ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕುವೆಂಪು ರಂಗಮಂದಿರವು ಇಂದು ಸಂಪೂರ್ಣವಾಗಿ ದೇಶಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದಿತು. ‘ವಂದೇ ಮಾತರಂ’ Vandematharam ಗೀತೆಯು 150 ವರ್ಷಗಳನ್ನು ಪೂರೈಸುತ್ತಿರುವ ಐತಿಹಾಸಿಕ ಸಂದರ್ಭದ ಅಂಗವಾಗಿ ‘ಅನವರತ ಫೌಂಡೇಶನ್’ ಹಾಗೂ ‘ಸಂಸ್ಕಾರ ಭಾರತಿ’ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಕರ್ನಲ್ ಡಾ|| ಎ.ಎಸ್. ರಘುನಾಥ್ ಹಾಗೂ ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರು ಗೌರವಪೂರ್ವಕವಾಗಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ|| ರಘುನಾಥ್ ಅವರು, ರಾಷ್ಟ್ರಗೀತೆ ಮತ್ತು ರಾಷ್ಟ್ರಭಕ್ತಿ ಗೀತೆಗಳು ನಮ್ಮ ದೇಶದ ಸೌಹಾರ್ದತೆಯ ಸಂಕೇತವಾಗಿವೆ ಎಂದು ಅಭಿಪ್ರಾಯಪಟ್ಟರು.
ತದನಂತರ ಉದ್ಘಾಟನೆಗೊಂಡ “ಅದಮ್ಯ ಭಾರತ” ವಿಶೇಷ ಪ್ರದರ್ಶಿನಿಯು ಸ್ವಾತಂತ್ರ್ಯ ಸಂಗ್ರಾಮದ ವೀರಗಾಥೆಗಳನ್ನು ನೆನಪಿಸುವಲ್ಲಿ ಯಶಸ್ವಿಯಾಯಿತು. ಶಿವಮೊಗ್ಗದ ವಿವಿಧ ಸಂಗೀತ ಶಾಲೆಗಳ ಮಕ್ಕಳಿಂದ ಏಕಕಾಲದಲ್ಲಿ ಮೊಳಗಿದ ‘ವಂದೇ ಮಾತರಂ’ ಸಮೂಹ ಗಾಯನವು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು.
ಶಿವಮೊಗ್ಗದ ನೂರಾರು ದೇಶಪ್ರೇಮಿಗಳು, ವಿದ್ಯಾರ್ಥಿಗಳು ಮತ್ತು ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆ ತಂದರು. ಈ ಮಹತ್ವದ ಆಚರಣೆಯ ಮೊದಲ ಭಾಗವನ್ನು ಯಶಸ್ವಿಗೊಳಿಸಿದ ಸರ್ವರಿಗೂ ಅನವರತ ಫೌಂಡೇಶನ್ ಹಾಗೂ ಸಂಸ್ಕಾರ ಭಾರತಿ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















