ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಾರ್ತೀಕ ಮಾಸ ಶರತ್ ಋತುವಿನ 2ನೆಯ ಮಾಸ. ಕಾರ್ತೀಕ ಮಾಸದ ಪ್ರಾರಂಭದ ಮುಂಚೆಯೇ ನಾವು ದೀಪಾವಳಿಯನ್ನು ಪ್ರಾರಂಭಿಸುತ್ತೇವೆ. ನಮಗೆಲ್ಲಾ ತಿಳಿದಿರುವ ಹಾಗೆ ಆಶ್ವೀಜ ಬಹುಳ ತ್ರಯೋದಶಿ ಸಂಜೆ ನೀರು ತುಂಬುವ ಹಬ್ಬ, ಚತುರ್ದಶಿಯಂದು ನರಕಾಸುರ ವಧೆಯಾದ ಪ್ರಯುಕ್ತ ನರಕಚತುದರ್ಶಿ ಎಂದು ಆಚರಿಸುತ್ತೇವೆ. ಹಾಗೆಯೇ ದೀಪಾವಳಿಯ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ, ಪಾಡ್ಯದ ದಿನ ಬಲೀಂದ್ರಪೂಜೆ. (ವಿಷ್ಣುವಿನ ವಾಮನ ರೂಪ) ಹಾಗೆಯೇ ಕಾರ್ತೀಕ ಮಾಸ ಎಷ್ಟು ವಿಶೇಷತೆಯನ್ನು ಒಳಗೊಂಡಿದೆ ಎಂದರೆ ಅಮೃತ ದೊರೆತ ದಿನ ಈ ಕಾರ್ತೀಕಮಾಸದಲ್ಲಿ ಬರುತ್ತದೆ.
ಪಾಂಡವರು ಪಟ್ಟಾಭಿಷೇಕವಾದ ದಿನ, ಜಲಂದರನ ಸಂಹಾರ ಬೃಂದೆಯೊಂದಿಗೆ ಶ್ರೀಕೃಷ್ಣನ ವಿವಾಹ, ಉತ್ಥಾನ ದ್ವಾದಶಿ ಯೋಗನಿದ್ರೆಯಿಂದ ವಿಷ್ಣು ಏಳುವದಿನ ಹಾಗೆಯೇ ಚಾತುರ್ಮಾಸ ವ್ರತ ಪೂರ್ಣಗೊಳ್ಳುವ ಮಾಸ.
ಈ ಕಾರ್ತೀಕ ದೀಪೋತ್ಸವಗಳು ಧಾರ್ಮಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆ ಒಳಗೊಂಡಿದೆ. ದೀಪಗಳು ಮನಸ್ಸಿಗೆ ಶಾಂತಿ ಕೊಡುತ್ತದೆ ಹಾಗೂ ಏಕಾಗ್ರತೆ ಕೊಡುತ್ತದೆ. ಕಾರ್ತೀಕ ಮಾಸವು ಬೆಳಕಿನ ಹಬ್ಬ.
ದೀಪಂ ಜ್ಯೋತಿ ಪರಬ್ರಹ್ಮ ದೀಪಂ ಜ್ಯೋತಿ ತಮೋಪಃ ದೀಪಂ ಮೇ ಹರತೇ ಪಾಪಂ ಸಂಧ್ಯಾ ದೀಪಂ ನಮೋಸ್ತುತೆ. ದೀಪವು ಪರಬ್ರಹ್ಮ ಸ್ವರೂಪ.
ಎಲ್ಲಾ ಮಾಸಗಳಲ್ಲಿ ಶ್ರೇಷ್ಠ ಮಾಸ ಕಾರ್ತೀಕಮಾಸ. ಕಾರ್ತೀಕ ಮಾಸದಲ್ಲಿ ದೀಪಗಳ ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ.
ಎಲ್ಲಕ್ಕಿಂತ ಶ್ರೇಷ್ಠ ಆರಾಧನೆ ಎಂದರೆ ಅಗ್ನಿಯ ಆರಾಧನೆ. ಅಗ್ನಿಯ ಅಗ್ನಾಧಿಪತಿ ವೈಶ್ವಾನರ. ಅಂದರೆ ಈಶ್ವರ. ಈಶ್ವರನು ಪಾಲನೇತ್ರ ಹೊಂದಿದ್ದು ಜ್ಯೋತಿರ್ ರೂಪ ಹೊಂದಿದ್ದಾನೆ. ಆದ್ದರಿಂದ ಈ ಮಾಸದಲ್ಲಿ ಶಿವನ ಆರಾಧನೆಗೆ ಪ್ರಾಶಸ್ತ್ಯ ಬಹಳ.
ಇನ್ನೊಂದು ವಿಷಯ ಹೇಳುವುದಾದರೆ ರಾಮನು ರಾವಣನ್ನನ್ನು ಸಂಹರಿಸಿ ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಸಕ್ತನಾಗಿದ್ದು ಇದೇ ಸಮಯದಲ್ಲಿ. ಆಗ ಅಲ್ಲಿನ ಪ್ರಜೆಗಳು ಶ್ರೀರಾಮನನ್ನು ಸ್ವಾಗತಿಸಲು ಸಾಲುದೀಪಗಳನ್ನು ಜೋಡಿಸಿರುತ್ತಾರೆ. ಹಾಗಾಗಿ ರಾಮರಾಜ್ಯದ ವೈಭವವನ್ನು ತೋರಿಸಲು ಸಹ ಈ ದೀಪಾವಳಿ ಕಾರಣ.
ದೀಪಾವಳಿ ಹಬ್ಬ ಕೇವಲ ಮೂರುದಿನದ ಹಬ್ಬವನ್ನಾಗಿ ನಾವು ಆಚರಿಸುತ್ತೇವೆ. ಆದರೆ ಕಾರ್ತೀಕ ಮಾಸ ಪೂರ್ತಿ ದೀಪಾವಳಿ.
ಎಳ್ಳೆಣ್ಣೆ ದೀಪ ಮನಸ್ಸಿಗೆ ತಂಪು ಕೊಡುತ್ತದೆ, ಆದ್ದರಿಂದ ಎಳ್ಳೆಣ್ಣೆ ದೀಪವೇ ಶ್ರೇಷ್ಠ. ಜಾನಪದ ರೀತಿಯಲ್ಲಿ ಹೇಳುವುದಾದರೆ ಕುಂಬಾರರಿಗೆ ಹಾಗೂ ನೇಕಾರರಿಗೆ ಈ ಕಾಲ ಸಕಾಲ. ಈ ಮಾಸದಲ್ಲಿ ಮಣ್ಣಿನ ಪ್ರಣತಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುವುದರಿಂದ ಅವರಿಗೆ ಇದು ಸಕಾಲ.
ಸಕಲ ದೇವರುಗಳನ್ನು ಪೂಜಿಸಲು ಈ ಮಾಸ ಸೂಕ್ತ. ಎಲ್ಲಾ ದೇವತೆಗಳನ್ನು ನೋಡಲು ಸಾಧ್ಯವಿಲ್ಲ. ಕಾರಣ ದೇವರನ್ನು ಒಂದು ದೀಪರೂಪದಲ್ಲಿ ನೋಡುತ್ತೇವೆ ಮತ್ತೋಂದು ಗೋವಿನ ರೂಪದಲ್ಲಿ. ಆದ್ದರಿಂದ ಈ ಕಾರ್ತೀಕ ಮಾಸದಲ್ಲಿ ಗೋವಿಗೆ ಹಾಗೂ ದೀಪಗಳಿಗೆ ಪ್ರಾಶಸ್ತ್ಯೆ.
ದೀಪವು ಹುಟ್ಟಿನಿಂದ ಹಿಡಿದು ಸಾಯುವ ತನಕವೂ ಬೇಕೇ ಬೇಕು. ದೀಪಕ್ಕೆ ಪರ ಅಪರ ಎಂಬ ಭೇದವಿಲ್ಲ. ಸರ್ವಕಾಲಕ್ಕೂ ದೀಪ ಶ್ರೇಷ್ಠ. ಅಗ್ನಿ ಇಲ್ಲದೆ ಹುಟ್ಟು ಸಾವು ಎರಡೂ ಆಗುವುದಿಲ್ಲ. ಮಗು ಜನನವಾದ ತಕ್ಷಣ ಮನೆಯಲ್ಲಿ ದೀಪ ಹಚ್ಚುತ್ತಾರೆ. ಹಾಗೆಯೇ ಸತ್ತ ನಂತರ ತಲೆ ಹತ್ತಿರ ದೀಪ ಹಚ್ಚುತ್ತಾರೆ. ಎಲ್ಲಾ ದೇವರುಗಳು ಜ್ಯೋತಿ ರೂಪದಲ್ಲಿ ದರ್ಶನ ಕೊಡುತ್ತಾರೆ.
ಶಬರಿಮಲೈ ಅಯ್ಯಪ್ಪ ಸ್ವಾಮಿ ಜ್ಯೋತಿ ರೂಪದಲ್ಲಿ ದರ್ಶನ ಕೊಡುವುದು ಮಾರ್ಗಶಿರ ಮಾಸದಲ್ಲಿ ಆದರೂ ಪೂಜಾ ಕೈಂಕರ್ಯಗಳು ಪ್ರಾರಂಭವಾಗುವು ಈ ಕಾರ್ತೀಕ ಮಾಸದಲ್ಲಿ. ಹಾಗೆಯೇ ಕರಾವಳಿಯಲ್ಲಿ ದುರ್ಗಾದೀಪ ನಮಸ್ಕಾರ ಮಾಡುತ್ತಾರೆ. ದೀಪಾವಳಿಯಲ್ಲಿ ನಿತ್ಯ ವೈಭವ. ಜ್ಯೋತಿ ಎನ್ನುವುದು ಜ್ಞಾನದ ಸಂಕೇತ, ವೈರಾಗ್ಯದ ಸಂಕೇತ. ಜ್ಯೋತಿ ಶುಭಕರ.
ಈ ಕಾರ್ತೀಕ ಮಾಸ ಎಷ್ಟು ಶುಭ ಎಂದರೆ ಜ್ಯೋತಿಷಿಗಳ ಪ್ರಕಾರ ಈ ಮಾಸದಲ್ಲಿ ಗ್ರಹಣ ಸಂಭವಿಸುವ ಸಾಧ್ಯತೆ ಇಲ್ಲ.
ಎಲ್ಲರಿಗೂ ಕಾರ್ತೀಕ ಮಾಸದ ಶುಭಾಷಯಗಳು.
(ಲೇಖನ: ಲಕ್ಷ್ಮೀ ಮುರಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post