ಕಲ್ಪ ಮೀಡಿಯಾ ಹೌಸ್ | ಮೈಸೂರು | ಲೇಖನ: ಶಿವಮೊಗ್ಗ ರಘುರಾಮ |
ನಾಡಿನ ಸಾಂಸ್ಕೃತಿಕ ರಾಜಧಾನಿ ಮೈಸೂರು ಹೊರ ವಲಯದಲ್ಲಿ ಬಹುಬೇಗನೆ ಬೆಳೆದ ಶ್ರೀರಾಮಪುರದಲ್ಲಿ ದೈವ ಸನ್ನಿಧಿ ಸ್ಥಾಪನೆಯೊಂದಿಗೆ ಅಧ್ಯಾತ್ಮಿಕ ಚಟುವಟಿಕೆಗಳನ್ನೂ ಇಲ್ಲಿ ನಿರಂತರವಾಗಿ ನಡೆಸಬೇಕು ಎಂದು ದಶಕದ ಹಿಂದೆ ಹಿರಿಯರು ಚಿಂತನೆ ನಡೆಸಿದ ಫಲವೇ ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ.
ಇದೀಗ 8ನೇ ವಾರ್ಷಿಕೋತ್ಸವವನ್ನು 10 ದಿನಗಳ ಸಂಭ್ರಮೋತ್ಸವವಾಗಿ ಆಚರಣೆ ಮಾಡಿಕೊಳ್ಳುತ್ತಿರುವ ಕೇಂದ್ರ ಬಹುವಿಧ ಚಟುವಟಿಕೆಗಳಿಂದ ಜನಮಾನಸದ ಶ್ರದ್ಧಾ ಕೇಂದ್ರವಾಗಿ ಖ್ಯಾತಿ ಗಳಿಸಿದೆ. ಅರ್ಧ ಎಕರೆ ಪ್ರದೇಶದಲ್ಲಿ ಧ್ಯಾನ ಕೇಂದ್ರವು 2018ರಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರಿಂದ (ವೈಶಾಖ ಪೂರ್ಣಿಮೆ) ಉದ್ಘಾಟನೆಗೊಂಡಾಗ ತಿರುಮಲ ಮಾದರಿಯ ಶ್ರೀ ವೆಂಕಟೇಶನ ಪ್ರತಿಮೆಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತ್ತು. ಶಿಲ್ಪಿ ಯೋಗಿರಾಜ್ ಕೈಚಳಕದಲ್ಲಿ ಪಡಮೂಡಿದ ದೇವರು ಅಮೂರ್ತ ಸ್ವರೂಪನೂ ಆಗಿದ್ದು, ದರ್ಶನ ಮಾಡುವುದೇ ಒಂದು ಧನ್ಯತೆ.
ಪಂಡಿತ ಬಾದರಾಯಣಾಚಾರ್ಯರ ಪ್ರಧಾನ ಆಚಾರ್ಯತ್ವದಲ್ಲಿ ಕೈಗೊಂಡ ಒಂದೊಂದು ಸಂಕಲ್ಪವೂ ಸಿದ್ಧಿಗೊಳ್ಳುತ್ತ ಬಂತು. ಪ್ರತಿ ತಿಂಗಳೂ ಭಾಗವತ ಸಪ್ತಾಹ, ನಾಡಿನ ಪ್ರಖ್ಯಾತ ಪ್ರವಚನಕಾರರ ವಾಕ್ಝರಿ, ಸಮಗ್ರ ಮಹಾಭಾರತ ಪ್ರವಚನಾದಿಗಳು ಜ್ಞಾನ, ಭಕ್ತಿಯನ್ನು ಭಕ್ತಗಣದಲ್ಲಿ ಬೇರೂರಿಸಿದವು.
ರಾಜ್ಯದ ಮತ್ತು ಹೊರ ರಾಜ್ಯದ ಪ್ರಖ್ಯಾತ ಪ್ರವಚನ ಶಿಖಾಮಣಿಗಳು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಜ್ಞಾನಧಾರೆಯನ್ನು ಭಕ್ತಗಣ ಮನಕ್ಕೆ ಸಮರ್ಪಿಸಿದ್ದಾರೆ. ಆ ಮೂಲಕ ಧರ್ಮ ಜಾಗೃತಿ ಮತ್ತು ಮಾಧ್ವ ತತ್ವ ಚಿಂತನೆಗಳ ಪರಿಮಳವನ್ನು ಪಸರಿಸಿದ್ದಾರೆ. ಪ್ರತಿಯೊಂದು ಪ್ರವಚನ ಮತ್ತು ಧಾರ್ಮಿಕ ಸೇವಾ ಕಾರ್ಯಗಳಲ್ಲಿ ಭಕ್ತಗಣದ ತನು ಮನ ಧನ ಬೆಂಬಲಗಳು ಧಾರಾಳವಾಗಿ ಹರಿದು ಬರುತ್ತಿರುವುದು ಶ್ರೀ ವೆಂಕಟೇಶನ ಪರಮ ದಯೆ ಆಗಿದೆ.
ಗೋಮಾತೆಯ ಸೇವೆ….
ಭಾರತೀಯ ಗೋತಳಿ ಅಭಿವೃದ್ಧಿ, ಗೋ ಸೇವೆ, ಗೋದಾನಕ್ಕೆ ಪ್ರೇರಣೆ ನೀಡಲು 4 ಆಕಳಿನಿಂದ ಆರಂಭವಾದ ವಿದ್ಯಾಧೀಶ ಗೋಶಾಲೆಯಲ್ಲಿ ಈಗ 50 ಹಸುಗಳಿವೆ. ಮಹದೇವಪುರ ಗ್ರಾಮದ ಕಾವೇರಿ ನದಿ ತೀರದಲ್ಲಿ ಈ ಗೋಶಾಲೆಯ ವಿಸ್ತರಣಾ ಘಟಕ ಆರಂಭಿಸಿ ಅಲ್ಲಿಯೂ ಗೋಮಾತೆಯ ಪಾಲನೆ ಸಾಂಗವಾಗಿ ನೆರವೇರುತ್ತಿದೆ.
ಸತ್ಯಧ್ಯಾನ ಭವನವು ವಿವಾಹ ಇತ್ಯಾದಿ ಕಾರ್ಯಗಳಿಗೆ ಪ್ರಶಸ್ತವಾಗಿದೆ. ಇಲ್ಲಿರುವ ವೆಂಕಟೇಶನು ಕಲ್ಯಾಣಪ್ರದ. ದರ್ಶನ ಮಾತ್ರದಿಂದಲೇ ಹಲವರಿಗೆ ವಿವಾಹಾದಿಗಳು ನೆರವೇರಿದ ನೂರಾರು ಪ್ರಸಂಗಗಳಿವೆ. ವಿದ್ಯೆ, ಸಂತಾನ, ಸಂಪತ್ತುಗಳು ಒದಗಿಬಂದು ಹಲವರ ಬದುಕು ಮಂಗಳೋತ್ಸವ ವಾಗಿದೆ. ಸಂಕಲ್ಪ ಸಿದ್ಧಿಸಿದ ನಂತರ ಅನೇಕರು ಕಲ್ಯಾಣೋತ್ಸವ ಸೇವೆ ಮಾಡಿಸುವುದು ನಿರಂತರವಾಗಿರುತ್ತದೆ.
ಶ್ರೀರಾಮಪುರದಲ್ಲಿ ನೆಲೆಸಿರುವ ವೆಂಕಟೇಶನ ಸನ್ನಿಧಿಯಲ್ಲಿ ಶ್ರೀ ಅಕ್ಷೋಭ್ಯತೀರ್ಥರು, ಶ್ರೀ ಜಯತೀರ್ಥರು, ಶ್ರೀ ರಾಘವೇಂದ್ರ ತೀರ್ಥರು ಮತ್ತು ಶ್ರೀ ರಘುನಾಥ ತೀರ್ಥರ ಮೃತಿಕಾ ಬೃಂದಾವನಗಳು ಇವೆ. ಹಾಗಾಗಿ ಈ ಕ್ಷೇತ್ರವನ್ನು ಅಭಿನವ ಮಳಖೇಡ ಎಂದೂ ಕರೆಯಲಾಗುತ್ತದೆ. ಶ್ರೀ ಸತ್ಯಾತ್ಮತೀರ್ಥ ಗುರುಗಳ ಪರಮ ಅನುಗ್ರಹದಿಂದ ಈ ಎಲ್ಲಾ ಮೃತ್ತಿಗೆಗಳು ಶ್ರೀ ವೆಂಕಟೇಶನ ಅಡಿದಾವರೆಗಳಲ್ಲಿ ಇದ್ದು, ಸನ್ನಿಧಿಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಕ್ಷೇತ್ರಕ್ಕೆ ಬಂದ ಭಕ್ತರಿಗೆ ವೆಂಕಪ್ಪನ ಕೃಪೆಯೊಂದಿಗೆ ಗುರುಗಳ ಅನುಗ್ರಹವೂ ಧಾರೆ ಧಾರೆಯಾಗಿ ಹರಿದು ಬರುತ್ತದೆ.
ವಿವಿಧ ಉತ್ಸವ
ಪ್ರತಿನಿತ್ಯ ತಂತ್ರಸಾರೋಕ್ತ ಪೂಜೆ, ಪ್ರತಿ ಶುಕ್ರವಾರ ದೇವರಿಗೆ ಕ್ಷೀರಾಭಿಷೇಕ, ಭಕ್ತರ ಸಂಕಲ್ಪ ಮಾಡಿದಾಗ ಕಲ್ಯಾಣೋತ್ಸವ, ಯುಗಾದಿ ಉತ್ಸವ, ಭಾದ್ರಪದದಲ್ಲಿ 15 ದಿನ ಪ್ರೋಷ್ಠಪದಿ, ಕಾರ್ತಿಕದಲ್ಲಿ ಒಂದು ತಿಂಗಳು ದೀಪೋತ್ಸವ, ನವರಾತ್ರಿ ಉತ್ಸವದಲ್ಲಿ ನಿತ್ಯವೂ ಸ್ವಾಮಿಗೆ ಒಬ್ಬೊಬ್ಬ ಭಕ್ತರಿಂದ ವಸ್ತ್ರ ಸಮರ್ಪಣೆ ಸಹಿತ ಅಲಂಕಾರ, ಅನ್ನದಾನ, ವಿಜಯದಶಮಿ ದಿನ ದೇವರ ರಾಜಬೀದಿ ಉತ್ಸವ, ವೈಶಾಖದಲ್ಲಿ ವಾರ್ಷಿಕೋತ್ಸವ ಸಂಭ್ರಮವಿರುತ್ತದೆ.
ಸಾಮಾಜಿಕ ಸೇವಾ ಕಾರ್ಯಗಳು…..
ನಿತ್ಯ ಬೆಳಗ್ಗೆ ಯೋಗ ತರಗತಿ, ಆಗಾಗ್ಗೆ ಆರೋಗ್ಯ ತಪಾಸಣೆ, ನೇತ್ರ ಪರೀಕ್ಷೆ, ನ್ಯೋರೋ ಮತ್ತು ಡಯಾಬಿಟಿಕ್ ತಜ್ಞರಿಂದ ತಪಾಸಣೆ, ರಕ್ತದಾನ ಶಿಬಿರ, ಮಕ್ಕಳಿಗೆ ಧಾರ್ಮಿಕ ವಸಂತ ಬೇಸಿಗೆ ಶಿಬಿರ, ನಿತ್ಯವೂ ಮಧ್ಯಾಹ್ನ ಹಿರಿಯರಿಗೆ ಉಪನಿಷತ್ತು, ತಾತ್ಪರ್ಯ ನಿರ್ಣಯ, ಸದಾಚಾರ ಸ್ಮತಿ ಪಾಠ, ಮನೆ ಮನೆ ಭಾಗವತ ಪ್ರವಚನ-ಉಚಿತ ಧರ್ಮೋಪನಯನ, ವರ್ಷಕ್ಕೆ 2 ಬಾರಿ ಶ್ರೀ ಸತ್ಯಸಂಕಕಲ್ಪ ತೀರ್ಥರು, ಶ್ರೀ ಸತ್ಯ ಸಂತುಷ್ಠ ತೀರ್ಥರ (8 ಕಿಮೀ) ವೃಂದಾವನ ದರ್ಶನಕ್ಕೆ ಪಾದಯಾತ್ರೆ, ಹೀಗೆ ನಿರಂತರವಾಗಿ ಇಲ್ಲಿ ಒಂದಿಲ್ಲೊಂದು ಚಟುವಟಿಕೆ ಸಂಭ್ರಮದಿಂದ ಕಾರ್ಯಗತಗೊಳ್ಳುತ್ತಲೇ ಬಂದ ಕಾರಣ ಕ್ಷೇತ್ರ ಪ್ರಖ್ಯಾತಿ ಗಳಿಸಿತು.
10 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ
ಮೈಸೂರಿನ ಶ್ರೀರಾಮಪುರದಲ್ಲಿರುವ ಉತ್ತರಾದಿ ಮಠದ ಶಾಖೆ, ಶ್ರೀವೆಂಕಟೇಶ್ವರ ಧ್ಯಾನ ಕೇಂದ್ರದ 8ನೇ ವಾರ್ಷಿಕೋತ್ಸವ ಏ. 23ರಿಂದ ಮೇ 2ರವರೆಗೆ ನೆರವೇರಲಿದೆ. ಇದರ ಅಂಗವಾಗಿ ವಿವಿಧ ವಿಷಯದ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಹೋಮ ಮತ್ತು ವೈಭವಪೂರ್ಣ ಉತ್ಸವಗಳನ್ನು ಆಯೋಜಿಸಲಾಗಿದೆ. ಏ. 23ರಿಂದ 25 ರವರೆಗೆ ನಿತ್ಯ ಸಂಜೆ 4 ರಿಂದ 7.30 ರವರೆಗೆ ಪಂಡಿತ ಬಾದರಾಯಣಾಚಾರ್ಯರಿಂದ ಗಾಯತ್ರಿ ಚಿಂತನ ವಿಶೇಷ ಪ್ರವಚನವಿದೆ. 26ರ ಬೆಳಗ್ಗೆ 108 ಕುಂಡಗಳಲ್ಲಿ ಹೋಮ ಮತ್ತು ಸಂಜೆ ಶ್ರೀನಿವಾಸ ಕಲ್ಯಾಣ ಉತ್ಸವ ನೆರವೇರಲಿದೆ.
ಹರಿನಾಮ ಸಂಕೀರ್ತನೆ- 27ರ ಬೆಳಗ್ಗೆ ಸರ್ವಮೂಲ ಮತ್ತು ವೇದಪಾರಾಯಣ, ಸಂಜೆ 6ಕ್ಕೆ ಎ.ಆರ್. ಕೌಸಲ್ಯಾ ಮತ್ತು ಮತ್ತು ಎ.ಆರ್. ಅಪ್ರಮೇಯರಿಂದ ಹರಿನಾಮ ಸಂಕೀರ್ತನೆ ಆಯೋಜನೆಗೊಂಡಿದೆ. 28ರ ಸಂಜೆ 6ಕ್ಕೆ ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಅವರಿಂದ ಶ್ರೀ ಧನ್ವಂತ್ರಿ ಮಹಿಮೆ ಪ್ರವಚನ, 29ರ ಬೆಳಗ್ಗೆ ಧನ್ವಂತ್ರಿ ಹೋಮ, ಸಂಜೆ 6ಕ್ಕೆ ನರಸಿಂಹ ಮಹಿಮೆ ಕುರಿತು ವ್ಯಾಸತೀರ್ಥಾಚಾರ್ಯರಿಂದ ಪ್ರವಚನ, 30ರ ಬೆಳಗ್ಗೆ ನೃಸಿಂಹ ಹೋಮ, ಸಂಜೆ 6ಕ್ಕೆ ಕೂರ್ಮಾವತಾರ ಕುರಿತು ಆದ್ಯ ಗೋವಿಂದಾಚಾರ್ಯರಿಂದ ಪ್ರವಚನವಿದೆ.
ಮಹಾರಥೋತ್ಸವ- ಮೇ 1 ರಂದು ಪುರುಷಸೂಕ್ತ, ಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣ ಸಮರ್ಪಣೆ ಅಂಗವಾಗಿ ಬೆಳಗ್ಗೆ ಪುರುಷಸೂಕ್ತ, ಶ್ರೀಸೂಕ್ತ ಹೋಮ, ಸಂಜೆ ರಾಜಬೀದಿಯಲ್ಲಿ ವೆಂಕಟೇಶ ದೇವರ ಮಹಾರಥೋತ್ಸವ ಸಂಪನ್ನಗೊಳ್ಳಲಿದೆ.
ಮೇ 2ರ ಬೆಳಗ್ಗೆ 8ಕ್ಕೆ ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿಗೆ ಪಾದಪೂಜೆ, ವೆಂಕಟೇಶ ದೇವರಿಗೆ ಕ್ಷೀರಾಭಿಷೇಕ, ನಂತರ ಅನುಗ್ರಹ ಸಂದೇಶವಿದೆ. ಭಕ್ತರು ಭಾಗವಹಿಸಬೇಕೆಂದು ವ್ಯವಸ್ಥಾಪಕ ಪಂಡಿತ ಹೇಮಂತಾಚಾರ್ಯ ಗುಡಿ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















