ಭದ್ರಾವತಿ: ರಾಜ್ಯದ ಮುಖ್ಯಮಂತ್ರಿಯಾಗಿ, ಸಂಸದರಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಮಾಜಿ ಸಂಸದ ಬಿ.ವೈ. ರಾಘವೇಂದ್ರ ಇಬ್ಬರು ಕ್ಷೇತ್ರಕ್ಕೇನೂ ಕೊಡಿಗೆ ನೀಡದೆ ಅವಳಿ ಕಾರ್ಖಾನೆಗಳನ್ನು ಉಳಿಸದೆ ವಂಚಿಸಿರುವ ಅವರನ್ನು ಸೋಲಿಸಿ ತಕ್ಕ ಪಾಠ ಕಲಿಸಿ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಮತದಾರರಲ್ಲಿ ಮನವಿ ಮಾಡಿದರು.
ಜೆಡಿಎಸ್ ವತಿಯಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಾರಿಗೂ ಬೇಡವಾದ ಚುನಾವಣೆ ಬಿಎಸ್‌ವೈ ನೀಡಿದ ರಾಜೀನಾಮೆಯಿಂದಾಗಿ ನ.3 ರಂದು ನಡೆಲಿದೆ. ಎಂಪಿ ಉಪಚುನಾವಣೆಗೆ ಬಡವರ ಬಂಧು ಅಭಿವೃದ್ದಿ ಹರಿಕಾರ ಮಾಜಿ ಸಿಎಂ ಬಂಗಾರಪ್ಪ ರವರ ಪುತ್ರ ಮಧು ಬಂಗಾರಪ್ಪ ರವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮಿತ್ರ ಪಕ್ಷಗಳು ಸ್ಪರ್ಧೆಗಿಳಿಸಿದೆ. ಇವರೊಬ್ಬ ಸದ್ಗುಣ ಮತ್ತು ಉತ್ತಮ ಅಭ್ಯರ್ಥಿ. ಮತದಾರರು ಇವರನ್ನು ಅತೀ ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡುವುದರಿಂದ ಸತ್ಯಕ್ಕೆ ಜಯವಾಗಲಿದೆ. ಕ್ಷೇತ್ರವೂ ಅಭಿವೃದ್ದಿಗೆ ಕಾಣಲಿದೆ ಎಂದರು.
ಕಳೆದ 10 ವರ್ಷಗಳ ಹಿಂದೆ ಬಿ.ಎಸ್. ಯಡಿಯೂರಪ್ಪ ಚುನಾವಣಾ ಸಂದರ್ಭದಲ್ಲಿ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹಾಗೂ ಅವಳಿ ಕಾರ್ಖಾನೆಗಳಾದ ವಿಐಎಸ್‌ಎಲ್‌ಗೆ ಅದಿರು ಗಣಿ ಮತ್ತು ಕೇಂದ್ರದಿಂದ ಬಂಡವಾಳ ಹಾಗೂ ಎಂಪಿಎಂ ಕಾರ್ಖಾನೆ ಪುನಶ್ಚೇತನ ಮಾಡಲು ಬಂಡವಾಳ ತೊಡಗಿಸಿ ಉಳಿಸುವುದಾಗಿ ಹೇಳಿದ್ದರು. ಜನರು ಅದನ್ನು ನಂಬಿ ಅಭಿವೃದ್ದಿಯಾಗಬಹುದೆಂಬ ಆಸೆ ಹೊತ್ತು ಮತ ನೀಡಿದರು ಎಂದರು.
ನಂತರ ಬಿಎಸ್‌ವೈ ಸಿಎಂ ಆಗಿ, ಸಂಸದರಾಗಿ ಅಧಿಕಾರದ ಅಮಲಿನಲ್ಲಿ ಮೈಮರೆತು ಕೈಚೆಲ್ಲಿದರು. ಅದಾದ ನಂತರ ಬಿ.ವೈ. ರಾಘವೇಂದ್ರ ಸಂಸದರಾಗಿಯೂ ಏನೂ ಸಾಧಿಸದೆ ಅಧಿಕಾರ ದುರುಪಯೋಗ ಪಡಿಸಿಕೊಂಡರು. ಇವರ ತಾತ್ಸಾರದಿಂದಾಗಿ ಎಂಪಿಎಂ ಸಂಪೂರ್ಣ ಮುಚ್ಚಲ್ಪಟ್ಟಿದೆ. ಕಾರ್ಮಿಕರು ಬೀದಿಪಾಲಾಗಿದ್ದಾರೆ. ವಿಐಎಸ್‌ಎಲ್‌ಗೆ ಇಂದಿಗೂ ಗಣಿ ಮತ್ತು ಬಂಡವಾಳ ತೊಡಗಿಸಲಾಗದೆ ಸೊರಗಿದೆ. ಆದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ಬಿಜೆಪಿಯವರು ವಿಐಎಸ್‌ಎಲ್ ಉಳಿಸಲು ಕೇಂದ್ರ ಮಂತ್ರಿಗಳನ್ನು ಕಾರ್ಖಾನೆಗೆ ಬರುವಂತೆ ಮಾಡಿ 6 ಸಾವಿರ ಕೋಟಿ ರೂ ಬಂಡವಾಳ ತೊಡಗಿಸುತ್ತೇವೆಂದು ಅವರಿಂದ ಹೇಳಿಸಿ ಚುನಾವಣೆಯ ಗಿಮಿಕ್ ಮಾಡುತ್ತಿದ್ದಾರೆಷ್ಟೇ ವಿನಾ ಪ್ರಾಮಾಣಿಕ ಪ್ರಯತ್ನಗಳೇನಿಲ್ಲ. ಎಂಪಿಎಂ ಕಾರ್ಖಾನೆಗೆ ಕೇವಲ 300 ಕೋಟಿ ರೂ ಬಂಡವಾಳ ನೀಡಿದ್ದರು ಕಾರ್ಖಾನೆ ಉಳಿಯುತ್ತಿತ್ತು. ಕಾರ್ಮಿಕರ ಬದುಕು ಹಸನಾಗುತ್ತಿತ್ತು ಎಂದು ಅಪ್ಪಾಜಿ ಆರೋಪಿಸಿದರು.
ಅಪ್ಪಾಜಿ ಮಾತಿನ ಪ್ರಮುಖಾಂಶ:
-
ನಾಲ್ಕುವರೆ ವರ್ಷ ಕಾಲಕಳೆದ ಬಿಎಸ್‌ವೈ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಯಾರಿಗೂ ಬೇಡವಾದ ಕೇವಲ ಮೂರ್ನಾಲ್ಕು ತಿಂಗಳಿಗಾಗಿ ಬಂದಿದೆ.
-
ಉಪ ಚುನಾವಣೆಗೆ ಅವರ ಮಗ ಬಿ.ವೈ. ರಾಘವೇಂದ್ರ ಸ್ಪರ್ಧಿಸಿ ಮತದಾರರ ಬಳಿ ಮತಯಾಚಿಸಲು ಬರುತ್ತಿದ್ದಾರೆ.
-
ಸುಳ್ಳು ಭರವಸೆ ನೀಡಿ ಮೋಸ ಮಾಡಿರುವ ಅಪ್ಪ ಮಕ್ಕಳಿಗೆ ಸೋಲಿಸಿ ತಕ್ಕ ಪಾಠ ಕಲಿಸಬೇಕು.
-
ವಿಐಎಸ್‌ಎಲ್ ನಿವೃತ್ತ ಕಾರ್ಮಿಕರಿಗೆ ಮನೆಗಳ ಭದ್ರತೆ ಮಾಡುವುದಾಗಿ ಕರೆದಿದ್ದ ಸಭೆಯಲ್ಲಿ ಮನೆಗಳ ವಿಚಾರ ಕೈ ಬಿಟ್ಟು ಬಿವೈಆರ್ ಮತಯಾಚಿಸಿ ಹಗಲು ಮೋಸ ಮಾಡಿದ್ದಾರೆ
-
ಶಿಕಾರಿಪುರ ಕ್ಷೇತ್ರಕ್ಕೆ ರಸ್ತೆಗಳ ಅಭಿವೃದ್ದಿಗಾಗಿ 1200 ಕೋಟಿ ರೂ ಗಳನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಶೇ. 5 ರಷ್ಟು ಅನುದಾನ ನಮ್ಮ ಕ್ಷೇತ್ರಕ್ಕೆ ಕೇಳಿದ್ದರು ನೀಡದೆ ಮೋಸ ಮಾಡಿದ್ದಾರೆ
-
ಕ್ಷೇತ್ರಾಭಿವೃದ್ದಿಗಾಗಿ ಮತ್ತು ಸತ್ಯವನ್ನು ಎತ್ತಿ ಹಿಡಿಯಲು ಮಧು ಬಂಗಾರಪ್ಪ ಅವರನ್ನು ಗೆಲ್ಲಿಸಿ ದೆಹಲಿಯ ಸಂಸತ್ತಿಗೆ ಕಳುಹಿಸುವ ಅನಿವಾರ್ಯತೆ ಎದುರಾಗಿದೆ
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಪಕ್ಷಗಳು ಸಹ ಭಿನ್ನಾಭಿಪ್ರಾಯಗಳನ್ನು ಮರೆತು ಕಾರ್ಯಕರ್ತರು ಮತ್ತು ಮುಖಂಡರು ಒಗ್ಗೂಡಿ ಮನೆ ಮನೆಗೆ ತೆರಳಿ ಮತದಾರರ ಮನವೊಸಲಿ ಯಶಸ್ಸು ಕಾಣಬೇಕಿದೆ. ಮತದಾರರು ಕ್ಷೇತ್ರದ ಇತಿಹಾಸ ಮತ್ತು ಕ್ಷೇತ್ರಕ್ಕೆ ಕೊಡುಗೆ ನೀಡಿರುವವರನ್ನು ಸ್ಮರಿಸಬೇಕಾಗಿದೆ. ಸುಳ್ಳಿನ ಸರದಾರರಾಗಿರುವ ಬಿಜೆಪಿಯನ್ನು ದೂರವಿಟ್ಟು ಪಾಠಕಲಿಸಿ ಮನೆಗೆ ಕಳುಹಿಸಬೇಕಾಗಿದೆ. ಪ್ರಧಾನಿ ಮೋದಿ ಮುಗುಳು ನಗೆಯಿಂದ ಜನರನ್ನು ಮೋಡಿ ಮಾಡಿ ಮೋಸ ಮಾಡುತ್ತಿದ್ದಾರೆ. ಬಿಎಸ್‌ವೈ ಶಿಕಾರಿಪುರ ಕ್ಷೇತ್ರಕ್ಕೆ ರಸ್ತೆಗಳ ಅಭಿವೃದ್ದಿಗಾಗಿ 1200 ಕೋಟಿ ರೂ ಗಳನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಶೇ. 5 ರಷ್ಟು ಅನುದಾನ ನಮ್ಮ ಕ್ಷೇತ್ರಕ್ಕೆ ಕೇಳಿದ್ದರು ನೀಡದೆ ಮೋಸ ಮಾಡಿದ್ದಾರೆಂದು ಆರೋಪಿಸಿದರು.
ಜೆಡಿಎಸ್ ಪಕ್ಷದ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿದರು. ಜಿಪಂ ಸದಸ್ಯರಾದ ಜೆ.ಪಿ. ಯೋಗೀಶ್, ಮಣಿಶೇಖರ್, ಮಾಜಿ ಸದಸ್ಯ ಎಸ್. ಕುಮಾರ್, ನಗರಸಭಾಧ್ಯಕ್ಷ ಹಾಲಮ್ಮ, ಉಪಾಧ್ಯಕ್ಷ ಮೀನಾಕ್ಷಿ, ಸದಸ್ಯರಾದ ಎಂ.ಎಸ್. ಸುಧಾಮಣಿ, ಬದ್ರಿನಾರಾಯಣ, ಶಿವರಾಜ್, ತಾಪಂ ಅಧ್ಯಕ್ಷೆ ಯಶೋದಮ್ಮ, ಸದಸ್ಯ ಕುಮ್ರಿಚಂದ್ರಣ್ಣ ಮುಖಂಡರಾದ ಸುಕನ್ಯ, ಫೀರ್ ಷರೀಫ್, ಮೈಲಾರಪ್ಪ, ಅಂತೋಣಿ ವಿಲ್ಸನ್, ಡಿ.ಟಿ. ಶ್ರೀಧರ್ ಮುಂತಾದವರು ಉಪಸ್ಥಿತರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post