1981
ಬೆಂಗಳೂರಿನ ಪಾಲಿಗೆ 1981 ರಿಂದ 83ರ ಅವಧಿ ದುರಂತಮಯ. ಈ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯ ಕಂಡು ಕೇಳರಿಯದಂಥ ಮಹಾ ದುರಂತಗಳು ಘಟಿಸಿದವು. ಸರ್ಕಸ್ ಅಗ್ನಿ ಅನಾಹುತದಲ್ಲಿ 92, ಕಳ್ಳಬಟ್ಟಿ ಅವಾಂತರದಲ್ಲಿ ಸುಮಾರು 300 ಮತ್ತು ಗಂಗಾರಾಮ್ ಕಟ್ಟಡ ಕುಸಿದು 123 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡರು. ಈ ಮೂರು ದುರಂತದ ವೇಳೆ ಪರಿಹಾರ ಕಾರ್ಯಾಚರಣೆಯಲ್ಲಿ ನಾನು ಸಕ್ರಿಯವಾಗಿ ಭಾಗವಹಿಸಿದ್ದೆ. ಆ ಘೋರ ದುರಂತಗಳ ನೆನಪು ಇಂದಿಗೂ ನನ್ನನ್ನು ಕಾಡುತ್ತಿರುತ್ತದೆ.
ಅಂದು 1981ರ ಫೆ 8ನೇ ತಾರೀಖು, ಶನಿವಾರ, ನಾನು ಚಾಮರಾಜಪೇಟೆ ಠಾಣೆಯಲ್ಲಿ ಟ್ರಾಫಿಕ್ ಎಸ್‌ಐ ಆಗಿದ್ದೆ. ಸಂಜೆ ಸುಮಾರು 6 ಗಂಟೆಯ ಸಮಯ. ಸರ್ಕಲ್ ಇನ್‌ಸ್ಪೆಕ್ಟರ್ ಕೆ.ಎಲ್. ರಾವ್ ಜತೆ ಮಾತನಾಡುತ್ತ ನಿಂತಿದ್ದೆ. ಅಷ್ಟರಲ್ಲಿ ವೈರ್‌ಲೆಸ್‌ನಲ್ಲಿ ತುರ್ತು ಸಂದೇಶ ಬಂತು. ಸಿಟಿ ರೈಲು ನಿಲ್ದಾಣ ಬಳಿಯ ಓಕಳಿಪುರಂ ಎಂಟ್ರನ್‌ಸ್ ಸಮೀಪದ ಮೈದಾನದಲ್ಲಿ ವೀನಸ್ ಕಂಪನಿಯ ಸರ್ಕಸ್ ನಡೆಯುತ್ತಿತ್ತು. ಸರ್ಕಸ್ ಡೇರೆಗೆ ಬೆಂಕಿ ಬಿದ್ದಿದ್ದು, ಎಲ್ಲ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ಜತೆ ತುರ್ತಾಗಿ ಘಟನಾ ಸ್ಥಳಕ್ಕೆ ಧಾವಿಸಬೇಕೆಂಬ ಆದೇಶ ಜಾರಿಯಾಯಿತು. ಇನ್‌ಸ್ಪೆಕ್ಟರ್ ಜತೆ ನಾನು ಸ್ಥಳಕ್ಕೆ ಧಾವಿಸಿದೆ. ಹೊತ್ತಿ ಉರಿಯುತ್ತಿದ್ದ ಭಾರೀ ಗಾತ್ರದ ಡೇರೆ ನೆಲಕಚ್ಚಿತ್ತು.
ಅದರೊಳಗಿನಿಂದ ಜನರ ಆರ್ತನಾದ ಕೇಳಿ ಬರುತ್ತಿತ್ತು. ಮಾನವ ದೇಹದ ಸುಟ್ಟ ವಾಸನೆ ಎಲ್ಲಡೆ ವ್ಯಾಪಿಸಿತ್ತು. ಧಾವಿಸಿ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಜತೆ ನಾವು ಸೇರಿಕೊಂಡು ರಕ್ಷಣಾ ಕಾರ್ಯಕ್ಕಿಳಿದೆವು.
ಡೇರೆಯ ಸುತ್ತ ಭಾರಿ ಗಾತ್ರದ ಕಬ್ಬಿಣದ ಸಲಾಕೆಗಳನ್ನು ಹೂಳಲಾಗಿತ್ತು. ಹಾಗಾಗಿ ಅಗ್ನಿಶಾಮಕ ವಾಹನಗಳನ್ನು ಸರಾಗವಾಗಿ ಒಳಗೆ ತೆಗೆದುಕೊಂಡು ಹೋಗಲು ತೊಡಕಾಯಿತು. ಹೊರಗಿನಿಂದಲೇ ನೀರನ್ನು ಪಂಪ್ ಮಾಡಲಾಯಿತಾದರೂ ಆ ನೀರು ಡೇರೆಯ ಮೇಲ್ಭಾಗದಲ್ಲೇ ಉಳಿದುಕೊಂಡಿತು. ಒಳಗೆ ಉರಿಯತ್ತಿದ್ದ ಬೆಂಕಿ ನಂದಿಸುವುದು ಸವಾಲಾಗಿತ್ತು. ಸುತ್ತ ಕಟ್ಟಿಗೆಯ ಗ್ಯಾಲರಿ ಅಳವಡಿಸಿದ್ದರಿಂದ ಬೆಂಕಿ ಮತ್ತಷ್ಟು ತೀವ್ರವಾಗಿತ್ತು. ಅಂತೂ ಭಾರೀ ಪ್ರಯಾಸದಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು.
ಡೇರೆಯನ್ನು ಎತ್ತಿ ನೋಡಿದಾಗ ನಮಗೆ ಭಾರೀ ಆಘಾತ ಕಾದಿತ್ತು. ಚಿಕ್ಕ ಚಿಕ್ಕ ಮಕ್ಕಳು ಒಬ್ಬರನೊಬ್ಬರು ತಬ್ಬಿಕೊಂಡು ಸುಟ್ಟು ಕರಕಲಾಗಿದ್ದರು. ಅವರ ಜತೆಗೆ ಬಂದಿದ್ದ ಪೊಷಕರು, ಶಿಕ್ಷಕರ ಶವಗಳು ಅಲ್ಲಲ್ಲಿ ಬಿದ್ದಿದ್ದವು. ಹೊಗೆಯಿಂದ ಉಸಿರುಗಟ್ಟಿ ಕೆಲವರು ಪ್ರಜ್ಞೆ ಕಳೆದುಕೊಂಡಿದ್ದರು. ನೂರಾರು ಮಂದಿ ಸುಟ್ಟ ಗಾಯಗಳಿಂದ ಅರೆಜೀವವಾಗಿದ್ದರು. ಅವರನ್ನೆಲ್ಲ ತರಾತುರಿಯಿಂದ ಅಂಬ್ಯುಲೆನ್‌ಸ್ನಲ್ಲಿ ಹಾಕಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದೆವು. ನೂರಾರು ಸಾರ್ವಜನಿಕರೂ ಸಮರೋಪಾದಿ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದರು.
ಅವತ್ತು ಶನಿವಾರವಾದ್ದರಿಂದ ಸರ್ಕಸ್ ನೋಡಲು ಜನ ಕಿಕ್ಕಿರಿದ್ದರು. ಹಲವಾರು ಶಾಲೆಗಳ ಶಿಕ್ಷಕರು ನೂರಾರು ಮಕ್ಕಳನ್ನು ಕರೆತಂದಿದ್ದರು. ಕೆಲವು ಮಕ್ಕಳ ಜತೆ ಪೋಷಕರೂ ತೆರಳಿದ್ದರು. ಆ ಮ್ಯಾಟಿನಿ ಶೋಗೆ ಸುಮಾರು 3000 ಜನ ಸೇರಿದ್ದರು. ಇನ್ನೇನು ಒಂದೇ ಒಂದು ಕಸರತ್ತು ಮುಗಿದ ಬಳಿಕ ಶೋ ಮುಗಿದು ಹೋಗುತ್ತಿತ್ತು. ಸಾವಿರಾರು ಜನ ಟಿಕೆಟ್ ಪಡೆದು ರಾತ್ರಿಯ ಶೋ ನೋಡಲು ಡೇರೆಯ ಹೊರಗಡೆ ಕಾತುರರಾಗಿ ನಿಂತಿದ್ದರು. ಆದರೆ ಇದ್ದಕ್ಕಿದ್ದಂತೆ ಉಂಟಾದ ಬೆಂಕಿ ಡೇರೆ ಪೂರ್ತಿ ಆವರಿಸಿ ಸರ್ಕಸ್ ನೋಡುತ್ತಿದ್ದವರು ಬೆಂಕಿಯ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡರು. ಕೆಲವೇ ಕ್ಷಣಗಳಲ್ಲಿ ದಟ್ಟ ಹೊಗೆ ಆವರಿಸಿ ಹೊರಗೆ ಹೋಗುವ ದಾರಿಯೇ ಕಾಣದೆ ಜನ ಎಲ್ಲೆಂದರಲ್ಲಿ ನುಗ್ಗತೊಡಗಿದರು. ಹಾಗಾಗಿ ಕಾಲ್ತುಳಿತ ಉಂಟಾಯಿತು.
ಒಂದೆಡೆ ಬೆಂಕಿ, ಮತ್ತೊಂದೆಡೆ ಹೊಗೆ, ಇದರ ಮಧ್ಯೆ ಉಂಟಾದ ಕಾಲ್ತುಳಿತಕ್ಕೆ ಪುಟ್ಟ ಮಕ್ಕಳು ಬಲಿಪಶುವಾದರು. ಸ್ಥಳದಲ್ಲೇ ಸುಟ್ಟು ಕರಕಲಾದವರು ಒಟ್ಟು 92 ಜನ. ಅವರಲ್ಲಿ 56 ಮಂದಿ ಶಾಲಾ ಮಕ್ಕಳಾಗಿದ್ದರು! ಸತ್ತ ಇತರರಲ್ಲಿ ಶಿಕ್ಷಕರು ಮತ್ತು ಪೋಷಕರೇ (21) ಹೆಚ್ಚಿನ ಸಂಖ್ಯೆಲ್ಲಿದ್ದರು.
ಡೇರೆಯ ಒಳಗಡೆ ಆನೆ, ಕುದುರೆ, ಕರಡಿ, ಆಳೆತ್ತರ ನಾಯಿಗಳು ಗಾಬರಿಯಿಂದ ವಿಕಾರವಾಗಿ ಕೂಗುತ್ತ ಓಡಾಡುತ್ತಿದ್ದವು. ರಕ್ಷಣಾ ಕಾರ್ಯದ ವೇಳೆ ನಮಗೆ ಸರ್ಕಸ್ ಪ್ರಾಣಿಗಳ ಭೀತಿಯೂ ಎದುರಾಯಿತು. ಯಾವ ಪ್ರಾಣಿ ಎಲ್ಲಿದೆ ಎನ್ನುವುದೇ ಗೊತ್ತಾಗುತ್ತಿರಲಿಲ್ಲ. ಸಿಂಹ, ಹುಲಿಗಳ ಗರ್ಜನೆಯೂ ಕೇಳಿ ಬರುತ್ತಿತ್ತು. ಅವು ಬೋನಿನ ಹೊರಗಿವೆಯೋ ಅಥವಾ ಡೇರೆಯ ಹೊರಗಿಡಲಾಗಿದ್ದ ಪಂಜರಗಳಲ್ಲಿ ಭದ್ರವಾಗಿವೆಯೋ ಗೊತ್ತಾಗುತ್ತಿರಲಿಲ್ಲ! ವಿಕ್ಟೊರಿಯಾ ಆಸ್ಪತ್ರೆ ಆವರಣದಲ್ಲಂತೂ ಸಾರ್ವಜನಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ನೊಂದವರ, ಗಾಯಾಳುಗಳ ನೆರವಿಗಾಗಿ ಅಂದು ಇಡೀ ಬೆಂಗಳೂರು ಒಂದಾಗಿ ನಿಂತಿತ್ತು. ಜೈನ ಸಮುದಾಯದವರಂತೂ ತಮ್ಮ ಸಮೀಪದ ಬಂಧುಗಳಂತೆ ಗಾಯಾಳುಗಳ ನೆರವಿಗೆ ನಿಂತರು. ಸ್ವಂತ ಖರ್ಚಿನಲ್ಲಿ ಔಷಧಗಳನ್ನು ಪೂರೈಸಿದರು. ಎಲ್ಲಕ್ಕಿಂತ ಹೆಚ್ಚಾಗಿ, ವಿಕ್ಟೋರಿಯಾದಲ್ಲಿ ಅಲ್ಲಿಯವರೆಗೆ ಬರ್ನಿಂಗ್ ವಾರ್ಡ್‌ೀ ಇರಲಿಲ್ಲ. ಜೈನ ಸಮುದಾಯದವರೇ ಮುಂದೆ ನಿಂತು ಬರ್ನಿಂಗ್ ವಾರ್ಡ್ ಸ್ಥಾಪಿಸಿದರು. ಅಂದು ನಾನು ಮನೆ ತಲುಪಿದಾಗ ಬೆಳಗಿನ ಜಾವ 2 ಗಂಟೆ. ಕಪ್ಪು ಮಸಿ ಮತ್ತು ಸುಟ್ಟ ದೇಹಗಳ ಕಲೆಯಿಂದಾಗಿ ನನ್ನ ಯೂನಿಫಾರ್ಮ್‌ನ ಬಣ್ಣ ಪೂರ್ತಿ ಬದಲಾಗಿಬಿಟ್ಟಿತು. ಸುಟ್ಟು ಕರಕಲಾದ ದೇಹಗಳ ವಾಸನೆ ಮತ್ತು ಸುಟ್ಟ ಡೇರೆಗಳ ಕಮಟು ವಾಸನೆಯ ಹ್ಯಾಂಗ್‌ವೋವರ್‌ನಲ್ಲೇ ನಾನು ತಿಂಗಳುಗಟ್ಟಲೆ ಇದ್ದೆ.
(ಮುಂದುವರೆಯುವುದು)
Discussion about this post