ
ಶಿವಮೊಗ್ಗೆಯ ರಾಷ್ಟ್ರೀಯ ವೀಣಾ ಉತ್ಸವ ಹಲವು ವಿಧಗಳಲ್ಲಿ ಭಿನ್ನ. ವಿದ್ವಾಂಸರ ಆಪ್ತ ನುಡಿಸಾಣಿಕೆಯನ್ನೂ ಶ್ರೋತೃ ಮೌನವಾಗಿ ಆಸ್ವಾದಿಸಬೇಕು ಎಂಬುದು ವಿದ್ವಾನ್ ಎಚ್.ಎಸ್. ನಾಗರಾಜರ ಮುಖ್ಯ ಆಶಯ. ಅದಕ್ಕೆಂದೇ ಉತ್ಸವದ ಎಲ್ಲ ದಿನ ಮುಂಜಾನೆ 6ರಿಂದ 8ರ ವರೆಗೆ ‘ವೀಣಾ ನಾದ ಧ್ಯಾನ ಯಜ’್ಞ ನೆರವೇರಲಿದೆ. ಇದು ಒಂದು ರೀತಿ ದೊಡ್ಡ ಯಜ್ಞವೇ ಸರಿ. ಸರಸ್ವತಿ ಪೂಜೆಯೊಂದಿಗೆ ವೀಣೆಗೆ ಪೂಜೆ, ನೈವೇದ್ಯ ಸಮರ್ಪಿಸಿದ ನಂತರ ಮೈಕ್ ಬಳಸದೇ ಕೇವಲ ಕಲಾವಿದರು ವೀಣಾವಾದನ ಮಾಡುವುದು, ಸುತ್ತಲೂ ಕುಳಿತ ಶ್ರೋತೃಗಳು 2-3 ತಾಸು ಇದನ್ನು ಆಲಿಸುವುದು- ಬೆಳಗಿನ ಸಮಯಕ್ಕೆ ಹೊಸ ಮೌಲ್ಯಗಳನ್ನು ತುಂಬಿಕೊಡಲಿದೆ. ಒಬ್ಬ ವ್ಯಕ್ತಿ ಅತ್ಯಂತ ಆಳವಾದ ಧ್ಯಾನದಿಂದ ಏನೇನು ಲ ಪಡೆಯುವನೋ ಅದೆಲ್ಲವೂ ಈ ರೀತಿಯ ವೀಣಾವಾದನ ಆಲಿಸುವುದರಿಂದ ದೊರಕುತ್ತದೆ ಎನ್ನುತ್ತಾರೆ ತಜ್ಞರು.
ಗಣ್ಯರ ಅಭಿಮತ
ಪ್ರಖ್ಯಾತ ಮೃದಂಗ ವಿದ್ವಾಂಸ ಚೆಲುವರಾಜ್ ಈ ಬಗ್ಗೆ ಕೊಡುವ ಪ್ರತಿಕ್ರಿಯೆ ವಿಶೇಷವಾದದ್ದು. ‘ನಾನು ಸಾಮಾನ್ಯವಾಗಿ ಪ್ರತಿವರ್ಷ ವೀಣಾ ಉತ್ಸವಕ್ಕೆ ಪಕ್ಕವಾದ್ಯ ಕಲಾವಿದನಾಗಿ ಬರುತ್ತೇನೆ. ವಿಶ್ವದ ಅನೇಕ ರಾಷ್ಟ್ರಗಳ ಪ್ರಮುಖ ವೇದಿಕೆಯಲ್ಲಿ ನಾನು ನುಡಿಸಿದ ಧನ್ಯತೆ ಇದೆ. ಆದರೆ ಈ ರೀತಿ ವೀಣಾ ಧ್ಯಾನ ಯಜ್ಞವನ್ನು ಎಲ್ಲೂ ನೋಡಿರಲಿಲ್ಲ, ಕೇಳಿರಲಿಲ್ಲ. ನಾವೆಲ್ಲರೂ ಅಂದರೆ ವಿವಿಧ ವಾದ್ಯಗಳ ಕಲಾವಿದರು ವರ್ಷದಲ್ಲಿ ಒಂದುಬಾರಿ ಓರಾಯಿಲ್-ಆಗಲು ಈ ಧ್ಯಾನ ಯಜ್ಞ ಪೂರಕವಾಗಿದೆ’ ಎನ್ನುತ್ತಾರೆ.
ಪ್ರಖ್ಯಾತ ವೀಣಾ ಮತ್ತು ಕಂಚಿ ಕಾಮಕೋಟಿ ಪೀಠದ ಆಸ್ಥಾನ ವಿದ್ವಾಂಸ ಪ್ರಶಾಂತ ಅಯ್ಯಂಗಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ವೀಣೆಗೆ ಸರಿ ಸಮನಾದ ವಾದ್ಯವೇ ಇಲ್ಲ. ಇದರ ಆರಾಧನೆ, ಅನುಸರಣೆ ಮತ್ತು ಅನನ್ಯ ಶ್ರೋತೃಗಣ ನೋಡಬೇಕು ಎಂದರೆ ನಾವು ಶಿವಮೊಗ್ಗಕ್ಕೇ ಬರಬೇಕು. ಸಹೋದರ ವಿದ್ವಾನ್ ನಾಗರಾಜ್, ಸಂಗೀತ ಕಛೇರಿ, ವೀಣಾಉತ್ಸವಗಳ ಮೂಲಕ ದೊಡ್ಡ ಮಟ್ಟದಲ್ಲಿ ದೇವತಾರಾಧನೆ ಮಾಡುವುದು, 4 ದಶಕಗಳಿಂದ ಮಾಡುತ್ತ ಇರುವುದು ಶ್ಲಾಘನೀಯ’ ಎಂದು.
ಇದೆಲ್ಲಾ ಹೇಗೆ ಸಾಧ್ಯ?
ಕಳೆದ 15 ವರ್ಷಗಳಿಂದ ಇದೆಲ್ಲವೂ ಹೇಗೆ ಸಾಧ್ಯವಾಯಿತು ಎಂದು ವಿದ್ವಾನ್ ನಾಗರಾಜ್ ಅವರನ್ನು ಕೇಳಿದರೆ, ಅದೆಲ್ಲವೂ ಸ್ವಾಮಿ ಕೃಪೆ ಅಷ್ಟೇ ಎನ್ನುತ್ತಾರೆ. ಯಾವುದು, ಯಾವಾಗ, ಹೇಗೆ ನಡೆಯಬೇಕು ಎಂಬುದು ಅವನ ಇಚ್ಛೆ. ನಾವೆಲ್ಲರೂ ಭೇದ ಮರೆತಾಗ ‘ಭಾವ’ದಲ್ಲಿ ಒಂದಾಗಲು ಸಾಧ್ಯವಾಗುತ್ತದೆ. ವೇದಿಕೆ, ಕಛೇರಿ ಇತ್ಯಾದಿ ಪ್ರಚಾರದ ಅಬ್ಬರ, ಭರಾಟೆ ಬಿಟ್ಟು ದೈವಿಕ ಸ್ವರೂಪದಲ್ಲಿ ವೀಣೆಯನ್ನು ಆರಾಧನೆ ಮಾಡೋಣ’ ಎನ್ನುತ್ತಾರೆ.
ಅಬ್ಬರ-ಆಡಂಬರ ರಹಿತ
ಬಹುತೇಕ ನಾವು ಇಂದು ಕೇಳುತ್ತಿರುವ ಸಂಗೀತ, ಅಬ್ಬರ, ಚಮತ್ಕಾರ, ಓಟ, ಗಲಾಟಾ, ಚಪ್ಪಾಳೆಯ ಮುಖವಾಡದ್ದು. ಇದೇ ನಿಜವಾದ ಶಾಸ್ತ್ರೀಯ ಸಂಗೀತ ಎಂದು ನಂಬುವಂತಾಗಿದೆ. ಆದರೆ ಅಬ್ಬರ ರಹಿತವಾದ ರಂಜನೆ ಹಾಗೂ ಆನಂದದ ಅನುಭವ ನೀಡುವ ಸಂಗೀತ ಆಲಿಸುವ ಶೈಲಿಗೆ ಪುನ: ಶೋತೃಗಳನ್ನು ಅಣಿಗಿಳಿಸುವ ಕೆಲಸ ವೀಣಾ ಉತ್ಸವದ ಮೂಲಕ ಸಾಕಾರಗೊಳ್ಳುತ್ತಿದೆ. ‘ಶುದ್ಧ ಶಾಸೀಯ ಸಂಗೀತ ಕೇಳುವ ಕಿವಿಗಳನ್ನು ಪ್ರೀತಿಯಿಂದ ಕಾಪಾಡಿಕೊಳ್ಳಿ’ ಎಂಬ ಘೋಷವಾಕ್ಯದೊಡನೆ ಈ ಬಾರಿಯ ವೀಣಾ ಉತ್ಸವ ಸಂಪನ್ನಗೊಳ್ಳಲಿದೆ.
ಲೇಖನ: ಶಿವಮೊಗ್ಗ ರಘುರಾಮ್
Get in Touch With Us info@kalpa.news Whatsapp: 9481252093
Discussion about this post