ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕಾಂಗ್ರೆಸ್ 18, ಜೆಡಿಎಸ್ 11, ಬಿಜೆಪಿ 4 ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ವಿಜಯಮಾಲೆ ಧರಿಸಿದ್ದಾರೆ.
18 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದ್ದರೆ, ಹಿಂದಿನ ಬಾರಿ ಅಧಿಕಾರ ಹಿಡಿದಿದ್ದ ಜೆಡಿಎಸ್ ಪಕ್ಷ ಅಪ್ಪಾಜಿ ಗೌಡರ ಅನುಪಸ್ಥಿತಿಯಲ್ಲಿ ಎರಡನೆಯ ಸ್ಥಾನಕ್ಕೆ ಇಳಿದಿದೆ.
ಇನ್ನು, ಈ ಬಾರಿಯ ನಗರಸಭೆ ಚುನಾವಣೆ ಕೆಲವೊಂದು ಕುತೂಹಲಕಾರಿ ಹಾಗೂ ವಿಶೇಷ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. ಪ್ರಮುಖವಾಗಿ, ಇಬ್ಬರು ಅಪ್ಪ ಹಾಗೂ ಮಕ್ಕಳು ನಗರಸಭೆಯಲ್ಲಿ ಪ್ರವೇಶಿಸಿದ್ದು, ಇದರಲ್ಲಿ ಅಪ್ಪ ಬಿಜೆಪಿ ಹಾಗೂ ಮಗ ಕಾಂಗ್ರೆಸ್ ಆಗಿರುವುದು ಇನ್ನೊಂದು ವಿಚಿತ್ರ ಸನ್ನಿವೇಶ.
ಮೋಹನ್-ಮಂಜುನಾಥ್
ಶಾಸಕ ಬಿ.ಕೆ. ಸಂಗಮೇಶ್ವರ ಅವರ ಸಹೋದರ, ನಗರಸಭೆ ಮಾಜಿ ಅಧ್ಯಕ್ಷ, 22ನೆಯ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಮೋಹನ್ ಅವರು 1328 ಮತಗಳನ್ನು ಗಳಿಸುವ ಮೂಲಕ ವಿಜಯಮಾಲೆ ಧರಿಸಿದ್ದಾರೆ. ಹಾಗೆಯೇ, ಬಿ.ಕೆ. ಮೋಹನ್ ಅವರ ಪುತ್ರ ಬಿ.ಎಂ. ಮಂಜುನಾಥ್ ಅವರು 7ನೆಯ ವಾರ್ಡ್‌ನಿಂದ 1172 ಮತ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಶಾಸಕರ ಕುಟುಂಬದ ಇಬ್ಬರು ನಗರಸಭೆಗೆ ಪ್ರವೇಶಿಸಿದ್ದಾರೆ.
ಅಪ್ಪ ಬಿಜೆಪಿ-ಮಗ ಕಾಂಗ್ರೆಸ್
ಇನ್ನು, ನಗರ ಬಿಜೆಪಿ ಹಿರಿಯ ಮುಖಂಡ ವಿ. ಕದಿರೇಶ್ ಅವರು 7ನೆಯ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. 16 ನೆಯ ವಾರ್ಡ್‌ನಿಂದ ಅದೃಷ್ಠ ಪರೀಕ್ಷೆಗೆ ಇಳಿದಿದ್ದ ಅವರು 977 ಮತಗಳನ್ನು ಗಳಿಸುವ ಮೂಲಕ ಮತ್ತೊಮ್ಮೆ ನಗರಸಭೆ ಪ್ರವೇಶಿಸಿದ್ದಾರೆ. ಇದೇ ವೇಳೆ ಕದಿರೇಶ್ ಪುತ್ರ ಸುದೀಪ್ ಕುಮಾರ್ ಅವರು 12ನೆಯ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಇವರು 1305 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಅಪ್ಪ ಬಿಜೆಪಿಯಿಂದ, ಮಗ ಕಾಂಗ್ರೆಸ್’ನಿಂದ ಸ್ಪರ್ಧಿಸಿದ್ದರೂ ವಿಜಯಮಾಲೆ ಧರಿಸಿದ್ದು, ಈ ಮೂಲಕ ಉಕ್ಕಿನ ನಗರಿ ವಿಚಿತ್ರ ಹಾಗೂ ವಿಭಿನ್ನ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post