ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿ, 42 ಯೋಧರನ್ನು ಬಲಿ ಪಡೆದ ಕೃತ್ಯ ಅತ್ಯಂತ ಹೇಯವಾಗಿದ್ದು, ಇದೊಂದು ಸಂಭವಿಸಬಾರದಾಗಿದ್ದ ದುಃಖಕರ ಘಟನೆಯಾಗಿದೆ. ಘಟನೆಯಲ್ಲಿ ಹುತಾತ್ಮರಾದ ಎಲ್ಲ ಯೋಧರ ತ್ಯಾಗವನ್ನು ನಾವು ಗೌರವಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಅವರು, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳಿಗೆ ನಮ್ಮ ಬೆಂಬಲವಿದೆ. ಅಲ್ಲದೇ ಭದ್ರತಾ ಪಡೆಗಳು ಇಡುವ ಹೆಜ್ಜೆಗೂ ಸಹ ನಮ್ಮ ಸಹಕಾರವಿದೆ. ಇದರ ಹೊರತಾಗಿ ನಾವು ಬೇರಾವುದೇ ರೀತಿಯ ಚರ್ಚೆ ಹಾಗೂ ವಿಚಾರಗಳಿಗೆ ತಲೆ ಹಾಕುವುದಿಲ್ಲ. ಈ ವಿಚಾರದಲ್ಲಿ ಕೇಂದ್ರಕ್ಕೆ ನಮ್ಮ ಬೆಂಬಲವಿದೆ ಎಂದಿದ್ದಾರೆ.
ಸೈನಿಕರ ವಿರುದ್ಧದ ಇಂತಹ ಕೃತ್ಯಗಳು ಅತ್ಯಂತ ಹೀನವಾದುದು. ಇಂತಹ ಸಂದರ್ಭದಲ್ಲಿ ಪ್ರತಿ ಯೋಧರ ಜೊತೆಯಲ್ಲೂ ನಾವಿದ್ದೇವೆ. ಯಾವುದೇ ಹೊರಗಿನ ಶಕ್ತಿಗಳು ದೇಶವನ್ನು ಒಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ನಮ್ಮ ದೇಶ ಈ ಘಟನೆಯಲ್ಲಿ 42 ಯೋಧರನ್ನು ಕಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಹುತಾತ್ಮರಾದ ಕುಟುಂಬಗಳೊಂದಿಗೆ ನಾವೆಲ್ಲಾ ನಿಲ್ಲುವುದು ನಮ್ಮ ಕರ್ತವ್ಯವಾಗಿದೆ. ಭಯೋತ್ಪಾದನಾ ಕೃತ್ಯಗಳೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
Discussion about this post