ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಸೋಗಾನೆಯಲ್ಲಿರುವ ಜೈಲಿನ ಬಳಿ ಆಟೋರಿಕ್ಷಾದಲ್ಲಿ ಬಾಳೆಗೊನೆಗಳಲ್ಲಿ ಗಾಂಜಾ #Marijuana ತುಂಬಿ ತಂದು ಗೇಟಿನ ಬಳಿ ಇಟ್ಟು ಹೋದ ಘಟನೆ ಬುಧವಾರ ನಡೆದಿದೆ.
ಮದ್ಯಾಹ್ನ 02:15 ಗಂಟೆ ಸಮಯಕ್ಕೆ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಟೋದಲ್ಲಿ 05 ಬಾಳೆಗೊನೆಗಳನ್ನು ಆಟೋ ಚಾಲಕನು ಕಾರಾಗೃಹದ ಮುಂಭಾಗಕ್ಕೆ ತಂದು ಕ್ಯಾಂಟೀನ್ ರವರ ಸೂಚನೆ ಮೇರೆಗೆ ತಂದಿರುವುದಾಗಿ ತಿಳಿಸಿ ಗೇಟಿನ ಹತ್ತಿರ ಇಟ್ಟು ತೆರಳಿದ್ದಾನೆ.
ಕಾರಾಗೃಹದ ಮುಖ್ಯ ದ್ವಾರದ ಉಸ್ತುವಾರಿಯಲ್ಲಿದ್ದ ಕೆ.ಎಸ್.ಐ.ಎಸ್.ಎಫ್ ಇನ್ಸ್ ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪ್ರೊಬೆಶನರಿ ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಪ್ರವೀಣ ಮತ್ತು ನಿರೂಪಾಬಾಯಿ ಈ ಬಾಳೆಗೊನೆಗಳನ್ನು ತಪಾಸಣೆ ನಡೆಸಿದಾಗ ಬಾಳೆಗೊನೆಯ ದಿಂಡನ್ನು ಕೊರೆದು ಅದರೊಳಗೆ ಗಾಂಜಾ ಹಾಗೂ ಸಿಗರೇಟನ್ನು ಟೇಪ್ ನಲ್ಲಿ ಸುತ್ತಿ ಇಟ್ಟಿರುವುದು ಬೆಳಕಿಗೆ ಬಂದಿದೆ.
ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ರವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, 123 ಗ್ರಾಂ ಗಾಂಜಾ ಮತ್ತು ಒಟ್ಟು 40 ಸಿಗರೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಜೈಲು ಸಿಬ್ಬಂದಿ ಅಂಡರ್ ವೇರಲ್ಲಿ ಗಾಂಜಾ ಸಿಕ್ಕಿದೆ. ಬೆಳಗ್ಗೆ 10:20 ಗಂಟೆಯ ಸಮಯದಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಪಿ.ಎಸ್.ಐ ಪ್ರಭು ಎಸ್. ಹಾಗೂ ಸಿಬ್ಬಂದಿಯವರಾದ ಕಪ್ಪೇರ ಬಸವರಾಜ್ ಕೇಂದ್ರ ಕಾರಾಗೃಹದಲ್ಲಿ ಎಸ್.ಡಿ.ಎ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾತ್ವಿಕ್, ( 25 ) ಕರ್ತವ್ಯಕ್ಕೆ ಹಾಜರಾಗಲು ಬಂದಾಗ ಆತನನ್ನು ತಪಾಸಣೆ ಮಾಡಿದ್ದಾರೆ. ಆತ ತನ್ನ ಒಳ ಉಡುಪಿನಲ್ಲಿ ಗಮ್ ಟೇಪಿನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡು ಬಂದಿರುವುದು ಈ ಸಂದರ್ಭದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ರಂಗನಾಥ್ (ಮುಖ್ಯ ಅಧೀಕ್ಷಕ ಕೇಂದ್ರ ಕಾರಾಗೃಹ) ರವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣದಲ್ಲಿ 170 ಗ್ರಾಂ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಂಡು ಆರೋಪಿ ಸಾತ್ವಿಕ್ ನನ್ನು ಬಂಧಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















