ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮೊನ್ನೆ ನನಗೆ ಜ್ವರ ಇದ್ದದ್ದರಿಂದ ಪಾದಯಾತ್ರೆಯ ನಡುವೆಯೇ ವಿಶ್ರಾಂತಿಗೆ ಹೋಗಬೇಕಾಯ್ತು, ನಿನ್ನೆ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯರ ಸೂಚನೆ ಮೇರೆಗೆ ಅಗತ್ಯ ಚಿಕಿತ್ಸೆ ಪಡೆದು ಇಂದು ಮರಳಿದ್ದೇನೆ. ಕಳೆದೆರಡು ದಿನಗಳ ಕಾಲ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಡಿ.ಕೆ ಶಿವಕುಮಾರ್ ಅವರಿಗೂ, ಪಕ್ಷದ ಕಾರ್ಯಕರ್ತರಿಗೂ ಹಾಗೂ ಪಕ್ಷದ ಎಲ್ಲಾ ನಾಯಕರಿಗೂ, ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಿಳಿಸಿದರು.
ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಮೈಸೂರು ಜಿಲ್ಲೆ ಹಾಗೂ ಇನ್ನಿತರ ಹನ್ನೊಂದು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸಿದ್ದಾರೆ. ಹೀಗೆ ಮುಂದೆ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಸುತ್ತಮುತ್ತಲಿನ ಜನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನ ಸ್ವಯಂ ಪ್ರೇರಿತರಾಗಿ ನಮ್ಮೊಂದಿಗೆ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ, ಇದು ಮೇಕೆದಾಟು ಯೋಜನೆಯ ಬಗ್ಗೆ ಜನರ ಆಸಕ್ತಿಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮೇಕೆದಾಟು ನಮ್ಮ ಕಾಂಗ್ರೆಸ್ ಸರ್ಕಾರದ ಯೋಜನೆ. ಈ ಯೋಜನೆ ಜಾರಿಯಾಗಬೇಕು ಎಂದು ಹೆಚ್ಚಿನ ಆಸಕ್ತಿ ವಹಿಸಿ ಡಿ.ಪಿ.ಆರ್ ಸಿದ್ಧಪಡಿಸಿದ್ದು ನಮ್ಮ ಸರ್ಕಾರ. ಆದರೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ನಿತ್ಯ ನಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡುವ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 2008 ರಿಂದ 2013 ರ ವರೆಗೆ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದರೂ ಮೇಕೆದಾಟು ಯೋಜನೆ ಬಗ್ಗೆ ಯಾವುದೇ ಆಸಕ್ತಿ ತೋರಿರಲಿಲ್ಲ. ನಾವು ಮೇ 2013 ರಲ್ಲಿ ಅಧಿಕಾರಕ್ಕೆ ಬಂದೆವು, ಸೆಪ್ಟೆಂಬರ್ ತಿಂಗಳಲ್ಲೇ ಮೇಕೆದಾಟು ಜಾರಿ ಆಗಬೇಕು ಎಂದು ಡಿ.ಪಿ.ಆರ್ ಸಿದ್ಧಪಡಿಸಿ ಕಾವೇರಿ ಜಲ ಮಂಡಳಿ ಎದುರು ಮಂಡಿಸಿದ್ದೆವು. ನಮ್ಮ ಡಿ.ಪಿ.ಆರ್ ರೂ. 6,912 ಕೋಟಿ ಇತ್ತು, ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ಮೌಲ್ಯ 2019 ರಲ್ಲಿ ನಾಲ್ಕು ಪಟ್ಟು ಹೆಚ್ಚಾದ ಕಾರಣ ಮತ್ತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ರೂ. 9,500 ಕೋಟಿಯ ಪರಿಷ್ಕೃತ ಡಿ.ಪಿ.ಆರ್ ಅನ್ನು ತಯಾರು ಮಾಡಿ ಸಿ.ಡಬ್ಲ್ಯೂ.ಸಿ ಗೆ ಕಳುಹಿಸಿದ್ದರು. ಇಷ್ಟೆಲ್ಲಾ ಮಾಡಿದ ಹೊರತಾಗಿಯೂ ಕಾಂಗ್ರೆಸ್ ಪಕ್ಷ ವಿಳಂಬ ಮಾಡಿತು ಎಂದು ಸುಳ್ಳು ಆರೋಪ ಮಾಡುವ ಕಾರಜೋಳ ಅವರು ಕಳೆದ ಎರಡುವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಹೇಳಲಿ. ಬಸವರಾಜ ಬೊಮ್ಮಾಯಿ ಅವರು ಹಿಂದೆನಿಂತು ಕಾರಜೋಳ ಮೂಲಕ ನಿತ್ಯ ಒಂದೊಂದು ಸುಳ್ಳು ಹೇಳಿಕೆ, ಜಾಹಿರಾತು ಕೊಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಾವು ಅಧಿಕಾರದಲ್ಲಿ ಇದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು, ನಮಗೆ ಯೋಜನೆ ಜಾರಿಮಾಡಲು ಅನುಮತಿ ಸಿಗಲಿಲ್ಲ ಅಂತ ಬಿಡಬಹುದು, ಆದರೆ ಈಗ ಹಾಗಿಲ್ಲ. ಎರಡೂ ಕಡೆ ಬಿಜೆಪಿ ಸರ್ಕಾರ ಇದೆ, ಕೇಂದ್ರದಲ್ಲಿ ನೀರಾವರಿ, ಕಾನೂನು ಸಚಿವರು ನಿಮ್ಮವರೇ ಇದ್ದಾರೆ, ರಾಜ್ಯದಿಂದ 25 ಜನ ಸಂಸದರನ್ನು ಜನ ಬಿಜೆಪಿಯ ಸಂಸದರನ್ನು ಜನ ಆರಿಸಿ ಕಳುಹಿಸಿದ್ದಾರೆ. ಇನ್ನೂ ಯಾಕೆ ಯೋಜನೆ ಜಾರಿ ಮಾಡಿಲ್ಲ ಮಿಸ್ಟರ್ ಕಾರಜೋಳ? ಎಂದು ಪ್ರಶ್ನಿಸಿದರು.
ತಮಿಳುನಾಡಿನ ಹಸಿರು ನ್ಯಾಯಾಧೀಕರಣದವರು ಒಂದು ಕಮಿಟಿ ರಚನೆ ಮಾಡಿ, ಮೇಕೆದಾಟು ಯೋಜನೆಯ ಕಾಮಗಾರಿ ಆರಂಭವಾಗಿದೆಯೇ ಎಂದು ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿತ್ತು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಆದೇಶವನ್ನು ವಜಾಗೊಳಿಸಿದೆ. ಈಗ ಸುಪ್ರೀಂ ಕೋರ್ಟ್, ಹಸಿರು ನ್ಯಾಯಾಧೀಕರಣ, ಕಾವೇರಿ ನೀರು ನಿರ್ವಹಣಾ ಮಂಡಳಿಯಿಂದ ಯೋಜನೆಯ ಬಗ್ಗೆ ಯಾವುದೇ ತಕರಾರು ಇಲ್ಲ. ಹೀಗಿದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಈಗ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಕೊರೊನಾ ಇದೆ, ನಿಯಮ ಪಾಲನೆ ಮಾಡಿಲ್ಲ ಎಂದು ನಾನು ಸೇರಿದಂತೆ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಹೀಗೆ ಕೇಸ್ ಹಾಕಿ ನಮ್ಮನ್ನು ಹೆದರಿಸಬಹುದು ಎಂದಕೊಂಡರೆ ಬಿಜೆಪಿಯವರಂತ ಮೂರ್ಖರು ಯಾರೂ ಇಲ್ಲ.
ಸಾವಿರಾರು ಜನ ಸೇರಿಸಿ ಪ್ರತಿಭಟನೆ ಮಾಡಿದ ಸುಭಾಷ್ ಗುತ್ತೇದಾರ ಅವರ ಮೇಲೆ ಕೇಸ್ ಹಾಕಿದ್ದೀರ ಬೊಮ್ಮಾಯಿ ಅವರೇ? ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಭಗವಂತ್ ಖೂಬಾ ಇವರೆಲ್ಲರ ಮೇಲೂ ಕೇಸ್ ಹಾಕಿದ್ದಾರಾ? ಗೃಹ ಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ದೊಡ್ಡ ಜಾತ್ರೆ ನಡೆಯಿತು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿದ್ರು, ಇವೆಲ್ಲಾ ಮಾಡುವಾಗ ಕೊರೊನಾ ಮೂರನೇ ಅಲೆ ಇರಲಿಲ್ಲ, ನಮ್ಮ ಪಾದಯಾತ್ರೆ ಇಂದ ಮಾತ್ರ ಕೊರೊನ ಹರಡುತ್ತಾ? ಇದರಿಂದ ಸರ್ಕಾರದ ದುರುದ್ದೇಶ ಗೊತ್ತಾಗುತ್ತೆ ಎಂದು ಹೇಳಿದರು.
ನಾವು ಪಾದಯಾತ್ರೆ ಮಾಡಬಾರದು, ಜನ ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಜಾಗೃತರಾಗಬಾರದು ಎಂಬುದು ಸರ್ಕಾರದ ದುರುದ್ದೇಶ. ಬಿಜೆಪಿಯವರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಬಲವರ್ಧನೆಗಾಗಿ ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದೇ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ, ಈ ಪಾದಯಾತ್ರೆ ವಿಷಯದಲ್ಲಿ ಯಾವ ಪ್ರತಿಷ್ಠೆಯಾಗಲೀ, ಒಣ ಜಂಭವಾಗಲೀ ಇಲ್ಲ. ರಾಜ್ಯದ ಹಿತಾಸಕ್ತಿ ಅಷ್ಟೇ ಇದೆ ಎಂದರು.
ಕೊರೊನಾ ಹರಡುತ್ತಿರೋದು ಬಿಜೆಪಿ ಅವರಿಂದಲೇ. ನಿನ್ನೆ ಮೊನ್ನೆವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ‌್ಯಾಲಿ ನಡೆಸಿದ್ದಾರೆ, ಅಲ್ಲೆಲ್ಲಾ ಕೊರೊನಾ ಇಲ್ವ? ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಕೊರೊನಾ ಬರಲ್ವಂತ? ನಮಗೊಂದು ಕಾನೂನು, ಅವರಿಗೊಂದು ಕಾನೂನು ಇದ್ಯಾ? ನಮ್ಮ ಪಾದಯಾತ್ರೆ ತಡೆಯಲು ಬಿಜೆಪಿ ಹತಾಶ ಪ್ರಯತ್ನ ಮಾಡುತ್ತಿದೆ. ನಾವು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮಾಡುವಂತೆ ಹೇಳಿದ್ದೇವೆ ಎಂದು ಹೇಳಿದರು.
ಒಂದು ಲಕ್ಷ ಮಾಸ್ಕ್ ಅನ್ನು ಪಾದಯಾತ್ರೆಗೆ ಬಂದವರಿಗಾಗಿ ಕೊಡುತ್ತಿದ್ದೇವೆ. ಸಾಮಾಜಿಕ ಅಂತರ ಕಾಪಾಡಲು ಗಮನ ನೀಡಿದ್ದೇವೆ. ಕೊರೊನಾ ರೋಗ ಹರಡದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದ್ದೇವೆ. ರೋಗ ಉಲ್ಬಣವಾದರೆ ಲಾಕ್ ಡೌನ್ ಮಾಡಬೇಕಾಗುತ್ತೆ ಎಂದು ಹೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಮಾಡಿರುವ ಲಾಕ್ ಡೌನ್ ನಿಂದ ಜನರ ಬದುಕು ಬೀದಿಗೆ ಬಂದಿದೆ, ಇನ್ನೂ ಅವರ ದುಡಿಮೆ ಸರಿ ದಾರಿಗೆ ಬಂದಿಲ್ಲ, ಹೀಗಿರುವಾಗ ಮತ್ತೆ ಲಾಕ್ ಡೌನ್ ಮಾಡುವುದು ದೊಡ್ಡ ತಪ್ಪು. ಒಂದು ವೇಳೆ ಲಾಕ್ ಡೌನ್ ಮಾಡಲೇಬೇಕು ಅಂತಾದರೆ ಕಾರ್ಮಿಕರು, ಕೂಲಿಕಾರರು, ನೇಕಾರರು, ಸವಿತಾ ಸಮಾಜದವರು, ಆಟೋ ಕ್ಯಾಬ್ ಚಾಲಕರು, ಬಡಗಿಗಳು, ಬೀದಿಬದಿ ವ್ಯಾಪಾರಿಗಳು ಹೀಗೆ ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಮೊದಲೇ ಪರಿಹಾರ ಧನ ನೀಡಿ, ಅವರ ಬದುಕಿಗೆ ರಕ್ಷಣೆ ಕೊಟ್ಟು ನಂತರ ಲಾಕ್ ಡೌನ್ ಮಾಡಬೇಕು. ಕಾರಣ ಮೊದಲ ಅಲೆಯಲ್ಲಿ ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದ ಪರಿಹಾರದ ಹಣ ಇನ್ನು ಜನರಿಗೆ ಇನ್ನೂ ತಲುಪಿಲ್ಲ ಎಂದರು.
ನಿನ್ನೆ ಡಿ.ಕೆ ಶಿವಕುಮಾರ್ ಅವರ ಗಂಟಲು ದ್ರವ ಮಾದರಿ ತಗೊಂಡು ಬರಲು ಸರ್ಕಾರ ವೈದ್ಯಾಧಿಕಾರಿಯನ್ನು ಕಳುಹಿಸಿತ್ತು. ಬಹುಶಃ ಮಾದರಿ ಪರೀಕ್ಷೆ ಮಾಡಿ ಕೊರೊನಾ ಇದೆ ಎಂದು ಸುಳ್ಳು ವರದಿ ಕೊಡುವ ಯೋಚನೆ ಮಾಡಿಕೊಂಡಿದ್ದರೋ ಏನೋ. ಎರಡು ದಿನ ಬಿಸಿಲಿನಲ್ಲಿ ನಡೆದರೂ ಡಿ.ಕೆ ಶಿವಕುಮಾರ್ ಕಲ್ಲುಗುಂಡಿನ ಹಾಗೆ ಇದ್ದಾರೆ ಎಂದರು.
ಈ ಹಿಂದೆ ಬಳ್ಳಾರಿಯಲ್ಲಿ ಪಾದಯಾತ್ರೆ ಮಾಡಿದಾಗ ಕಡೇ ದಿನ ಐದು ಲಕ್ಷ ಜನ ಸೇರಿದ್ದರೂ. ಈಗಲೂ ಜನ ನಮ್ಮ ಪಾದಯಾತ್ರೆಗೆ ಸ್ವಯಂ ಪ್ರೇರಿತರಾಗಿ ಬರಲು ಆರಂಭ ಮಾಡಿದ್ದಾರೆ. ಇದರಿಂದ ಬಿಜೆಪಿಯವರಿಗೆ ಭಯ ಶುರುವಾಗಿದೆ. ಬಳ್ಳಾರಿ ಪಾದಯಾತ್ರೆ ನೆನಪಾದ್ರೆ ಬಸವರಾಜ ಬೊಮ್ಮಾಯಿ ಅವರಿಗೆ ರಾತ್ರಿ ನಿದ್ರೆ ಬರುತ್ತಿಲ್ಲ ಇರಬೇಕು. ನಮ್ಮ ಪಾದಯಾತ್ರೆ ತಡೆಯಲು ಸತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ನಾವು ಅವರ ಯಾವ ಷಡ್ಯಂತ್ರಗಳಿಗೂ ಮಣಿಯದೆ ಹನ್ನೊಂದು ದಿನಗಳ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದರು.
ನಮ್ಮ ಮೇಲೆ ಸರ್ಕಾರ ಕಾನೂನಿನ ಹಾದಿಯಲ್ಲಿ ಕ್ರಮಕೈಗೊಳ್ಳಲು ಹೊರಟರೆ, ನಾವೂ ಕಾನೂನಿನ ರೀತಿಯಲ್ಲೇ ಉತ್ತರ ಕೊಡುತ್ತೇವೆ. ಏನೇನು ಕೇಸ್ ದಾಖಲಿಸುತ್ತಾರೋ ದಾಖಲಿಸಲಿ, ನಾವೂ ಕಾನೂನು ಹೋರಾಟ ಮಾಡುತ್ತೇವೆ. ಕೊರೊನಾ ಬರೀ ನಮ್ಮ ರಾಜ್ಯದಲ್ಲಿ ಮಾತ್ರ ಅಲ್ಲ ಇಡೀ ದೇಶದಲ್ಲಿ ಹೆಚ್ಚಾಗ್ತಾ ಇದೆ. ನಾವು ಪಾದಯಾತ್ರೆ ಮಾಡುತ್ತಿರೋದು ಕರ್ನಾಟಕದಲ್ಲಿ. ದೆಹಲಿಯಲ್ಲಿ ಕೊರೊನಾ ಕೇಸ್ ಹೆಚ್ಚಳ ಆಗುತ್ತಿದೆ, ಮಹಾರಾಷ್ಟ್ರದಲ್ಲಿ ಏರಿಕೆ ಆಗ್ತಿದೆ. ಹೀಗೆ ಕೊರೊನಾ ಎಲ್ಲಾ ಕಡೆ ಹೆಚ್ಚಾಗ್ತಲೇ ಇದೆ. ಕೊರೊನಾ ಸೋಂಕು ಹೆಚ್ಚಾಗುವುದಕ್ಕೂ ನಮ್ಮ ಪಾದಯಾತ್ರೆಗೂ ಸಂಬಂಧ ಇಲ್ಲ ಎಂದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post