ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಿರಂತರ ಮತ್ತು ಸರಿಯಾದ ಯೋಗಾಭ್ಯಾಸದಿಂದ ನಿರೋಗಿಗಳಾಗಲು (ಆರೋಗ್ಯವಂತರಾಗಿರಲು) ಸಾಧ್ಯವಿದೆ. ಇದು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಪ್ರಾಚಾರ್ಯ ಪಿ. ವಿಶ್ವನಾಥ ಅವರು ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷ ಯೋಗವನ್ನು ಜೂನ್ 21 ರಂದು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಯೋಗದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಯೋಗವು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುವುದಲ್ಲದೆ ಮನಸ್ಸನ್ನು ಶಾಂತ ಮತ್ತು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ ಎಂದರು.
ದಿನನಿತ್ಯ ಯೋಗಾಭ್ಯಾಸವನ್ನು ನಾವು ನಮ್ಮ ಸಂಗಾತಿ ಎಂದೇ ಪರಿಗಣಿಸುತ್ತೇವೆ. ಆದರೆ ಇದರಿಂದಲೂ ಕೆಲವೊಮ್ಮೆ ಹಾನಿಯಾಗಬಹುದು. ಯೋಗವನ್ನು ತಪ್ಪಾಗಿ ಮಾಡಿದಲ್ಲಿ ಅದು ನಿಮಗೆ ಪ್ರಯೋಜನ ನೀಡುವ ಬದಲಿಗೆ ಹಾನಿಯನ್ನುಂಟು ಮಾಡುತ್ತದೆ ಎಂದರು.
ಯೋಗ ಮಾಡುವಾಗ ನೀವು ಮಾಡುವ ತಪ್ಪುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತಪ್ಪಾದ ಅಭ್ಯಾಸವು ಗಾಯಗಳು, ಸ್ನಾಯು ಸೆಳೆತ ಅಥವಾ ದೀರ್ಘಕಾಲೀನ ಕೀಲು ಸಮಸ್ಯೆಗಳಿಗೆ ಕಾರಣವಾಗಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಆರಂಭಿಕರು ತಮ್ಮ ದೇಹದ ಮಿತಿಗಳನ್ನು ಅರ್ಥಮಾಡಿಕೊಳ್ಳದೆ ಕಷ್ಟಕರವಾದ ಭಂಗಿಗಳಿಗೆ ಧಾವಿಸಬಹುದು ಅಥವಾ ಸರಿಯಾದ ಉಸಿರಾಟದ ತಂತ್ರಗಳ ಮಹತ್ವವನ್ನು ನಿರ್ಲಕ್ಷಿಸಬಹುದು ಇವೆಲ್ಲವೂ ನಿಮಗೆ ಹಾನಿಯನ್ನುಂಟು ಮಾಡಬಹುದು ಎಂದು ತಿಳಿಸಿದರು.
ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ಅವರು ಮಾತನಾಡಿ, ಯೋಗ ಎಂದರೆ ಕೇವಲ ದೈಹಿಕ ವ್ಯಾಯಾಮ ಎಂದುಕೊಳ್ಳುವುದು ತಪ್ಪು. ಅದು ಮನಸ್ಸು, ಚಾರಿತ್ರ್ಯ, ದೇಹ ಶುದ್ಧಿಗೊಳಿಸಬಲ್ಲ ದಿನನಿತ್ಯದ ದಿವ್ಯೌಷಧಿವಾಗಿದೆ ಎಂದರು.
ಒತ್ತಡದ ಬದುಕಿಗೆ ಯೋಗವೇ ಶ್ರೀರಕ್ಷೆ. ಯೋಗದ ಪ್ರತಿಯೊಂದು ಆಸನವೂ ಔಷಧಿ, ಒತ್ತಡಮುಕ್ತ ಜೀವನಕ್ಕೆ ರಹದಾರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ, ಯೋಗ ನೃತ್ಯ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸನ್ನಿಧಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಶ್ರೇಯಾ ಸ್ವಾಗತಿಸಿದರು. ತಜೀಲ್ಲಾ ವಂದಿಸಿ, ಕವನ ಮತ್ತು ಚಿತ್ರಶ್ರೀ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















