ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರು (Bengaluru) ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ 355ನೇ ಆರಾಧನಾ ಸಪ್ತರಾತ್ರೋತ್ಸವದ ಸಮಾರೋಪ ದಿನದ ಅಂಗವಾಗಿ ವಿಶೇಷ ಭರತನಾಟ್ಯ (Bharatanatyam) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಬೆಂಗಳೂರಿನ ಹೆಸರಾಂತ ಭರತನಾಟ್ಯ ಸಂಸ್ಥೆಯಾದ ನೃತ್ಯ ದಿಶಾ ಟ್ರಸ್ಟ್ ವತಿಯಿಂದ ನಡೆದ ಈ ಕಾರ್ಯಕ್ರಮವು ಭಕ್ತರು ಹಾಗೂ ಕಲಾಸಕ್ತರ ಗಮನ ಸೆಳೆಯಿತು. ಸಂಸ್ಥೆಯ ಡಾ. ದರ್ಶಿನಿ ಮಂಜುನಾಥ್ ಅವರ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಹಿರಿಯ ಶಿಷ್ಯರಾದ ಉಮಾ, ಸ್ನೇಹ, ದೀಪಾರಾಣಿ ಹಾಗೂ ಸಹನ ಅವರ ಸಹಕಾರದೊಂದಿಗೆ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಕೃಪೆಗೆ ಪಾತ್ರರಾದರು.
ಪುಷ್ಪಾಂಜಲಿಯೊಂದಿಗೆ ಆರಂಭ
ಕಾರ್ಯಕ್ರಮವು ಸಾಂಪ್ರದಾಯಿಕ ಪುಷ್ಪಾಂಜಲಿಯೊಂದಿಗೆ ಆರಂಭಗೊಂಡಿತು. ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳವರ ಸ್ತೋತ್ರ, ನೋಟ್ಟುಸ್ವರ, ಸ್ವರವಳಿ ಸೇರಿದಂತೆ ವಿವಿಧ ನೃತ್ಯ ಪ್ರಸ್ತುತಿಗಳನ್ನು ಕಲಾವಿದರು ಮನಮೋಹಕವಾಗಿ ಪ್ರದರ್ಶಿಸಿದರು.
ಮುಂದುವರಿದು ‘ತುಂಗಾತೀರ ವಿರಾಜಂ’ ಕೃತಿ ಹಾಗೂ ‘ವೆಂಕಟಾಚಲ ನಿಲಯಂ’ ಸೇರಿದಂತೆ ಭಕ್ತಿಭಾವವನ್ನು ಬಿಂಬಿಸುವ ವಿವಿಧ ನೃತ್ಯ ಸಂಯೋಜನೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ‘ಗುರುವಿನ ಗುಲಾಮನಾಗುವ ತನಕ’ ದೇವರನಾಮದೊಂದಿಗೆ ಮಂಗಳ ಕಾರ್ಯಕ್ರಮ ನೆರವೇರಿತು.
Also read>> ಮೈಸೂರು | ಗೋಗ್ರಾಸ ಅರ್ಪಿಸಿ ವಿಶಿಷ್ಟವಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ
Bengaluru : ಕಿರಿಯ ಕಲಾವಿದರ ಅದ್ಭುತ ಪ್ರದರ್ಶನ
ನೃತ್ಯ ದಿಶಾ ಟ್ರಸ್ಟ್‌ನ ಕಿರಿಯ ವಿದ್ಯಾರ್ಥಿಗಳು ವಿವಿಧ ಭರತನಾಟ್ಯ ಪ್ರಸ್ತುತಿಗಳನ್ನು ನೀಡುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಶಾಸ್ತ್ರೀಯ ನೃತ್ಯದ ಅಂಗಾಂಗ ಶುದ್ಧತೆ, ಭಾವಾಭಿನಯ ಹಾಗೂ ಲಯಬದ್ಧ ಹೆಜ್ಜೆಗಳ ಮೂಲಕ ಪುಟಾಣಿ ಕಲಾವಿದರು ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಮನಸ್ವಿ, ಚರಿಕ, ಆರಾಧ್ಯ, ಕೃತಿಕಾ, ಸಮೃದ್ಧಿ, ಹಾನಿಸ್ಕ, ಅದಿತಿ, ಕೀರ್ತನ, ಜಿಶಾ, ವಿಸ್ಮಯ, ಖುಷಿ, ಆಶಿತಾ, ಮಾನ್ಯತಾ, ಮಾನ್ವಿತಾ, ವರ್ಣಿಕ, ಗಮ್ಯ, ನೇಹ, ಶ್ರೇಯಾ, ಜಶ್ರಿತ ಹಾಗೂ ಶೈಲಜಾ ಸೇರಿದಂತೆ ಅನೇಕ ಬಾಲ ಪ್ರತಿಭೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಒಟ್ಟಾರೆ ಸುಮಾರು 80 ನೃತ್ಯ ಕಲಾವಿದರು ವಿವಿಧ ಪ್ರಸ್ತುತಿಗಳಲ್ಲಿ ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು ಎಂದು ಶ್ರೀ ನಂದಕಿಶೋರಾಚಾರ್ ತಿಳಿಸಿದ್ದಾರೆ.
ಭಕ್ತಿ–ಕಲೆಯ ಸಂಗಮ
ಶ್ರೀ ರಾಘವೇಂದ್ರ ಸ್ವಾಮಿಗಳವರ ಆರಾಧನಾ ಸಪ್ತರಾತ್ರೋತ್ಸವದ ಕೊನೆಯ ದಿನ ನಡೆದ ಈ ಭರತನಾಟ್ಯ ಕಾರ್ಯಕ್ರಮವು ಭಕ್ತಿ, ಸಂಗೀತ ಮತ್ತು ಶಾಸ್ತ್ರೀಯ ನೃತ್ಯದ ಸುಂದರ ಸಂಗಮಕ್ಕೆ ಸಾಕ್ಷಿಯಾಯಿತು. ರಾಯರ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದರು ಭಕ್ತಿಗೀತೆಗಳು ಹಾಗೂ ದೇವರನಾಮಗಳಿಗೆ ನೃತ್ಯ ರೂಪಕ ನೀಡುವ ಮೂಲಕ ಆಧ್ಯಾತ್ಮಿಕ ವಾತಾವರಣವನ್ನು ಮತ್ತಷ್ಟು ಗಾಢಗೊಳಿಸಿದರು.
ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಭರತನಾಟ್ಯ ಪ್ರದರ್ಶನವು ವಿಶೇಷ ಮೆರುಗು ನೀಡಿದ್ದು, ಭಕ್ತರು ಹಾಗೂ ಕಲಾಸಕ್ತರಿಗೆ ಸ್ಮರಣೀಯ ಅನುಭವವನ್ನು ನೀಡಿತು.
ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ, ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








