ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅವರು ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವಂತೆ ಮಾಡಿರುವ ಪ್ರತಿಭಾನ್ವಿತ ಪತ್ರಿಕಾ ಛಾಯಾಗ್ರಾಹಕ. ಅವರೇ ಶಿವಮೊಗ್ಗ ನಾಗರಾಜ್.
ಹೌದು. ಶಿವಮೊಗ್ಗ ಪತ್ರಿಕಾ ರಂಗದಲ್ಲಿ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಬಹುತೇಕರು ಸೃಜನಶೀಲರು. ಇಂತಹ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಶಿವಮೊಗ್ಗ ನಾಗರಾಜ್.
ಅಮೆರಿಕಾ ದೇಶದ ನ್ಯೂಯಾರ್ಕ್ ನಗರದಲ್ಲಿ ನ್ಯೂಯಾರ್ಕ್ ಫೋಟೋ ಫೇರ್ 2020 ಎಂಬ ಅಂತಾರಾಷ್ಟ್ರೀಯ ಸ್ಪರ್ಧೆ ನಡೆದಿದೆ. ಇದರಲ್ಲಿ ನಮ್ಮ ಶಿವಮೊಗ್ಗ ನಾಗರಾಜ್ ಅವರು ಕ್ಲಿಕ್ಕಿಸಿದ 5 ಫೋಟೋಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ. ನೇಚರ್, ಫೋಟೊ ಟ್ರಾವೆಲ್, ಫೋಟೋ ಜರ್ನಲಿಸಂ ವಿಭಾಗದಲ್ಲಿ ಆಯ್ಕೆಯಾಗಿ ಸರ್ಟಿಫಿಕೇಟ್ ದೊರೆತಿದೆ.
ಮಲೆನಾಡಿನ ಈ ಪ್ರತಿಭಾನ್ವಿತ ಪತ್ರಿಕಾ ಛಾಯಾಗ್ರಾಹಕನಿಗೆ ಅಂತಾರಾಷ್ಟ್ರೀಯ ಮನ್ನಣೆ#Shivamogga #Shimoga #Malnad pic.twitter.com/Ck87VJul4G
— Kalpa News (@KalpaNews) September 11, 2020
ಸುಮಾರು 180ಕ್ಕೂ ಅಧಿಕ ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದು, ಇದರಲ್ಲಿ ನಾಗರಾಜ್ ಅವರು ಅವರು ಕ್ಲಿಕ್ಕಿಸಿದ ಐದು ಫೋಟೋಗಳು ಪ್ರದರ್ಶನಕ್ಕೆ ಆಯ್ಕೆಯಾಗಿರುವುದು ಶಿವಮೊಗ್ಗದ ಹೆಮ್ಮೆಯಾಗಿದೆ.
ಶಿವಮೊಗ್ಗ ನಾಗರಾಜ್ ಕುರಿತಾಗಿ
ಎಂಎ ರಾಜ್ಯಶಾಸ್ತ್ರ, ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ನಾಗರಾಜ್ ಅವರು, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ಜಿಲ್ಲಾ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದು, ಶಿವಮೊಗ್ಗ ಸಿಂಹ, ಹಲೋ ಶಿವಮೊಗ್ಗ, ಸೃಷ್ಠಿ ರಾಜ್ ಟೈಮ್ಸ್ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ.
ವಿಭಿನ್ನ ಆಯಾಮ, ಕೋನ ಹಾಗೂ ಅಪರೂಪದ ಫೋಟೋಗಳನ್ನು ತೆಗೆಯುವಲ್ಲಿ ಅಪಾರವಾದ ಪ್ರತಿಭೆ ಹೊಂದಿರುವ ನಾಗರಾಜ್, ಸುದ್ದಿ ಚಿತ್ರಗಳನ್ನು ಮಾತ್ರವಲ್ಲ ವಿಶೇಷವಾದ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಎತ್ತಿದ ಕೈ.
ಈ ಹಿಂದೆ ದೆಹಲಿಯ ಪ್ರತಿಷ್ಠಿತ ವೈಲ್ಡ್ ಲೈಫ್ ಫೋಟೋಗ್ರಫಿ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಸಾಮ್ ಸರ್ಕಿಟ್ 2020 ಛಾಯಾಚಿತ್ರ ಸ್ಪರ್ಧೆಯಲ್ಲಿ ನಾಗರಾಜ್ ಅವರಿಗೆ ಚಿನ್ನ, ಬೆಳ್ಳಿ ಸೇರಿದಂತೆ ಒಟ್ಟು ಮೂರು ಪ್ರಶಸ್ತಿ ಲಭಿಸಿತ್ತು. ಇದು ಮಾತ್ರವಲ್ಲ ಇವರು ಹಲವು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ ಬಹುಮಾನಗಳಿಗೆ ಭಾಜನರಾಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇಂತಹ ಓರ್ವ ಕ್ರಿಯಾಶೀಲ, ಸೃಜನಶೀಲ, ಪ್ರತಿಭಾನ್ವಿತ ಛಾಯಾಗ್ರಾಹಕ ಶಿವಮೊಗ್ಗ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವುದು ಇಡಿಯ ಜಿಲ್ಲೆಯ ಪತ್ರಿಕಾರಂಗಕ್ಕೆ ಹಾಗೂ ಅದಕ್ಕೂ ಮೀರಿ ಜಿಲ್ಲೆಗೆ ಒಂದು ಹಿರಿಯೇ ಸರಿ.
ಶಿವಮೊಗ್ಗ ನಾಗರಾಜ್ ಅವರಿಂದ ಭವಿಷ್ಯದಲ್ಲಿ ಬಹಳಷ್ಟು ಕ್ರಿಯಾತ್ಮಕ ಛಾಯಾಚಿತ್ರಗಳು ಮೂಡಿಬರಲಿ ಹಾಗೂ ಈ ಪಯಣ ಇನ್ನೂ ಉನ್ನತ ಮಟ್ಟಕ್ಕೆ ಸಾಗಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯ ಹೃದಯಪೂರ್ವಕವಾಗಿ ಅಭಿನಂದಿಸಿ, ಹಾರೈಸುತ್ತದೆ.
Get In Touch With Us info@kalpa.news Whatsapp: 9481252093
Discussion about this post