ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇಡೀ ವಿಶ್ವದ ನಿದ್ದೆಗೆಡಿಸಿರುವ ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ, ಎಲ್ಲೆಡೆ ಹರಸಾಹಸ ನಡೆಸಲಾಗುತ್ತಿದೆ. ದೇಶದಾದ್ಯಂತ 21 ದಿನಗಳ ’ಲಾಕ್ ಡೌನ್’ ಘೋಷಿಸಲಾಗಿದೆ. ಮನೆಯಲ್ಲಿಯೇ ಇರುವಂತೆ, ಹೊರಬರದಂತೆ ಕೇಂದ್ರ-ರಾಜ್ಯ ಸರ್ಕಾರಗಳು ನಾಗರಿಕರಿಗೆ ಮನವಿ ಮಾಡಿಕೊಂಡಿವೆ.
ಈ ನಡುವೆ ಶಿವಮೊಗ್ಗ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ, ಹೊರಗಿನವರ ಪ್ರವೇಶಕ್ಕೆ ಗ್ರಾಮಸ್ಥರು ನಿರ್ಬಂಧ ಹೇರುತ್ತಿರುವ ಮಾಹಿತಿಗಳು ಬೆಳಕಿಗೆ ಬರುತ್ತಿವೆ!
ಹೌದು. ಕೊರೋನಾ ವೈರಸ್ ಹರಡುವಿಕೆ ತಡೆಯಲು ಕೆಲ ಗ್ರಾಮಸ್ಥರು, ಅಪರಿಚಿತರು ಹಾಗೂ ಹೊರ ಊರುಗಳಿಂದ ಹಳ್ಳಿಗಳಿಗೆ ಆಗಮಿಸುವವರ ಮೇಲೆ ನಿರ್ಬಂಧ ಹಾಕುತ್ತಿದ್ದಾರೆ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಮರದ ತುಂಡು, ಕಲ್ಲುಗಳನ್ನು ಅಡ್ಡಲಾಗಿಟ್ಟು ಸಂಚಾರ ನಿರ್ಬಂಧಿಸುತ್ತಿದ್ದಾರೆ. ರಸ್ತೆ ಮಧ್ಯೆ ಹಗ್ಗಗಳನ್ನು ಕಟ್ಟುತ್ತಿದ್ದಾರೆ. ಇದರ ಜೊತೆಗೆ ಕೆಲವೆಡೆ ಬ್ಯಾನರ್ ಕೂಡ ಹಾಕಲಾಗಿದೆ. ಅಪರಿಚಿತರು, ವ್ಯಾಪಾರಿಗಳು ಊರೊಳಗೆ ಬಾರದಂತೆ ಎಚ್ಚರಿಕೆ ಸಂದೇಶ ಹಾಕಲಾಗಿದೆ.
ಭಯ-ಕಾಳಜಿ
ಕೊರೋನಾ ಬಗ್ಗೆ ಗ್ರಾಮಗಳಲ್ಲಿ ಸಾಕಷ್ಟು ಆತಂಕ ಮನೆ ಮಾಡಿದೆ. ಮುಂದೆನಾಗುವುದೋ ಎಂಬ ಭಯ ಆವರಿಸಿದೆ. ಶತಾಯಗತಾಯ ಈ ಸಾಂಕ್ರಾಮಿಕ ಮಹಾಮಾರಿಗೆ ತಮ್ಮ ಹಳ್ಳಿ ತುತ್ತಾಗಬಾರದೆಂಬ ಕಾಳಜಿಯೂ ಗ್ರಾಮಸ್ಥರಲ್ಲಿದೆ.
ಈ ನಡುವೆ, ಬೆಂಗಳೂರು ಸೇರಿದಂತೆ ನಗರ-ಪಟ್ಟಣಗಳಿಂದ ಗ್ರಾಮಗಳಿಗೆ ದೌಡಾಯಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇದು ಗ್ರಾಮಸ್ಥರ ಆತಂಕ ಹೆಚ್ಚಾಗುವಂತೆ ಮಾಡಿದೆ. ಇಂತವರಿಂದ ಏನಾದರೂ ತೊಂದರೆಯಾಗಲಿದೆಯಾ ಎಂಬ ಅನುಮಾನ ಕೆಲ ಗ್ರಾಮಸ್ಥರದ್ದಾಗಿದೆ.
ನಗರ-ಪಟ್ಟಣಗಳಿಂದ ಆಗಮಿಸಿದವರ ಅದೆಷ್ಟೊ ಜನರ ಆರೋಗ್ಯ ತಪಾಸಣೆಯನ್ನು ಗ್ರಾಮಸ್ಥರೇ ಮಾಡಿಸುತ್ತಿದ್ದಾರೆ. ಇಂತಹವರ ಬಗ್ಗೆ ಸ್ಥಳೀಯಾಡಳಿತಗಳಿಗೆ ಮಾಹಿತಿ ರವಾನಿಸುತ್ತಿದ್ದಾರೆ.
ವ್ಯಾಪಾರಕ್ಕಿಲ್ಲ ಅವಕಾಶ
ಐಸ್ ಕ್ರೀಂ, ಮಿಠಾಯಿ, ರಗ್ಗು, ಮೀನು ಮತ್ತಿತರ ದಿನ ಬಳಕೆ ವಸ್ತುಗಳ ಮಾರಾಟ ಮಾಡಲು ಆಗಮಿಸುವ ವ್ಯಾಪಾರಿಗಳ ಮೇಲೆಯೂ ಕೆಲ ಹಳ್ಳಿಗಳಲ್ಲಿ ನಿರ್ಬಂಧ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಹಳ್ಳಿ ಪ್ರವೇಶಿಸದಂತೆ ಗ್ರಾಮಸ್ಥರು ಸಲಹೆ ನೀಡುತ್ತಿದ್ದಾರೆ. ಜೊತೆಗೆ ಗ್ರಾಮಸ್ಥರು ವಿನಾ ಕಾರಣ ನಗರ-ಪಟ್ಟಣಗಳಿಗೆ ತೆರಳದಂತೆಯೂ ಊರಿನ ಮುಖಂಡರು ಸೂಚಿಸುತ್ತಿದ್ದಾರೆ.
ಮಹಾಮಾರಿ ನಮ್ಮೂರಿಗೆ ಕಾಲಿಡಬಾರದು ಎಂಬ ಉದ್ದೇಶ
ಕೊರೋನಾ ಸೋಕಿಂತರ ಸಂಪರ್ಕಕ್ಕೆ ಬರುವ ವ್ಯಕ್ತಿಗಳಿಗೂ ಈ ರೋಗ ಹರಡುತ್ತದೆ. ಇದು ನಿಜಕ್ಕೂ ಅಪಾಯಕಾರಿಯಾದುದಾಗಿದೆ. ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಕೈಗೊಳ್ಳುತ್ತಿವೆ. ಇಂತಹ ಮಹಾಮಾರಿ ನಮ್ಮ ಹಳ್ಳಿಗೆ ಕಾಲಿಡಬಾರದು ಎಂಬ ಉದ್ದೇಶದಿಂದ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುತ್ತಿದ್ದೇವೆ. ಅನಗತ್ಯವಾಗಿ ನಗರ-ಪಟ್ಟಣ, ಊರುಗಳಿಗೆ ತೆರಳದಂತೆ ಗ್ರಾಮಸ್ಥರಿಗೆ ಸೂಚಿಸುತ್ತಿದ್ದೇವೆ. ಮದುವೆ, ಧಾರ್ಮಿಕ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಮುಂದೂಡುವಂತೆಯೂ ಸಲಹೆ ನೀಡಿದ್ದೇವೆ.
ವಿವಿಧ ವಸ್ತು ಮಾರಾಟ ಮಾಡಲು ಆಗಮಿಸುವವರಿಗೆ, ಸದ್ಯಕ್ಕೆ ಗ್ರಾಮ ಪ್ರವೇಶಿಸದಂತೆ ಸಲಹೆ ನೀಡಲಾಗಿದೆ. ನಗರ-ಪಟ್ಟಣ ಸೇರಿದಂತೆ, ಪರ ಊರುಗಳಿಂದ ಆಗಮಿಸುವ ಅಪರಿಚಿತರ ಮೇಲೂ ನಿಗಾವಹಿಸಲಾಗುತ್ತಿದೆ ಎಂದು ಶಿವಮೊಗ್ಗ ತಾಲೂಕಿನ ಕಡೇಕಲ್ಲು ಗ್ರಾಮದ ಗ್ರಾಮಸ್ಥರೋರ್ವರು ಹೇಳುತ್ತಾರೆ.
ವರದಿ: ಬಿ. ರೇಣುಕೇಶ್
Get in Touch With Us info@kalpa.news Whatsapp: 9481252093
Discussion about this post