ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯ ಅನುಮತಿ ಇಲ್ಲದೆಯೇ ಅನುಷ್ಠಾನವಾಗುತ್ತಿರುವ ಪರಿಸರ ಮಾರಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು #Sharavathi Pumped Storage Scheme ಸ್ಥಗಿತಗೊಳಿಸಿ ಎಂದು ಮಾಜಿ ಸಚಿವ, ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ನಗರದಲ್ಲಿ ಶರಾವತಿ ಕಣಿವೆ ಉಳಿಸಿ-ಕರ್ನಾಟಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಗತ್ತಿನ 8 ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮಘಟ್ಟದಲ್ಲಿ 40ಕ್ಕೂ ಹೆಚ್ಚು ನದಿಗಳು ಜನ್ಮತಾಳಿ ಈ ಭಾಗ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಪ್ರದೇಶವನ್ನು ಮಳೆಯಕಾಡು ಎಂದೇ ಕರೆಯಲಾಗುತ್ತದೆ. ಪರಿಸರ ವಿರೋಧಿ ಯೋಜನೆಗಳಿಂದ ನೈಜಕಾಡು ಕಡಿಮೆಯಾಗುತ್ತದೆ ಅಲ್ಲದೆ, ಇಲ್ಲಿನ ನದಿನೀರಿನ ಹರಿವು ಕಡಿಮೆಯಾಗುತ್ತಿದೆ. ಇದಕ್ಕೆ ಪಂಪ್ಡ್ ಸ್ಟೋರೇಜ್‍ನಂತರ ಅರಣ್ಯನಾಶ ಯೋಜನೆಯೇ ಕಾರಣ ಎಂದು ಕಿಡಿಕಾರಿದರು.

ಕಾರ್ಗಲ್, ಗೇರುಸೊಪ್ಪ ಮೊದಲಾದೆಡೆ ಯೋಜನೆಯ ಕುರಿತು ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಸಾರ್ವಜನಿಕರ ವಿರೋಧ ವ್ಯಕ್ತವಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ. ಯೋಜನೆಯ ವಿರುದ್ಧ ಹೋರಾಟ ತೀವ್ರ ಸ್ವರೂಪ ಪಡೆಯುವುದರೊಳಗೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆಯನ್ನು ತಡೆಹಿಡಿಯಬೇಕೆಂದು ಆಗ್ರಹಿಸಿದರು.

ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಜಾರಿಯಾಗುತ್ತಿರುವ ಜನವಿರೋಧಿ ಯೋಜನೆಗಳಿಗೆ ನಮ್ಮ ವಿರೋಧವಿದೆ. ಯೋಜನೆಯಿಂದ ಆಗುವ ಅನಾಹುತಗಳ ಬಗ್ಗೆ ಕೆಪಿಸಿಎಲ್ ಸಾರ್ವಜನಿಕರಿಗೆ ಸುಳ್ಳು ಮಾಹಿತಿಯನ್ನು ನೀಡುತ್ತಿದೆ. ಕಾನೂನುಬಾಹಿರ ತಪ್ಪು ಮಾಹಿತಿನೀಡಿ, ಈ ಪ್ರದೇಶದ ಜನಜಾನುವಾರುಗಳಿಗೆ ಅಪಾಯ ತಂದೊಡ್ಡುತ್ತಿದೆ. ಜೀವವೈವಿಧ್ಯ, ವನ್ಯಜೀವಿಗಳಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್ ಸುಳ್ಳು ಹೇಳಿಕೆ ನೀಡಿದ್ದಾರೆ. ಈ ಯೋಜನೆಯ ವಿವರಗಳನ್ನು ಸಾರ್ವಜನಿಕರಿಗೆ ಏಕೆ ನೀಡುತ್ತಿಲ್ಲ ಎಂದ ಖಾರವಾಗಿ ಪ್ರಶ್ನಿಸಿದರು.

ಬಸವ ಕೇಂದ್ರದ ಮರುಳಸಿದ್ಧಸ್ವಾಮೀಜಿ, ಬೆಳಗಾವಿಯ ನಿಡಸೋಸಿ ಮಠದ ಶ್ರೀ ನಿಜಲಿಂಗಾನಂದಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಧರ್ಮಗುರು ರೋಷನ್ ಪಿಂಟೋ, ಪರ್ಯಾವರಣ ಟ್ರಸ್ಟಿನ ಅಧ್ಯಕ್ಷ ಪ್ರೊ.ಬಿ.ಎಂ.ಕುಮಾರಸ್ವಾಮಿ, ಪರಶುರಾಮೇಗೌಡ, ರಾಜ್ಯ ರೈತಸಂಘದ ವರಿಷ್ಟ ಕೆ.ಟಿ. ಗಂಗಾಧರ, ಮಾಜಿ ಸಚಿವ ಹರತಾಳು ಹಾಲಪ್ಪ, ಮಾಜಿ ಶಾಸಕ ಮಹಿಮಾ ಪಟೇಲ್, ಮುಸ್ಲಿಂ ಮುಖಂಡ ವಾಹಬ್‍ಸಾಬ್, ದಿನೇಶ್, ಅಖಿಲೇಶ್ ಚಿಪ್ಪಳಿ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post