ಶಿವಮೊಗ್ಗ: ಭಾರೀ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಇಂದು ನಾಮಪತ್ರ ಸಲ್ಲಿಸಿದ್ದು, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಇಂದು ಮುಂಜಾನೆ ಶಿಕಾರಿಪುರದ ಹುಚ್ಚುರಾಯಸ್ವಾಮಿ ದೇವಾಲಯ, ರಾಘವೇಂದ್ರ ಸ್ವಾಮಿ ಮಠಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಶಿವಮೊಗ್ಗಕ್ಕೆ ಆಗಮಿಸಿದರು.
ಆನಂತರ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು ರಾಮಣ್ಣ ಶ್ರೇಷ್ಠಿ ಪಾಕ್’ನಿಂದ ಎನ್‌ಇಎಸ್ ಮೈದಾನದವರೆಗೂ ಅಭೂತಪೂರ್ವ ರೋಡ್ ಶೋ ನಡೆಸಿದರು. ರಾಮಣ್ಣಶ್ರೇಷ್ಠಿ ಪಾರ್ಕ್’ನಿಂದ ಗಾಂಧೀ ಬಜಾರ್, ನೆಹರೂ ರಸ್ತೆ, ಗೋಪಿ ವೃತ್ತದ ಮೂಲಕ ಮೆರವಣಿಗೆ ಸಾಗಿತು. ಮಾರ್ಗದುದ್ದಕ್ಕೂ ಸುಡುತ್ತಿದ್ದ ಬಿಸಿಲನ್ನೂ ಲೆಕ್ಕಿಸದೇ ಸಾವಿರಾರು ಮಂದಿ ಜಮಾಯಿಸಿ, ಜೈಕಾರ ಕೂಗುತ್ತಿದ್ದರು.
ಮಧ್ಯಾಹ್ನ ಒಂದು ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ರಾಘವೇಂದ್ರ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಪತ್ನಿ ತೇಜಸ್ವಿನಿ, ಶಾಸಕ ಕೆ.ಎಸ್. ಈಶ್ವರಪ್ಪ, ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಉಪಸ್ಥಿತರಿದ್ದರು.
ಮೆರವಣಿಗೆಯ ಚಿತ್ರಗಳನ್ನು ನೋಡಿ:





























