ನವದೆಹಲಿ: ಇಡಿಯ ದೇಶವೇ ತೀವ್ರ ಕುತೂಹಲದಿಂದ ಎದುರು ನೋಡುತ್ತಿರುವ ರಾಮಜನ್ಮ ಭೂಮಿ-ಬಾಬ್ರಿ ಮಸೀದಿಗೆ ಸಂಬಂಧಿಸಿದ ಅಂತಿಮ ತೀರ್ಪು ಯಾವುದೇ ಕ್ಷಣದಲ್ಲಾದರೂ ಹೊರಬೀಳುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭಾರೀ ಭದ್ರತೆ ವಹಿಸಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ವಹಿಸುವಂತೆ ಈಗಾಗಲೇ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವ ಕೇಂದ್ರ ಸರ್ಕಾರ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸರ್ವ ಸನ್ನದ್ಧವಾಗಿರುವಂತೆ ಭದ್ರತಾ ಸಲಹೆಗಳನ್ನು ನೀಡಿದೆ.
ಉತ್ತರ ಪ್ರದೇಶದಲ್ಲಿ ಕಂಡುಕೇಳರಿಯದ ಭದ್ರತೆ
ಇನ್ನು, ತೀರ್ಪಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಾದ್ಯಂತ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ದಿನದ 24 ಗಂಟೆಯೂ ಸಹ ಹದ್ದಿನ ಕಣ್ಣಿಡಲಾಗಿದ್ದು, ಇದಕ್ಕಾಗಿ ಭದ್ರತಾ ಹೆಲಿಕಾಪ್ಟರ್’ಗಳನ್ನು ನಿಯೋಜನೆ ಮಾಡಲಾಗಿದೆ.
ಪ್ರಮುಖವಾಗಿ ಅಯೋಧ್ಯೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಅರೆ ಸೇನಾಪಡೆಗಳ ಯೋಧರನ್ನು ನಿಯೋಜನೆ ಮಾಡಲಾಗಿದ್ದು, ಇವರೊಂದಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ, ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು, ಉಗ್ರ ನಿಗ್ರಹ ದಳ ಸೇರಿದಂತೆ ವಿವಿಧ ಭದ್ರತಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಅಯೋಧ್ಯಾ ತೀರ್ಪಿನ ನಂತರದಲ್ಲಿನ ಸನ್ನಿವೇಶಗಳನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ದೇಶದ ಗಡಿ ಪ್ರದೇಶ ಸೇರಿದಂತೆ ದೇಶದಾದ್ಯಂತ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.
ಇನ್ನು, ರೈಲ್ವೇ ಭದ್ರತಾ ಪಡೆಯ ಎಲ್ಲ ಸಿಬ್ಬಂದಿಯ ರಜೆಗಳನ್ನೂ ರದ್ದು ಮಾಡಲಾಗಿದ್ದು, ಎಲ್ಲರೂ ರೈಲುಗಳನ್ನು ಎಸ್ಕಾರ್ಟ್ ಮಾಡುವ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಸೂಚಿಸಲಾಗಿದೆ. ಪ್ಲಾಟ್’ಫಾರಂಗಳು, ರೈಲು ನಿಲ್ದಾಣಗಳು, ಯಾರ್ಡ್‌ಗಳು, ಪಾರ್ಕಿಂಗ್ ಸ್ಥಳ, ಸೇತುವೆಗಳು ಹಾಗೂ ಸುರಂಗಗಳಲ್ಲಿ ಮಾತ್ರವಲ್ಲದೆ, ತಯಾರಿಕಾ ಘಟಕ, ವರ್ಕ್ ಶಾಪ್‌ಗಳಲ್ಲೂ ಸಹ ಭದ್ರತೆ ಬಿಗಿಗೊಳಿಸುವಂತೆ ಆದೇಶಿಸಲಾಗಿದೆ.
ಯಾವುದೇ ಹೇಳಿಕೆ ನೀಡದಂತೆ ಪ್ರಧಾನಿ ಸೂಚನೆ
ಅಯೋಧ್ಯೆ ವಿಚಾರದಲ್ಲಿ ಯಾರೂ ಅನಗತ್ಯ ಹೇಳಿಕೆ ನೀಡಬಾರದು ಮತ್ತು ದೇಶದಲ್ಲಿ ಸಾಮರಸ್ಯ ಕಾಪಾಡಲು ಸಹಕರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದ್ದಾರೆ.
ಸಚಿವರ ಮಂಡಳಿ ಸಭೆಯಲ್ಲಿ ಈ ಕುರಿತು ಸಲಹೆ ನೀಡಿರುವ ಅವರು, ದೇಶದಲ್ಲಿ ಸೌಹಾರ್ದ ಕಾಪಾಡುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಯಾವುದೇ ಕಾರಣಕ್ಕೂ, ಯಾವ ರೀತಿಯ ಹೇಳಿಕೆಯನ್ನೂ ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ.
Get In Touch With Us info@kalpa.news Whatsapp: 9481252093, 94487 22200
Discussion about this post